Lok Sabha Elections 2024: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಟಿಕೆಟ್‌ ಬಿರುಸು, ಕಟೀಲ್‌ಗೆ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಠಕ್ಕರ್‌
ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Elections 2024: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಟಿಕೆಟ್‌ ಬಿರುಸು, ಕಟೀಲ್‌ಗೆ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಠಕ್ಕರ್‌

Lok Sabha Elections 2024: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಟಿಕೆಟ್‌ ಬಿರುಸು, ಕಟೀಲ್‌ಗೆ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಠಕ್ಕರ್‌

ಲೋಕಸಭೆ ಚುನಾವಣೆಗೆ ದಕ್ಷಿಣ ಕನ್ನಡ ಬಿಜೆಪಿಯಲ್ಲಿ ಪೈಪೋಟಿ ಜೋರಾಗಿದೆ. ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಬದಲಿಗೆ ಟಿಕೆಟ್‌ಗೆ ಸತ್ಯಜಿತ್‌ ಸುರತ್ಕಲ್‌ ಪ್ರಬಲ ಲಾಬಿ ನಡೆಸಿ ಬಹಿರಂಗ ಸಭೆಯನ್ನೂ ನಡೆಸಿದ್ದಾರೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಬಂಟ್ವಾಳದಲ್ಲಿ ಜನಾಗ್ರಹ ಸಮಾವೇಶ ನಡೆಸಿದ ಸತ್ಯಜಿತ್‌ ಸುರತ್ಕಲ್‌
ಬಂಟ್ವಾಳದಲ್ಲಿ ಜನಾಗ್ರಹ ಸಮಾವೇಶ ನಡೆಸಿದ ಸತ್ಯಜಿತ್‌ ಸುರತ್ಕಲ್‌

ಮಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿರುವ ನಳಿನ್ ಕುಮಾರ್ ಕಟೀಲ್ ನಾಲ್ಕನೇ ಬಾರಿ ಸ್ಪರ್ಧೆಗಿಳಿಯಲಿದ್ದಾರಾ ಅಥವಾ ಹೊಸಮುಖಕ್ಕೆ ಅವಕಾಶ ದೊರಕುತ್ತದಾ ಎಂಬ ಚರ್ಚೆಗಳು ಇನ್ನೂ ಜೀವಂತವಿರುವಾಗಲೇ, ಹಿಂದುತ್ವದ ಫೈರ್ ಬ್ರಾಂಡ್ ಎಂದೇ ಹೇಳಲಾಗುವ ಸತ್ಯಜಿತ್ ಸುರತ್ಕಲ್ ಅವರ ಅಭಿಮಾನಿಗಳ ಜಿಲ್ಲಾಮಟ್ಟದ ಹಕ್ಕೊತ್ತಾಯ ಸಮಾವೇಶ ಬಂಟ್ವಾಳದಲ್ಲಿ ನಡೆಯಿತು.

ಈ ಸಂದರ್ಭ ಸ್ವತಃ ಸತ್ಯಜಿತ್ ಸುರತ್ಕಲ್ ನಾನು ಹಿಂದುತ್ವಕ್ಕಾಗಿ ಪ್ರಾಣ ಒತ್ತೆ ಇಟ್ಟು ಹೋರಾಡಿದ್ದೇನೆ. ಆದರೆ ಚುನಾವಣೆ ಸಂದರ್ಭ ಟಿಕೆಟ್ ನೀಡದೆ ವಂಚಿಸಲಾಗುತ್ತಿದೆ. ಈ ಬಾರಿ ಬಿಜೆಪಿಯಿಂದ ಟಿಕೆಟ್ ಅಪೇಕ್ಷಿತನಾಗಿದ್ದೇನೆ, ಸ್ಪರ್ಧೆಯಂತೂ ಖಚಿತ ಎಂದು ರಣಕಹಳೆಯೂದಿದ್ದಾರೆ.

ಹಿಂದುತ್ವದ ಪ್ರಯೋಗ ಶಾಲೆ ಎಂದೇ ಗುರುತಿಸಿಕೊಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 26 ವರ್ಷಗಳಿಂದ ಹಿಂದುತ್ವ ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲು ಪ್ರಾಣ ಒತ್ತೆಯಿಟ್ಟು ದುಡಿದ ನನ್ನಂತಹವರಿಗೆ ಬಿಜೆಪಿ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಸಿಗಬೇಕು ಎಂಬುದು ಸಹಸ್ರಾರು ಮಂದಿ ಕಾರ್ಯಕರ್ತರ ಒಕ್ಕೊರಳ ಆಗ್ರಹ ಎಂದು ಅವರು ಹೇಳಿದರು.

ಸದ್ಯ ಸತ್ಯಜಿತ್ ಸುರತ್ಕಲ್ ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಒಬ್ಬರಿಗೆ ಎರಡು ಅಥವಾ ಮೂರು ಅವಧಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಬೇಕು. ಮಾತ್ರವಲ್ಲದೆ ಪಕ್ಷಾಂತರಿಗಳು ಬಲಿಷ್ಟ ಸಮುದಾಯಗಳಿಗೆ ಮಣೆ ಹಾಕುವ ಬದಲಾಗಿ ಹಿಂದುತ್ವ ಮತ್ತು ಪಕ್ಷದ ಸಿದ್ಧಾಂತ ಉಳಿವಿಗೆ ಶ್ರಮ ವಹಿಸಿದ ಕಾರ್ಯಕರ್ತರಿಗೆ ಪ್ರಥಮ ಆದ್ಯತೆ ಸಿಗಬೇಕು. ಆ ಮೂಲಕ ರಾಜ್ಯದಲ್ಲಿ ಹಿಂದುತ್ವ ಮತ್ತು ಹಿಂದುಳಿದ ವರ್ಗ ಸಮುದಾಯ ಬಲಿಷ್ಟಗೊಂಡು ಸಾಮಾಜಿಕ ನ್ಯಾಯ ಸಿಗಲು ಸಹಕಾರಿಯಾಗುತ್ತದೆ. ಕಳೆದ 6 ವರ್ಷಗಳಿಂದ ನನಗೆ ಯಾವುದೇ ಜವಾಬ್ದಾರಿ ನೀಡದೆ ಕಡೆಗಣಿಸಿದ ಪಕ್ಷದ ಕೆಲವೊಂದು ಸ್ವಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ಸರ್ಕಾರ ನನಗೆ ನೀಡಿದ್ದ ಭದ್ರತಾ ಸಿಬ್ಬಂದಿಯನ್ನೂ ವಾಪಾಸು ಕರೆಸಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಹಲವು ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ತಪ್ಪಿಸಿದ್ದು, ಎಂದಿಗೂ ಒಳ ಒಪ್ಪಂದ ರಾಜಕೀಯ ಮಾಡಿಕೊಳ್ಳದ ನನಗೆ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಲೇಬೇಕು. ಡಾ.ಶ್ಯಾಮಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಡಾ.ವಿ.ಎಸ್.ಆಚಾರ್ಯ ಇವರು ಕಲಿಸಿಕೊಟ್ಟ ಪಕ್ಷದ ತತ್ವ ಸಿದ್ಧಾಂತಗಳಿಗೆ ಧಕ್ಕೆಯಾಗದಂತೆ ದೇಶದೆಲ್ಲೆಡೆ ತ್ರಿವರ್ಣ ಧ್ವಜ ಮತ್ತು ಭಗವಾಧ್ವಜ ಹಾರಾಡುವಂತಾಗಬೇಕು ಎನ್ನುವುದು ಅವರ ಒತ್ತಾಯ.

ಕಳೆದ 6 ವರ್ಷಗಳಿಂದ ಸಂಘಟನೆಯಲ್ಲಿ ಜವಾಬ್ದಾರಿ ಇಲ್ಲದಿದ್ದರೂ ಕಾರ್ಯಕರ್ತರು ಪ್ರೀತಿ, ವಿಶ್ವಾಸವನ್ನು ತೋರಿಸಿ ನನ್ನ ಜತೆ ಬಂದಿದ್ದು, ಶಾಸಕ, ಸಂಸದ, ಸಚಿವ ಸ್ಥಾನ ಅಪೇಕ್ಷೆ ಪಡದೇ ಇದ್ದರೂ ಕಾರ್ಯಕರ್ತರು ಅಪೇಕ್ಷೆ ಮಣಿದು ಸ್ಪರ್ಧೆಯ ನಿರ್ಧಾರ ಮಾಡಿದ್ದೇನೆ. ಬಿಜೆಪಿಯಿಂದ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಹಿಂದೊಮ್ಮೆ ಶಾಸಕ ಸ್ಥಾನ ಕೇಳಿದಾಗ ಸೀಟು ಕೊಡಲು ಹಿಂದುತ್ವದ ಹೋರಾಟ ಒಂದೇ ಮಾನದಂಡ ಅಲ್ಲ ಎಂದು ಬೇರೆ ಪಕ್ಷದಲ್ಲಿದ್ದ ವ್ಯಕ್ತಿಗೆ ಸೀಟನ್ನು ನೀಡಿದ್ದರು. ಪ್ರತಿ ಬಾರಿಯೂ ಅವಕಾಶ ನಿರಾಕರಣೆ ಮಾಡಿದರೂ ನಮ್ಮಿಂದ ತಪ್ಪಾಗಿದೆ, ಕ್ಷಮಿಸು ಎಂಬ ಮಾತನ್ನು ಯಾರೂ ಹೇಳಿಲ್ಲ. ಒಂದು ಸಭೆಗೆ ಅಪೇಕ್ಷಿತರಲ್ಲ ಎಂದು ಹೇಳಿದ ಕಾರಣ ಕಳೆದ 6 ವರ್ಷಗಳಿಂದ ದ.ಕ.ಜಿಲ್ಲಾ ಬಿಜೆಪಿ ಕಚೇರಿಗೆ ಹೋಗಿಲ್ಲ. ಕಳೆದ ಬಾರಿ ಲೋಕಸಭೆಗೆ ಸೀಟು ಕೇಳಿ ಕಾರ್ಯಕರ್ತರು ಬ್ಯಾನರ್ ಹಾಕಿದಾಗ ಯಡಿಯೂರಪ್ಪನವರೇ ಕರೆಸಿ ಅದನ್ನು ತೆಗೆಯಲು ಹೇಳಿ ಅವಕಾಶ ಭರವಸೆ ನೀಡಿದ್ದರು. ಬಳಿಕ ಅವರು ಕೂಡ ಕರೆಸಿ ಮಾತಾಡಿಲ್ಲ. ಡಾ. ಪ್ರಭಾಕರ ಭಟ್ ಅವರು ಕರೆಸಿ ಬೇಡಿಕೆ ಏನು ಎಂದು ಕೇಳಿದಾಗಲೂ ಲೋಕಸಭಾ ಸ್ಪರ್ಧೆಯ ಅವಕಾಶದ ಕುರಿತು ಹೇಳಿದ್ದೇನೆ. ಪಕ್ಷಕ್ಕೆ ಕಾರ್ಯಕರ್ತರು ಅನಿವಾರ್ಯ ಎಂಬುದನ್ನು ತೋರಿಸಿಕೊಡುವ ಕಾರ್ಯ ಮಾಡಲಿದ್ದೇನೆ ಎನ್ನುವುದು ಸತ್ಯಜೀವ್‌ ಅವರ ಅಭಿಪ್ರಾಯ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner