ಕನ್ನಡ ಸುದ್ದಿ  /  ಕರ್ನಾಟಕ  /  Mangalore Crime: ಕೆಲಸಕ್ಕಿದ್ದ ಚಾಲಕನೇ ಮಾಲಕನ ಮನೆ ದರೋಡೆಗೆ ಹಾಕಿದ್ದ ಸ್ಕೆಚ್‌, ಮಂಗಳೂರು ಉದ್ಯಮಿ ಮನೆ ದರೋಡೆ ಪ್ರಕರಣದಲ್ಲಿ 10 ಮಂದಿ ಸೆರೆ

Mangalore Crime: ಕೆಲಸಕ್ಕಿದ್ದ ಚಾಲಕನೇ ಮಾಲಕನ ಮನೆ ದರೋಡೆಗೆ ಹಾಕಿದ್ದ ಸ್ಕೆಚ್‌, ಮಂಗಳೂರು ಉದ್ಯಮಿ ಮನೆ ದರೋಡೆ ಪ್ರಕರಣದಲ್ಲಿ 10 ಮಂದಿ ಸೆರೆ

Crime News ಕೆಲಸಕ್ಕಿದ್ದ ಮನೆಯ ಮಾಲೀಕನ ಮನೆಯಲ್ಲಿ ಇತರರೊಂದಿಗೆ ದರೋಡೆ ನಡೆಸಿದ್ದ ವ್ಯಕ್ತಿ ಸೇರಿ ಹಲವರನ್ನು ಮಂಗಳೂರು ಪೊಲೀಸರು( Mangalore Police) ಬಂಧಿಸಿದ್ದಾರೆ.ವರದಿ: ಹರೀಶ ಮಾಂಬಾಡಿ,ಮಂಗಳೂರು

ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ವರ ಮನೆಯಲ್ಲಿಯೇ ದರೋಡೆ ನಡೆಸಿದ್ದಾತನನ್ನು ಬಂಧಿಸಲಾಗಿದೆ.
ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ವರ ಮನೆಯಲ್ಲಿಯೇ ದರೋಡೆ ನಡೆಸಿದ್ದಾತನನ್ನು ಬಂಧಿಸಲಾಗಿದೆ.

ಮಂಗಳೂರು: ಮಂಗಳೂರು ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಹೊರವಲಯದ ಪೆರ್ಮಂಕಿ ಪರಿಸರದಲ್ಲಿ ಉದ್ಯಮಿ ಹಾಗೂ ಸಾಮಾಜಿಕ ಮುಖಂಡ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ನಡೆಸಿದ ಆರೋಪದಲ್ಲಿ ಮಂಗಳೂರು ಪೊಲೀಸರು 10 ಮಂದಿಯನ್ನು ಸೆರೆಹಿಡಿದಿದ್ದಾರೆ. ಇವರಲ್ಲಿ ಉದ್ಯಮಿಯ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ನೀರಮಾರ್ಗ ಗ್ರಾಮ ನಿವಾಸಿ ವಸಂತಕುಮಾರ್ (42) ಒಳಗೊಂಡಿದ್ದಾನೆ.

ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಬಂಧಿತರನ್ನು ನೀರಮಾರ್ಗದ ವಸಂತಕುಮಾರ್ (42), ನೀರಮಾರ್ಗದ ರಮೇಶ್ (42), ಬಂಟ್ವಾಳದ ಬಾಲಕೃಷ್ಣ ರೇಮಂಡ್ ಡಿಸೋಜಾ (47) ಎಂದು ಗುರುತಿಸಲಾಗಿದೆ. ಕಾಸರಗೋಡಿನಿಂದ (48), ತ್ರಿಶೂರಿನ ಜಾಕೀರ್ ಹುಸೇನ್ (56), ತ್ರಿಶೂರ್‌ನಿಂದ ವಿನೋಜ್ (38), ತ್ರಿಶೂರ್‌ನಿಂದ ಸಜೀಶ್ ಎಂಎಂ (32), ತಿರುವನಂತಪುರದಿಂದ ಬಿಜು ಜಿ (41), ತ್ರಿಶೂರ್‌ನಿಂದ ಸತೀಶ್ ಬಾಬು (44), ಮತ್ತು ಶಿಜೋ ದೇವಸಿ (38) ಇದರಲ್ಲಿ 7 ಮಂದಿ ಕೇರಳ ಮೂಲದವರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಂಗಳೂರು ನಗರದ ಉಳಾಯಿಬೆಟ್ಟು ಪೆರ್ಮಂಕಿ ನಿವಾಸಿ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರು ಜೂನ್ 21ರಂದು ಸಂಜೆ ಸುಮಾರು 7.45ಕ್ಕೆ ಮನೆಯಲ್ಲಿದ್ದ ವೇಳೆ ಸುಮಾರು 10ರಿಂದ 12 ಮಂದಿ ಆರೋಪಿಗಳು ಆಗಮಿಸಿ, ಚೂರಿಯಿಂದ ಪದ್ಮನಾಭ ಕೋಟ್ಯಾನ್ ಮೇಲೆ ಹಲ್ಲೆ ನಡೆಸಿ, ನಂತರ, ಅವರ ಪತ್ನಿ ಮತ್ತು ಮಗನನ್ನು ಕಟ್ಟಿಹಾಕಿ, ನಗದು, ಹಣ, ಒಡವೆ ಸೇರಿ ಬೆಲೆಬಾಳುವ ಸೊತ್ತುಗಳನ್ನು ದರೋಡೆ ಮಾಡಿದ್ದರು.

ಘಟನೆಯಲ್ಲಿ ವಸಂತಕುಮಾರ್, ಉದ್ಯಮಿಯ ವ್ಯವಹಾರ ಮತ್ತು ಮನೆಯ ಮಾಹಿತಿಯನ್ನು ಇನ್ನೋರ್ವ ಆರೋಪಿ ರಮೇಶ್ ಪೂಜಾರಿಗೆ ನೀಡಿದ್ದು, ಆರೋಪಿ ರಮೇಶ್ ಪೂಜಾರಿ ಮತ್ತು ರೇಮಂಡ್ ಡಿಸೋಜಾ ಇನ್ನೋರ್ವ ಆರೋಪಿ ಬಾಲಕೃಷ್ಣ ಶೆಟ್ಟಿಗೆ ಉದ್ಯಮಿಯ ಮನೆಯ ಹಾಗೂ ವ್ಯವಹಾರದ ಮಾಹಿತಿ ನೀಡಿದ್ದಾರೆ. ಅದರಂತೆ ಬಾಲಕೃಷ್ಣ ಶೆಟ್ಟಿ ತನ್ನ ಸ್ನೇಹಿತ ಕೇರಳದ ವ್ಯಕ್ತಿಯೊಂದಿಗೆ ದರೋಡೆ ನಡೆಸಲು ಸಂಚು ರೂಪಿಸಿ, ಮನೆಯ ಮಾಹಿತಿಯನ್ನು ನೀಡಿ, ಆರೋಪಿಗಳನ್ನು ಮಂಗಳೂರಿಗೆ ಕರೆಯಿಸಿಕೊಂಡು ದರೋಡೆ ನಡೆಸಿದ್ದಾಗಿ ತಿಳಿದುಬಂದಿದೆ ಎಂದು ಕಮೀಷನರ್ ಹೇಳಿದ್ದಾರೆ.

ಕೃತ್ಯದಲ್ಲಿ 15ಕ್ಕೂ ಅಧಿಕ ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ಕಂಡುಬಂದಿದೆ. ಆರೋಪಿಗಳ ಪೈಕಿ ಬಿಜು ಹಾಗೂ ಸತೀಶ್ ಬಾಬು ಎರಡು ತಂಡ ಗಳನ್ನು ಮಂಗಳೂರಿಗೆ ಕಳಿಸಿ, ದರೋಡೆಗೆ ಸಂಚು ರೂಪಿಸಿ ದರೋಡೆ ಕೃತ್ಯ ನಡೆಸಿದ್ದಾರೆ.

ಮೊದಲೇ ಕೇಸ್ ಇತ್ತು

ಆರೋಪಿಗಳ ಪೈಕಿ ವಸಂತ ಕುಮಾರ್ ವಿರುದ್ಧ 2011ನೇ ಇಸವಿಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿದ್ದರೆ, ಜಾಕೀರ್ ಎಂಬಾತನ ವಿರುದ್ಧ ಕೇರಳದಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಸತೀಶ್ ಬಾಬು ವಿರುದ್ಧ ತ್ರಿಶೂರ್ ಜಿಲ್ಲೆಯಲ್ಲಿ ಶಾಜಿ ಎಂಬಾತನ ಕೊಲೆ ಪ್ರಕರಣ ದಾಖಲಾಗಿದೆ. ಬಿಜು ವಿರುದ್ಧ ಅಬಕಾರಿ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.

ಜೂನ್ 21ರಂದು ಎಂಟರಿಂದ ಒಂಬತ್ತು ಮಂದಿ ಮುಸುಕುಧಾರಿಗಳು ಮನೆಗೆ ನುಗ್ಗಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ರವರನ್ನು ಕಟ್ಟಿ ಹಾಕಿ ಥಳಿಸಿದ್ದು ಹಾಗೂ ಪತ್ನಿ, ಮಕ್ಕಳನ್ನು ಬೆದರಿಸಿ 9 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಮನೆಯ ವಾಹನದಲ್ಲೇ ಅಲ್ಪ ದೂರದ ವರೆಗೆ ಪ್ರಯಾಣಿಸಿ ನಂತರ ಅವರ ವಾಹನವನ್ನು ಮಧ್ಯದಲ್ಲೇ ಬಿಟ್ಟು ಇನ್ನೋವಾದಲ್ಲಿ ಪರಾರಿಯಾಗಿದರು. ನಾಲ್ವರು ಸ್ಥಳೀಯ ಆರೋಪಿಗಳಾದ ವಸಂತ್, ರಮೇಶ್, ರೇಮಂಡ್ ಮತ್ತು ಬಾಲಕೃಷ್ಣ ದರೋಡೆಗೆ ಯೋಜನೆ ರೂಪಿಸಿದ್ದರು. ಬಾಲಕೃಷ್ಣ ನಂತರ ಜಾನ್ ಬಾಸ್ಕೋ ನೇತೃತ್ವದ ಕೇರಳ ತಂಡದೊಂದಿಗೆ ಸಂಪರ್ಕ ಹೊಂದಿದ್ದರು.

ಎಂಟು ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಕೇರಳದ ತಂಡ ಮಂಗಳೂರಿಗೆ ಭೇಟಿ ನೀಡಿದ್ದು, ದರೋಡೆಗೆ ಪ್ರದೇಶದ ಸ್ಕೆಚ್ ಮತ್ತು ನಕ್ಷೆಯನ್ನು ಸಿದ್ಧಪಡಿಸುವಂತೆ ರಮೇಶ್ ಮತ್ತು ವಸಂತ್ ಅವರನ್ನು ಕೇಳಿದ್ದರು ಅದರಂತೆಯೇ ಗುತ್ತಿಗೆದಾರನ ಬಳಿ 100 ರಿಂದ 300 ಕೋಟಿ ರೂ.ಗೂ ಹೆಚ್ಚು ಹಣವಿದೆ ಎಂದು ಸ್ಥಳೀಯ ಆರೋಪಿಗಳು ಕೇರಳ ತಂಡಕ್ಕೆ ತಿಳಿಸಿದ್ದು ಲೂಟಿಹೊಡೆಯಲು ಎಲ್ಲಾ ರೀತಿಯ ಸ್ಕೆಚ್ ತಯಾರಿಸಿದ್ದರು.

ಈ ಪ್ರಕರಣದಲ್ಲಿ ಇನ್ನೂ 4-5 ಮಂದಿಯನ್ನು ಬಂಧಿಸಬೇಕಿದ್ದು 100ರಿಂದ 300 ಕೋಟಿ ಲೂಟಿ ಮಾಡಬಹುದೆಂದು ನಂಬಿಸಿ ಮಾಸ್ಟರ್‌ ಬೆಡ್‌ರೂಮ್‌ನ ಟೈಲ್ಸ್‌ ತೆಗೆಯಲು 20ಕ್ಕೂ ಹೆಚ್ಚು ಗೋಣಿ ಚೀಲಗಳು ಮತ್ತು ಸಲಕರಣೆಗಳನ್ನು ತಂದಿದ್ದರು. ಒಂದೇ ಒಂದು ಸುಳಿವೇ ಇಲ್ಲದ ಕುರುಡು ಪ್ರಕರಣವಾಗಿರುವುದರಿಂದ ಆರೋಪಿಗಳ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಕಳೆದ 15 ದಿನಗಳಿಂದ ಈ ಪ್ರಕರಣವನ್ನು ಭೇದಿಸಲು ಅವಿರತವಾಗಿ ಶ್ರಮಿಸಿದ ಡಿಸಿಪಿ, ಎಸಿಪಿ ಮತ್ತು ಸಿಸಿಬಿ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ವರದಿ: ಹರೀಶ ಮಾಂಬಾಡಿ,ಮಂಗಳೂರು