Arecanut Rates: ಅಡಿಕೆ ಧಾರಣೆ ಏರುಪೇರಿಗೆ ವಿದೇಶಿ ಅಡಿಕೆ ಒಳಹರಿವು, ಕೃಷಿ ವ್ಯಾಪ್ತಿ ವಿಸ್ತರಣೆ ಕಾರಣವೇ?
ಕರ್ನಾಟಕದಲ್ಲಿ ಬೆಳೆಯುವ ಅಡಿಕೆಗೆ ಉತ್ತಮ ಬೆಲೆ ಸಿಗುತ್ತಿತ್ತಾದರೂ ಈ ಬಾರಿ ಏರುಪೇರು ಕಂಡು ಬಂದಿದೆ. ಇದರಿಂದ ರೈತರು ಏನು ಮಾಡಬೇಕು ಎನ್ನುವುದು ತಿಳಿಯದೇ ಕಂಗಾಲಾಗಿದ್ದಾರೆ.ವರದಿ: ಹರೀಶ್ ಮಾಂಬಾಡಿ. ಮಂಗಳೂರು
ಮಂಗಳೂರು: ಕೆಲ ತಿಂಗಳುಗಳಿಂದೀಚೆಗೆ ಅಡಿಕೆ ಧಾರಣೆಯಲ್ಲಿ ಏರುಪೇರಾಗುತ್ತಿದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ. ಸುಸ್ಥಿರ ಮಾರುಕಟ್ಟೆಯ ಲಾಭ ಕೃಷಿಕರಿಗೆ ಸಿಗಲು ಶುರುವಾಗಿದೆ ಅನ್ನುವಷ್ಟರಲ್ಲಿ ವಿದೇಶಿ ಅಡಿಕೆಯ ಒಳಹರಿವು ಅಡಕೆ ದರ ಕುಸಿತಕ್ಕೆ ಕಾರಣವೂ ಆಯಿತು. ಇದು ತಾತ್ಕಾಲಿಕ ಎಂದುಕೊಂಡರೂ ಅಡಿಕೆ ಬೆಳೆಯ ವಿಸ್ತರಣೆ ಮತ್ತೊಂದು ಆತಂಕಕ್ಕೂ ಕಾರಣವಾಯಿತು. ಅಡಿಕೆಯನ್ನು ಯಾರು ಬೇಕಾದರೂ ಬೆಳೆಸಬಹುದು. ಬೆಳೆ ಮಿತಿಮೀರಿದರೆ, ದರ ಕಡಿಮೆಯಾಗಬಹುದು ಎಂಬ ಆತಂಕವೂ ಇದೆ.
ಒಂದು ಸಮಯಕ್ಕೆ ಬೆಳೆದವರಿಗೆಲ್ಲಾ ಭಾರೀ ಬೆಲೆಯನ್ನೇ ನೀಡುತ್ತಿದ್ದ ಅಡಿಕೆ ಇತ್ತೀಚಿನ ವರ್ಷದಲ್ಲಿ ನಿರಂತರ ಬೆಲೆ ಕುಸಿತಕ್ಕೂ ಸಿಲುಕಿದೆ. ಇದರಲ್ಲಿ ಅಡಿಕೆ ಬಳಕೆ ವಿಚಾರವಾಗಿ ಇರುವ ಅಪನಂಬಿಕೆಗಳು ಇದ್ದರೂ ಅಡಿಕೆ ಬಳಕೆಯಿಂದ ಆಗಬಹುದಾದ ತೊಂದರೆಗಳ ಕುರಿತು ಅದನ್ನು ಯಾರೂ ಅಧಿಕೃತವಾಗಿ ಹೇಳಿಲ್ಲ. ಈ ಗೊಂದಲ ಮುಂದುವರೆದು ಇದು ಮಾರುಕಟ್ಟೆಯ ಮೇಲೂ ನಿಧಾನವಾಗಿ ಪರಿಣಾಮ ಬೀರ ತೊಡಗಿದೆ.
ಮಲೆನಾಡು – ಕರಾವಳಿಯಲ್ಲಿ ಏರುಪೇರು ಯಾಕೆ
ರಾಜ್ಯದ 31 ಜಿಲ್ಲೆಗಳ ಪೈಕಿ 17 ಜಿಲ್ಲೆಗಳ ರೈತರು ಜೀವನಾಧಾರವಾಗಿ ಅಡಿಕೆಯನ್ನು ಅವಲಂಬಿಸಿದ್ದಾರೆ. ಬೆ ಲೆಯ ಏರಿಳಿತ ಹಾಗೂ ವಿದೇಶಿ ಅಡಿಕೆಯ ಒಳಹರಿವು ದೇಶಿಯ ಬೆಳೆಗಾರರನ್ನು ಅಧೀರರನ್ನಾಗಿಸಿದೆ. ಇವುಗಳಲ್ಲಿ ಮಲೆನಾಡು ಕರಾವಳಿಯೇ ಅಧಿಕ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನಲ್ಲಿ ಬೆಳೆಯುವ ಅಡಿಕೆಗೆ ಬೇಡಿಕೆ ಜಾಸ್ತಿ. ಆದರೆ ಇತ್ತೀಚೆಗೆ ಅಡಿಕೆ ಮಾರುಕಟ್ಟೆ ಧಾರಣೆ ಏರುಪೇರಾಗುತ್ತಿದೆ. ಇದಕ್ಕೆ ಕಾರಣಗಳನ್ನು ಹೀಗೆ ವಿಶ್ಲೇಷಿಸಲಾಗಿದೆ.
