ಕನ್ನಡ ಸುದ್ದಿ  /  ಕರ್ನಾಟಕ  /  Drought: ಕರಾವಳಿ ಜಿಲ್ಲೆಗಳಲ್ಲಿ ಏರಿದ ತಾಪಮಾನ, ನದಿಗಳಲ್ಲಿ ಕಡಿಮೆಯಾದ ನೀರಸೆಲೆ

Drought: ಕರಾವಳಿ ಜಿಲ್ಲೆಗಳಲ್ಲಿ ಏರಿದ ತಾಪಮಾನ, ನದಿಗಳಲ್ಲಿ ಕಡಿಮೆಯಾದ ನೀರಸೆಲೆ

ಬರದ ಸನ್ನಿವೇಶ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ಬಿಟ್ಟಿಲ್ಲ. ಹಲವು ಕಡೆ ನೀರಿನ ಸಮಸ್ಯೆ ಈಗಾಗಲೇ ಕಂಡು ಬಂದಿದೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಇದು ನೇತ್ರಾವತಿ ನದಿಯ ಸ್ಥಿತಿಗತಿ.
ಇದು ನೇತ್ರಾವತಿ ನದಿಯ ಸ್ಥಿತಿಗತಿ.

ಮಂಗಳೂರು: ಒಮ್ಮೆ ಬೇಸಿಗೆಯಲ್ಲಿ ಮಳೆ ಸುರಿದು ಇಳೆಯನ್ನು ತಣಿಸಿದ್ದಷ್ಟೇ ಬಂತು. ಈಗ ಮತ್ತೆ ಧಗಧಗಿಸುತ್ತಿದೆ ಕರಾವಳಿ. ಮೇ ತಿಂಗಳಾಂತ್ಯಕ್ಕೆ ಮುಂಗಾರು ಪ್ರವೇಶದ ಕುರಿತು ಐಎಂಡಿ ಅಧಿಕಾರಿಗಳು ಲೆಕ್ಕಾಚಾರ ಮಾಡುತ್ತಿದ್ದರೆ, ಇನ್ನೊಂದೆಡೆ ನೇತ್ರಾವತಿ ನದಿಯಲ್ಲಿ ನೀರಿನ ಸೆಲೆ ಕಡಿಮೆಯಾಗುತ್ತಿದೆ. ಬಿಸಿಲಿನ ತಾಪಕ್ಕೆ ನೀರು ಆವಿಯಾಗುತ್ತಿದೆ. ಸದ್ಯ ಮಂಗಳೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಇವತ್ತಿನವರೆಗೂ ಪ್ರತಿದಿನವೂ ನೀರು ನಲ್ಲಿಯಲ್ಲಿ ಬರುತ್ತಿದೆ. ಆದರೆ ಇನ್ನು ಹದಿನೈದು ದಿನಗಳ ಬಳಿಕ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸುವುದು ಕಷ್ಟ. ಮಳೆ ಬಾರದೇ ಇದ್ದರೆ ನಿಶ್ಚಿತವಾಗಿಯೂ ಪರಿಸ್ಥಿತಿ ಬಿಗಡಾಯಿಸಬಹುದು. ಮಂಗಳೂರಿನಲ್ಲಿ ಹೀಗಾದರೆ, ನೇತ್ರಾವತಿಯನ್ನೇ ನಂಬಿ ಇರುವ ಬೆಳ್ತಂಗಡಿ, ಬಂಟ್ವಾಳಕ್ಕೂ ಇದೇ ಸ್ಥಿತಿ ಬರಬಹುದು. ಬೆಳ್ತಂಗಡಿ, ಬಂಟ್ವಾಳದ ನದಿ ತೀರದ ಕೃಷಿಕರು ನೇತ್ರಾವತಿಯನ್ನು ನಂಬಿ ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ನೀರಿನ ಕೊರತೆ ಅವರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ. ಗಿಡಗಳಿಗೆ ನೀರು ಹಾಕಲು ಅಸಾಧ್ಯವಾಗಿ ಅವು ಸತ್ತುಹೋದರೆ, ಅಂಥ ಒಂದು ಗಿಡ ಮರವಾಗಲು ವರ್ಷಗಟ್ಟಲೆ ಕಾಯಬೇಕು.

ಟ್ರೆಂಡಿಂಗ್​ ಸುದ್ದಿ

ಮಾಹಿತಿ ಪ್ರಕಾರ, ಶಂಭೂರಿನ ಎಎಂಆರ್ ಡ್ಯಾಂನಲ್ಲಿ 15.42 ಮೀಟರ್ ನೀರು ಸಂಗ್ರಹವಾಗಿದೆ. ಇಲ್ಲಿಂದ ಸಂಗ್ರಹವಾಗಿದ್ದ ನೀರಿನಲ್ಲಿ ಶೇ.20ರಷ್ಟು ನೀರನ್ನು ತುಂಬೆಗೆ ಬಿಡಲಾಗುತ್ತದೆ. ಹೀಗಾಗಿ ಈ ನೀರನ್ನು ಅವಲಂಬಿಸಿ ಬಂಟ್ವಾಳ ಪುರವಾಸಿಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ತುಂಬೆಯಲ್ಲಿ ಸಂಗ್ರಹವಾದ ನೀರನ್ನು ಮಂಗಳೂರಿನ ಮಹಾನಗರವ್ಯಾಪ್ತಿಯ ಜನರಿಗೆ ಒದಗಿಸಲಾಗುತ್ತದೆ.

ಬಹುಗ್ರಾಮಕ್ಕೂ ನೇತ್ರಾವತಿ ಆಸರೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ವಯ ಮನೆ ಮನೆಗಳಿಗೆ ನೀರು ತಲುಪುತ್ತದೆ. ಆದರೆ ನೀರನ್ನು ಲಿಫ್ಟ್ ಮಾಡುವ ಜಾಗದಲ್ಲೇ ನೀರಿಲ್ಲದಿದ್ದರೆ, ಯಾವ ಯೋಜನೆಯೂ ಉಪಯೋಗವಾಗುವುದಿಲ್ಲ. ತಾಪಮಾನ ಏರಿಕೆ ಪರಿಣಾಮ ಬಿಸಿಲ ಝಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಎನ್ನಲಾಗಿರುವ ನೇತ್ರಾವತಿ ನದಿಯಲ್ಲಿ ಒಳಹರಿವು ಹೆಚ್ಚುಕಮ್ಮಿ ನಿಂತುಹೋಗಿದೆ. ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿರುವುದಕ್ಕೆ ಶಂಭೂರು ಡ್ಯಾಂನಲ್ಲಿ ಸಂಗ್ರಹಗೊಳ್ಳುವ ನೀರು ಸಾಕ್ಷಿ. ಏಪ್ರಿಲ್ ಆರಂಭದಲ್ಲಿ ಇಲ್ಲಿ 17.10 ಮೀಟರ್ ನೀರು ಸಂಗ್ರಹವಾದರೆ, ಏಪ್ರಿಲ್ 15ರ ವೇಳೆಗೆ ಕಡಿಮೆಯಾಗಿತ್ತು. ಈಗ ಮೇ ಆರಂಭದಲ್ಲಿ ಇನ್ನೂ ಇಳಿದಿದೆ.

2019ರಲ್ಲಿ ಹೀಗೆ ಆಗಿತ್ತು

2019ರಲ್ಲಿ ನೀರಿನ ಪ್ರಮಾಣ ಇದೇ ರೀತಿ ಕುಸಿತ ಕಾಣಿಸುತ್ತಿತ್ತು. ಏಪ್ರಿಲ್ ತಿಂಗಳ ಆರಂಭದಲ್ಲಿ ಈ ರೀತಿಯಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿರುವುದು ಹವಾಮಾನ ಇಲಾಖೆ ಮಳೆ ಬರಬಹುದು ಎಂದಿದ್ದರೂ ಒಂದು ಹನಿಯೂ ನೀರು ಮಳೆ ಬಾರದೇ ಇರುವುದನ್ನು ಗಮನಿಸಿದರೆ, ಮುಂದೆ ನದಿ ನೀರಿನ ಮಟ್ಟ ಮತ್ತಷ್ಟು ಇಳಿಮುಖವಾಗುವ ಸಾಧ್ಯತೆ ಇದೆ. ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಜಕ್ರಿಬೆಟ್ಟು ಜಾಕ್ವೆಲ್ ಮೂಲಕ ಪ್ರತಿದಿನ 5.6 ಎಂ.ಎಲ್.ಡಿ. ನೀರನ್ನು ಎತ್ತಲಾಗುತ್ತಿದೆ.

ಸದ್ಯಕ್ಕೆ ಜಕ್ರಿಬೆಟ್ಟುವಿನಲ್ಲಿ ನೀರಿನ ಶೇಖರಣೆ ಇದೆ. ಕಳೆದ ವರ್ಷ ಹೊಂಡಗಳಲ್ಲಿ ತುಂಬಿದ್ದ ನೀರನ್ನು ಜಾಕ್ ವೆಲ್ ಗೆ ಹರಿಸಲಾಗಿತ್ತು. ದಕ್ಷಿಣ ಕನ್ನಡ ಗ್ರಾಮೀಣ ಭಾಗದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ, ನರಿಕೊಂಬು, ಕರೋಪಾಡಿ, ಮಾಣಿ ಮತ್ತು ಸರಪಾಡಿ ಯೋಜನೆಗಳಿಗೆ ನೇತ್ರಾವತಿ ನದಿಯೇ ಬಂಡವಾಳ. ಕಳೆದ ವರ್ಷ ನದಿಯಲ್ಲಿ ನೀರಿನ ಪ್ರಮಾಣ ಕುಸಿದ ಪರಿಣಾಮ, ತೊಂದರೆ ಆಗಿತ್ತು. ಈ ವರ್ಷ ಬಹುಗ್ರಾಮ ವ್ಯಾಪ್ತಿ ಹೆಚ್ಚಿನ ಕಡೆಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.

ಶಂಭೂರು ಡ್ಯಾಮ್ ನಿಂದ ನೀರು ಬಿಟ್ಟಿರುವ ಪರಿಣಾಮ, ಕಡೇಶಿವಾಲಯ, ಬರಿಮಾರು, ಅಜಿಲಮೊಗರು, ಸರಪಾಡಿ ಭಾಗಗಳಲ್ಲಿ ನದಿ ನೀರು ಖಾಲಿಯಾಗಿ ಮರಳು ಕಾಣಿಸುತ್ತಿದೆ. ಮಾಣಿ ಮತ್ತು ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಜಾಕ್ ವೆಲ್ ಗಳಿಗೆ ನೀರು ಲಿಫ್ಟ್ ಮಾಡಲು ಕಷ್ಟಸಾಧ್ಯವಾಗುವ ಆತಂಕವೂ ಎದುರಾಗಿದೆ.

ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point

ವಿಭಾಗ