Mangalore News: ಮಕ್ಕಳ ತಜ್ಞೆ ಡಾ ಅಂಜಲಿ ಎಸ್ ರಾಜ್ ರವರಿಗೆ 'ಸಿಐಎಲ್ ವುಮನ್ ಆಫ್ ಸಬ್‌ಸ್ಟೆನ್ಸ್ 2024' ಗೌರವ
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಮಕ್ಕಳ ತಜ್ಞೆ ಡಾ ಅಂಜಲಿ ಎಸ್ ರಾಜ್ ರವರಿಗೆ 'ಸಿಐಎಲ್ ವುಮನ್ ಆಫ್ ಸಬ್‌ಸ್ಟೆನ್ಸ್ 2024' ಗೌರವ

Mangalore News: ಮಕ್ಕಳ ತಜ್ಞೆ ಡಾ ಅಂಜಲಿ ಎಸ್ ರಾಜ್ ರವರಿಗೆ 'ಸಿಐಎಲ್ ವುಮನ್ ಆಫ್ ಸಬ್‌ಸ್ಟೆನ್ಸ್ 2024' ಗೌರವ

ಮಕ್ಕಳು ಸೇರಿ ಕುಟುಂಬದ ಪೋಷಣೆ ಜೊತೆಗೆ ವೈದ್ಯಕೀಯ ಶಿಕ್ಷಣದಲ್ಲಿ ದೊಡ್ಡ ಸಾಧನೆ ಮಾಡಿರುವ ಮಕ್ಕಳ ತಜ್ಞೆ ಡಾ ಅಂಜಲಿ ಎಸ್ ರಾಜ್ ಅವರ ಸಾಧನೆ ಇತರೆ ಹೆಣ್ಣುಮಕ್ಕಳಿಗೆ ಮಾದರಿಯಾಗಿದೆ. ಜೀವನ ಸಾಧನೆಯ ವಿವರ ಇಲ್ಲಿದೆ.

ಮಕ್ಕಳ ತಜ್ಞೆ ಅಂಜಲಿ ಎಸ್ ರಾಜ್ ರವರಿಗೆ 'ಸಿಐಎಲ್ ವುಮನ್ ಆಫ್ ಸಬ್‌ಸ್ಟೆನ್ಸ್ 2024' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಕ್ಕಳ ತಜ್ಞೆ ಅಂಜಲಿ ಎಸ್ ರಾಜ್ ರವರಿಗೆ 'ಸಿಐಎಲ್ ವುಮನ್ ಆಫ್ ಸಬ್‌ಸ್ಟೆನ್ಸ್ 2024' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಂಗಳೂರು: ಬೆಂಗಳೂರಿನ ಶಿಶುಪಾಲನಾ ತಜ್ಞೆ ನಿಯೋನಾಟಾಲಜಿಸ್ಟ್ ಡಾ ಅಂಜಲಿ ಎಸ್. ರಾಜ್ ಅವರು ಮಂಗಳೂರಿನ ಎನ್‌ಜಿಒ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್‌ ಸಂಸ್ಥೆ ನೀಡುವ 2024ನೇ ಸಾಲಿನ "ಸಿಐಎಲ್ ವುಮನ್ ಆಫ್ ಸಬ್‌ಸ್ಟೆನ್ಸ್ 2024" ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗುರುವಾರ (ಮಾರ್ಚ್ 7) ಸಿಐಎಲ್ ಕಾರ್ಯನಿರ್ವಾಹಕ ನಿರ್ದೇಶಕಿ ಸಚಿತಾ ನಂದಗೋಪಾಲ್ ಅವರು ಪ್ರಶಸ್ತಿಯನ್ನು ಘೋಷಣೆ ಮಾಡಿದ್ದರು. ಡಾ ಅಂಜಲಿ ಎಸ್. ರಾಜ್ ಅವರು ಪ್ರಸ್ತುತ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ನಿಯೋನಾಟಾಲಜಿಯಲ್ಲಿ ಕನ್ಸಲ್ಟೆಂಟ್ ಸೂಪರ್ ಸ್ಪೆಷಲಿಸ್ಟ್ ಆಗಿದ್ದಾರೆ. ಮಹಿಳೆಯರಿಗೆ ಸ್ಪೂರ್ತಿ ಯಾಗಿರುವ ಇವರು ತಮ್ಮ ವೈದ್ಯಕೀಯ ಶೈಕ್ಷಣಿಕ ಉನ್ನತಿಯೊಂದಿಗೆ ಸಾಂಸಾರಿಕ ಜೀವನದ ಸಮತೋಲನವನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೆ ಉದಾಹರಣೆಯಾಗಿರುವುದರಿಂದ ಇವರನ್ನು ಸಿಐಎಲ್ ಸಂಸ್ಥೆಯು ಈ ವರ್ಷದ ಪ್ರಶಸ್ತಿಗಾಗಿ ಪರಿಗಣಿಸಿದೆ.

