ಸರಸರನೆ ಕಾರಿಂಜಬೆಟ್ಟ ಏರಿದ ಕರ್ನಾಟಕದ ಸ್ಪೈಡರ್‌ಮ್ಯಾನ್ ಜ್ಯೋತಿರಾಜ್; ಆತ್ಮಹತ್ಯೆ ಮಾಡಲು ಹೊರಟಾತ ಬೆಟ್ಟ ಏರುವ ಕಾಯಕ ಆರಿಸಿಕೊಂಡ ಕಥೆ
ಕನ್ನಡ ಸುದ್ದಿ  /  ಕರ್ನಾಟಕ  /  ಸರಸರನೆ ಕಾರಿಂಜಬೆಟ್ಟ ಏರಿದ ಕರ್ನಾಟಕದ ಸ್ಪೈಡರ್‌ಮ್ಯಾನ್ ಜ್ಯೋತಿರಾಜ್; ಆತ್ಮಹತ್ಯೆ ಮಾಡಲು ಹೊರಟಾತ ಬೆಟ್ಟ ಏರುವ ಕಾಯಕ ಆರಿಸಿಕೊಂಡ ಕಥೆ

ಸರಸರನೆ ಕಾರಿಂಜಬೆಟ್ಟ ಏರಿದ ಕರ್ನಾಟಕದ ಸ್ಪೈಡರ್‌ಮ್ಯಾನ್ ಜ್ಯೋತಿರಾಜ್; ಆತ್ಮಹತ್ಯೆ ಮಾಡಲು ಹೊರಟಾತ ಬೆಟ್ಟ ಏರುವ ಕಾಯಕ ಆರಿಸಿಕೊಂಡ ಕಥೆ

ಕರ್ನಾಟಕದ ಸ್ಪೈಡರ್‌ಮ್ಯಾನ್ ಎಂದೇ ಖ್ಯಾತಿ ಗಳಿಸಿದ ಜ್ಯೋತಿರಾಜ್ ಇಂದು ದಕ್ಷಿಣಕನ್ನಡ ಬಂಟ್ವಾಳದ ಕಾರಿಂಜ ಬೆಟ್ಟವನ್ನು ಏರಿದ್ದಾರೆ. ಈ ವೇಳೆ ಅವರು ಎಚ್‌ಟಿ ಕನ್ನಡ ಪ್ರತಿನಿಧಿ ಜೊತೆ ತಮ್ಮ ಬದುಕಿನ ಕಥೆಯನ್ನೂ ಹಂಚಿಕೊಂಡಿದ್ದಾರೆ. (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)

ಬಿಸಿಲನ್ನೂ ಲೆಕ್ಕಿಸದೇ ಕಾರಿಂಜ ಬೆಟ್ಟ ಏರುತ್ತಿರುವ ಜ್ಯೋತಿರಾಜ್‌ (ಎಡಚಿತ್ರ) ಕುತೂಹಲದಿಂದ ಜ್ಯೋತಿರಾಜ್ ಬೆಟ್ಟ ಏರುವುದನ್ನು ನೋಡುತ್ತಿರುವ ಜನರು
ಬಿಸಿಲನ್ನೂ ಲೆಕ್ಕಿಸದೇ ಕಾರಿಂಜ ಬೆಟ್ಟ ಏರುತ್ತಿರುವ ಜ್ಯೋತಿರಾಜ್‌ (ಎಡಚಿತ್ರ) ಕುತೂಹಲದಿಂದ ಜ್ಯೋತಿರಾಜ್ ಬೆಟ್ಟ ಏರುವುದನ್ನು ನೋಡುತ್ತಿರುವ ಜನರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎತ್ತರದ ಬೆಟ್ಟಗಳಲ್ಲಿ ಕಾರಿಂಜ ಬೆಟ್ಟ ಕೂಡ ಒಂದು. ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಕರೆಯಲ್ಪಡುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರು ಭಾನುವಾರ ಬೆಳಗ್ಗೆ ಈ ಬೆಟ್ಟವನ್ನು ಏರಿ ಗಮನ ಸೆಳೆದರು.

ಕೋತಿರಾಜ್ ಅವರು ಪ್ರಥಮ ಬಾರಿಗೆ ದ.ಕ. ಜಿಲ್ಲೆಯ ಕಾರಿಂಜ ಬೆಟ್ಟವನ್ನೇರುವ ತನ್ನ ಸಾಹಸದ ಪ್ರದರ್ಶನ ನೀಡಿದ್ದು, ನೂರಾರು ಕುತೂಹಲಿಗರು ಇದನ್ನು ಕಣ್ಣಾರೆ ಕಂಡರು.

ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಗುರುತಿಸಲ್ಪಡುವ ಜ್ಯೋತಿರಾಜ್ ನಿಗದಿಪಡಿಸಿದಂತೆ ಬೆಳಗ್ಗೆ 10 ಗಂಟೆಗೆ ಪುರಾಣ ಪ್ರಸಿದ್ಧ ಕಾರಿಂಜೇಶ್ವರನ ಬೆಟ್ಟದ ಮೇಲೆ ಹತ್ತಲು ಆರಂಭಿಸಿದರು. ಸುಡುವ ಶಾಖದಲ್ಲೂ, ಕೇವಲ ಅರ್ಧ ತಾಸಿಗಿಂತಲೂ ಮೊದಲೇ ಈಶ್ವರನ ದೇವಾಲಯದ ಮುಂದೆ ಬಂದು ದೇವರಿಗೆ ನಮಸ್ಕರಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಟ್ಟದ ಮೇಲೆ ಏರಿಯೇ ಬಿಟ್ಟ ಜ್ಯೋತಿರಾಜ್ ಸಾಧನೆ ಮೈಜುಮ್ಮೆನಿಸುವಂತಿತ್ತು. ಸುಡು ಬಿಸಿಲಿಗೆ ಆತ ಬೆಟ್ಟವನ್ನು ಏರುವ ದೃಶ್ಯ ಕೆಲವರ ಕಣ್ಣುಗಳನ್ನು ಒದ್ದೆಯಾಗಿಸಿತು.

ಬಿಸಿಲಿನ‌ ತಾಪಕ್ಕೆ ಕಾದು ಕಾದು ಸುಡುವ ಕಲ್ಲಿನ ಮೇಲೆ ಏರುವ ಆತನ ಸಾಹಸಕ್ಕೆ ಕಾರಿಂಜದಲ್ಲಿ ನೆರೆದ ಜನರಿಂದ ಭೇಷ್ ಎಂಬ ಉದ್ಗಾರ ಕೇಳಿ ಬಂತು.

ಬಡವರ ಕಲ್ಯಾಣಕ್ಕಾಗಿ ಟ್ರಸ್ಟ್ ಒಂದನ್ನು ನಡೆಸುವ ಕೋತಿರಾಜ್ ಅವರು, ಆ ಮೂಲಕ ಇನ್ನಷ್ಟು ಸಮಾಜ ಸೇವೆ ಮಾಡಲು ಆರ್ಥಿಕ ಸಹಾಯಧನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವನ್ನು ಯಾಚಿಸಿದ್ದಾರೆ.

350 ಅಡಿ ಎತ್ತರದ ಕಾರಿಂಜ ಬೆಟ್ಟ

ಜ್ಯೋತಿರಾಜ್ ಕಾರಿಂಜ ಬೆಟ್ಟದ ಬೃಹತ್ ಆದ 350 ಎತ್ತರದ ಬಂಡೆಯನ್ನು ಅರ್ಧ ತಾಸಲ್ಲಿ ಏರಿದ್ದಾರೆ. ಯೂಟ್ಯೂಬ್ ಮೂಲಕ ಶಿವರಾತ್ರಿ ವಿಡಿಯೊ ನೋಡುತ್ತಿದ್ದಾಗ ಕಾರಿಂಜ ಕ್ಷೇತ್ರದ ಕುರಿತು ತಿಳಿಯಿತು. ಈ ಹಿನ್ನೆಲೆಯಲ್ಲಿ ಸಾಕಷ್ಟು ಜನರ ಬೇಡಿಕೆಯಂತೆ ಬೆಟ್ಟ ಹತ್ತಲು ನಿರ್ಧರಿಸಿದ್ದ ಅವರು, ಶನಿವಾರ ಇದಕ್ಕಾಗಿ ಪ್ರಾಕ್ಟೀಸ್ ಕೂಡ ಮಾಡಿದ್ದರು. ಶನಿವಾರ ಒಂದು ತಾಸು ತೆಗೆದುಕೊಂಡಿದ್ದ ಅವರು ಭಾನುವಾರ ಅರ್ಧ ಗಂಟೆಯಲ್ಲೇ ಕ್ರಮಿಸಿದರು.

