ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 10 ಸ್ವಯಂ ಉದ್ಯೋಗಿ ಆದಿವಾಸಿ ಮಹಿಳೆಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗುವ ಅವಕಾಶ
ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 10 ಸ್ವಯಂ ಉದ್ಯೋಗಿ ಆದಿವಾಸಿ ಮಹಿಳೆಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗುವ ಅವಕಾಶ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 10 ಸ್ವಯಂ ಉದ್ಯೋಗಿ ಆದಿವಾಸಿ ಮಹಿಳೆಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗುವ ಅವಕಾಶ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ತಲಾ ಐವರು ಸ್ವಯಂ ಉದ್ಯೋಗಿ ಆದಿವಾಸಿ ಮಹಿಳೆಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡುವ ಅವಕಾಶ ಪಡೆದಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 10 ಸ್ವಯಂ ಉದ್ಯೋಗಿ ಆದಿವಾಸಿ ಮಹಿಳೆಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ. (ಫೋಟೋ-PTI)
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 10 ಸ್ವಯಂ ಉದ್ಯೋಗಿ ಆದಿವಾಸಿ ಮಹಿಳೆಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ. (ಫೋಟೋ-PTI)

ಮಂಗಳೂರು (ದಕ್ಷಿಣ ಕನ್ನಡ): ಬುಡಕಟ್ಟು ಜನಾಂಗದ ಸ್ವಸಹಾಯ ಸಂಘದ ಮಹಿಳೆಯರಲ್ಲಿ ರಾಜ್ಯದ 35 ಮಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡುವ ಸದಾವಕಾಶ ದೊರಕಿದೆ. ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಯೋಜನೆಯಡಿ ಕರ್ನಾಟಕದ 35 ಸದಸ್ಯರ ಪೈಕಿ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರದ ಪ್ರತಿನಿಧಿಗಳು ಇದ್ದಾರೆ. ಕರಾವಳಿಯ ಎಲ್ಲರೂ ಕೊರಗ ಸಮುದಾಯಕ್ಕೆ ಸೇರಿದವರು.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಡ್ಡರ್ಸೆಯ ವಿಸ್ಮಯ ಸಂಜೀವಿನಿ ಒಕ್ಕೂಟದ ಸದಸ್ಯೆ ದೀಪಾ, ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಪಂನ ಸಮೃದ್ಧಿ ಸಂಜೀವಿನಿ ಒಕ್ಕೂಟದ ಸದಸ್ಯರಾಗಿರುವ ಗ್ರೂಪ್ ಡಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬೇಬಿ, ಬುಟ್ಟಿ ನೇಯುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ದಿವ್ಯಾ, ಬೈಂದೂರು ತಾಲೂಕಿನ ಹೇರೂರು ಗ್ರಾಪಂಯ ಸ್ನೇಹ ಸಾಗರ ಸಂಜೀವಿನಿ ಒಕ್ಕೂಟದ ಸಂಜನಾ, ನಳಿನಿ ಹಾಗೂ ಶ್ರೀಕಲಾ ಅವರು ವನಧನ ವಿಕಾಸ ಯೋಜನೆಯಡಿ ಹಾಳೆ ತಯಾರಿ ಗುಂಪು ಚಟುವಟಿಕೆ ಪ್ರಾರಂಭಿಸಿ ಯಶಸ್ವಿಯದವರು.

ಮಾರ್ಚ್ 1 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿ

ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಯೋಜನೆಯಾಗಿದ್ದು, ಸಂಜೀವಿನೀ -ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಮಾರ್ಚ್‌ 1 ರಂದು ರಾಷ್ಟ್ರಪತಿಗಳ ಭೇಟಿ ಹಾಗೂ ಅಮೃತ್‌ ಉದ್ಯಾನವನಕ್ಕೆ ಭೇಟಿ ನೀಡಲು ಇವರಿಗೆ ಅವಕಾಶ ದೊರೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯ ತಾಲೂಕಿನ ಮೀನಾಕ್ಷಿ , ವನಿತಾ, ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ, ಬಂಟ್ವಾಳ ತಾಲೂಕಿನ ಸುಂದರಿ ದೆಹಲಿ ಪ್ರವಾಸ ಭಾಗ್ಯ ಪಡೆದವರು. ಸುಳ್ಯ ತಾಲೂಕಿನ ಕೊಲ್ಲಮೊಗರುವಿನ ಮೀನಾಕ್ಷಿ ಆದಿಲಕ್ಷ್ಮೀ ಸಂಜೀವಿನೀ ಸ್ವಸಹಾಯ ಗುಂಪಿನ ಸದಸ್ಯೆಯಾಗಿದ್ದು, ಕೀರ್ತಿ ಸಂಜೀವಿನೀ ಒಕ್ಕೂಟದ ಸದಸ್ಯರಾಗಿದ್ದಾರೆ. ಕೃಷಿ ಉದ್ಯೋಗ ಸಖಿಯೂ ಆಗಿರುವ ಮೀನಾಕ್ಷಿಯವರು ಸ್ಥಳೀಯವಾಗಿ ಸಂಘಟನಾ ಚತುರರಾಗಿ ಗುರುತಿಸಿಕೊಂಡವರು. ಬಳ್ಳಿಯಿಂದ ಬುಟ್ಟಿ ಸಹಿತ ಇನ್ನಿತ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಇವರು ಪಳಗಿದವರು. ದೆಹಲಿಗೆ ಹೋಗುತ್ತೇನೆ, ರಾಷ್ಟ್ರಪತಿಗಳನ್ನು ಭೇಟಿಯಾಗುತ್ತೇನೆ ಎನ್ನುವುದೇ ನನಗೆ ತುಂಬಾ ಖುಷಿ ತಂದಿದೆ ಎನ್ನುತ್ತಾರೆ ಮೀನಾಕ್ಷಿಯವರು.

ಸುಳ್ಯ ತಾಲೂಕಿನ ಕೊಲ್ಲಮೊಗರು ಗ್ರಾಮದ ವನಿತಾ ರವರು ಆದಿಲಕ್ಷ್ಮೀ ಸ್ವಸಹಾಯಯ ಗುಂಪಿನ ಸದಸ್ಯೆಯಾಗಿರುವ ಇವರು ಬಡತನದ ಹಿನ್ನೆಲೆಯಲ್ಲಿ ಬೆಳೆದವರು. ಬಳ್ಳಿಯಿಂದ ಬುಟ್ಟಿ ಸಹಿತ ಅನೇಕ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಇವರದು ಎತ್ತಿದ ಕೈ. ದೆಹಲಿಗೆ ವಿಮಾನದಲ್ಲಿ ಹೋಗುವುದೇ ನಮಗೆ ದೊಡ್ಡ ಸಂಭ್ರಮ. ರಾಷ್ಟ್ರಪತಿಗಳನ್ನು ಭೇಟಿಯಾಗುವುದು ಮತ್ತಷ್ಟು ಖುಷಿಯ ವಿಚಾರ ಎನ್ನುತ್ತಾರೆ.

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮಪಂಚಾಯತಿ ವ್ಯಾಪ್ತಿಗೆ ಸೇರಿದ ಲಕ್ಷ್ಮೀ ಅವರು ನಿಸರ್ಗ ಸ್ವಸಹಾಯ ಗುಂಪಿನ ಸದಸ್ಯೆಯಾಗಿದ್ದು, ತ್ರಿವೇಣಿ ಸಂಜೀವಿನೀ ಒಕ್ಕೂಟದ ಸದಸ್ಯೆ. ತನ್ನ ತಾಯಿ ತಯಾರಿಸುವ ಬುಟ್ಟಿ ಸಹಿತ ಕರಕುಶಲ ಸಾಮಾಗ್ರಿಗಳನ್ನು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದಾರೆ. ನಾನು ಮಂಗಳೂರು ಬಿಟ್ಟರೆ ಬೇರೆಲ್ಲೂ ಹೋಗಿಲ್ಲ. ಇದೀಗ ದೆಹಲಿಗೆ ಹೋಗುವ ಅವಕಾಶ ದೊರೆತಿರುವುದು ನನ್ನ ಪುಣ್ಯ ಎಂದವರು ಸಂತಸ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಸುಂದರಿಯವರು . ಶಿವಗಿರಿ ಗುಂಪಿನ ಸದಸ್ಯೆಯಾಗಿದ್ದು, ಸ್ಪೂರ್ತಿ ಸಂಜೀವಿನೀ ಒಕ್ಕೂಟದ ಸದಸ್ಯೆಯಾಗಿದ್ದಾರೆ. ನವಸಾಕ್ಷರೆಯಾಗಿರುವ ಇವರು, ಕೊರಗರ ಡೋಲು ತಂಡದ ಪ್ರಮುಖ ಕಲಾವಿದೆಯಾಗಿ ಗುರುತಿಸಿಕೊಂಡವರು. ಡೋಲು ತಂಡದ ಜೊತೆ ಧಾರವಾಡ, ಬಳ್ಳಾರಿ, ಬೆಂಗಳೂರು ಕಲಬುರಗಿ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಇವರು ಇದೇ ಮೊದಲ ಬಾರಿಗೆ ದೆಹಲಿಗೆ ವಿಮಾನದಲ್ಲಿ ತೆರಳುತ್ತಿದ್ದಾರೆ. ಬುಟ್ಟಿ ಸಹಿತ ಇತರ ಕರಕುಶಲ ವಸ್ತುಗಳ ತಯಾರಿಯಲ್ಲೂ ಇವರದು ಎತ್ತಿದ ಕೈ.

ಫೆ.28 ರಂದು ಮಧ್ಯಾಹ್ನ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅಧಿಕಾರಿಗಳು ಇವರ ಜೊತೆ ಸಂವಾದ ನಡೆಸುತ್ತಾರೆ. ಫೆ.29 ರಂದು ಮುಂಜಾನೆ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನದ ಬಳಿಕ ಇವರು ದೆಹಲಿಯ ಪ್ರಸಿದ್ದ ಸ್ಥಳಗಳಿಗೆ ಭೇಟಿ ನೀಡಲಿದ್ದು, ಮಾರ್ಚ್‌ 1 ರಂದು ಬೆಳಿಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ಇದೇ ವೇಳೆ ಅಮೃತ ಉದ್ಯಾನಕ್ಕೂ ಭೇಟಿಗೆ ಅವಕಾಶ ಪಡೆದಿದ್ದಾರೆ. ಅಂದು ರಾತ್ರಿಯೇ ವಿಮಾನದಲ್ಲಿ ಮರಳಿ ಬೆಂಗಳೂರಿಗೆ ಪಯಣಿಸಲಿದ್ದಾರೆ. ಮರುದಿನ ಮಂಗಳೂರಿನತ್ತ ಹೊರಡಲಿದ್ದಾರೆ. (ವರದಿ: ಹರೀಶ್ ಮಾಂಬಾಡಿ)

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner