ಕನ್ನಡ ಸುದ್ದಿ  /  ಕರ್ನಾಟಕ  /  Trekking News: ಚಾರಣಿಗರಿಗೆ ಸಂತಸದ ಸುದ್ದಿ,ಜುಲೈ ಮೂರನೇ ವಾರದಲ್ಲಿ ಕರ್ನಾಟಕದ ಚಾರಣಪಥಗಳಿಗೆ ಆನ್‌ ಲೈನ್‌ ಬುಕ್ಕಿಂಗ್ ವ್ಯವಸ್ಥೆ

Trekking News: ಚಾರಣಿಗರಿಗೆ ಸಂತಸದ ಸುದ್ದಿ,ಜುಲೈ ಮೂರನೇ ವಾರದಲ್ಲಿ ಕರ್ನಾಟಕದ ಚಾರಣಪಥಗಳಿಗೆ ಆನ್‌ ಲೈನ್‌ ಬುಕ್ಕಿಂಗ್ ವ್ಯವಸ್ಥೆ

Forest News ಕರ್ನಾಟಕದಲ್ಲಿ ಚಾರಣ ಮಾಡುವವರಿಗೆ ಆನ್‌ ಲೈನ್‌ ಆಧರಿತ ಬುಕ್ಕಿಂಗ್‌ ವ್ಯವಸ್ಥೆ ಜಾರಿಯಾಗಲಿದೆ.ವರದಿ: ಹರೀಶ ಮಾಂಬಾಡಿ,ಮಂಗಳೂರು

ಕರ್ನಾಟಕದಲ್ಲಿ ಚಾರಣಕ್ಕೆಆನ್‌ ಲೈನ್‌ ಬುಕ್ಕಿಂಗ್‌ ವ್ಯವಸ್ಥೆ ಜಾರಿಯಾಗಲಿದೆ.
ಕರ್ನಾಟಕದಲ್ಲಿ ಚಾರಣಕ್ಕೆಆನ್‌ ಲೈನ್‌ ಬುಕ್ಕಿಂಗ್‌ ವ್ಯವಸ್ಥೆ ಜಾರಿಯಾಗಲಿದೆ.

ಮಂಗಳೂರು: ಮಲೆನಾಡು, ಕರಾವಳಿಯ ಬೆಟ್ಟ, ಗುಡ್ಡಗಳಲ್ಲಿ ಚಾರಣಕ್ಕೆಂದು ಬರುವವರ ಸಂಖ್ಯೆ ಅಧಿಕವಾಗತೊಡಗಿದ್ದು, ಇದರಿಂದ ಆ ಪ್ರದೇಶಗಳಲ್ಲೂ ಒತ್ತಡಗಳು ಹೆಚ್ಚಾಗುತ್ತಿವೆ. ಈಗಾಗಲೇ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಯ ಕುರಿತು ಚಿಂತನೆಗಳು ನಡೆದಿದ್ದು, ಅದು ಜುಲೈ 3ನೇ ವಾರದಲ್ಲಿ ಜಾರಿಗೆ ಬರಲಿದೆ. ಕೆಲ ಪ್ರವಾಸಿ ಸಂಸ್ಥೆಗಳು, ಟೂರ್ ಆಪರೇಟರ್ ಗಳು ಚಾರಣಪಥಗಳ ಬಗ್ಗೆ ಯುವಜನರಲ್ಲಿ ಅತಿಯಾದ ಆಸಕ್ತಿ ಕೆರಳಿಸುತ್ತಿದೆ. ಇದರ ಪರಿಣಾಮ ಚಾರಣಪಥಗಳಲ್ಲಿ ವಾರಾಂತ್ಯದಲ್ಲಿ ದಟ್ಟಣೆ ಸಹಜವಾಗಿಯೇ ಜಾಸ್ತಿ ಆಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೂ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಕೃತಿ, ಪರಿಸರ ಉಳಿಸಲು ಕೆಲವು ಕಠಿಣ ಕ್ರಮ ಏರ್ಪಡಿಸುವ ಕುರಿತು ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ಪ್ರತಿಯೊಂದು ಚಾರಣ ಪಥದಲ್ಲೂ ಅದರ ವಿಸ್ತಾರ, ಅಲ್ಲಿರುವ ಗೈಡ್ ಮತ್ತು ಇತರ ಮೂಲ ಸೌಲಭ್ಯ ಗಮನದಲ್ಲಿಟ್ಟುಕೊಂಡು ಚಾರಣಿಗರ ಸಂಖ್ಯೆಗೆ ಮಿತಿ ವಿಧಿಸಲಾಗುವುದು. ಯಾವುದೇ ಚಾರಣಪಥದಲ್ಲಿ ಸೀಮಿತ ಸಂಖ್ಯೆಗಿಂತ ಹೆಚ್ಚಿನ ಚಾರಣಿಗರಿಗೆ ಅವಕಾಶವಾಗದಂತೆ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲಾಗುತ್ತದೆ. ಮಂಗಳೂರಿನ ಪಡೀಲ್ ನಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಈ ವಿಚಾರವನ್ನು ತಿಳಿಸಿದರು.

ಜುಲೈ 3ನೇ ವಾರದಲ್ಲಿ ರಾಜ್ಯದ ವಿವಿಧ ಚಾರಣ ಪಥಗಳಿಗೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದವರು ತಿಳಿಸಿದ್ದಾರೆ. ಜನವರಿ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಒಂದೇ ದಿನ ಆಗಮಿಸಿ, ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಚಾರಣವನ್ನು ಸ್ಥಗಿತಗೊಳಿಸಲಾಗಿತ್ತು. ಅದನ್ನು ಆಗಸ್ಟ್ ನಿಂದ ಮರುಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

ಮಳೆಗಾಲದ ಸಂದರ್ಭ ಚಾರಣ ಪಥಗಳಿಗೆ ತೆರಳಲು ಪ್ರವೇಶ ನಿರಾಕರಿಸಲಾಗುತ್ತದೆ. ಏಕೆಂದರೆ, ಚಾರಣಿಗರು ಅಪಾಯಕ್ಕೆ ತುತ್ತಾಗುವ ಸಂಭವನೀಯತೆಗಳು ಹೆಚ್ಚಾಗಿರುತ್ತವೆ, ಕಾಡಿನಲ್ಲಿರುವ ಜೀವರಾಶಿ ಮತ್ತು ಮೊಳಕೆಯೊಡೆಯುವ ಸಸ್ಯರಾಶಿಗೂ ತೊಂದರೆ ಆಗುತ್ತದೆ ಹೀಗಾಗಿ ಆಗಸ್ಟ್ ನಿಂದ ಚಾರಣಕ್ಕೆ ಮರು ಚಾಲನೆ ನೀಡುವುದಾಗಿ ಸಚಿವರು ತಿಳಿಸಿದ್ದಾರೆ.

ಪರಿಸರ ಪ್ರವಾಸೋದ್ಯಮ ವಿಭಾಗದಿಂದ ನಿರ್ವಹಣೆ

ರಾಜ್ಯದ ಹಲವು ಚಾರಣ ಪಥಗಳನ್ನು ಪರಿಸರ ಪ್ರವಾಸೋದ್ಯಮ ವಿಭಾಗ ನಿರ್ವಹಿಸುತ್ತಿದೆ. ಆನ್ ಲೈನ್ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಕುದುರೆಮುಖ ಶಿಖರ, ನೇತ್ರಾವತಿ ಶಿಖರ, ಕೊಡಚಾದ್ರಿ, ಕುರಿಂಜಲ್, ಕಂಗಡಿಕಲ್, ನರಸಿಂಹ ಪರ್ವತಗಳಲ್ಲಿ ಅರಣ್ಯ ಇಲಾಖೆ ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಿದೆ. ಎತ್ತಿನಭುಜ ಸೇರಿದಂತೆ ಕೆಲವು ಕಡೆಗಳಲ್ಲಿ ಆನ್ ಲೈನ್ ಟಿಕೆಟ್ ವ್ಯವಸ್ಥೆ ಇರುವುದಿಲ್ಲ. ಇದೀಗ ಈ ಎಲ್ಲ ಚಾರಣ ಪಥಗಳಿಗೂ ಒಂದೇ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಥರ್ಡ್ ಪಾರ್ಟಿ ಚೆಕಿಂಗ್

ಯಾವುದೇ ಚಾರಣ ಪಥದಲ್ಲಿ ಹೆಚ್ಚಿನ ಸಂಖ್ಯೆಯ ಚಾರಣಿಗರಿಗೆ ಅವಕಾಶ ನೀಡಲಾಗುತ್ತಿದೆ ಎಂದು ದೂರು ಬಂದರೆ, ಈ ಬಗ್ಗೆ ಮೂರನೇ ವ್ಯಕ್ತಿ (ಥರ್ಡ್ ಪಾರ್ಟಿ) ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಒಂದೇ ವೆಬ್ ಸೈಟ್ ನಲ್ಲಿ ವಿವಿಧ ಚಾರಣ ಪಥಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಇರುವ ಕಾರಣ, ಒಂದು ಚಾರಣ ಪಥದಲ್ಲಿ ಟಿಕೆಟ್ ಸಿಗದಿದ್ದರೆ ಮತ್ತೊಂದಕ್ಕೆ ಟಿಕೆಟ್ ಕಾಯ್ದಿರಿಸುವ ಅವಕಾಶವೂ ಇರುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ವಿವರಿಸಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು