Mangalore News: ಮಂಗಳೂರಲ್ಲಿ ಅಪಘಾತಕ್ಕೆ ಕಾರಣವಾಗುತ್ತಿರುವ ಬಾಗಿಲಿಲ್ಲದ ಬಸ್: ತಿಂಗಳ ಗಡುವು ನೀಡಿದ ದಕ್ಷಿಣ ಕನ್ನಡ ಡಿಸಿ
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಮಂಗಳೂರಲ್ಲಿ ಅಪಘಾತಕ್ಕೆ ಕಾರಣವಾಗುತ್ತಿರುವ ಬಾಗಿಲಿಲ್ಲದ ಬಸ್: ತಿಂಗಳ ಗಡುವು ನೀಡಿದ ದಕ್ಷಿಣ ಕನ್ನಡ ಡಿಸಿ

Mangalore News: ಮಂಗಳೂರಲ್ಲಿ ಅಪಘಾತಕ್ಕೆ ಕಾರಣವಾಗುತ್ತಿರುವ ಬಾಗಿಲಿಲ್ಲದ ಬಸ್: ತಿಂಗಳ ಗಡುವು ನೀಡಿದ ದಕ್ಷಿಣ ಕನ್ನಡ ಡಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಗಿಲಿಲ್ಲ ಬಸ್‌ಗಳಲ್ಲಿ ಅಪಘಾತಗಳಾಗಿ ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊನೆಗೂ ಎಚ್ಚೆತ್ತುಕೊಂಡಿದೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲಿನ್‌ ಸಾರಿಗೆ ಅಧಿಕಾರಿಗಳ ಸಭೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲಿನ್‌ ಸಾರಿಗೆ ಅಧಿಕಾರಿಗಳ ಸಭೆ ನಡೆಸಿದರು.

ಮಂಗಳೂರು: ಈ ತಿಂಗಳ ಮೊದಲ ವಾರ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಸಮೀಪ ಮಹಿಳೆಯೊಬ್ಬರು ಬಸ್ಸಿನ ಡ್ರೈವರ್ ಸೀಟಿನ ಹಿಂಭಾಗದ ಸೀಟಿನಿಂದ ಎದ್ದು, ಮಗುವನ್ನು ಹಿಡಿದುಕೊಂಡು ಬಂದ ಮತ್ತೊಂದು ಮಹಿಳೆಗೆ ಸೀಟ್ ಕೊಡಲು ಎದ್ದರು. ಈ ಸಂದರ್ಭ ಬಸ್ಸಿನ ಸರಳು ಹಿಡಿಯುವ ಹೊತ್ತಿಗೆ ಆಯತಪ್ಪಿದರು. ಅಲ್ಲೇ ಫುಟ್ ಬೋರ್ಡ್ ಇತ್ತು. ಆದರೆ ಅಲ್ಲೂ ಜಾರಿ ಬಾಗಿಲು ಇಲ್ಲದ ಬಸ್ಸಿನಿಂದ ಹೊರಕ್ಕೆಸೆಯಲ್ಪಟ್ಟು ಸಾವನ್ನಪ್ಪಿದ್ದರು. ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನಿನ್ನಿಕಲ್ಲಿನ ರಾಧಾ (66) ಸಾವನ್ನಪ್ಪಿದ ಮಹಿಳೆ.

ಸರಿಯಾಗಿ ಒಂದೂವರೆ ತಿಂಗಳ ಹಿಂದೆ ಇಂಥದ್ದೇ ಘಟನೆಯೊಂದು ಮಂಗಳೂರಿನ ಹೊರವಲಯದ ಜೋಕಟ್ಟೆ ಎಂಬಲ್ಲಿ ನಡೆದಿತ್ತು. ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ನೊಳಗಿದ್ದ ಮಹಿಳೆ ಕೆಳಗೆಬಿದ್ದು ಸಾವನ್ನಪ್ಪಿದ ಘಟನೆ ನಡೆದಿತ್ತು. ಈರಮ್ಮ‌ (65) ಮೃತಪಟ್ಟ ಮಹಿಳೆ. ಬೆಳಗ್ಗೆ ತನ್ನ ಮಗಳೊಂದಿಗೆ ಖಾಸಗಿ ಬಸ್ನಲ್ಲಿ ಸುರತ್ಕಲ್ ಕಡೆಗೆ ಪ್ರಯಾಣಿಸುತ್ತಿದ್ದರು. ಬಸ್ ಜೋಕಟ್ಟೆ ಕ್ರಾಸ್ ಬಳಿಯ ಸರ್ವೀಸ್ ಸ್ಟೇಷನ್ ತಲುಪಿದಾಗ, ಅದರ ಚಾಲಕ ಹಠಾತ್ ಆಗಿ ಬ್ರೇಕ್ ಹಾಕಿದ್ದಾರೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಈರಮ್ಮ ಬಸ್‌ನಿಂದ ಕೆಳಗೆ ಬಿದ್ದಿದ್ದಾರೆ. ಇದಲ್ಲದೇ, ಬಸ್ನ ಹಿಂದಿನ ಎಡ ಚಕ್ರವು ಈರಮ್ಮನ ಮೇಲೆ ಚಲಿಸಿದೆ. ಇದರ ಪರಿಣಾಮ ಅವರಿಗೆ ತಲೆಗೆ ಗಾಯವುಂಟಾಗಿ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾರೆ.

ಮೇಲೆ ನಡೆದ ಎರಡೂ ಘಟನೆಗಳು 2024ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಬಾಗಿಲು ಇಲ್ಲದ ಖಾಸಗಿ ಬಸ್ಸಿನಲ್ಲಿ ನಡೆದದ್ದು ಹಾಗೂ ಆ ಬಸ್ಸುಗಳಲ್ಲಿ ಬಾಗಿಲು ಇದ್ದಿದ್ದರೆ, ಎರಡೂ ಮಹಿಳೆಯರು ಮೃತರಾಗುತ್ತಲೇ ಇರಲಿಲ್ಲ ಎಂಬುದು ವರದಿ ಓದುವಾಗಲೇ ತಿಳಿಯುತ್ತದೆ. ಕಳೆದ ವರ್ಷವೂ ಬಾಗಿಲು ಇಲ್ಲದ ಬಸ್ಸಿನಿಂದ ಹೊರಕ್ಕೆಸೆಯಲ್ಪಟ್ಟು ಸಾವನ್ನಪ್ಪಿದ ಘಟನೆ ವರದಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಥ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತಿರುವುದನ್ನು ಮನಗಂಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಬಸ್ಸುಗಳಿಗೆ ಬಾಗಿಲು ಅಳವಡಿಸಲು ಸ್ಪಷ್ಟ ಸೂಚನೆ ನೀಡಿದ್ದಾರೆ.

ಸಾರಿಗೆ ಇಲಾಖೆ ಅಧಿಕಾರಿಗಳು ಇದನ್ನು ಗಮನಿಸಿ ಕಾಲಮಿತಿಯೊಳಗೆ ಬಸ್‌ಗಳಲ್ಲಿ ಬಾಗಿಲು ಅಳವಡಿಸಿ ಮಾಲೀಕರು ಹಾಗೂ ಕೆಲಸಗಾರರಿಗೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ.

ಜಿಲ್ಲಾಧಿಕಾರಿ ನೀಡಿರುವ ಸೂಚನೆ ಏನು

2017ರಿಂದ ನೋಂದಣಿಯಾಗಿರುವ ಎಲ್ಲಾ ಸಾರ್ವಜನಿಕ ಬಸ್‌ಗಳು ಮುಂದಿನ ಒಂದು ತಿಂಗಳೊಳಗೆ ಬಾಗಿಲನ್ನು ಅಳವಡಿಸಿ ಅಫಿಧಾವಿತ್ ಸಲ್ಲಿಸಬೇಕು. 2017ರಿಂದ ನೋಂದಣಿಯಾಗುವ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಬಾಗಿಲನ್ನು ಹೊಂದಿರಬೇಕು ಎಂದು ಕಾನೂನಿನಲ್ಲಿಯೇ ಇದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಬಸ್ಸುಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಂದಿನ ಒಂದು ತಿಂಗಳೊಳಗೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಬಸ್ಸು ಮಾಲೀಕರು ಅಫಿಧಾವಿತ್ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌ಟಿಓಗೆ ನಿರ್ದೇಶಿಸಿದ್ದಾರೆ.

ಉಳಿದೆಡೆ ಬಾಗಿಲು ಇದೆ, ಕರಾವಳಿಯಲ್ಲಿ ಯಾಕಿಲ್ಲ?

ಸಾರ್ವಜನಿಕರ ಜೀವರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು. ಇದರಲ್ಲಿ ನಿರ್ಲಕ್ಷ್ಯ ಸಹಿಸುವ ಪ್ರಶ್ನೆಯೇ ಇಲ್ಲ. ಬಸ್‌ಗಳಲ್ಲಿ ಬಾಗಿಲನ್ನು ಅಳವಡಿಸಬೇಕೆಂದು ಸಾರ್ವಜನಿಕರಿಂದಲೂ ತೀವ್ರ ಒತ್ತಡ ಬರುತ್ತಿವೆ. ಜನಸಂಪರ್ಕ ಸಭೆಗಳಲ್ಲಿಯೂ ಮನವಿಗಳು ಬಂದಿವೆ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತಿತರ ರಾಜ್ಯಗಳಲ್ಲೂ ಬಸ್‌ಗಳಲ್ಲಿ ಬಾಗಿಲು ಅಳವಡಿಸಿ ಸಂಚರಿಸುತ್ತಿವೆ. ಬೆಂಗಳೂರಿನಲ್ಲಿಯೂ ಸಿಟಿ ಬಸ್‌ಗಳಲ್ಲಿ ಬಾಗಿಲು ಇರುವುದರಿಂದ ಸಾರ್ವಜನಿಕರ ಸಂಚಾರ ನಿರಾತಂಕವಾಗಿದೆ. ಇದರಿಂದ ಸಂಚಾರ ವ್ಯವಸ್ಥೆಯೂ ಸುಗಮ ಎಂಬುದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner