ಕೋಟೆಕಾರು ಬ್ಯಾಂಕ್ ದರೋಡೆ: 6 ತಿಂಗಳ ಸುದೀರ್ಘ ಯೋಜನೆ, ವಶಪಡಿಸಿಕೊಂಡ ಚಿನ್ನ ಲೆಕ್ಕ ಹಾಕಲು ಬೇಕಾಯ್ತು ಒಂದು ದಿನ !
ಮಂಗಳೂರಿನ ಹೊರವಲಯದ ಕೋಟೆಕಾರಿನಲ್ಲಿ ನಡೆದಿದ್ದ ಭಾರೀ ಪ್ರಮಾಣದ ದರೋಡೆಯನ್ನು ಬೇಧಿಸಿರುವ ಪೊಲೀಸರಿಗೆ ತನಿಖೆ ವೇಳೆ ಮಹತ್ವದ ಮಾಹಿತಿಯೇ ದೊರೆತಿದೆ.ವರದಿ: ಹರೀಶ ಮಾಂಬಾಡಿ,ಮಂಗಳೂರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರಿನಲ್ಲಿ ಎರಡು ವಾರದ ಹಿಂದೆ ನಡೆದಿದ್ದ ಭಾರೀ ಪ್ರಮಾಣದ ದರೋಡೆ ಪ್ರಕರಣಕ್ಕೆ ಯೋಜನೆ ಹಾಕಿದ್ದು ಬರೋಬ್ಬರಿ ಆರು ತಿಂಗಳಿನಿಂದ. ಇಡೀ ತಂಡ ಮಂಗಳೂರಿನ ಉಲ್ಲಾಳದ ಕೋಟೆಕಾರಿನ ಬ್ಯಾಂಕ್‌ಗೆ ಕನ್ನ ಹಾಕಲು ಸತತ ಆರು ತಿಂಗಳಿನಿಂದ ಭರ್ಜರಿ ಯೋಜನೆಯನ್ನೇ ರೂಪಿಸಿಕೊಂಡಿತ್ತು. ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು ಕೂಡ. ಆದರೆ ಪೊಲೀಸರ ಚಾಣಾಕ್ಷತನದ ಮುಂದೆ ದರೋಡೆಕೋರರ ಕೌಶಲ್ಯತೆ ನಿಲ್ಲಲಿಲ್ಲ. ವಾರದೊಳಗೆ ನಾಲ್ವರು ದರೋಡೆಕೋರರು ಸಿಕ್ಕರು. ದರೋಡೆ ಮಾಡಿಕೊಂಡು ಹೋಗಿದ್ದ ಭಾರೀ ಪ್ರಮಾಣದ ಚಿನ್ನಾಭರಣ, ಹಣವನ್ನೂ ವಶಕ್ಕೆ ಪಡೆಯಲಾಗಿದೆ. ಆದರೆ ವಶಪಡಿಸಿಕೊಂಡು ಬಂಗಾರದ ಲೆಕ್ಕ ಹಾಕಲು ಬೇಕಾಗಿದ್ದು ಬಹುತೇಕ ಒಂದು ದಿನ.
ದರೋಡೆ ರೂಪಿಸಿದ್ದು ಹೇಗೆ
ಘಟನೆ ಕುರಿತಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದು, ಈ ದರೋಡೆಗೆ 6ತಿಂಗಳ ಹಿಂದೆಯೇ ಪ್ಲಾನ್ ನಡೆಸಲಾಗಿದೆ. ಪ್ರಮುಖ ಆರೋಪಿ ಮುರುಗನ್‌ಗೆ ಶಶಿ ಥೇವರ್ ಎಂಬಾತ ಕೋಟೆಕಾರ್ ಬ್ಯಾಂಕ್‌ನ ಬಗ್ಗೆ ಮಾಹಿತಿ ನೀಡಿದ್ದ. ಶುಕ್ರವಾರವೇ ಸುಲಭವಾಗಿ ದರೋಡೆ ನಡೆಸಲು ಸಂಚು ರೂಪಿಸಿ ನಮಾಝ್ ಹೊತ್ತಿಗೆ ದರೋಡೆಗೈದು ಕೇರಳ ಮಾರ್ಗವಾಗಿ ಮಹಾರಾಷ್ಟ್ರ, ತಮಿಳುನಾಡಿಗೆ ಪರಾರಿಯಾಗಿದ್ದಾರೆ. ಆದರೆ ಸಿಸಿಟಿವಿ ಕ್ಯಾಮರಾ ಹಾಗೂ ಕೃತ್ಯದ ಮಾಹಿತಿ ಆಧರಿಸಿ ತನಿಖೆ ನಡೆಸಿ ತಂಡವನ್ನು ಬಂಧಿಸಿದ್ದೇವೆ. ಅವರು ಈ ಎಲ್ಲಾ ಮಾಹಿತಿಯನ್ನು ತನಿಖೆ ವೇಳೆ ಹೊರಗೆಡವಿದ್ದಾರೆ ಎಂದು ಹೇಳುತ್ತಾರೆ.
