ಕರ್ನಾಟಕದ 1 ಲಕ್ಷಕ್ಕೂ ಅಧಿಕ ಬಿಸಿಯೂಟ ಸಿಬ್ಬಂದಿಗೆ 3 ತಿಂಗಳಿಂದ ವೇತನವೇ ಬಂದಿಲ್ಲ, ಕಾರಣ ಏನು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ 1 ಲಕ್ಷಕ್ಕೂ ಅಧಿಕ ಬಿಸಿಯೂಟ ಸಿಬ್ಬಂದಿಗೆ 3 ತಿಂಗಳಿಂದ ವೇತನವೇ ಬಂದಿಲ್ಲ, ಕಾರಣ ಏನು

ಕರ್ನಾಟಕದ 1 ಲಕ್ಷಕ್ಕೂ ಅಧಿಕ ಬಿಸಿಯೂಟ ಸಿಬ್ಬಂದಿಗೆ 3 ತಿಂಗಳಿಂದ ವೇತನವೇ ಬಂದಿಲ್ಲ, ಕಾರಣ ಏನು

mid day meals ಕರ್ನಾಟಕದ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವವರಿಗೆ ಮೂರು ತಿಂಗಳಿನಿಂದ ವೇತನವೇ ಬಂದಿಲ್ಲ. ನಮಗೂ ವೇತನ ಗ್ಯಾರಂಟಿ ಕೊಡಿ ಎನ್ನುವ ಬೇಡಿಕೆ ಅವರದ್ದು. ವವಿಶೇಷ ವರದಿ: ಹರೀಶ್‌ ಮಾಂಬಾಡಿ ಮಂಗಳೂರು

ಕರ್ನಾಟಕದಲ್ಲಿ ಬಿಸಿಯೂಟ ತಯಾರಕರು ವೇತನಕ್ಕಾಗಿ ಮೂರು ತಿಂಗಳಿನಿಂದ ಕಾಯುತ್ತಿದ್ದಾರೆ.
ಕರ್ನಾಟಕದಲ್ಲಿ ಬಿಸಿಯೂಟ ತಯಾರಕರು ವೇತನಕ್ಕಾಗಿ ಮೂರು ತಿಂಗಳಿನಿಂದ ಕಾಯುತ್ತಿದ್ದಾರೆ.

ಮಂಗಳೂರು: ಗ್ಯಾರಂಟಿಗಳ ಮೇಲೆ ಗ್ಯಾರಂಟಿ ಕೊಡುವ ರಾಜ್ಯ ಸರಕಾರ, ಅದಕ್ಕೆ ಹಣ ಹೊಂದಿಸಲು ಹೊರಟಿಡುವ ಹೊತ್ತಿನಲ್ಲೇ ತಿಂಗಳು ತಿಂಗಳು ಕೊಡಬೇಕಾದ ಬಿಸಿಯೂಟ ಸಿಬಂದಿಯ ವೇತನ ಬಾರದೆ ಮೂರು ತಿಂಗಳಾಯಿತು. ಸುಮಾರು 1.2 ಲಕ್ಷಕ್ಕೂ ಅಧಿಕ ಅಡುಗೆ ಸಿಬಂದಿಗೆ ಸಂಬಳ ಇನ್ನೂ ಬಂದಿಲ್ಲ. ನವೆಂಬರ್ ತಿಂಗಳಿಂದಲೇ ಪಾವತಿ ಬಾಕಿ ಇದೆ. ಕೊಡೋದೇ 3,700. ರೂ ಅದನ್ನೂ ಸರಿಯಾಗಿ ಪಾವತಿ ಮಾಡೋದಿಲ್ಲ. ಇವತ್ತು ಬರ್ತದೆ, ನಾಳೆ ಬರ್ತದೆ ಎಂದಷ್ಟೇ ಹೇಳುತ್ತಾರೆ ಎಂಬುದು ಸಿಬ್ಬಂದಿಯ ಅಳಲು.

ರಾಜ್ಯದ ಸುಮಾರು 47 ಸಾವಿರದಷ್ಟು ಸರಕಾರಿ ಶಾಲೆಗಳೂ ಸೇರಿದಂತೆ ಅನುದಾನಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಅಡುಗೆ ಸಿಬಂದಿ ನೇಮಕವಾಗಿ ದಶಕಗಳೇ ಆದವು. ಆದರೆ ಅವರಿಗೆ ಕನಿಷ್ಠ ವೇತನ ಇನ್ನೂ ಜಾರಿಯಾಗಿಲ್ಲ. ನಮ್ಮ ಸರಕಾರ ಬಂದ ಮೇಲೆ ಕನಿಷ್ಠ ಆರು ಸಾವಿರ ರೂ ಕೊಡೋದು ಗ್ಯಾರಂಟಿ ಎನ್ನುತ್ತಿದ್ದ ಕಾಂಗ್ರೆಸ್ ಇನ್ನೂ ಜಾರಿ ಮಾಡಿಲ್ಲ ಎಂದು ಮುಖಂಡರು ದೂರುತ್ತಾರೆ. ಇವತ್ತಲ್ಲ, ನಾಳೆಯಾದರೂ ವೇತನ ಏರಿಕೆಯಾಗುತ್ತದೆ ಎಂಬ ನಂಬಿಕೆಯಲ್ಲಿ ಬಿಸಿಯೂಟ ಸಿಬಂದಿ ಕಾಯುತ್ತಿದ್ದರೆ, ಕೊಡಬೇಕಾದ ಹಣವೇ ಇನ್ನೂ ಬಂದಿಲ್ಲ.

ಎಲ್ಲ ಕೆಲ್ಸ ಮಾಡಬೇಕು, ಕನಿಷ್ಠ ವೇತನವೂ ಇಲ್ಲ

ಸರಕಾರ ನಿಗದಿಪಡಿಸಿದ ಸಮಯಕ್ಕಿಂತಲೂ ಅಧಿಕ ವೇಳೆ ಸಿಬಂದಿ ಅಡುಗೆ ಕೋಣೆಯಲ್ಲಿ ಕಳೆಯುತ್ತಾರೆ. ಬೆಳಗ್ಗೆ ಶಾಲೆಗೆ ಆಗಮಿಸಿದರೆ, ಮಧ್ಯಾಹ್ನ ಎಲ್ಲ ಕೆಲಸ ಮುಗಿಸಿ, ಮನೆಗೆ ತೆರಳುವ ವೇಳೆ 2 ಗಂಟೆ ಮೀರುತ್ತದೆ. ಸರಕಾರ ಮಕ್ಕಳಿಗೆ ನಿಗದಿಪಡಿಸುವ ಪೌಷ್ಠಿಕಾಂಶಭರಿತ ಆಹಾರ ತಯಾರಿ, ಬೆಳಗಿನ ಹಾಲು ಸಹಿತ ಮಧ್ಯಾಹ್ನ ಊಟ ತಯಾರಿ, ಬಳಿಕ ಎಲ್ಲವನ್ನೂ ಶುಚಿಯಾಗಿಟ್ಟು ಹೊರಡುವ ವೇಳೆ ಮಕ್ಕಳಿಗೆ ಮಧ್ಯಾಹ್ನದ ಪಾಠ ಆರಂಭಗೊಳ್ಳುತ್ತದೆ. ಅಡುಗೆ ನಿಲ್ಲಿಸಿ ಪ್ರತಿಭಟನೆಯನ್ನೂ ಮಾಡಿದ್ದಾಯಿತು. ಸರಿಯಾದ ವೇತನವೂ ದೊರಕಿಲ್ಲ.

ಅಡುಗೆ ಸಿಬ್ಬಂದಿಗೆ ಸಂಬಳವೆಷ್ಟು?

ಮಧ್ಯಾಹ್ನದ ಉಪಾಹಾರ ಯೋಜನೆಯಡಿ ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ. 1ರಿಂದ 8ನೇ ತರಗತಿಗೆ ಸಂಬಂಸಿದಂತೆ ಮಧ್ಯಾಹ್ನದ ಉಪಾಹಾರ ಯೋಜನೆಯ ವೆಚ್ಚಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ 60:40 ಅನುಪಾತದಲ್ಲಿ ಭರಿಸಲಾಗುತ್ತದೆ. 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಂಬಂಸಿ ಮಧ್ಯಾಹ್ನದ ಉಪಾಹಾರ ಯೋಜನೆಯನ್ನು ಸಂಪೂರ್ಣವಾಗಿ ರಾಜ್ಯ ಸರಕಾರದಿಂದಲೇ ಭರಿಸಲಾಗುತ್ತಿದೆ. ರಾಜ್ಯ ಸರಕಾರದಿಂದ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಕಾಲಕಾಲಕ್ಕೆ ಅಡುಗೆ ಸಿಬಂದಿಗಳ ಗೌರವ ಸಂಭಾವನೆಯನ್ನು ಹೆಚ್ಚಿಸಿದೆ ಎಂದು ಸರಕಾರ ಹೇಳುತ್ತದೆಯಾದರೂ ಸರಿಯಾದ ವೇತನ ಇನ್ನೂ ಸಿಕ್ಕಿಲ್ಲ. ಇನ್ನೂ ಮುಖ್ಯ ಅಡುಗೆಯವರಿಗೆ ಮಾಸಿಕವಾಗಿ 3700 ರೂ ಮತ್ತು ಸಹಾಯಕ ಅಡುಗೆಯವರಿಗೆ 3600 ರೂ ಗೌರವ ಸಂಭಾವನೆ ದೊರಕುತ್ತಿದೆ.

ಬಿಸಿಯೂಟ ತಯಾರಕರು ಮಧ್ಯಾಹ್ನದವರೆಗೆ ಮಾತ್ರ ಕರ್ತವ್ಯ ಸಲ್ಲಿಸುವ ಕಾರಣ ಕರ್ನಾಟಕ ಕನಿಷ್ಠ ವೇತನ ನಿಯಮಗಳು ನಿಗದಿಪಡಿಸಿದಂತೆ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಕಾರಣ ಅವರು ಆ ಕಾಯ್ದೆಯಡಿ ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಶಿಕ್ಷಣ ಸಚಿವರು ಕಳೆದ ಬಾರಿಯ ವಿಧಾನಸಭೆ ಅಧಿವೇಶನದಲ್ಲಿ ಉತ್ತರಿಸಿದ್ದರು.

ಚುನಾವಣೆ ಸಂದರ್ಭ ಕೊಟ್ಟ ಭರವಸೆ ಈಡೇರಿಸಬೇಕು, ಈ ಬಾರಿ 1ಸಾವಿರ ರೂ ಸೇರಿಸಿ ವೇತನ ಸರಿಯಾದ ಸಮಯಕ್ಕೆ ಪಾವತಿಸುವುದಾಗಿ ಸರಕಾರ ಹೇಳಿದೆ. ಜನವರಿ 30 ರವರೆಗೆ ಕಾಯುತ್ತೇವೆ. ಇಲ್ಲದಿದ್ದರೆ, ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎನ್ನುತ್ತಾರೆ .ಅಖಿಲ ಭಾರತ ಕಾರ್ಮಿಕರ ಸಂಘಟನೆಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ.

(ವಿಶೇಷ ವರದಿ: ಹರೀಶ್‌ ಮಾಂಬಾಡಿ ಮಂಗಳೂರು)

Whats_app_banner