ಮಂಗಳೂರಿನಲ್ಲಿ ಈ ಹಂಗಾಮಿನ ಮೊದಲ ಹಲಸು ಹಬ್ಬ ಮೇ 24, 25ರಂದು ; ಇಲ್ಲಿವೆ ಪುರುಷರು- ಮಹಿಳೆಯರಿಗೆ ಆಕರ್ಷಕ ಸ್ಪರ್ಧೆಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರಿನಲ್ಲಿ ಈ ಹಂಗಾಮಿನ ಮೊದಲ ಹಲಸು ಹಬ್ಬ ಮೇ 24, 25ರಂದು ; ಇಲ್ಲಿವೆ ಪುರುಷರು- ಮಹಿಳೆಯರಿಗೆ ಆಕರ್ಷಕ ಸ್ಪರ್ಧೆಗಳು

ಮಂಗಳೂರಿನಲ್ಲಿ ಈ ಹಂಗಾಮಿನ ಮೊದಲ ಹಲಸು ಹಬ್ಬ ಮೇ 24, 25ರಂದು ; ಇಲ್ಲಿವೆ ಪುರುಷರು- ಮಹಿಳೆಯರಿಗೆ ಆಕರ್ಷಕ ಸ್ಪರ್ಧೆಗಳು

ಈಗ ಹಣ್ಣುಗಳ ಮೇಳ ಎಲ್ಲೆಡೆ ಜೋರಿದೆ.ಮಂಗಳೂರಿನಲ್ಲಿಯೂ ಮುಂದಿನ ವಾರದ ಎರಡು ದಿನ ಹಲಸಿನ ಹಬ್ಬದ ಸಡಗರ. ಇದರ ಅಂಗವಾಗಿ ನಾನಾ ಸ್ಪರ್ಧೆಗಳನ್ನು ಸಂಘಟಕರು ಆಯೋಜಿಸಿದ್ದಾರೆ.ಇದರ ವಿವರ ಇಲ್ಲಿದೆ.ವರದಿ: ಹರೀಶ ಮಾಂಬಾಡಿ,ಮಂಗಳೂರು

ಮಂಗಳೂರಿನಲ್ಲಿ ಮೇ 24, 25ರಂದು ಹಲಸಿನ ಮೇಳ ನಡೆಯಲಿದೆ.
ಮಂಗಳೂರಿನಲ್ಲಿ ಮೇ 24, 25ರಂದು ಹಲಸಿನ ಮೇಳ ನಡೆಯಲಿದೆ.

ಮಂಗಳೂರು: ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಕಡಲನಗರಿ ಮಂಗಳೂರು, ಪುತ್ತೂರುಗಳಲ್ಲಿ ಪ್ರತಿ ವರ್ಷ ಮೇ ತಿಂಗಳ ಕೊನೆಯ ವಾರ ಹಾಗೂ ಜೂನ್ ತಿಂಗಳಲ್ಲಿ ಹಲಸು ಹಬ್ಬಗಳನ್ನು ನಾನಾ ಆಯೋಜಕರು ಏರ್ಪಡಿಸುತ್ತಾರೆ. ಹಲಸುಪ್ರಿಯರಿಗೆ ಹಾಗೂ ಸಾವಯವ ತರಕಾರಿ, ಹಣ್ಣು ಖರೀದಿದಾರರಿಗೆ ಇದು ಹಬ್ಬದ ವಾತಾವರಣ ನೀಡುವ ತಾಣವಾಗಿ ಮಾರ್ಪಾಡಾಗುತ್ತದೆ. ಕೃಷಿಕರಿಗೆ ಉತ್ತಮ ಮಾರುಕಟ್ಟೆ ಒದಗಿದರೆ, ನಾನಾ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಕೃಷಿ ಸಂಸ್ಕೃತಿಯತ್ತ ನಗರದಲ್ಲಿರುವವರನ್ನು ಕೊಂಡೊಯ್ಯುವ ಕಾರ್ಯವೂ ಆಗುತ್ತದೆ. ಅಂದ ಹಾಗೆ, ಮೊದಲ ಹಲಸಿನ ಹಬ್ಬ ಮಂಗಳೂರಿನ ಹೃದಯಭಾಗದಲ್ಲೇ ಇರುವ ಬಾಳಂಬಟ್ ಹಾಲ್ ನಲ್ಲಿ ಮೇ 24 ಮತ್ತು 25ರಂದು ನಡೆಯಲಿದೆ. ಮಂಗಳೂರಿನ ಸಾವಯವ ಕೃಷಿಕ ಗ್ರಾಹಕರ ಬಳಗ (ರಿ) ಇದನ್ನು ಆಯೋಜಿಸಿದೆ ಎಂದು ಎಂದು ಸಾವಯವ ಕೃಷಿಕ ಗ್ರಾಹಕರ ಬಳಗದ ಕಾರ್ಯದರ್ಶಿ ರತ್ನಾಕರ ಎಚ್‌ಟಿ ಕನ್ನಡ ಪ್ರತಿನಿಧಿಗೆ ತಿಳಿಸಿದ್ದಾರೆ.