ಮೋಸದ ವ್ಯಾಪಾರ
ಮಲೆನಾಡಾದ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆದ ಕೆಂಪಡಿಕೆಗೆ ಬೇಡಿಕೆ ಇದೆ. ಮಂಗಳೂರು, ಉಡುಪಿಯಲ್ಲಿ ಬೆಳೆದ ಚಾಲಿ ಅಡಿಕೆಗೂ ಬೇಡಿಕೆ ಇರುತ್ತೆ. ಈ ಎರಡೂ ಅಡಿಕೆಯನ್ನು ಈ ಪ್ರದೇಶ ಹೊರತುಪಡಿಸಿ, ಬೇರೆಡೆ ಬೆಳೆದ ಅಡಿಕೆಯನ್ನು ಕಡಿಮೆ ದರದಲ್ಲಿ ಖರೀದಿ ಮಾಡಿ, ಅದನ್ನು ಉತ್ತಮ ಅಡಿಕೆಯೊಂದಿಗೆ ಕಲಬೆರಕೆ ಮಾಡಿ ಮಾರಾಟ ಮಾಡುವ ಜಾಲವಿದೆ. ಅಸ್ಸಾಂ, ತಮಿಳುನಾಡು, ಆಂಧ್ರದಲ್ಲಿ ಬೆಳೆದ ಅಡಿಕೆಯನ್ನು ಕಡಿಮೆ ದರಕ್ಕೆ ವ್ಯಾಪಾರ ಮಾಡಲಾಗುತ್ತಿದೆ. ಅದಕ್ಕೆ ಕೆಂಪು ಬಣ್ಣ ಮಿಕ್ಸ್ ಮಾಡುವ ಆಪಾದನೆಯೂ ಇದೆ. ಅಧಿಕೃತ ಮಾರಾಟಗಾರರ ಬದಲು ಟ್ಯಾಕ್ಸ್ ತಪ್ಪಿಸಿ ಮಾರಾಟ ಮಾಡುವವರು ಅಡಿಕೆ ಖರೀದಿಸಿ ಮಾರುವುದರಿಂದ ಗುಣಮಟ್ಟದ ಅಡಿಕೆಯ ಸೇಲ್ ಕಡಿಮೆಯಾಗಿ, ಒಟ್ಟಾರೆಯಾಗಿ ಅಡಿಕೆಯ ಮೌಲ್ಯ ಕುಸಿಯುತ್ತದೆ.
ಎಲ್ಲೆಂದರಲ್ಲಿ ಅಡಿಕೆ ಬೆಳೆಯುವುದು
ಅಡಿಕೆಗೆ ಈ ವರ್ಷ ರೇಟ್ ಬಂತಾ? ಹಾಗಾದರೆ ಬೇರೆ ಗಿಡಗಳನ್ನು ಕಡಿದು ಅಡಿಕೆ ಸಸಿಗಳನ್ನು ನೆಟ್ಟುಬಿಡಿ ಎಂದು ಕೃಷಿಕರಿಗೆ ಪುಕ್ಕಟೆ ಸಲಹೆ ಕೊಡುವವರಿದ್ದಾರೆ. ಹೀಗಾಗಿ ಮಿತಿಮೀರಿ ಸಾಮರ್ಥ್ಯಕ್ಕಿಂತ ಜಾಸ್ತಿ ಅಡಿಕೆ ಬೆಳೆಯಾಗುತ್ತಿದೆ. ಬಯಲುಸೀಮೆಯಲ್ಲೂ ಅಡಿಕೆಯನ್ನು ನೂರಾರು ಎಕರೆ ಬೆಳೆಯಲಾಗುತ್ತಿದೆ. ಕೆಲ ಉದ್ಯಮಿಗಳು ಅಡಿಕೆಯನ್ನೇ ವಾಣಿಜ್ಯ ಬೆಳೆರೂಪದಲ್ಲಿ ಬೆಳೆಯುತ್ತಿದ್ದಾರೆ. ಇದು ಸಾಂಪ್ರದಾಯಿಕ ಕೃಷಿಕರಿಗೆ ಹೊಡೆತ. ಅತ್ತ ನೆಲದ ಫಸಲೂ ಕೈಗೆ ಸಿಗದಂಥ ಪರಿಸ್ಥಿತಿ ಎನ್ನುವಂತಾಗಿದೆ.
ಅಡಿಕೆ ಬೆಳೆಯನ್ನು ಈಗ ಎಲ್ಲೆಡೆ ಬೆಳೆಯಾಗುತ್ತಿದೆ. ಅಡಿಗೆ ತೋಟ ಮಾಡಬೇಕು ಎನ್ನುವ ಉಮೇದು ಕೂಡ ಹೆಚ್ಚಿದೆ. ಅಡಿಕೆ ಬೆಳೆಯಿಂದ ಹೆಚ್ಚಿನ ಆದಾಯ ಪಡೆಯಬಹುದು ಎನ್ನುವುದು ಒಂದು ಕಡೆಯಾದರೆ, ತೋಟ ಮಾಡಿದರೆ ಅಡಿಕೆಯನ್ನೂ ಹಾಕಿದರಾಯಿತು ಎನ್ನುವ ಭಾವನೆಯೂ ಹಲವರಲ್ಲಿದೆ. ಇದರಿಂದ ಅಡಿಕೆ ಗುಣಮಟ್ಟವೂ ಕಡಿಮೆಯಾಗಿ ದರವೂ ಕುಸಿತ ಕಾಣುತ್ತಿರಬಹುದು. ಈ ಬಗ್ಗೆ ಅಡಿಕೆ ಕೃಷಿಕರೂ, ಉದ್ಯಮದಲ್ಲಿರುವ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹಿರಿಯ ಬೆಳೆಗಾರರು ಹೇಳುತ್ತಾರೆ.