Mangalore News: ಮಂಗಳೂರಲ್ಲಿ ರಾಜಾಕಾಲುವೆಗೆ ಬಿದ್ದ ಆಟೊ, ಮೃತಪಟ್ಟ ಚಾಲಕ, ಈ ಸಾವಿಗೆ ಹೊಣೆಯಾರು?
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಮಂಗಳೂರಲ್ಲಿ ರಾಜಾಕಾಲುವೆಗೆ ಬಿದ್ದ ಆಟೊ, ಮೃತಪಟ್ಟ ಚಾಲಕ, ಈ ಸಾವಿಗೆ ಹೊಣೆಯಾರು?

Mangalore News: ಮಂಗಳೂರಲ್ಲಿ ರಾಜಾಕಾಲುವೆಗೆ ಬಿದ್ದ ಆಟೊ, ಮೃತಪಟ್ಟ ಚಾಲಕ, ಈ ಸಾವಿಗೆ ಹೊಣೆಯಾರು?

Dakshin Kannada Rain Tragedy ಎರಡು ದಿನದ ಹಿಂದೆ ಮಂಗಳೂರು ನಗರದಲ್ಲಿ ರಾಜಕಾಲುವೆ ಮಳೆಗೆ ಉಕ್ಕಿ ಹರಿದಿದೆ. ಈ ವೇಳೆ ಆಟೋ ಕಾಲುವೆಗೆ ಉರುಳಿ ಆಟೋ ಚಾಲಕ ಮೃತಪಟ್ಟಿದ್ದಾನೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಮಂಗಳೂರಿನಲ್ಲಿ ಮಳೆಗೆ ರಾಜಕಾಲುವೆ ಉಕ್ಕಿ ಹರಿದು ಭಾರೀ ಅನಾಹುತ ಸಂಭವಿಸಿದೆ.
ಮಂಗಳೂರಿನಲ್ಲಿ ಮಳೆಗೆ ರಾಜಕಾಲುವೆ ಉಕ್ಕಿ ಹರಿದು ಭಾರೀ ಅನಾಹುತ ಸಂಭವಿಸಿದೆ.

ಮಂಗಳೂರು: ಶುಕ್ರವಾರ ರಾತ್ರಿ ಭಾರಿ ಮಳೆ ಸುರಿಯುತ್ತಿದ್ದ ವೇಳೆ ಆಟೊರಿಕ್ಷಾವೊಂದು ಮಂಗಳೂರಿನ ಕೊಟ್ಟಾರಚೌಕಿಯಲ್ಲಿರುವ ರಾಜಾಕಾಲುವೆಗೆ ಬಿದ್ದು ಚಾಲಕ ದೀಪಕ್ ಆಚಾರ್ಯ (42) ಸಾವನ್ನಪ್ಪಿದ್ದಾರೆ. ಘಟನೆಯ ತರುವಾಯ ಮಂಗಳೂರಿನ ರಾಜಾಕಾಲುವೆಗಳ ಸ್ಥಿತಿಗತಿ, ರಸ್ತೆ ಕಾಣಿಸದಂತಾಗಿರುವ ಪರಿಸ್ಥಿತಿಗಳ ವಿರುದ್ಧ ಜನಾಕ್ರೋಶವೂ ಹೊರಬಿದ್ದಿದೆ. ಇದೀಗ ಮುಂಜಾಕರೂಕತಾ ಕ್ರಮವಾಗಿ ತೋಡಿಗೆ ತಡೆಗೋಡೆ ನಿರ್ಮಿಸದೇ ಇರುವುದರಿಂದ, ತೋಡನ್ನು (ರಾಜಾಕಾಲುವೆ) ಸ್ವಚ್ಛಗೊಳಿಸದೇ ಇರುವ ಕಾರಣ, ಮಳೆ ನೀರು ತುಂಬಿ ನಿಂತು ಅಪಘಾತ ಸಂಭವಿಸಿದ್ದು, ಇದಕ್ಕೆ ಪಾಲಿಕೆಯೇ ಹೊಣೆ ಎಂದು ಸಾರ್ವಜನಿಕರ ಆಕ್ರೋಶ ಹೊರಬಿದ್ದಿದ್ದು, ಪಾಲಿಕೆ ಅಧಿಕಾರಿಗಳ ವಿರುದ್ಧ ಮಂಗಳೂರಿನ ಊರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರ ಇಲ್ಲಿದೆ.

