Dakshin Kannada News: ಸಿಎಂ ಆದೇಶಕ್ಕೂ ಬೆಲೆ ಕೊಡದ ಅಧಿಕಾರಿಗಳಿಂದ ಶಾಸಕರ ಹಕ್ಕುಚ್ಯುತಿ ಆರೋಪ: ದಕ ಡಿಸಿ ಕಚೇರಿ ಎದುರು ಬಿಜೆಪಿ ಶಾಸಕರ ಧರಣಿ
Dakshin kannada bjp protest ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಹಕ್ಕುಚ್ಯುತಿ ಮಂಡನೆಯಾಗುತ್ತಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಾಸಕರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಶಾಸಕರು ಸೋಮವಾರ ದಕ್ಷಿಣ ಕನ್ನಡ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಶಾಸಕರ ಬೇಡಿಕೆ ಏನು, ಡಿಸಿ ಕೊಟ್ಟ ಭರವಸೆ ಏನೇನು ಎನ್ನುವ ವರದಿ ಇಲ್ಲಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಹಕ್ಕುಚ್ಯುತಿ ಮಾಡಲಾಗುತ್ತಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು , ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಡಾ ವೈ ಭರತ್ ಶೆಟ್ಟಿ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ , ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್ ಸಿಂಹ ನಾಯಕ್ ಈ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ ಆರೋಪವೇನು
ಮೂಡಬಿದಿರೆಯ ಇರುವೈಲು ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನೆ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೆಸರನ್ನು ಹಾಕದೆ ಪ್ರೊಟೊಕಾಲ್ ಉಲ್ಲಂಘಿಸಲಾಗಿದೆ ಎಂದು ಕಾರ್ಯಕ್ರಮ ರದ್ದುಪಡಿಸಿ ಇರುವೈಲು ಗ್ರಾಮ ಪಂಚಾಯತ್ ಪಿಡಿಓ ಮತ್ತು ಮೂಡಬಿದಿರೆ ತಾಲ್ಲೂಕು ಇಓ ಅವರನ್ನು ಅಮಾನತು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಪ್ರಗತಿ ಪರಿಶೀಲನ ಸಭೆ ನಡೆಸಿದ್ದು, ಈ ಸಭೆಯಲ್ಲಿ ಈ ವಿಚಾರವನ್ನು ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಗಮನಕ್ಕೆ ತಂದಿದ್ದರು. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೊಟೊಕಾಲ್ ಉಲ್ಲಂಘಿಸದಂತೆ ಅಧಿಕಾರಿಗಳಿಗೆ ತಿಳಿಹೇಳಿ ಅಮಾನತು ವಾಪಾಸು ಪಡೆಯುವಂತೆ ಸೂಚಿಸಿದ್ದರು. ಆದರೆ ಮುಖ್ಯಮಂತ್ರಿ ಈ ಸೂಚನೆ ನೀಡಿ ಎರಡು ವಾರವಾದರೂ ಅಮಾನತು ಆದೇಶ ವಾಪಾಸು ಪಡೆಯಲಾಗಿರಲಿಲ್ಲ. ಆ ಬಳಿಕ ಕಚೇರಿ ಕಟ್ಟಡವನ್ನು ಉದ್ಘಾಟಿಸಲು ಹೋಗಿದ್ದ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಪೊಲೀಸರ ಸರ್ಪಗಾವಲು ಮೂಲಕ ತಡೆಯಲು ಯತ್ನಿಸಲಾಗಿತ್ತು.
ಇದೇ ರೀತಿಯ ಘಟನೆ ಬಂಟ್ವಾಳ ದಲ್ಲಿ ನಡೆದಿದ್ದು, ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್ ನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ಪ್ರೊಟೊಕಾಲ್ ಉಲ್ಲಂಘಿಸಲಾಗಿದೆ ಎಂದು ಕಾರ್ಯಕ್ರಮ ರದ್ದು ಪಡಿಸಲಾಗಿತ್ತು. ಆದರೆ ಆಮಂತ್ರಣ ಪತ್ರಿಕೆಯಲ್ಲಿ ಕಾಂಗ್ರೆಸ್ ನ ಇಬ್ಬರು ವಿಧಾನಪರಿಷತ್ ನ ಸದಸ್ಯರ ಹೆಸರು ಮೇಲೆ ಕೆಳಗೆ ಆಗಿದೆ ಎಂದು ಈ ಕಾರ್ಯಕ್ರಮ ರದ್ದುಪಡಿಸಲಾಗಿತ್ತು ಎಂದು ಬಿಜೆಪಿ ಆರೋಪ.
ಡಿಸಿ ಭೇಟಿ, ಮನವರಿಕೆ
ಇತ್ತೀಚೆಗೆ ಹಳೆಯಂಗಡಿ ಗ್ರಾಮ ಪಂಚಾಯತ್ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಅಡ್ಡಿಪಡಿಸಿ ಚುನಾವಣೆ ವಿಳಂಬವಾಗಿ ನಡೆಯುವಂತೆ ಮಾಡಿದ್ದರು.
ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಬಿಜೆಪಿ ಶಾಸಕರ ಧರಣಿ ನಡೆಯಿತು. ಧರಣಿಯ ವೇಳೆ ಸ್ಥಳಕ್ಕೆ ಬಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮುಂದೆ ಪ್ರೊಟೊಕಾಲ್ ಗೊಂದಲವಾಗದಂತೆ ದ.ಕ ಜಿಲ್ಲಾಧಿಕಾರಿ ಕಚೇರಿಯಿಂದ ಆಹ್ವಾನ ಪತ್ರಿಕೆ ಮುದ್ರಿಸಿ ಅನುಮೋದನೆ ಪಡೆಯುವಂತೆ ಆದೇಶ ಮಾಡಲಾಗಿದೆ. ಇರುವೈಲು ಗ್ರಾಮ ಪಂಚಾಯತ್ ನೂತನ ಕಚೇರಿಯಲ್ಲಿ ಇಂದಿನಿಂದಲೇ ಕರ್ತವ್ಯ ಆರಂಭಿಸುವಂತೆ ಸೂಚಿಸಲಾಗುವುದು ಮತ್ತು ಅಮಾನತು ಆದೇಶವನ್ನು ಶೀಘ್ರದಲ್ಲೇ ಹಿಂಪಡೆಯಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ಮುಕ್ತಾಯಗೊಳಿಸಲಾಯಿತು.
ಕಾಂಗ್ರೆಸ್ ನಿಂದ ದ್ವೇಷದ ರಾಜಕಾರಣ-ನಳಿನ್
ಧರಣಿ ಕೈ ಬಿಟ್ಟ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡ್ತಾ ಇದೆ.ಶಾಸಕರ ಹಕ್ಕುಗಳ ಚ್ಯುತಿ ಮಾಡುವ ಕೆಲಸ ಆಗ್ತಿದೆ.ಒಂದು ಪಕ್ಷದ ಕೆಲ ನಾಯಕರ ಮಾತು ಕೇಳಿ ಚ್ಯುತಿ ಮಾಡಲಾಗ್ತಿದೆ.ಮೂಡಬಿದ್ರೆಯ ಇರುವೈಲ್ ಹಾಗೂ ಬಂಟ್ವಾಳದಲ್ಲಿ ಘಟನೆ ನಡೆದಿದೆ.ಅಧಿಕಾರಿಗಳು ಶಿಷ್ಟಾಚಾರ ಪ್ರಕಾರ ಆಮಂತ್ರಣ ಕೊಟ್ಟಿದ್ದಾರೆ.ಆದರೆ ಡಿಸಿ ಕಚೇರಿಯಿಂದ ಏಕಾಏಕಿ ಕಾರ್ಯಕ್ರಮ ರದ್ದು ಮಾಡಲಾಗಿದೆ.ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರ ಹೆಸರಿಲ್ಲ ಅಂತ ರದ್ದು ಮಾಡಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಹಾಕಲಾಗಿದೆ, ಸ್ಪೀಕರ್, ಪರಿಷತ್ ಸದಸ್ಯರ ಹೆಸರೂ ಇತ್ತು. ಬಿಜೆಪಿಯ ಆರೂ ಶಾಸಕರ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡಲಾಗ್ತಿದೆ.ಜಿಲ್ಲಾಧಿಕಾರಿಗಳು ಇವತ್ತು ಬಂದು ಭರವಸೆ ಕೊಟ್ಟು ವಿನಂತಿ ಮಾಡಿದ್ದಾರೆ.ಹೀಗಾಗಿ ನಾವು ಈಗ ಧರಣಿ ವಾಪಸ್ ತೆಗೋತಿವಿ.ಇವತ್ತು ಸಂಜೆಯೊಳಗೆ ಅಮಾನತು ಆದೇಶ ವಾಪಸ್ ಪಡೆಯಬೇಕು.ಇಲ್ಲದೇ ಇದ್ದರೆ ನಾವು ನಾಳೆ ಮತ್ತೆ ಪ್ರತಿಭಟನೆ ಮಾಡ್ತೇವೆ ಎಂದು ತಿಳಿಸಿದರು.
( ವರದಿ: ಹರೀಶ್ ಮಾಂಬಾಡಿ)