ಮಂಗಳೂರು ಹತ್ಯೆ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ನಿಷೇಧಾಜ್ಞೆ; 10ಕ್ಕೂ ಅಧಿಕ ಮಂದಿ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ಹತ್ಯೆ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ನಿಷೇಧಾಜ್ಞೆ; 10ಕ್ಕೂ ಅಧಿಕ ಮಂದಿ ಬಂಧನ

ಮಂಗಳೂರು ಹತ್ಯೆ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ನಿಷೇಧಾಜ್ಞೆ; 10ಕ್ಕೂ ಅಧಿಕ ಮಂದಿ ಬಂಧನ

ಮಂಗಳೂರಿನ ಕೊಳತ್ತಮಜಲು ಬಳಿ ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿಯ ಹತ್ಯೆ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕಿನಾದ್ಯಂತ ಪೊಲೀಸರು ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ನಿಷೇಧಾಜ್ಞೆ; 10ಕ್ಕೂ ಅಧಿಕ ಮಂದಿ ಬಂಧನ (ಸಾಂಕೇತಿಕ ಚಿತ್ರ)
ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ನಿಷೇಧಾಜ್ಞೆ; 10ಕ್ಕೂ ಅಧಿಕ ಮಂದಿ ಬಂಧನ (ಸಾಂಕೇತಿಕ ಚಿತ್ರ)

ಮಂಗಳೂರು: ಟೆಂಪೊದಿಂದ ಮರಳು ಅನ್ಲೋಡ್ ಮಾಡುತ್ತಿದ್ದ ವೇಳೆ ಇಬ್ಬರ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಮಂಗಳವಾರ ನಡೆದಿದೆ. ರಹೀಂ ಮೃತಪಟ್ಟವರು. ಮತ್ತೋರ್ವ ಯುವಕ ಖಲಂದರ್ ಶಾಫಿ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಬೆನ್ನಲ್ಲೇ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ರಹೀಂ ಹತ್ಯೆ ನಡೆಸಿದ ಪ್ರಕರಣದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಉಲ್ಲೇಖಿತ ಪತ್ರದ ಅನುಸಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕಿನಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ.

ರಹೀಂ ಮೇಲೆ ಯಾರೋ ದುಷ್ಕರ್ಮಿಗಳು ಮಾರಕಾಯುಧಗಳಿಂದ ತೀವ್ರ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪ್ರಕ್ಷುಬ್ದ ವಾತಾವರಣ ಉಂಟಾಗಿ ಸಡಾಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿರುವ ಕಾರಣ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರಡಿ 27ರ ಸಂಜೆ 6 ಗಂಟೆಯಿಂದ 30ರ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಂಟ್ವಾಳದ ಅಡ್ಡೂರಿನ ಕೊಳತ್ತಮಜಲು ಮಸೀದಿಯಲ್ಲಿ ಸದಾ ಚಟುವಟಿಕೆಯಲ್ಲಿದ್ದ ರಹಿಮಾನ್ ಅವರು ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರಲ್ಲ. ಅವರನ್ನು ದೂರವಾಣಿ ಮೂಲಕ ಹೊಯಿಗೆ ಬಾಡಿಗೆಗೆ ಬೇಕು ಎಂದು ಕರೆದಿದ್ದರು. ಅದರಂತೆ, ಪಿಕಪ್ ಅಲ್ಲಿ ಹೊಯಿಗೆ ತೆಗೆದುಕೊಂಡು ಹೋಗಿ ಅನ್ಲೋಡ್ ಮಾಡುವ ವೇಳೆ ದಾಳಿ ಮಾಡಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಈ ಕುರಿತು ಪರಿಚಯಸ್ಥರಾಗಿರುವ ಮುಸ್ತಾಫಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ರಹೀಂ ಮತ್ತು ಶಾಫಿ ಎಂಬವರ ಮೇಲೆ ಹಿಂದಿನಿಂದ ಬಂದು ದಾಳಿ ಮಾಡಿದ್ದಾರೆ. ಕಾರ್ಮಿಕರಾಗಿ ದುಡಿಯುತ್ತಿದ್ದ ರಹೀಂ ಅವರ ವಿರುದ್ಧ ಈ ಕೆಟ್ಟ ಕೃತ್ಯ ಮಾಡಲಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಅವರನ್ನು ಈ ಕೃತ್ಯ ನಡೆಸಲು ಪ್ರಚೋದಿಸುವವರ ಮೇಲೆಯೂ ಕೇಸು ದಾಖಲಾಗಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳಿಂದೀಚೆಗೆ ಎರಡು ಹತ್ಯೆ ಪ್ರಕರಣಗಳು ನಡೆದಿದ್ದು, ಇದೀಗ ಕುರಿಯಾಳ ಸಮೀಪ ನಡೆದದ್ದು ಮೂರನೇ ಪ್ರಕರಣ. ಹತ್ಯೆಗೆ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಶಾಫಿ ಅವರ ಕೈಗೆ ಗಾಯ ವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಚಿವ ದಿನೇಶ್ ಗುಂಡೂರಾವ್ ಖಂಡನೆ

ಮಂಗಳೂರಿನ ಕೊಳತ್ತಮಜಲು ಬಳಿ ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿಯ ಹತ್ಯೆ ಖಂಡನೀಯ. ಘಟನೆಗೆ ನೈಜ ಕಾರಣ ತಿಳಿದಿಲ್ಲ. ಈ ಸಂಬಂಧ ಈಗಾಗಲೇ ಗೃಹ ಸಚಿವರಾದ ಪರಮೇಶ್ವರ್ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಕಾನೂನು ಸುವ್ಯವಸ್ಥೆ ADGP ಜೊತೆ ಮಾತಾಡಿದ್ದೇನೆ. ದ. ಕನ್ನಡ ಜಿಲ್ಲೆಯ ಶಾಂತಿ ಹಾಳು ಮಾಡುವ ದುಷ್ಟ ಯತ್ನವೊಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಘಟನೆಯು ಇದರ ಒಂದು ಭಾಗದಂತೆ ಕಾಣಿಸುತ್ತಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತಕ್ಕೆ ಕಠಿಣ ಸೂಚನೆ ನೀಡಿದ್ದೇನೆ‌. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

10ಕ್ಕೂ ಅಧಿಕ ಮಂದಿಯ ಬಂಧನ

ಕೊಳ್ತಮಜಲು ರಹೀಂ ಹತ್ಯೆಗೆ ಸಂಬಂಧಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, 10ಕ್ಕೂ ಅಧಿಕ ಮಂದಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in