ಹಲಸಿನ ಹಬ್ಬ ಎರಡು ದಿನಗಳ ಕಾಲ ನಡೆಯುತ್ತದೆ. ಕರ್ನಾಟಕದ ಬೇರೆ ಬೇರೆ ತಾಲೂಕುಗಳ ಸಾವಯವ ರೈತರು ಇಲ್ಲಿಗೆ ಆಗಮಿಸಲಿದ್ದಾರೆ. ತಮ್ಮ ಉತ್ಪನ್ನಗಳ ಮಾರಾಟವನ್ನು ಮಾಡಲಿದ್ದಾರೆ. ಸಾವಯವ ಕೃಷಿಕ ಪರಿವಾರ ಆರಂಭಿಸಿದ ಹಲಸು ಹಬ್ಬ ಈಗ ಬೇರೆ ಬೇರೆ ಸಂಘ, ಸಂಸ್ಥೆಗಳೂ ಆಯೋಜಿಸಲು ಪ್ರೇರಣೆ ನೀಡಿರುವುದು ಸಂತೋಷದ ಸಂಗತಿ ಎಂದು ರತ್ನಾಕರ ತಿಳಿಸಿದರು.

ಸಿಹಿ ಸವಿಯುವ ವಿಶೇಷ ಸ್ಪರ್ಧೆಗಳು

ಈ ಬಾರಿ ಹಲಸುಮೇಳದಲ್ಲಿ ಕೇವಲ ಖರೀದಿಗಷ್ಟೇ ಅಲ್ಲ, ಬಹುಮಾನ ಪಡೆಯುವ ಅವಕಾಶವೂ ಇದೆ. ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ಸಿಹಿ-ಸವಿಯುವ ಹಾಗು ಹಲವು ವಿಶೇಷ ಸ್ಪರ್ಧೆಗಳನ್ನು ಆಯೋಜಿಸಿರುವುದಾಗಿ ಸಂಘಟಕರು ತಿಳಿಸಿದ್ದಾರೆ.

