ಮಂಗಳೂರು: ಕೊನೆಗೂ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ ಸಂಚಾರಕ್ಕೆ ಮುಕ್ತ, ವಾಹನ ಸವಾರರು ಕೊಂಚ ನಿರಾಳ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು: ಕೊನೆಗೂ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ ಸಂಚಾರಕ್ಕೆ ಮುಕ್ತ, ವಾಹನ ಸವಾರರು ಕೊಂಚ ನಿರಾಳ

ಮಂಗಳೂರು: ಕೊನೆಗೂ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ ಸಂಚಾರಕ್ಕೆ ಮುಕ್ತ, ವಾಹನ ಸವಾರರು ಕೊಂಚ ನಿರಾಳ

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಸಿ ರೋಡ್-ಅಡ್ಡಹೊಳೆ ಚತುಷ್ಪಥ ಕಾಮಗಾರಿ ಅಂತಿಮ ಹಂತದ ಪ್ರಗತಿಯಲ್ಲಿದೆ. ಈ ನಡುವೆ, ಕೊನೆಗೂ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನ ಸವಾರರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

 ಕೊನೆಗೂ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ ಸಂಚಾರಕ್ಕೆ ಮುಕ್ತ
ಕೊನೆಗೂ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ ಸಂಚಾರಕ್ಕೆ ಮುಕ್ತ

ಮಂಗಳೂರು: ನಿರೀಕ್ಷೆಗೂ ಮೊದಲೇ ಮಳೆಗಾಲ ಪ್ರಾರಂಭವಾಗಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಸಿ ರೋಡ್-ಅಡ್ಡಹೊಳೆ ಚತುಷ್ಪಥ ಕಾಮಗಾರಿ ಅಂತಿಮ ಹಂತದ ಪ್ರಗತಿಯಲ್ಲಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಲ್ಲಡ್ಕ ಫ್ಲೈಓವರ್ ಸೇರಿದಂತೆ ಕೆಲವೆಡೆ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಯನ್ನು ತೆರವುಗೊಳಿಸಿ ಅನುಕೂಲ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ನೀಡಿದ ಸೂಚನೆಯಂತೆ ಸೋಮವಾರ (ಜೂನ್ 2) ಕಲ್ಲಡ್ಕ ಫ್ಲೈಓವರ್ ಸಂಚಾರಕ್ಕೆ ತೆರೆದುಕೊಂಢಿತು. ಆದರೆ, ಮೇಲ್ಸೇತುವೆಯಲ್ಲಿ ಹೋಗಬಹುದು ಎಂದು ಬೇಕಾಬಿಟ್ಟಿ ಹೋಗುವಂತಿಲ್ಲ. ಎದುರುಬದುರಾಗಿ ವಾಹನಗಳು ಸಂಚರಿಸುತ್ತಿರುವ ಕಾರಣ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ರಸ್ತೆ ಕಾಮಗಾರಿಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ-ಆತಂಕ

ಮುಂಗಾರು ಚುರುಕುಗೊಂಡಿರುವ ಕಾರಣ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ-ಆತಂಕ ಎದುರಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಎಲ್ಲೆಲ್ಲಿ ಕಾಮಗಾರಿಯಿಂದ ವಾಹನಗಳ ಸಂಚಾರಕ್ಕೆ ತೊಂದರೆ ಎದುರಾಗಿದೆಯೋ ಅಲ್ಲೆಲ್ಲ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಜನರ ಓಡಾಟಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಕ್ಯಾ. ಚೌಟ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಮೇ. 29ರಿಂದ ಹೆದ್ದಾರಿ ಪ್ರಾಧಿಕಾರವು ಮಾಣಿ ಬಳಿಯ ವೆಹಿಕಲ್ ಅಂಡರ್ ಪಾಸ್(ವಿಯುಪಿ) ಹಾಗೂ ಉಪ್ಪಿನಂಗಡಿ ಬಳಿಯ ವೆಹಿಕಲ್ ಅಂಡರ್ ಪಾಸ್ ದ್ವಿ ಪಥವನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ. ಜೂ. 2ರಿಂದ ಕಲ್ಲಡ್ಕ ಪೇಟೆಯಲ್ಲಿರುವ ಮೇಲುರಸ್ತೆ(ಫ್ಲೈಓವರ್)ಯಲ್ಲಿ ಎಡಭಾಗವನ್ನು ವಾಹನಗಳ ಸಂಚಾರಕ್ಕೆ ತೆರವುಗೊಳಿಸಲಾಗಿದೆ.

ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ ಸಂಚಾರಕ್ಕೆ ಮುಕ್ತ; 2.1 ಕಿ.ಮೀ. ಉದ್ದದ ಫ್ಲೈಓವರ್ ಇದು

ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ 64 ಕಿ.ಮೂಈ. ಉದ್ದದ ಹೆದ್ದಾರಿ ಕಾಮಗಾರಿ 2017ರಲ್ಲಿ ಎಲ್. ಆಂಡ್ ಟಿ ಕಂಪನಿಗೆ 821 ಕೋಟಿ ರೂಗಳಿಗೆ ವಹಿಸಲಾಗಿತ್ತು. ಹಲವು ಕಾರಣಕ್ಕೆ ವಿಳಂಬವಾಗಿ ಬಳಿಕ ಅರ್ಧದಲ್ಲೇ ಸ್ಥಗಿತಗೊಂಡಿತು. 2021ರಲ್ಲಿ 64 ಕಿ.ಮೀ. ಉದ್ದದ ಹೆದ್ದಾರಿಯನ್ನು 49 ಕಿ.ಮೀ ಹಾಗೂ 15 ಕಿ.ಮೀ. ಎಂದು ವಿಭಾಗಿಸಿ ಕೆಎನ್ ಆರ್ ಕನ್ಸ್ ಸ್ಟ್ರಕ್ಷನ್ಸ್ ಹೈದರಾಬಾದ್ ಹಾಗು ಎಂ. ಔತಡೆ ಪ್ರೈ. ಲಿ. ಮಹಾರಾಷ್ಟ್ರ ಕಂಪನಿಗಳಿಗೆ ಗುತ್ತಿಗೆ ನೀಡಲಾಯಿತು. ಅಲ್ಲಿಂದ ಕಾಮಗಾರಿಗೆ ವೇಗ ದೊರಕಿತು. ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ ಜಂಕ್ಷನ್, ಉಪ್ಪಿನಂಗಡಿ ಸುಬ್ರಹ್ಮಣ್ಯ ಕ್ರಾಸ್, ನೆಲ್ಯಾಡಿ, ಪೆರಿಯಶಾಂತಿಗಳಲ್ಲಿ ಓವರ್ ಪಾಸ್ ಮೇಲ್ಸೇತುವೆ ಹಾಗೂ ಕಲ್ಲಡ್ಕದಲ್ಲಿ 2.1 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಕಾಮಗಾರಿ ಏಕಕಾಲದಲ್ಲಿ ಆರಂಭಗೊಂಡಿತು.

ಕಲ್ಲಡ್ಕದ ಪೂರ್ಲಿಪ್ಪಾಡಿಯಿಂದ ಕೃಷ್ಣಕೋಡಿಯವರೆಗೆ ಒಟ್ಟು 2.1 ಕಿ.ಮೀ. ಉದ್ದರ ಈ ಮೇಲ್ಸೇತುವೆಯಲ್ಲಿ 70 ಪಿಲ್ಲರ್ ಗಳಿವೆ. ಒಂದರಿಂದ ಇನ್ನೊಂದಕ್ಕೆ 30 ಮೀಟರ್ ಅಂತರವಿದ್ದು, ಒಟ್ಟು 72 ಸ್ಪಾನ್ ಗಳ ಫ್ಲೈಓವರ್ ಇದಾಗಿದೆ.ಜೂನ್ ಕೊನೆಯೊಳಗೆ ಫ್ಲೈಓವರ್ ಗೆ ಸಂಬಂಧಪಟ್ಟ ಎಲ್ಲ ಕಾಮಗಾರಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.