ಘಟನೆ ನಡೆದ ಹೊತ್ತು, ಮಳೆ ಬರುತ್ತಿತ್ತು

ಕೊಟ್ಟಾರಚೌಕಿ ನಿವಾಸಿ ದೀಪಕ್ ಆಚಾರ್ಯ ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರ ಚೌಕಿಯಿಂದ ಸುಮಾರು 1 ಕಿ.ಮೀ. ದೂರದ ಒಳಭಾಗದ ರಸ್ತೆಯಲ್ಲಿ ರಾತ್ರಿ 11.30ರ ವೇಳೆ ಸಾಗಿದ ಸಂದರ್ಭ ಘಟನೆ ನಡೆದಿದೆ. ದೀಪಕ್ ಬಾಡಿಗೆ ಮುಗಿಸಿ, ಕೊಟ್ಟಾರದಲ್ಲಿರುವ ತನ್ನ ಮನೆ ಕಡೆಗೆ ಬರುತ್ತಿದ್ದರು. ಈ ಸಂದರ್ಭ ಭಾರಿ ಗಾಳಿ ಮಳೆ ಇತ್ತು. ತೋಡು ತುಂಬಿ ಹರಿಯುತ್ತಿದ್ದ ವೇಳೆ ರಸ್ತೆ ಯಾವುದು, ತೋಡು ಯಾವುದು ಎಂದು ಕಾಣಿಸುತ್ತಿರಲಿಲ್ಲ. ಈ ವೇಳೆ ಒಂದು ಹಂತದಲ್ಲಿ ಅವರು ನಿಯಂತ್ರಣ ಕಳೆದುಕೊಂಡಿದ್ದಾರೆ. ಆಟೊ ತೋಡಿಗೆ ಜಾರಿದೆ. ಅಂದಾಜು ಒಂದು ಗಂಟೆಯ ನಂತರ ಇದನ್ನು ಸಾರ್ವಜನಿಕರು ಗಮನಿಸಿ, ಅಗ್ನಿಶಾಮಕ ಪೊಲೀಸರಿಗೆ ಮಾಹಿತಿ ನೀಡಿ ಮೇಲಕ್ಕೆತ್ತುವ ವೇಳೆ ದೀಪಕ್ ಪ್ರಾಣಪಕ್ಷಿ ಹಾರಿಹೋಗಿತ್ತು.

ಮನೆಯ ಪಕ್ಕವೇ ನಡೆದ ಘಟನೆ

ದೀಪಕ್ ಮನೆ ಅಲ್ಲೇ ಸಮೀಪ ಇತ್ತು. ಪ್ರತಿ ಮಳೆಗಾಲದಲ್ಲಿ ಆ ಭಾಗದಲ್ಲಿ ಕೃತಕ ನೆರೆ ಉಂಟಾಗುತ್ತದೆ. ವಿದೇಶಕ್ಕೆ ತೆರಳಿ ಊರಿಗೆ ಬಂದಿದ್ದ ದೀಪಕ್ ಆಟೊ ಓಡಿಸುತ್ತಿದ್ದರು. ಮುಂದಿನ ತಿಂಗಳು ಮತ್ತೆ ವಿದೇಶಕ್ಕೆ ತೆರಳಲು ಸಿದ್ಧತೆ ಮಾಡುತ್ತಿದ್ದರು. ಅನಾರೋಗ್ಯಪೀಡಿತ ತಾಯಿ, ಸಹೋದರನೊಂದಿಗೆ ಕೊಟ್ಟಾರದಲ್ಲಿ ವಾಸಿಸುತ್ತಿದ್ದ ದೀಪಕ್ ಆಚಾರ್ಯ ಮನೆಯಲ್ಲೂ ಸಾವಿನಿಂದ ಅಂಧಕಾರ ಆವರಿಸಿದೆ.