ಈ ಮನ್ನಣೆಯು ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನದ ಥೀಮ್ "ಇನ್‌ಸ್ಪೈರ್ ಇನ್‌ಕ್ಲೂಷನ್" ನ ಸಾಲಿನಲ್ಲಿದೆ. ಎರಡು ಪುಟ್ಟ ಹೆಣ್ಣುಮಕ್ಕಳ ತಾಯಿಯಾಗಿರುವ ಡಾ. ಅಂಜಲಿ, ಇತ್ತೀಚೆಗೆ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಡಿಎಂ ನಿಯೋನಾಟಾಲಜಿಯಲ್ಲಿ ಚಿನ್ನದ ಪದಕದೊಂದಿಗೆ ವಿಶ್ವವಿದ್ಯಾನಿಲಯದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇವರು ವಿಜಯನಗರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಬಳ್ಳಾರಿಯಲ್ಲಿ ಎಂಬಿಬಿಎಸ್ ಪದವಿ ಯನ್ನು ಗಳಿಸಿ ತದನಂತರ 2014 ರಲ್ಲಿ ಅಹಮದಾಬಾದ್‌ನ ಬಿ ಜೆ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎಂಡಿ (ಪೀಡಿಯಾಟ್ರಿಕ್ಸ್) ನಲ್ಲಿ ಚಿನ್ನದ ಪದಕ ವಿಜೇತೆ ಮತ್ತು ಗುಜರಾತ್ ವಿಶ್ವವಿದ್ಯಾಲಯದ ಟಾಪರ್ ಆಗಿದ್ದರು.

ಚಿನ್ನದ ಪದಕಗಳು, ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಭಾಗಿ

ಮುಂಬೈನ ಬಾಯಿ ಜೆರ್ಬೈ ವಾಡಿಯಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಿಂದ ನಿಯೋನಾಟಾಲಜಿಯಲ್ಲಿ ಐಎಪಿ ಫೆಲೋಶಿಪ್‌ನಲ್ಲಿ ಚಿನ್ನದ ಪದಕವನ್ನು ಗಳಿಸಿ, ಡಿಎನ್‌ಬಿ (ಪೀಡಿಯಾಟ್ರಿಕ್ಸ್) ಅನ್ನು ಪೂರ್ಣಗೊಳಿಸಿದ್ದಾರೆ. ಅವರು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕೀರ್ಣ ಹಾಗೂ ಕಾನ್ಫರೆನ್ಸ್ ಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವು ವೈದ್ಯಕೀಯ ಜರ್ನಲ್ ಗಳಲ್ಲಿ ಅವರ ಅಧ್ಯಯನಗಳು ಪ್ರಕಟಗೊಂಡಿದೆ.

ಕುದುರೆಮುಖದಲ್ಲಿರುವ ಕೇಂದ್ರೀಯ ವಿದ್ಯಾಲಯ ಹಳೆಯ ವಿದ್ಯಾರ್ಥಿನಿಯಾಗಿರುವ ಅಂಜಲಿ ಅವರು ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (KIOCL) ನ ನಿವೃತ್ತ ಉದ್ಯೋಗಿ ಸುಂದರ್ ರಾಜ್ ಮತ್ತು ರಾಜಲಕ್ಷ್ಮಿ ಎಸ್. ರಾಜ್ ಅವರ ಪುತ್ರಿ. ಅವರ ಕಿರಿಯ ಸಹೋದರಿ ಅಕ್ಷತಾ ಆರ್. ರಾಜ್ ಅವರು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ನಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕ್ರಿಟಿಕಲ್ ಕೇರ್ ಮೆಡಿಸಿನ್‌ನ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ ನಟೇಶ್ ಪ್ರಭು ಅವರನ್ನು ಮದುವೆಯಾಗಿರುವ ಅಂಜಲಿಯವರಿಗೆ ಮೇಧಾ ಹಾಗೂ ಆದ್ಯ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರಿಗೆ ಪ್ರಶಸ್ತಿಯನ್ನು ಘೋಷಿಸಿರುವ ಬಗ್ಗೆ ಮಾತನಾಡಿರುವ ಸಚಿತ ನಂದಗೋಪಾಲ್, ಅಂಜಲಿ ಅವರನ್ನು "ಸಿಐಎಲ್ ವುಮನ್ ಆಫ್ ಸಬ್‌ಸ್ಟೆನ್ಸ್" ಎಂದು ಗುರುತಿಸಲು ಕಾರಣ ಉನ್ನತ ಶ್ರೇಣಿಯ ವೈದ್ಯೆಯಾಗಿ, ವೈದ್ಯಕೀಯ ಉನ್ನತ ಶಿಕ್ಷಣವನ್ನು ಮುಂದುವರೆಸಿಕೊಂಡು ಅದರ ಜೊತೆಗೆ ತನ್ನ ಕುಟುಂಬದ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ತನ್ನ ಪತಿ, ಅತ್ತೆ ಮಾವ ಮತ್ತು ತಂದೆ ತಾಯಿಯವರ ಸಹಕಾರದೊಂದಿಗೆ ಯಶಸ್ವಿಯಾಗಿ ನಿಭಾಯಿಸುತ್ತ ಇವರು ಸಮಾಜಕ್ಕೆ, ಮುಖ್ಯವಾಗಿ ಮಹಿಳೆಯರಿಗೆ ಮಾದರಿಯಾಗಿರುವರು ಎಂದು ತಿಳಿಸಿದ್ದಾರೆ.

"ಸಿಐಎಲ್ ವುಮನ್ ಆಫ್ ಸಬ್‌ಸ್ಟೆನ್ಸ್" ಪ್ರಶಸ್ತಿಯನ್ನು 2023 ರಲ್ಲಿ ಸಿಐಎಲ್ ಸಂಸ್ಥೆಯು ಆರಂಭಿಸಿದ್ದು, ಮೊದಲ ಪ್ರಶಸ್ತಿಗೆ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಮತ್ತು ಅವರ ಸಹೋದರಿ ಜ್ಯೋತ್ಸ್ನಾ ಅಮೃತ್ ಭಾಜನರಾಗಿದ್ದರು.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner