ಕನ್ನಡ ಸುದ್ದಿ  /  ಕರ್ನಾಟಕ  /  Mangalore Summer: ಮಂಗಳೂರು ಭಾಗದಲ್ಲಿ ತಾಪಮಾನ ಏರಿಕೆ ಎದುರಾಗಲಿದೆ ಶಾಖಾಘಾತದ ಭೀತಿ, ವೈದ್ಯರೇನು ಹೇಳುತ್ತಾರೆ?

Mangalore Summer: ಮಂಗಳೂರು ಭಾಗದಲ್ಲಿ ತಾಪಮಾನ ಏರಿಕೆ ಎದುರಾಗಲಿದೆ ಶಾಖಾಘಾತದ ಭೀತಿ, ವೈದ್ಯರೇನು ಹೇಳುತ್ತಾರೆ?

ಬಿಸಿಲಿನ ತಾಪ, ಬಿಸಿ ಗಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವ ಕುರಿತು ಮಂಗಳೂರಿನ ಉಷ್ಣಾಘಾತ ನಿಗಾ ಉಸ್ತುವಾರಿ ಅಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ನೀಡಿರುವ ಮಾಹಿತಿ ಇಲ್ಲಿದೆವರದಿ: ಹರೀಶ ಮಾಂಬಾಡಿ. ಮಂಗಳೂರು

ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ
ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

ಮಂಗಳೂರು: ಮಳೆಯ ಛಾಯೆ ಇದ್ದರೂ ಸರಿಯಾದ ಮಳೆ ಬರ್ತಿಲ್ಲ. ಬಿಸಿಲ ತಾಪ ಮಿತಿಮೀರುತ್ತಿದೆ. ಎರಡು ನಿಮಿಷ ನಡೆದರೂ ಎರಡು ಗಂಟೆ ಮಲಗುವಷ್ಟು ಸುಸ್ತು. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಎಲ್ಲಿ ನೋಡಿದರೂ ಈಗ ಬಿಸಿಲ ಧಗೆ. ತಾಪಮಾನ ಏರಿಕೆ ಜೊತೆ ಹೀಟ್ ವೇವ್. ಜನ ತಣ್ಣನೆಯ ಗಾಳಿ ಹಾಗೂ ಮಳೆಗಾಗಿ ಪರಿತಪಿಸುವ ಸನ್ನಿವೇಶ ಎಲ್ಲೆಡೆ ಕಂಡು ಬರುತ್ತಿದೆ. ಇದಕ್ಕೆ ಏನು ಮಾಡಬೇಕು ಎನ್ನುವ ಚಿಂತೆ ಬೇರೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿಯೇ ಕೈಗೊಳ್ಳಬೇಕಾದ ಪ್ರತಿಬಂಧಕ ಕ್ರಮಗಳೇನು? ಎನ್ನುವ ಕುರಿತು ಮಂಗಳೂರಿನ ಉಷ್ಣಾಘಾತ ನಿಗಾ ಉಸ್ತುವಾರಿ ಅಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ಈ ಕುರಿತು ಮಾಹಿತಿ ನೀಡಿದ್ದು ಹೀಗೆ.

ಟ್ರೆಂಡಿಂಗ್​ ಸುದ್ದಿ

ಒಂದು ಪ್ರದೇಶದ ಸಾಮಾನ್ಯ ಉಷ್ಣತೆಗಿಂತ 4.5 ರಿಂದ 6.4ರಷ್ಟು ಹೆಚ್ಚಾದಲ್ಲಿ ಶಾಖಾಘಾತ ಸಂಭವಿಸುತ್ತದೆ. ಇದರಿಂದ ಕೈಕಾಲುಗಳಲ್ಲಿ ಊತ, ಮೈಮೇಲೆ ಬೆವರುಸಾಲೆ ಮೂಡುವುದು, ಮಾಂಸಖಂಡಗಳ ಸೆಳೆತ ಉಂಟಾಗುತ್ತದೆ. ಇದು ಎದೆಯಲ್ಲಿ ಸೆಳೆತ ಉಂಟು ಮಾಡುವ ಸಾಧ್ಯತೆಯಿದೆ. ಪರಿಣಾಮ ಹೃದಯಾಘಾತ ಸಂಭವಿಸಬಹುದು. ತಲೆಸುತ್ತುವಿಕೆ ಉಂಟಾಗಬಹುದು. ಅಲ್ಲದೆ ಶಾಖಾಘಾತ ಹೆಚ್ಚಾಗಿ ಮರಣ ಸಂಭವಿಸುವ ಸಾಧ್ಯತೆಯಿದೆ ಎಂದು ಡಾ. ಕುಲಾಲ್ ಹೇಳುತ್ತಾರೆ.

ಮಕ್ಕಳು, ವೃದ್ಧರು, ಗರ್ಭಿಣಿಯರು, ಮಾನಸಿಕ ಸ್ಥಿಮಿತ ಕಳೆದುಕೊಂಡವರು, ವಿವಿಧ ರೋಗಗಳಿಂದ ಬಳಲುತ್ತಿರುವವರು ಶಾಖಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಶಾಖಾಘಾತಕ್ಕೆ ಒಳಗಾದವರ ಮಾನಸಿಕ ಸ್ಥಿಮಿತ ಏರುಪೇರಾಗಬಹುದು. ದೇಹದ ಉಷ್ಣತೆ 40° ಗಿಂತಲೂ ಹೆಚ್ಚಾಗಬಹುದು. ಹೀಗಾದಾಗ ವಿಪರೀತ ಜ್ವರ ಬಂದಾಗ ವ್ಯಕ್ತಿಯೋರ್ವನುಯಾವ ರೀತಿ ವರ್ತಿಸುತ್ತಾನೋ ಆ ರೀತಿ ವರ್ತಿಸಬಹುದು‌. ಪ್ರಜ್ಞೆ ಕಳೆಯಬಹುದು, ಈ ವೇಳೆ ಸೂಕ್ತ ಚಿಕಿತ್ಸೆ ಸಿಕ್ಕದಿದ್ದಲ್ಲಿ ಜೀವಹಾನಿಯೂ ಆಗಬಹುದು ಎಂಬುದು ಅವರ ಎಚ್ಚರಿಕೆ.

ಕರಾವಳಿಯಲ್ಲಿ ತಗಡು ಶೀಟು ಅಳವಡಿಸಿರುವ ಮುಚ್ಚಿದ ಕೋಣೆಯಲ್ಲಿ ಇರುವವರು, ಸರಿಯಾಗಿ ಗಾಳಿ ಆಡದಂತಹ ಜಾಗಗಳಲ್ಲಿ ವಾಸಿಸುವವರು, ಬಹಳ ಉಷ್ಣತೆಯಿರುವ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರು, ಕಲ್ಲು ಕೋರೆಗಳಲ್ಲಿ ಕೆಲಸ ಮಾಡುವವರು ಬಹಳ ಜಾಗರೂಕರಾಗಿರಬೇಕು. ಬಿಸಿಗಾಳಿಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ನೀರಿನ ಅಂಶ ದೇಹಕ್ಕೆ ಬೀಳಬೇಕು. ಅನಗತ್ಯ ಬಿಸಿಲಿನಲ್ಲಿ ಓಡಾಟ ತಪ್ಪಿಸಬೇಕು. ಬಿಸಿಲಿಗೆ ತೆರೆದುಕೊಂಡಷ್ಟೂ ತೊಂದರೆ ಹೆಚ್ಚು. ಅನಿವಾರ್ಯ ಇದ್ದಾಗ ಮಾತ್ರ ಹೊರಗಡೆ ಹೋಗಿ ಉಳಿದ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡಬಹುದಾ ಎಂದು ಪರಿಶೀಲಿಸಿಕೊಳ್ಳಿ. ಬಿಸಿಲಿನಿಂದ ಉಂಟಾಗುವ ಸಮಸ್ಯೆಗೆ ಮುಂದೆ ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ ಎಂದು ಡಾ.ನವೀನ್ ಚಂದ್ರ ಕುಲಾಲ್‌ ಹೇಳಿದ್ದಾರೆ.

ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಪರಿಣಾಮ ನಾವು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಕೆಲವು ಮಾರ್ಗೋಪಾಯಗಳನ್ನು ಅನುಸರಿಸಬೇಕು. ಬಿಸಿಲಿನ ತಾಪಮಾನದಿಂದ ವಯಸ್ಕರು, ಮಕ್ಕಳು ಹಾಗೂ ವಯೋವೃದ್ದರು ಅಪಾಯದ ಸ್ಥಿತಿಯಲ್ಲಿದ್ದು, ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಕಡ್ಡಾಯವಾಗಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಮಕ್ಕಳಲ್ಲಿ ಅತಿಸಾರ ಬೇಧಿ, ವೃದ್ದರಲ್ಲಿ ಸನ್‍ಸ್ಟ್ರೋಕ್, ಮಧ್ಯವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುವ ಸಂಭವ ಇರುತ್ತದೆ. ಈ ಸಮಯದಲ್ಲಿ ಸಾಧ್ಯವಾದಷ್ಟು ಬೆಳಿಗ್ಗೆ ಹಾಗೂ ಸಾಯಂಕಾಲ ಕೆಲಸ ಮಾಡುವ ಪದ್ದತಿ ರೂಢಿಸಿಕೊಳ್ಳಬೇಕು. ನೀರನ್ನು ಹೆಚ್ಚಾಗಿ ಕುಡಿಯಬೇಕು. ದ್ರವರೂಪದ ಆಹಾರ ಪದ್ದತಿ ಅಳವಡಿಸಿಕೊಳ್ಳಬೇಕು. ಕರಿದ ಎಣ್ಣೆಯ ಪದಾರ್ಥಗಳನ್ನು ಉಪಯೋಗಿಸದೇ ಇರುವುದು ಆರೋಗ್ಯಕ್ಕೆ ಉತ್ತಮ ಎನ್ನುವ ಸಲಹೆಯನ್ನು ವೈದ್ಯರು ನೀಡುತ್ತಾರೆ.

ಜಾಗತಿಕ ತಾಪಮಾನದಲ್ಲಿ ವಿಪರೀತ ಬದಲಾವಣೆ ಆಗಿದ್ದು, ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುವುದು ಸೂಕ್ತ ಎನ್ನುವುದು ವೈದ್ಯರು ನೀಡುವ ಸಲಹೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point