ರೋಡು ಯಾವುದು, ತೋಡು ಯಾವುದು ಎಂದು ಗೊತ್ತಾಗೋದೇ ಇಲ್ಲ

ಮಳೆಗಾಲ ಆರಂಭದ ಮೊದಲೇ ಪೂರ್ವಸಿದ್ಧತೆಯನ್ನು ಸರಿಯಾಗಿ ನಿರ್ವಹಿಸದೇ ಇದ್ದರೆ, ಇಂಥ ದುರಂತ ನಡೆಯುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕರದ್ದು. ಕಾರಣವಿಷ್ಟೇ. ಕೊಟ್ಟಾರಚೌಕಿಯಿಂದ ಕೊಟ್ಟಾರ, ಕಲ್ಬಾವಿ ಕಡೆ ಸಂಪರ್ಕ ಕಲ್ಪಿಸುವ ಕಿರಿದಾದ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಈಗ ನೀರು ಕಡಿಮೆಯಾಗಿದೆ. ಆದರೆ ನೀರು ತುಂಬಿದರೆ, ರಸ್ತೆ ಯಾವುದು, ತೋಡು ಯಾವುದು ಎಂದು ಗೊತ್ತಾಗೋದೇ ಇಲ್ಲ. ರಸ್ತೆ ಮತ್ತು ತೋಡಿನ ಲೆವೆಲ್ ಒಂದೇ ರೀತಿ ಇದೆ. ರಸ್ತೆಯಲ್ಲಿ ವಾಹನಗಳು ಸಂಚರಿಸುವ ವೇಳೆ ಪಾದಚಾರಿಗಳು ಆಯತಪ್ಪಿದರೂ ಇಲ್ಲಿ ಬಿದ್ದರೆ, ಪ್ರಾಣಾಪಾಯ ಗ್ಯಾರಂಟಿ. ತೋಡಿಗೆ ತಡೆಗೋಡೆ ಇಲ್ಲ, ಇರುವ ಕಿರುಸೇತುವೆಯೂ ಸರಿ ಇಲ್ಲ. ನೀರಿನ ಹರಿವೂ ಇಲ್ಲಿ ಸರಿಯಾಗಿಲ್ಲ. ಕಳೆದ ಬೇಸಗೆಯಲ್ಲಿ ಬೈಕ್ ಸವಾರರೊಬ್ಬರು ರಾಜಾಕಾಲುವೆಗೆ ಬಿದ್ದಿದ್ದರು. ಅಲ್ಲದೆ, ಕೆಲಸ ಕಾರ್ಯಗಳನ್ನು ನಡೆಸುವ ವೇಳೆ ಇದು ನಮ್ಮ ಜಾಗ, ಇಲ್ಲಿ ಕೆಲಸ ಮಾಡಬೇಡಿ ಎಂಬ ಆಕ್ಷೇಪ, ಕಿರಿಕಿರಿಗಳನ್ನೂ ಮನಪಾ ಎದುರಿಸಿದ್ದುಂಟು. ರಸ್ತೆ ಮಟ್ಟಕ್ಕಿಂತ ಎತ್ತರಕ್ಕೆ ತಡೆಗೋಡೆ ನಿರ್ಮಾಣ ಮಾಡಿದರೆ ಹೆಚ್ಚಿನ ಅಪಾಯ ತಪ್ಪಿಸಬಹುದು.

ಪಾಲಿಕೆ ಏನು ಮಾಡುತ್ತಿದೆ?

ಆಟೊ ಚಾಲಕ ಸಾವಿನ ಬಳಿಕ ಎಚ್ಚೆತ್ತ ಮಂಗಳೂರು ಮಹಾನಗರಪಾಲಿಕೆ ತಾತ್ಕಾಲಿಕ ಕ್ರಮವಾಗಿ 20ರಿಂದ 30 ಕಡೆ ರಾಜಾಕಾಲುವೆ ಬಳಿ ಮರಳುಚೀಲ, ರಿಫ್ಲೆಕ್ಟರ್ ಟೇಪ್ ಅಳವಡಿಸುವ ಕಾರ್ಯ ಮಾಡುತ್ತಿದೆ. ಪ್ರತಿದಿನ ಸಂಜೆ ಅಧಿಕಾರಿಗಳ ಸಭೆ ನಡೆಸಿ, ಪಾಲಿಕೆ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳ ಗಮನ ಹರಿಸುವ ಕ್ರಮವನ್ನು ಪಾಲಿಕೆ ಕೈಗೊಳ್ಳಲಿದೆ. ಸಣ್ಣ ಸಣ್ಣ ರಸ್ತೆಗಳಿರುವ ಮಂಗಳೂರಿನ ಒಳಪ್ರದೇಶಗಳಲ್ಲಿ ರಸ್ತೆ ಯಾವುದು, ತೋಡು ಯಾವುದು ಎಂಬ ಗುರುತೂ ಸಿಗದಂತೆ ಕೃತಕ ನೆರೆ ಉದ್ಭವಿಸುವ ಕಾರಣ ಜಾಗರೂಕವಾಗಿಲ್ಲದಿದ್ದರೆ, ಅಮಾಯಕರು ಬಲಿಯಾಗುವ ಸಂಭವವಿದೆ ಎನ್ನುವುದು ಸ್ಥಳೀಯರ ಆಕ್ರೋಶದ ನುಡಿ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

 

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

 

 

 

 

Whats_app_banner