ಹಲಸಿನ ಹಣ್ಣು ತಿನ್ನುವ ಸ್ಪರ್ಧೆ

ಮಹಿಳೆಯರು ಮತ್ತು ಪುರುಷರಿಗಾಗಿ ಹಲಸಿನಹಣ್ಣು ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ. ಇದಕ್ಕೆ ನೊಂದಾವಣೆ ಶುಲ್ಕ ರೂ 25 ಆಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ಬಿಡಿಸಿ ಇಟ್ಟ ಹಲಸಿನ ಹಣ್ಣು ನೀಡಲಾಗುವುದು. ತೂಕ ಮಾಡಿ ನೀಡಲಾದ ಹಲಸಿನ ಹಣ್ಣನ್ನು 30 ಸೆಕೆಂಡಿನೊಳಗೆ ಯಾರು ಹೆಚ್ಚು ತಿನ್ನುತ್ತಾರೋ ಅವರು ಗೆದ್ದವರಾಗುತ್ತಾರೆ ಇದರಲ್ಲಿ ಇನ್ನೊಂದು ಗಮ್ಮತ್ತಿನ ಅಂಶವೆಂದರೆ, ಹೆಚ್ಚಿನ ತೂಕ ಹಣ್ಣು ತಿನ್ನುವವರಿಗೆ ಆಕರ್ಷಕ ಬಹುಮಾನವನ್ನೂ ಇಡಲಾಗಿದೆ. ಮೇ 24ರಂದು ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಸ್ಪರ್ಧೆ ಆರಂಭ.

ಭಾರ ಎತ್ತುವ ಸ್ಪರ್ಧೆ

ಮಹಿಳೆ ಮತ್ತು ಪುರುಷರಿಗಾಗಿ ಭಾರ ಎತ್ತುವ ಸ್ಪರ್ಧೆ ಇದು. ಭಾರ ಎತ್ತುವುದೆಂದರೆ ಗುಂಡುಕಲ್ಲುಗಳನ್ನಲ್ಲ. ಹಲಸಿನ ಹಣ್ಣನ್ನು ಎತ್ತುವ ಸ್ಪರ್ಧೆ ಇದಾಗಿದೆ. ನಿಯಮಗಳು ಹೀಗಿವೆ. ಹಲಸಿನ ಹಣ್ಣನ್ನು ತಲೆಯ ಮೇಲಕ್ಕೆ ಎತ್ತಿ, ಮತ್ತೆ ನೆಲಕ್ಕೆ ತಾಗಿಸಬೇಕು. ಒಟ್ಟು 1 ನಿಮಿಷ ಕಾಲಾವಕಾಶ ಇರುತ್ತದೆ. 1 ನಿಮಿಷದೊಳಗೆ ಯಾರು ಹೆಚ್ಚು ಸಲ ಎತ್ತುತ್ತಾರೆ, ಅವರು ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ! ಅತಿ ಹೆಚ್ಚು ಸಲ ಭಾರ ಎತ್ತುವವರಿಗೆ ವಿಶೇಷ ಬಹುಮಾನ ಉಂಟು!. ಮೇ 24ರಂದು ಬೆಳಗ್ಗೆ 12 ಗಂಟೆಗೆ ಸ್ಪರ್ಧೆ ನಡೆಯುತ್ತದೆ.

ಹಲಸಿನ ಹಣ್ಣು ಬಿಡಿಸುವ ಸ್ಪರ್ಧೆ

ಮಹಿಳೆ ಹಾಗೂ ಪುರುಷರಿಗಾಗಿ ಏರ್ಪಾಡಾಗಿರುವ ಹಲಸಿನಹಣ್ಣು ಬಿಡಿಸುವ ಸ್ಪರ್ಧೆಯಲ್ಲಿ ಯಾರು ಹೆಚ್ಚು ಹಲಸಿನಹಣ್ಣು ಬಿಡಿಸುತ್ತಾರೋ ಅವರೇ ವಿಜೇತರು. ನಿಯಮಗಳು ಹೀಗಿವೆ. ಮೇ 24ರಂದು ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಸ್ಪರ್ಧೆ ಆರಂಭ.

ಸ್ಪರ್ಧೆಗೆ ಗುಂಜಿ ತೆಗೆದ ಹಲಸಿನ ಹಣ್ಣು ನೀಡಲಾಗುತ್ತದೆ. ಸ್ಪರ್ಧಿಗಳು ಶ್ರೇಷ್ಠ ಗುಣಮಟ್ಟದ ಸೊಳೆಗಳನ್ನು ಬಿಡಿಸಬೇಕು. 2-3 ನಿಮಿಷಗಳಲ್ಲಿ ಯಾರು ಹೆಚ್ಚು ತೂಕ ಮತ್ತು ಉತ್ತಮ ಸೊಳೆ ಬಿಡಿಸುತ್ತಾರೋ ಅವರು ವಿಜೇತರಾಗುತ್ತಾರೆ! *ಉತ್ತಮ ಹಾಗೂ ಹೆಚ್ಚು ಸೊಳೆ ಬಿಡಿಸುವವರಿಗೆ ಬಹುಮಾನವೂ ಪ್ರತ್ಯೇಕವಿದೆ.

ಹಲಸಿನ ಹಣ್ಣಿನ ತೂಕ ಊಹಿಸುವ ಸ್ಪರ್ಧೆ

ಇತರ ಸ್ಪರ್ಧೆಗಳಿಗೆ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಅವಕಾಶವಿದ್ದರೆ, ಇದರಲ್ಲಿ ಹಾಗೇನಿಲ್ಲ. ನಿಯಮಗಳು ಹೀಗಿರುತ್ತದೆ. ಹಲಸಿನ ಹಣ್ಣಿನ ತೂಕವನ್ನು ಅಂದಾಜು ಮಾಡಬೇಕು. ಸರಿಯಾದ ತೂಕ ಊಹಿಸಿದವರು ವಿಜೇತರಾಗುತ್ತಾರೆ! ಸರಿಯಾದ ಅಂದಾಜು ತೂಕ ಹೇಳುವವರಿಗೆ ಬಹುಮಾನ

ಹಲಸಿನ ಖಾದ್ಯ ತಯಾರಿಸುವ ಸ್ಪರ್ಧೆ

ಮೇ 24 ಮತ್ತು 25 ರಂದು ನಡೆಯುವ ಹಲಸು ಹಬ್ಬದಲ್ಲಿ ಇದೇ ಮೊದಲ ಬಾರಿಗೆ, ವಿಶೇಷ "ಹಲಸಿನ ಖಾದ್ಯ ತಯಾರಿಸುವ ಸ್ಪರ್ಧೆ" ಆಯೋಜಿಸಲಾಗಿದೆ ಸ್ಪರ್ಧೆಯಲ್ಲಿ ಭಾಗವಹಿಸಿ, ನಿಮ್ಮ ಅಡುಗೆ ಕೌಶಲ್ಯ ಪ್ರದರ್ಶಿಸಿ ಹಾಗೂ ನಗದು ಮತ್ತು ಸ್ಮರಣಿಕೆ ಬಹುಮಾನ ಗೆಲ್ಲುವ ಅವಕಾಶವನ್ನು ಬಳಸಿಕೊಳ್ಳಿ ಎಂದು ಸಂಘಟಕರು ವಿನಂತಿಸಿದ್ದಾರೆ. ಬಹುಮಾನಗಳು ಹೀಗಿವೆ: ಮೊದಲನೇ ಬಹುಮಾನ 2500 ರೂ. ನಗದು ಮತ್ತು ಸ್ಮರಣಿಕೆ. ಎರಡನೇ ಬಹುಮಾನ 2000 ರೂ. ನಗದು ಮತ್ತು ಸ್ಮರಣಿಕೆ ಮೂರನೇ ಬಹುಮಾನ 1000 ರೂ. ನಗದು ಮತ್ತು ಸ್ಮರಣಿಕೆ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಎಂದು ಸಂಘಟಕರು ಹೇಳಿದ್ದಾರೆ. 24ರಂದು ಅಪರಾಹ್ನ 2 ಗಂಟೆಗೆ ಸ್ಪರ್ಧೆ ನಡೆಯುತ್ತದೆ.

