Mangalore News: ಪದ್ಮಶ್ರೀ ಹರೇಕಳ ಹಾಜಬ್ಬರ ಶಾಲೆಯಲ್ಲಿ ದುರಂತ, ಮಳೆಗೆ ಶಿಥಿಲಗೊಂಡ ಆವರಣಗೋಡೆ, ಗೇಟು ಕುಸಿದು ಬಾಲಕಿ ದುರ್ಮರಣ
ಭಾರೀ ಮಳೆಯಿಂದ ಶಾಲಾ ಗೋಡೆ ಕುಸಿದು ಬಾಲಕಿ ಮೃತಪಟ್ಟ ಘಟನೆ ಹರೇಕಳ ಹಾಜಬ್ಬ( Harekala Hajabba) ಅವರಿಗೆ ಸೇರಿದ ಶಾಲೆಯಲ್ಲಿ ನಡೆದಿದೆ.ವರದಿ: ಹರೀಶ ಮಾಂಬಾಡಿ ಮಂಗಳೂರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಲವೆಡೆ ಹಾನಿಗಳು ಸಂಭವಿಸಿವೆ. ಉಳ್ಳಾಲ ತಾಲೂಕಿನ ನ್ಯೂಪಡ್ಪು ಶಾಲೆಯ ಕಂಪೌಂಡ್, ಗೇಟು ಕುಸಿದು ಬಾಲಕಿ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ನಡೆದಿದೆ.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರ ಭಗೀರಥ ಯತ್ನದಿಂದ ನಿರ್ಮಾಣಗೊಂಡ ಶಾಲೆ ಇದು. ನ್ಯೂಪಡ್ಪುವಿನ ಸರ್ಕಾರಿ ಶಾಲಾ ಗೇಟು ಮಳೆಯ ಪರಿಣಾಮ ಬಿದ್ದು ಬಾಲಕಿ ದಾರುಣವಾಗಿ ಮೃತಪಟ್ಟಿದ್ದಾಳೆ.ನ್ಯೂಪಡ್ಪು ನಿವಾಸಿ ಸಿದ್ದೀಕ್-ಜಮೀಲಾ ದಂಪತಿಯ ಪುತ್ರಿ ಶಾಝಿಯಾ ಬಾನು(7) ಮೃತ ಬಾಲಕಿ.
ಎನ್.ಎಸ್.ಎಸ್. ಶಿಬಿರ ಆಗುತ್ತಿತ್ತು
ಈ ಶಾಲೆಯಲ್ಲಿ ಕಳೆದ ಮೂರು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಮನೆ ಹೊಂದಿರುವ, ಅದೇ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ಶಾಝಿಯಾ ಭಾನು ಭಾಗವಹಿಸಿದ್ದಳು.
ಸೋಮವಾರ ಸಂಜೆ ಶಾಲಾ ಆವರಣದಲ್ಲಿ ಇತರ ಮಕ್ಕಳ ಜೊತೆ ಬಾಲಕಿ ಆಟವಾಡುತ್ತಿದ್ದಳು. ಈ ಸಂದರ್ಭ ಶಾಲಾ ಆವರಣ ಗೋಡೆ ಗೇಟಿನ ಸಹಿತ ಕುಸಿದು ಅಲ್ಲೇ ಇದ್ದ ಬಾಲಕಿಯ ಮೇಲೆ ಬಿದ್ದಿದೆ.
ಕೈಮುರಿತಕ್ಕೊಳಗಾಗಿದ್ದಲ್ಲದೆ ಕುತ್ತಿಗೆ ಭಾಗಕ್ಕೂ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ಎರಡು ದಿನಗಳಿಂದ ಆಗಾಗ ಮಳೆ ಬೀಳುತ್ತಿದ್ದು ಅದಕ್ಕಿಂತ ಮೊದಲೇ ಶಿಥಿಲಗೊಂಡಿದ್ದ ಆವರಣ ಗೋಡೆ ಕುಸಿದಿದ್ದು ಘಟನೆಗೆ ಕಾರಣ ಎಂದು ಹೇಳಲಾಗಿದೆ.
(ವರದಿ: ಹರೀಶ ಮಾಂಬಾಡಿ ಮಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)