Mangalore News: ಕರಾವಳಿಯಲ್ಲಿ ಸಂಪ್ರದಾಯದ ಹೆಸರಲ್ಲಿ ಜೂಜಾಟ; ಕರ್ನಾಟಕದಲ್ಲಿ ಕೋಳಿ ಅಂಕ ನಿಷೇಧಿಸಿ ಪೊಲೀಸ್ ಇಲಾಖೆ ಆದೇಶ
ಕರ್ನಾಟಕದಲ್ಲಿ ಕೋಳಿ ಅಂಕವನ್ನ ನಿಷೇಧಿಸಿ ಪೊಲೀಸ್ ಮಹಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಸಂಪ್ರದಾಯದ ಹೆಸರಲ್ಲಿ ಜೂಜಾಟವನ್ನಾಗಿ ಮಾಡಿಕೊಂಡಿದ್ರು.
ಮಂಗಳೂರು: ಕೋಳಿ ಅಂಕದ ಹೆಸರಲ್ಲಿ ಜೂಜಾಟ ಅವ್ಯಾಹತವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ನಿಷೇಧ ಹೇರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಪರಿಸರ ಒಕ್ಕೂಟ ಕೋಳಿ ಅಂಕದಿಂದ ಆಗುತ್ತಿರುವ ಪರಿಣಾಮಗಳ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ, ಕೋಳಿ ಅಂಕವು ಪ್ರಾಣಿಹಿಂಸೆ ತಡೆ ಕಾಯಿದೆ 1960 ಕಲಂ 11ರ ಪ್ರಕಾರ, ಅಪರಾಧ. ಈ ಕಾಯಿದೆಯನ್ನು ಎಲ್ಲ ಠಾಣೆಗಳ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಕರಾವಳಿ ಭಾಗದಲ್ಲಿ ಹಲವು ಸಂದರ್ಭಗಳನ್ನು ಬಳಸಿಕೊಂಡು ಕೋಳಿ ಅಂಕ ನಡೆಯುತ್ತದೆ. ಇದರಲ್ಲಿ ಜೂಜಾಟ ನಡೆಯುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಹಿಂದೆಮುಂದೆ ನೋಡುವುದಿಲ್ಲ ಎಂದು ದಕ್ಷಿಣ ಕನ್ನಡ ಎಸ್ಪಿ ರಿಷ್ಯಂತ್ ಸ್ಪಷ್ಟಪಡಿಸಿದ್ದಾರೆ.
ಕರಾವಳಿಯಲ್ಲಿ ಕೋಳಿ ಅಂಕ ಜೂಜಾಟಕ್ಕೆ ಬಿತ್ತು ಬ್ರೇಕ್
ಕೋಳಿ ಅಂಕ ಆಯೋಜಿಸುವುದು ಕರಾವಳಿಯಲ್ಲಿ ಮಾಮೂಲು. ರಾಜ್ಯದ ಕರಾವಳಿ ಭಾಗಕ್ಕೆ ತಮಿಳುನಾಡಿನ ಈರೋಡ್, ಸೇಲಂ ಕಡೆಗಳಿಂದ ಅಂಕದ ಕೋಳಿಗಳನ್ನು ತರಲಾಗುತ್ತದೆ. ವರ್ಷವಿಡೀ ಇದನ್ನು ವ್ಯವಹಾರವನ್ನಾಗಿಸುವವರೂ ಇದ್ದಾರೆ. ಅಂಕದ ಒಂದು ಕೋಳಿಯ ಬೆಲೆ ಮೂರು ಸಾವಿರ ರೂಗಳಿಂದ 25 ಸಾವಿರ ರೂಗಳವರೆಗೆ ಇರುತ್ತದೆ.
ಸಂಪ್ರದಾಯದ ಹೆಸರಿನಲ್ಲಿ ಕೋಳಿ ಅಂಕ ಆಯೋಜಿಸಿ, ಪ್ರತಿದಿನ ಕೋಟ್ಯಂತರ ರೂ ಮೌಲ್ಯದ ವಹಿವಾಟು ನಡೆಯುತ್ತದೆ. ದಿನದ 24 ತಾಸು ಎಡೆಬಿಡದೆ ಕೋಳಿ ಅಂಕ ನಡೆಯುತ್ತದೆ ಎನ್ನಲಾಗಿದೆ. ವಿದ್ಯಾರ್ಥಿಗಳು, ಯುವಜನರು ಈ ಜೂಜಿಗೆ ಬಲಿಯಾಗುತ್ತಿದ್ದಾರೆ. 100 ರೂಗಳಿಂದ ಆರಂಭಗೊಂಡ ಈ ಜೂಜು 5 ಲಕ್ಷ ರೂಗಳವರೆಗೂ ನಡೆಯುತ್ತದೆ. ಕರಾವಳಿ ಭಾಗದ ದೊಡ್ಡ ದೊಡ್ಡ ಜಾತ್ರೆಗಳಲ್ಲಿ ಒಂದೊಂದು ಕೋಳಿಗಳ ಮೇಲೆ 1ರಿಂದ 4-5 ಲಕ್ಷ ರೂಗಳವರೆಗೆ ಜೂಜು ನಡೆಯುತ್ತದೆ. ರಾಜ್ಯದಲ್ಲಿ ಪ್ರತಿದಿನ ಕೋಳಿ ಅಂಕದಿಂದ 10 ಸಾವಿರಕ್ಕೂ ಅಧಿಕ ಕೋಳಿಗಳು ಬಲಿಯಾದರೆ, ಇವುಗಳಲ್ಲಿ ಶೇ.60ರಷ್ಟು ಕೋಳಿಬಲಿ ಕರಾವಳಿ ಭಾಗದಲ್ಲಿ ನಡೆಯುತ್ತದೆ.
ಕರಾವಳಿ ಭಾಗದಲ್ಲಿ ಉತ್ಸವ ಸಂದರ್ಭ ಕೋಳಿ ಅಂಕದೊಂದಿಗೆ ಇಸ್ಪೀಟ್ ಆಗದಲ್ಲಿ ಹಣ ಪಣಕ್ಕಿಟ್ಟು ಆಡುವ ಜುಗಾರಿ ಆಟ, ಚಿಹ್ನೆ ಗುರುತಿಸಿ ಆಡುವ ಗುಡುಗುಡು ಆಟ ಇರುತ್ತದೆ. ಹಣವನ್ನು ಇದಕ್ಕೆ ಪಣವಾಗಿಡುವವರಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಹಾಗೆಯೇ ಕೆಲವೆಡೆ ಕಂಬಳದ ಸಮೀಪದಲ್ಲೂ ಗುಡುಗುಡು, ಜುಗಾರಿ ಅವ್ಯಾಹತವಾಗಿ ನಡೆಯುತ್ತವೆ. ಹೀಗಾಗಿಯೇ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಇದಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಿ ಆದೇಶ ಮಾಡಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com )