ಕನ್ನಡ ಸುದ್ದಿ  /  Karnataka  /  Mangalore News Electrician From Beltangady Drown In Netravati River Near Bantwal Police Investigating Hsm

Mangalore Crime News: ನೇತ್ರಾವತಿ ನದಿಗೆ ಬಿದ್ದು ಸಮಾಜಮುಖಿ ಯುವಕ ಸಾವು, ಅನುಮಾನಾಸ್ಪದ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಳಿ ನೇತ್ರಾವತಿ ನದಿಯಲ್ಲಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ವರದಿ: ಹರೀಶ್‌ ಮಾಂಬಾಡಿ, ಮಂಗಳೂರು

ನೇತ್ರಾವತಿ ನದಿಗೆ ಬಿದ್ದು ಮೃತಪಟ್ಟಿರುವ ಲೋಹಿತೇಶ್ವರ.
ನೇತ್ರಾವತಿ ನದಿಗೆ ಬಿದ್ದು ಮೃತಪಟ್ಟಿರುವ ಲೋಹಿತೇಶ್ವರ.

ಮಂಗಳೂರು: ಸೋಮವಾರ ಸಂಜೆ ನಡೆದ ಘಟನೆಯಲ್ಲಿ ನೇತ್ರಾವತಿ ನದಿಗೆ ಬಿದ್ದು ಯುವಕನೋರ್ವ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಶ್ವ (30) ಸಾವನ್ನಪ್ಪಿದವರು. ಇದೀಗ ಮಂಗಳವಾರ ಈ ಕುರಿತು ಸಂಶಯಾಸ್ಪದ ಸಾವು ಎಂಬ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಶಂಭೂರಿನ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಪಕ್ಕ ಅಷ್ಟೇನೂ ಆಳವಿಲ್ಲದ ನೇತ್ರಾವತಿ ನದಿಯಲ್ಲಿ ಘಟನೆ ಸೋಮವಾರ ಸಂಜೆ ಸಂಭವಿಸಿದ್ದು, ಮನೆಯವರು ಸ್ಥಳಕ್ಕೆ ಬಂದ ಬಳಿಕ ಶವಮಹಜರು ರಾತ್ರಿಯವರೆಗೂ ನಡೆಯಿತು.

ಪೊಲೀಸರಿಗೆ ನೀಡಿದ ದೂರು ಏನು

ಲೋಹಿತಾಶ್ವ ಅವರ ಭಾವ ಪೊಲೀಸರಿಗೆ ನೀಡಿದ ದೂರಿನಂತೆ ಇಲೆಕ್ಟ್ರಿಶಿಯನ್ ಗುತ್ತಿಗೆ ಕೆಲಸ ಮಾಡಿಕೊಂಡಿರುವ ಲೋಹಿತಾಶ್ವ ಗೆಳೆಯರೊಂದಿಗೆ ಕಾರಿನಲ್ಲಿ ಬಂಟ್ವಾಳ ತಾಲೂಕಿನ ಶಂಭೂರಿಗೆ ಹೋದವರು ಅಲ್ಲಿಯ ಸುಬ್ರಹ್ಮಣ್ಯ ದೇವಸ್ಥಾನದ ಪಕ್ಕದ ನೇತ್ರಾವತಿ ನದಿ ನೀರಿನಲ್ಲಿ ಸ್ನಾನ ಮಾಡಲು ಹೋಗಿ ನದಿ ನೀರಿನಲ್ಲಿ ಮೃತಪಟ್ಟಿರುವುದಾಗಿ ಮಾಹಿತಿ ಬಂತು. ಹೋಗಿ ನೋಡಿದಾಗ, ಭಾವ ಮೃತಪಟ್ಟಿರುವುದು ಕಂಡುಬಂದಿದ್ದು, ಮರಣದಲ್ಲಿ ಸಂಶಯವಿರುವುದಾಗಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಘಟನೆಯ ವಿವರ ಹೀಗಿದೆ

ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ನೇತ್ರಾವತಿ ನದಿಯಲ್ಲಿ ಮುಳುಗುವಷ್ಟು ನೀರು ಇರುವುದಿಲ್ಲ. ಆದರೆ ಮುಂದೆ ಹೋದಂತೆ ಆಳ ಜಾಸ್ತಿಯಾಗುತ್ತದೆ. ಹೀಗಾಗಿ ಇಲ್ಲಿ ಕೆಲವರು ಸ್ನಾನ ಮಾಡಲು ಬರುವುದುಂಟು. ಲೋಹಿತಾಶ್ವ ಅವರು ಕಾರಿನಲ್ಲಿ ಊರಿನ‌ ನಾಲ್ವರು ಸ್ನೇಹಿತರಾದ ವಿನ್ಸೆಂಟ್, ಮ್ಯಾಕ್ಸಿಮ್‌, ಪ್ರಮೋದ್, ದಯಾನಂದ ಅವರ ಜತೆ ಶಂಭೂರಿಗೆ ಬಂದಿದ್ದು, ಸ್ನೇಹಿತರು ಸ್ನಾನ ಮಾಡುವುದಕ್ಕೆ ನೀರಿಗೆ ಇಳಿದಿದ್ದಾರೆ.

