ಕನ್ನಡ ಸುದ್ದಿ  /  Karnataka  /  Mangalore News Karnataka Coastal Art Give Turn Over 100 Crore In Season Did Not Have Authority Yet After Demands Hsm

Yakshnagana: ಸೀಸನ್ ಗೆ 100 ಕೋಟಿ ವಹಿವಾಟು, ಅತಿದೊಡ್ಡ ಲಿವಿಂಗ್ ಥಿಯೇಟರ್ ಯಕ್ಷಗಾನ ಅವಜ್ಞೆ; ಪ್ರಾಧಿಕಾರವೂ ಇಲ್ಲ, ಅಕಾಡೆಮಿಯೂ ಅನಾಥ

Coastal art ದೇಶದ ಅತಿ ದೊಡ್ಡ ಲಿವಿಂಗ್ ಥಿಯೇಟರ್ ಗಳಲ್ಲಿ ಒಂದಾಗಿರುವ ಯಕ್ಷಗಾನಕ್ಕೆ ಕಾಂಗ್ರೆಸ್ ಪಕ್ಷ ಭರವಸೆ ನೀಡಿದಂತೆ ಪ್ರಾಧಿಕಾರ ರಚನೆ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದ್ದು, ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ.ವಿಶೇಷ ವರದಿ: ಹರೀಶ ಮಾಂಬಾಡಿ ಮಂಗಳೂರು

ಯಕ್ಷಗಾನಕ್ಕೆ ಹೆಚ್ಚಿನ ಮಾನ್ಯತೆ ನೀಡುವ ಬೇಡಿಕೆಗೆ ಬಲ ಬೇಕಿದೆ.
ಯಕ್ಷಗಾನಕ್ಕೆ ಹೆಚ್ಚಿನ ಮಾನ್ಯತೆ ನೀಡುವ ಬೇಡಿಕೆಗೆ ಬಲ ಬೇಕಿದೆ.

ಮಂಗಳೂರು: ಸರಕಾರ ರಚನೆಯಾಗಿ ವರ್ಷವಾಗುತ್ತಲೇ ಬಂತು. ಇನ್ನೂ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಅಧ್ಯಕ್ಷರ ನೇಮಕವೇ ಆಗಿಲ್ಲ. ಇನ್ನು ನೀಡಿದ ಭರವಸೆಯಂತೆ ಯಕ್ಷಗಾನ ಪ್ರಾಧಿಕಾರದ ರಚನೆಯೂ ಆಗಿಲ್ಲ. ಕರಾವಳಿಯ ಜನಪ್ರಿಯ ಕಲೆಯಾದ ಯಕ್ಷಗಾನದ ಕುರಿತು ಇಷ್ಟೊಂದು ಅವಜ್ಞೆಯ ಕುರಿತು ಈಗಾಗಲೇ ಸಾಕಷ್ಟು ವಿದ್ವಾಂಸರು, ಕಲಾವಿದರು ಸರಕಾರದ ಗಮನ ಸೆಳೆದಿದ್ದಾರೆ. ಭರವಸೆ ದೊರಕಿದೆ. ಈಡೇರಿಲ್ಲ. ಸ್ಪಷ್ಟ ಕನ್ನಡವನ್ನೇ ಬಳಸುವ ದಿನಕ್ಕೆ 40ರಷ್ಟು ಪ್ರದರ್ಶನಗಳನ್ನು ನೀಡುವ ಏಕೈಕ ಕಲೆ ಉಳಿದರೆ, ಕನ್ನಡವೂ ಉಳಿಯುತ್ತದೆ.

ಏನಂತಾರೆ ವಿದ್ವಾಂಸರು

ಯಕ್ಷಗಾನದ ಕುರಿತು ಸಾಕಷ್ಟು ಕೆಲಸ ಮಾಡಿರುವ ಇಂಟರ್ನೆಟ್ ಯುಗ ಆರಂಭವಾದಾಗ ಪ್ರಥಮ ಬಾರಿ ಯಕ್ಷಗಾನವನ್ನು ಪರಿಚಯಿಸಲು ಶ್ರಮಿಸಿದ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಷಿ ಅವರು ಇತ್ತೀಚೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಸ್ಪೀಕರ್ ಯು.ಟಿ.ಖಾದರ್ ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಸಮ್ಮುಖ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಯಕ್ಷಗಾನ ಪ್ರಾಧಿಕಾರ ಆಗಲೇಬೇಕಾದ ಕೆಲಸ ಎನ್ನುವ ಡಾ. ಜೋಶಿ, ಕಲಾದೃಷ್ಟಿಯಿಂದ ಒಳಗಿನ ಬೆಳವಣಿಗೆ ಮತ್ತು ಹೊರಗಿನ ಬೆಳವಣಿಗೆಗೆ – ರಾಷ್ಟ್ರಮಟ್ಟದಲ್ಲೂ ವಿಶ್ವದ ಕಲಾವೇದಿಕೆಗಳಲ್ಲೂ ಉಳಿದೆಲ್ಲ ಕಲೆಗಳಿಗೆ ಯಕ್ಷಗಾನವನ್ನು ಸಮನಾಗಿ ತೋರಿಸಬೇಕು ಎಂದಿದ್ದರೆ, ಪ್ರಾಧಿಕಾರ ಪೂರಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪ್ರಾಧಿಕಾರವೊಂದು ರಚನೆಯಾದರೆ, ಯಕ್ಷಗಾನಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಯೋಜನೆ ರೂಪಿಸಿ, ಸಂಪ್ರದಾಯವನ್ನು ಉಳಿಸಿಕೊಂಡು ಹೊಸತನವನ್ನು ಬೆಳೆಸಿಕೊಂಡು ಹಲವು ಬದಲಾವಣೆಗಳನ್ನು ಯಕ್ಷಗಾನದಲ್ಲಿ ಮಾಡಲು ಸಾಧ್ಯ. ತಜ್ಞರಿಂದ ಕೂಡಿದ ರಾಜಕೀಯರಹಿತ ಪ್ರಾಧಿಕಾರ ಯಕ್ಷಗಾನದ ಬೆಳವಣಿಗೆಗೆ ಅಗತ್ಯ ಎಂದು ಡಾ. ಜೋಷಿ ಪ್ರತಿಪಾದಿಸಿದ್ದರು.

ಇದಕ್ಕೆ ಸ್ಪೀಕರ್ ಯು.ಟಿ.ಖಾದರ್ ಹಾಗೂ ಯಕ್ಷಗಾನಪ್ರಿಯರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ರಮಾನಾಥ ರೈ ಸರಕಾರದ ಗಮನ ಸೆಳೆಯುವ ಕುರಿತು ಮಾತನಾಡಿದ್ದರು.

ಸಮ್ಮೇಳನವೂ ಆಗಿಲ್ಲ, ಅಕಾಡೆಮಿ ಅಧ್ಯಕ್ಷರೂ ಆಗಿಲ್ಲ

ಯಕ್ಷಗಾನ ಬೆಳವಣಿಗೆಗೆ ಶ್ರಮಿಸುತ್ತಿರುವ ಹಲವು ಸಂಸ್ಥೆಗಳು ತನ್ನದೇ ಆದ ಕೊಡುಗೆಗಳನ್ನು ಸಾರ್ವಜನಿಕ ದೇಣಿಗೆಗಳನ್ನು ಸ್ವೀಕರಿಸಿಕೊಂಡು ಶಕ್ತಿಮೀರಿ ಕಲಾವಿದರ ಅಭ್ಯುದಯಕ್ಕೆ ನೀಡುತ್ತಾ ಬಂದಿದೆ. ಉಡುಪಿಯ ಯಕ್ಷಗಾನ ಕಲಾರಂಗ, ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಇವುಗಳಲ್ಲಿ ಪ್ರಮುಖವಾಗಿದ್ದು, ಇನ್ನು ಇವುಗಳಂತೆ ಹಲವು ಸ್ಥಳೀಯ ಸಂಸ್ಥೆ, ಟ್ರಸ್ಟ್ ಗಳು ಸಂಕಷ್ಟ ಬಂದಾಗ ಕೈಲಾದ ಸಹಾಯಗಳನ್ನು ಕಲಾವಿದರಿಗೆ ಮಾಡುವುದು, ಕಲಾವಿದರಿಗೆ ಮಾಸಾಶನದಂಥ ಸರಕಾರಿ ವ್ಯವಸ್ಥೆಯಡಿ ದೊರಕುವ ಸೌಲಭ್ಯಗಳ ಮಾಹಿತಿ ನೀಡುವ ಕೆಲಸ ಕಾರ್ಯಗಳನ್ನು ಈ ಸಂಘ ಸಂಸ್ಥೆಗಳೇ ಮಾಡುತ್ತಿವೆ.

ಖಾಸಗಿ ಸಂಸ್ಥೆಗಳು ಸಾರ್ವಜನಿಕರ ದೇಣಿಗೆಯ ಸಹಕಾರದೊಂದಿಗೆ ಇಷ್ಟು ಅಚ್ಚುಕಟ್ಟಾಗಿ ಮಾಡುತ್ತವೆ ಎಂದಾದರೆ, ಅಕಾಡೆಮಿ ಸಕ್ರಿಯವಾದರೆ ಈ ಕೆಲಸ ಕಾರ್ಯಗಳನ್ನು ವ್ಯವಸ್ಥಿತವಾಗಿ ಮತ್ತಷ್ಟು ರಚನಾತ್ಮಕವಾಗಿ ಮಾಡಬಹುದು. ಇನ್ನು, ಪ್ರಾಧಿಕಾರ ರಚನೆಯಾದರೆ, ಯಕ್ಷಗಾನದ ಕುರಿತು ಸಂಶೋಧನೆ, ಅಧ್ಯಯನ, ಕಮ್ಮಟ, ದಾಖಲೀಕರಣ, ಜಾಗತಿಕ ಮಟ್ಟದಲ್ಲಿ ಯಕ್ಷಗಾನದ ಅಸ್ತಿತ್ವವನ್ನು ಬೆಳಕಿಗೆ ತರುವುದನ್ನು ಮಾಡುವ ಮೂಲಕ ಕರ್ನಾಟಕದ ಕರಾವಳಿಯ ಅಸ್ಮಿತೆಯೆನಿಸಿದ ಯಕ್ಷಗಾನಕ್ಕೆ ವಿಶ್ವಮನ್ನಣೆ ನೀಡಲು ಸಾಧ್ಯ. ಇಂಥದ್ದನ್ನೆಲ್ಲ ಮಾಡಲು ಯಕ್ಷಗಾನದ ಸಮ್ಮೇಳನವೊಂದು ಆಗಿದ್ದು, ಎರಡನೇ ಸಮ್ಮೇಳನಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರ ನೇಮಕಕ್ಕೂ ಸರಕಾರಕ್ಕೆ ನಿಕಟವಾಗಿರುವ ಸೂಕ್ತ ವ್ಯಕ್ತಿಯ ಹುಡುಕಾಟ ನಡೆಯುತ್ತಿದೆ ಎನ್ನುವ ಅಭಿಪ್ರಾಯಗಳು ಯಕ್ಷಗಾನ ವಲಯದಲ್ಲಿವೆ.

ಕರಾವಳಿಯಲ್ಲಿ ಕೋಟ್ಯಂತರ ರೂ ಬ್ಯುಸಿನೆಸ್

ಕರಾವಳಿಯಲ್ಲಿ ಯಕ್ಷಗಾನವೆಂದರೆ ಅದೊಂದು ಕೋಟ್ಯಂತರ ರೂ ಬ್ಯುಸಿನೆಸ್ ನೀಡುವ ವಹಿವಾಟೂ ಹೌದು. ನವೆಂಬರ್ ತಿಂಗಳಿಂದ ಮೇ ತಿಂಗಳವರೆಗೆ ಯಕ್ಷಗಾನದ ಸುಮಾರು 40 ರಷ್ಟು (ಇದು ಕನಿಷ್ಠ ಸಂಖ್ಯೆ) ತಿರುಗಾಟ ಹೊರಡುತ್ತವೆ ಹಾಗೂ ಇವು ಪ್ರತಿನಿತ್ಯ ಯಕ್ಷಗಾನ ಪ್ರದರ್ಶನವನ್ನು ನೀಡುತ್ತವೆ. ಇನ್ನು ಕೆಲ ತಂಡಗಳು ಆಹ್ವಾನಿತರಾಗಿ ಪ್ರದರ್ಶನ ನೀಡುತ್ತವೆ. ಅಂದರೆ, ನವೆಂಬರ್ ತಿಂಗಳಿಂದ ಮೇ ತಿಂಗಳವರೆಗೆ ಸುಮಾರು 10 ಸಾವಿರದಷ್ಟು ಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ.

ಈಗ ಕಾಲಮಿತಿ ಪ್ರದರ್ಶನಗಳು ಅಧಿಕವಾದರೂ ಒಂದು ಪ್ರದರ್ಶನಕ್ಕೆ ಮೇಳಗಳ ಸಂಭಾವನೆಯನ್ನು ಹೊರತುಪಡಿಸಿ, ಅದಕ್ಕೆ ಸಂಬಂಧಿಸಿ ಜನರನ್ನು ಆಕರ್ಷಿಸಲು ಊಟೋಪಚಾರ, ಗೌಜಿಯ ವಿದ್ಯುದ್ದೀಪಾಲಂಕಾರ ಹೀಗೆ ವೈವಿಧ್ಯವನ್ನು ನೀಡಲು ಹೊರಟರೆ, ಒಂದು ಪ್ರದರ್ಶನಕ್ಕೆ ಸರಾಸರಿ ಒಂದು ಲಕ್ಷದಷ್ಟು ಖರ್ಚು ಬೇಕಾಗುತ್ತದೆ. ಅಂದರೆ ನವೆಂಬರ್ ತಿಂಗಳಿಂದ ಮೇ ತಿಂಗಳವರೆಗೆ 100 ಕೋಟಿ ರೂ ಟರ್ನ್ ಓವರ್ ಯಕ್ಷಗಾನದಿಂದ ಕರಾವಳಿಯ ಅವಿಭಜಿತ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡದಲ್ಲಿ ಆಗುತ್ತದೆ. ಸುಮಾರು ಎರಡು ಸಾವಿರದಷ್ಟು ಕಲಾವಿದರು ಇಲ್ಲಿದ್ದಾರೆ. ಹೀಗಿದ್ದರೂ ಕರಾವಳಿಯ ಈ ಕಲೆಯನ್ನು ಬೆಳೆಸುವ ಚಿಂತನೆಗೆ ಕಾಲ ಕೂಡಿ ಬಂದಿಲ್ಲ ಎಂಬ ಮಾತು ಸತ್ಯವೂ ಹೌದು.

ವಿಶೇಷ ವರದಿ: ಹರೀಶ ಮಾಂಬಾಡಿ ಮಂಗಳೂರು

IPL_Entry_Point