ಪ್ರಕರಣದಲ್ಲಿ ನಾಲ್ವರ ಬಂಧನವಾಗಿದ್ದು, ಇನ್ನೂ ನಾಲ್ವರು ಬಂಧನವಾಗಲು ಬಾಕಿಯಿದೆ. ಎಲ್ಲಾ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುತ್ತೇವೆ. ಬ್ಯಾಂಕ್ ಅಥವಾ ಯಾವುದೇ ವಹಿವಾಟು ನಡೆಸುವವರು ಮುನ್ನೆಚ್ಚರಿಕೆ ಎಷ್ಟು ವಹಿಸದರೂ ಕಡಿಮೆಯೆ ಎನ್ನುವುದು ಆಯುಕ್ತರು ಹೇಳುವ ಕಿವಿಮಾತು.
ಆಸಕ್ತಿ ಮೂಡಿಸಿದ ಪ್ರಕರಣ
ರಾಜ್ಯವನ್ನೇ ಬೆಚ್ಚಿಬೀಳಿಸಿದ ಮಂಗಳೂರಿನ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿರುವ ಮಂಗಳೂರು ಪೊಲೀಸರು ಕೇವಲ ಐದೇ ದಿನದಲ್ಲಿ ದರೋಡೆ ಮಾಡಿದ 14ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಯಾವುದೇ ಕ್ಲೂ ಇಲ್ಲದ ಪ್ರಕರಣವನ್ನೂ ಲೀಲಾಜಾಲವಾಗಿ ಬೇಧಿಸಿದ ಪೊಲೀಸರು ದರೋಡೆಯಾದ ಎಲ್ಲಾ ಚಿನ್ನವನ್ನು ವಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಂಕನಾಡಿ ನಗರ ಠಾಣೆಯ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಸುರತ್ಕಲ್ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ನೇತೃತ್ವದ 14ಮಂದಿಯ ತಂಡ ತಮಿಳುನಾಡಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಮುರುಗನ್ ಮನೆಯಿಂದ 4 ಬ್ಯಾಗ್‌ನಲ್ಲಿದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಎಣಿಕೆಯ ಸವಾಲು
ನೆಕ್ಲೆಸ್, ಉಂಗುರಗಳು, ಕರಿಮಣಿ, ಬ್ರೇಸ್ ಲೇಟ್, ಕಾಲುಗೆಜ್ಜೆ, ಹವಳದ ಸರ, ಕಿವಿಯೋಲೆ,ಚೈನ್‌ಗಳು ಸೇರಿದಂತೆ ಸುಮಾರು 2,265 ವಿವಿಧ ಚಿನ್ನಾಭರಣವನ್ನು ತಮಿಳುನಾಡಿನ ತಿರುನಲ್ವೇಲಿಯ ಪದ್ಮನೇರಿಯಿಂದ ಮಂಗಳೂರಿಗೆ 800ಕಿ.ಮೀ. ದೂರವಿದ್ದು 18ಗಂಟೆಯ ಬಿಗಿ ಭದ್ರತೆಯೊಂದಿಗೆ ಚಿನ್ನವನ್ನು ಮರಳಿ ತರಲಾಗಿದೆ. ಸುಮಾರು 3.50 ಲಕ್ಷ ರೂ. ನಗದು, 18.500 ಕೆಜಿ ತೂಕದ 14 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸಹಿತ ಆರೋಪಿ ಮುರುಗನ್ ತಂದೆ ಷಣ್ಮುಗ ಸುಂದರಂನನ್ನು ಸಶಸ್ತ್ರ ಮೀಸಲು ಪಡೆಯ ಬಿಗಿ ಭದ್ರತೆಯೊಂದಿಗೆ ಮಂಗಳೂರಿಗೆ ಕರೆತರಲಾಗಿದೆ. ದರೋಡೆಗೈದ ಹಣದಲ್ಲಿ ಪೈಕಿ 70 ಸಾವಿರ ರೂ.ವನ್ನು ಮುರುಗನ್ ಖರ್ಚು ಮಾಡಿರೋದು ತಿಳಿದು ಬಂದಿದೆ.
ಆದರೆ ವಾಪಾಸ್ ತಂದ ಎಲ್ಲಾ ಚಿನ್ನಾಭರಣಗಳ ಲೆಕ್ಕ ಹಾಕಲು ಪೊಲೀಸರು ಹಾಗೂ ಬ್ಯಾಂಕ್ ಸಿಬ್ಬಂದಿಗೆ ಒಂದು ದಿನವೇ ಬೇಕಾಗಿದೆ ಎನ್ನುವುದು ಪೊಲೀಸ್ ಅಧಿಕಾರಿಗಳು ನೀಡುವ ವಿವರಣೆ.
ವರದಿ: ಹರೀಶ ಮಾಂಬಾಡಿ,ಮಂಗಳೂರು
