ದ್ವೇಷದ ಸಂಗತಿ ಪ್ರಸಾರ: ಮಂಗಳೂರಿನಲ್ಲಿ ಲಕ್ಷ ಅನುಯಾಯಿಗಳಿದ್ದ, ಸಾವಿರ ಅನುಯಾಯಿಗಳಿದ್ದ ಇನ್‌ಸ್ಟಾಗ್ರಾಂ ಪೇಜ್‌ಗಳು ಬಂದ್
ಪ್ರಚೋದನಕಾರಿ ಸಂದೇಶಗಳನ್ನು ಹರಡುತ್ತಿದ್ದ ಲಕ್ಷ ಅನುಯಾಯಿಗಳಿದ್ದ, ಸಾವಿರ ಅನುಯಾಯಿಗಳಿದ್ದ ಇನ್‌ಸ್ಟಾಗ್ರಾಂ ಪೇಜ್‌ಗಳನ್ನು ಮಂಗಳೂರು ಪೊಲೀಸರು ಬಂದ್ ಮಾಡಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ಕರ್ನಾಟಕ ಕರಾವಳಿಯಲ್ಲಿ ಮೇ ತಿಂಗಳ ಆರಂಭದಲ್ಲಿ ನಡೆದ ಹತ್ಯೆ ಪ್ರಕರಣಗಳು ಹಾಗೂ ಕೆಲ ಅಹಿತಕರ ಘಟನೆಗಳು ಸಂಭವಿಸಿದ ಬಳಿಕ ಸೋಷಿಯಲ್ ಮೀಡಿಯಾ ವಾರ್‌ಗಳು ವಿಜೃಂಭಿಸಿದ್ದವು. ಇದಕ್ಕೆ ಪೊಲೀಸ್ ಇಲಾಖೆ ಸೈಬರ್ ತಜ್ಞರನ್ನು ಬಳಸಿಕೊಂಡು ಬುಡಕ್ಕೇ ಕತ್ತರಿ ಹಾಕುವ ಕಾರ್ಯ ಮಾಡುತ್ತಿದೆ.
ಮಂಗಳೂರಿನಲ್ಲಿ ಲಕ್ಷ ಅನುಯಾಯಿಗಳಿದ್ದ, ಸಾವಿರ ಅನುಯಾಯಿಗಳಿದ್ದ ಇನ್‌ಸ್ಟಾಗ್ರಾಂ ಪೇಜ್‌ಗಳು ಬಂದ್
ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್‌ಸ್ಟಾಗ್ರಾಂ ಖಾತೆಯೊಂದನ್ನು ಸ್ಥಗಿತಗೊಳಿಸಿದ್ದಾರೆ. Beary_royal_nawab ಹೆಸರಲ್ಲಿದ್ದ ಈ ಖಾತೆ ಪ್ರಚೋದನಕಾರಿ ಸಂದೇಶಗಳನ್ನು ಹರಡುತ್ತಿತ್ತು ಎಂದು ಆರೋಪಿಸಲಾಗಿದೆ. ಈ ಖಾತೆಗೆ 1 ಲಕ್ಷ ಫಾಲೋವರ್ ಗಳು ಇದ್ದವು. ಹಾಗೆಯೇ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ team_karna_surathkal ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯೊಂದು 1650 ಫಾಲೋಯರ್ಸ್‌ಗಳನ್ನು ಹೊಂದಿದ್ದು, ಪ್ರಚೋದನಕಾರಿ ಸಂದೇಶಗಳನ್ನು ಹರಡುತ್ತಿದ್ದ ಆರೋಪದಲ್ಲಿ ಅದನ್ನೂ ಸ್ಥಗಿತಗೊಳಿಸಲಾಗಿದೆ.
ಮಂಗಳೂರು ಸಿಟಿಯ ಬರ್ಕೆ ಮತ್ತು ಮೂಲ್ಕಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿಯೂ ಮೂರು ಕೇಸ್‌ಗಳನ್ನು ಇಂಥದ್ದೇ ಪ್ರಕರಣಕ್ಕೆ ಸಂಬಂಧಿಸಿ ಹಾಕಲಾಗಿದೆ. ಮಂಗಳೂರು ಸೆನ್ ಪೊಲೀಸ್ ಠಾಣೆಗೆ ಕೇಸುಗಳನ್ನು ವರ್ಗಾಯಿಸಲಾಗಿದೆ.
ಸಾಮಾಜಿಕ ಶಾಂತಿ ಕಾಪಾಡಲು ಪೊಲೀಸ್ ಆಯುಕ್ತರ ಮನವಿ
ಮಾಜಿ ಕಾರ್ಪೊರೇಟರ್ ಹಾಗು ಬಿಜೆಪಿ ನಾಯಕಿ ಶ್ವೇತಾ ಪೂಜಾರಿ ಅವರು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿದ ಕಮೆಂಟ್ ಮತ್ತು ಪೋಸ್ಟ್ ಗಳು ಪ್ರಚೋದನಕಾರಿಯಾಗಿದ್ದವು ಎಂಬ ಆರೋಪಗಳನ್ನು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮಾಡಿದ್ದಾರೆ. ಈ ಕುರಿತು ಕಾಂಗ್ರೆಸ್ ಮಹಿಳಾ ಘಟಕದಿಂದ ದೂರು ನೀಡಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಪೊಲೀಸ್ ಕಮೀಷನರ್ ಅನುಮಪ್ ಅಗರವಾಲ್ ಪ್ರತಿಕ್ರಿಯೆ ನೀಡಿದ್ದು, ಇಂಥದ್ದು ಗಮನಕ್ಕೆ ಬಂದ ಕೂಡಲೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಯಾರೂ ಸೋಶಿಯಲ್ ಮೀಡಿಯಾಗಳಲ್ಲಿ ಅನಗತ್ಯ ಮೆಸೇಜ್ ಗಳನ್ನು ಹಾಕಿ ಸಾಮಾಜಿಕ ಶಾಂತಿ ಕದಡುವ ಕೆಲಸಕ್ಕೆ ಕೈಹಾಕಬೇಡಿ, ಅಂಥದ್ದೇನಾದರೂ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)