ಅಡುಗೆ ಸ್ಪರ್ಧೆ / ಸಿಹಿ - ಖಾರ

ಸ್ಪರ್ಧೆಯ ನಿಯಮಗಳು ಹೀಗಿವೆ: ಸಿಹಿ ಅಥವಾ ಖಾರ ವಿಭಾಗ: ನೀವು ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು. ಖಾದ್ಯವನ್ನು ಮನೆಯಲ್ಲಿ ತಯಾರು ಮಾಡಿ ತರಬೇಕು. ಮೂಲ ರೆಸಿಪಿಯನ್ನು ಸಲ್ಲಿಸುವುದು ಕಡ್ಡಾಯ. ಖಾದ್ಯದ ಎಲ್ಲಾ ಹಂತಗಳನ್ನು ವಿವರವಾಗಿ ವಿವರಿಸಬೇಕು. ನೋಂದಣಿ ಕೊನೆಯ ದಿನ ಮೇ 20 ನೋಂದಣಿಗಾಗಿ ಸಂಪರ್ಕಿಸಿ: 82774 06801/94806 82923 (ಮೊಬೈಲ್ ಸಂಖ್ಯೆ) (ಕರೆ ಅಥವಾ ವಾಟ್ಸಾಪ್ ಮೂಲಕ). ನಿಮ್ಮ ವಿಶೇಷ ಹಲಸಿನ ಕೈ ರುಚಿಯನ್ನು ತೋರಿಸಿ ಮತ್ತು ಬಹುಮಾನ ಗೆಲ್ಲುವ ಅವಕಾಶವನ್ನು ಪಡೆದುಕೊಳ್ಳಬಹುದು. 25ರಂದು ಬೆಳಗ್ಗೆ 10 ಗಂಟೆಗೆ ಸ್ಪರ್ಧೆ ನಡೆಯುತ್ತದೆ.

ಹಲಸಿನ ಎಲೆಯ ಮೂಡೆ ಕಟ್ಟುವ ಸ್ಪರ್ಧೆ

25ರಂದು ಮಧ್ಯಾಹ್ನ 3 ಗಂಟೆಗೆ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಮೊದಲೇ 9480682923ಕ್ಕೆ ನೋಂದಾಯಿಸಿಕೊಳ್ಳಿ

ಪ್ರಬಂಧ ಸ್ಪರ್ಧೆ

ನನಗೆ ಹಲಸು ಯಾಕೆ ಇಷ್ಟ ಎಂಬ ವಿಷಯದಲ್ಲಿ ಸ್ಪರ್ಧೆ ನಡೆಯುತ್ತದೆ. 25ರಂದು ಬೆಳಗ್ಗೆ 11 ಗಂಟೆಗೆ ಈ ಸ್ಪರ್ಧೆ ನಡೆಯಲಿದೆ. ಮುಕ್ತ ಪ್ರವೇಶ.

ಚಿತ್ರ ಬಿಡಿಸುವ ಸ್ಪರ್ಧೆ

ಹಲಸಿನ ಮರ, ಹಲಸಿನ ಹಣ್ಣು, ಹಲಸಿನ ಹಣ್ಣು ಬಿಡಿಸಿ ಇಟ್ಟ ಚಿತ್ರವನ್ನು ಚಿತ್ರಿಸಲು ಅವಕಾಶವಿದೆ. ಬೆಳಗ್ಗೆ 11 ಗಂಟೆಗೆ ಸ್ಪರ್ಧೆ ನಡೆಯುತ್ತದೆ.

ಭಾಷಣ ಸ್ಪರ್ಧೆ

ಹಲಸಿನ ಹಣ್ಣಿನ ಹಾಗೂ ಹಲಸಿನ ವಿವಿಧ ಉಪಯೋಗಗಳ ಕುರಿತು ಸ್ಪರ್ಧೆ ನಡೆಯಲಿದೆ. 25ರಂದು ಮಧ್ಯಾಹ್ನ 12 ಗಂಟೆಗೆ ಸ್ಪರ್ಧೆ ಏರ್ಪಡಿಸಲಾಗಿದೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.