ಈ ಸಂದರ್ಭ ನದಿ ಕಿನಾರೆಯಲ್ಲೇ ಲೋಹಿತಾಶ್ವ ಕುಳಿತ್ತಿದ್ದರು. ಸ್ನೇಹಿತರು ಸ್ನಾನ ಮುಗಿಸಿ ವೇಳೆ ಲೋಹಿತಾಶ್ವ ನೀರಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ. ನದಿ ಕಿನಾರೆಯಲ್ಲಿ ಕುಳಿತ್ತಿದ್ದ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ನೀರಿಗೆ ಬಿದ್ದಿರುವ ಸಾಧ್ಯತೆಯೂ ಇದೆ. ಇನ್ನು ಅವರು ಸ್ನಾನಕ್ಕೆ ಇಳಿದು ಬಳಿಕ ಅನಾಹುತವಾಗಿ ಸಾವನ್ನಪ್ಪಿದ್ದರೆ, ಕೈಯಲ್ಲಿ ವಾಚು ಇರುತ್ತಿರಲಿಲ್ಲ. ಮೃತದೇಹದ ಕೈಯಲ್ಲಿ ವಾಚ್ ಇದ್ದು, ಬಟ್ಟೆಯೂ ಇರುವುದು ಇದನ್ನು ದೃಢಪಡಿಸುತ್ತಿದೆ. ಬಿದ್ದಿರುವ ರಭಸಕ್ಕೆ ಅವರ ತಲೆಯ ಭಾಗಕ್ಕೆ ಗಾಯವಾಗಿದೆ. ಹೀಗಾಗಿ ಮೃತಪಟ್ಟಿರುವುದಕ್ಕೆ ನಿಖರ ಕಾರಣ ಏನು ಎಂಬುದು ಪೊಲೀಸ್ ತನಿಖೆಯ ಬಳಿಕ ತಿಳಿಯಬೇಕಿದೆ.

ಎಲೆಕ್ಟ್ರಿಕ್ ಗುತ್ತಿಗೆ ಕೆಲಸ ಮಾಡುತ್ತಿದ್ದರು

ಲೋಹಿತಾಶ್ವ ಅವರು ಎಲೆಕ್ಟ್ರಿಕಲ್ ಗುತ್ತಿಗೆ ಕೆಲಸ ಮಾಡುತ್ತಿದ್ದು, ಅವರ ಸ್ನೇಹಿತರು ಲೋಹಿತಾಶ್ವ ಹಿಂದೆ ಕೆಲಸ ಮಾಡುತ್ತಿದ್ದ ವಿದ್ಯುತ್ ಗುತ್ತಿಗೆ ಸಂಸ್ಥೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಸೋಮವಾರ ರಜೆ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರೊಬ್ಬರ ಪತ್ನಿಯ ಮನೆ ಶಂಭೂರಿನಲ್ಲಿದ್ದ ಹಿನ್ನೆಲೆ ಅಲ್ಲಿಗೆ ತೆರಳಿದ್ದರು.

ಮನೆಗೆ ಆಧಾರವಾಗಿದ್ದರು

ಲೋಹಿತಾಶ್ವ ಮನೆಯ ಆಧಾರಸ್ತಂಭವಾಗಿದ್ದು, ಒಂದು ವರ್ಷದ ಹಿಂದಷ್ಟೇ ಅವರಿಗೆ ವಿವಾಹವಾಗಿತ್ತು. ಮನೆಯಲ್ಲಿ ತಾಯಿ ಹಾಗೂ ಪತ್ನಿಯ ಜತೆ ವಾಸಿಸುತ್ತಿದ್ದರು. ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು ಬಳಿಕ ಊರಿಗೆ ಆಗಮಿಸಿ ಕೆಲಸದವರನ್ನು ಇಟ್ಟುಕೊಂಡು ಎಲೆಕ್ಟ್ರಿಕಲ್ ಗುತ್ತಿಗೆ ವಹಿಸಿಕೊಂಡು ಕೆಲಸ ಮಾಡುತ್ತಿದ್ದರು. ಕಳೆದ ಕೆಲಸ ಸಮಯದ ಹಿಂದೆ ಲೋಹಿತಾಶ್ವ ಅವರ ಮಾವನ ಮಗ ಅಪಘಾತದಲ್ಲಿ ಮೃತಪಟ್ಟಿದ್ದರು. ಸೋಮವಾರ ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ಕಲಶ ಸ್ನಾನ ಮಾಡಿದ್ದು, ಮುಂದೆ ಶಬರಿಮಲೆಗೆ ತೆರಳುವುದಕ್ಕೆ ಟಿಕೆಟ್ ಕೂಡ ಮಾಡಿದ್ದರು. ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದ ಅವರು ಊರಿನಲ್ಲಿ ಉತ್ತಮ ಹೆಸರು ಗಳಿಸಿಕೊಂಡಿದ್ದರು.

(ವರದಿ: ಹರೀಶ್‌ ಮಾಂಬಾಡಿ. ಮಂಗಳೂರು)

IPL_Entry_Point