Mangalore News: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ಏರ್ಪೋರ್ಟ್‌ಗೆ ಬಿಗಿ ಭದ್ರತೆ, ವಾರದ ಹಿಂದಿನ ಪ್ರಕರಣ ತಡವಾಗಿ ಬೆಳಕಿಗೆ
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ಏರ್ಪೋರ್ಟ್‌ಗೆ ಬಿಗಿ ಭದ್ರತೆ, ವಾರದ ಹಿಂದಿನ ಪ್ರಕರಣ ತಡವಾಗಿ ಬೆಳಕಿಗೆ

Mangalore News: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ಏರ್ಪೋರ್ಟ್‌ಗೆ ಬಿಗಿ ಭದ್ರತೆ, ವಾರದ ಹಿಂದಿನ ಪ್ರಕರಣ ತಡವಾಗಿ ಬೆಳಕಿಗೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಇಮೇಲ್ ಬಂದಿದೆ. ಈ ಸಂಬಂಧ ಪೊಲೀಸರು, ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆ ನಡೆಸಿದ್ದಾರೆ. ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವ ಬೆದರಿಕೆಯ ಇಮೇಲ್ ಬಂದಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವ ಬೆದರಿಕೆಯ ಇಮೇಲ್ ಬಂದಿದೆ.

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Mangalore International Airport) ಬಾಂಬ್ ಬೆದರಿಕೆ (Bomb Threat) ಹಾಕಿರುವ ಇಮೇಲ್ ಬಂದಿದೆ. ಏಪ್ರಿಲ್ 29ರಂದು ಈ ಸಂದೇಶ ಬಂದಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿಂದೆಯೂ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಇದೀಗ ಏಪ್ರಿಲ್ 29ರಂದು ಬಾಂಬ್ ಬೆದರಿಕೆ ಯ ಇಮೇಲ್ ಬಂದಿದೆ. ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಮತ್ತು ವಿಮಾನದಲ್ಲಿಯೂ ಬಾಂಬ್ ಇಡಲಾಗಿದೆ ಎಂದು ಇಮೇಲ್‌ನಲ್ಲಿ ಹೇಳಲಾಗಿದೆ. ಉಗ್ರರ ಹೆಸರಿನಲ್ಲಿ ಬಂದಿರುವ ಇಮೇಲ್ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹೆಚ್ಚಿದ ಭದ್ರತೆ, ಸಂಪೂರ್ಣ ತಪಾಸಣೆ

ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಹಿನ್ನೆಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸಂಪೂರ್ಣ ತಪಾಸಣೆಯನ್ನು ಮಾಡಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವುದನ್ನು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ಎಲ್ಲ ಬಾಂಬ್‌ಗಳು ಸ್ಫೋಟಗೊಳ್ಳಲಿದ್ದು ದೊಡ್ಡ ರಕ್ತಪಾತವೇ ನಡೆಯಲಿದೆ ಎಂದು ಸಂದೇಶದಲ್ಲಿ ಹೇಳಲಾಗಿರುವುದಾಗಿ ತಿಳಿದುಬಂದಿದೆ. ಆದರೆ ಎಂದಿನಂತೆಯೇ ಇದು ಕೇವಲ ಬೆದರಿಕೆಯ ತಂತ್ರವಾಗಿರಬಹುದು ಎಂದು ಅಂದಾಜಿಸಲಾಗಿದೆ. ಬಾಂಬ್ ಸ್ಪೊಟದ ಕೃತ್ಯದ ಹಿಂದೆ ಟೆರರೈಸರ್ಸ್ 111 (Terrorizers 111) ಸಂಘಟನೆಯ ಕೈವಾಡವಿದೆ ಎಂದು ಬೆದರಿಕೆಯಲ್ಲಿ ತಿಳಿಸಲಾಗಿದೆ ಎನ್ನಲಾಗಿದ್ದು, ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ದಿನಾಂಕ 29-04-24 ರಂದು ಬೆಳಗ್ಗೆ 9.37ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮೇಲ್ ಐಡಿಗೆ ಅಪರಿಚಿತ ವ್ಯಕ್ತಿಯೊಬ್ಬರು ತನ್ನ ಈ ಮೇಲ್ ನಿಂದ ವಿಮಾನ ನಿಲ್ದಾಣದ ಒಳಗೆ ಸ್ಫೋಟಕಗಳನ್ನು ಇರಿಸಿದ್ದು, ಇದನ್ನು ಸ್ಫೋಟಿಸಿ ಜೀವ ಹಾನಿ ಮಾಡುವುದಾಗಿ ಬೆದರಿಕೆ ಇಮೇಲ್‌ ಅನ್ನು ಕಳಿಸಿದ್ದು, ಈ ಬಗ್ಗೆ ವಿಮಾನ ನಿಲ್ದಾಣದ ಮುಖ್ಯ ಭದ್ರತಾ ಅಧಿಕಾರಿ ಮೋನಿಶ ಕೆಜಿ ಅವರು ನೀಡಿದ ದೂರಿದ ಆಧಾರದಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 72 2024 ಕಲಂ 507 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಂಬ್ ಬೆದರಿಕೆ ಸಂಬಂಧ ತನಿಖೆ ನಡೆಸಿದಾಗ ಅಪರಿಚಿತ ವ್ಯಕ್ತಿ ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣ ಜೊತೆಗೆ ದೇಶದ ಸುಮಾರು 25ಕ್ಕೆ ಹೆಚ್ಚು ವಿಮಾನ ನಿಲ್ದಾಣಗಳಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿರುವುದು ಕಂಡು ಬಂದಿದೆ. ಬಜಪೆ ಪೊಲೀಸ್ ರಿಂದ ಆರೋಪಿಯನ್ನು ಪತ್ತೆ ಕಾರ್ಯಾಚರಣೆ ಮುಂದುವರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Whats_app_banner