ಸ್ಪೋರ್ಟ್ಸ್ ಕ್ಲಬ್ ನಿರ್ಮಾಣದ ಕನಸು

ಯುವ ಜನಾಂಗ ದಾರಿ ತಪ್ಪುವ ಈ ಕಾಲಘಟ್ಟದಲ್ಲಿ ಅವರಿಗೆ ಸರಿಯಾಗಿ ತರಬೇತಿ ನೀಡಿ ಅವರನ್ನು ಕ್ರೀಡೆಯಲ್ಲಿ ಸಾಧನೆ ಮಾಡಿಸಬೇಕು ಎಂಬ ಹಂಬಲವಿದ್ದು,ಅದಕ್ಕಾಗಿ ಎಲ್ಲಿಯಾದರೂ 2 ಎಕ್ರೆಯಷ್ಟು ಜಮೀನು ಖರೀದಿಸಿ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯನ್ನು ನಿರ್ಮಿಸಬೇಕೆಂಬ ಕನಸು ಹೊಂದಿದ್ದು,ಇದಕ್ಕಾಗಿ ಆರ್ಥಿಕ‌ ನೆರವಿನ‌ ನಿರೀಕ್ಷೆಯಲ್ಲಿದ್ದೇನೆ ಎಂದು ಅವರು ಈ ಸಂದರ್ಭ, ತಮ್ಮ ಮನದಾಳದ ಇಂಗಿತವನ್ನು ಸುದ್ದಿಗಾರರ ಮುಂದೆ ಹಂಚಿಕೊಂಡರು. ಈ ಉದ್ದೇಶಕ್ಕಾಗಿಯೇ ಬಂಟ್ವಾಳಕ್ಕೂ ಬಂದಿದ್ದೇನೆ. ಇಡೀ ಜಿಲ್ಲೆಯ ‌ಜನತೆ ನನಗೆ ಸಹಕಾರ ನೀಡುವಂತೆ ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಲು ಹೊರಟವರು ಬೆಟ್ಟ ಹತ್ತುವ ಕಾಯಕ ಮಾಡಿದರು

ಇವರ ಹೆಸರು ಜ್ಯೋತಿರಾಜ್. ಆದರೆ ಕೋತಿರಾಜ್ ಎಂದೇ ಹೆಸರುವಾಸಿಯಾದವರು. ಮೂರನೇ ವಯಸ್ಸಿಗೆ ಅವರ ಪೋಷಕರು ತಮಿಳುನಾಡಿನ ಜಾತ್ರೆಯಲ್ಲಿ ಕಾಣೆಯಾಗಿದ್ದರು, ಬಳಿಕ ಅವರು ತಮಿಳುನಾಡು ಮೂಲದ ವ್ಯಕ್ತಿಯೊಬ್ಬರ ಕೈಗೆ ಸಿಕ್ಕರು. ಅವರು ಜ್ಯೋತಿರಾಜ್ ಅವರನ್ನು ಚಿತ್ರದುರ್ಗದಲ್ಲಿರುವ ಮನೆಯಲ್ಲಿ ಸಾಕುತ್ತಾರೆ. ಅವರ ಬೇಕರಿಯಲ್ಲಿ ಕೆಲಸ ಮಾಡುತ್ತಾ ಬೆಳೆಯುವ ಇವರು ಶಿಕ್ಷಣದಿಂದ ವಂಚಿತರಾಗುತ್ತಾರೆ. ತಮಿಳುನಾಡಿನಲ್ಲಿ ಬೆಳೆದ ಇವರು ‘ಮಂಕಿ ಮ್ಯಾನ್ ಆಫ್ ಕರ್ನಾಟಕ‘ ಎಂದು ‌ಹೆಸರು‌ ಪಡೆದಿದ್ದರೂ, ಇನ್ನು ಕೂಡ ಸ್ವಂತ ಸೂರಿಲ್ಲ, ಚಿಕಿತ್ಸೆಗಾಗಿ ಮಾಡಿದ ಸಾಲ ಇನ್ನೂ ತೀರಿಲ್ಲ

ತಂದೆ ತಾಯಿಯನ್ನು ಕಳೆದುಕೊಂಡ ಇವರಿಗೆ ದಿನ ಕಷ್ಟದ ಬದುಕು, ಹಾಗಾಗಿ ಸಾಕುಮನೆಯಿಂದ ಹೊರಬಂದು ಗಾರೆ ಕೆಲಸ ಆರಂಭಿಸುತ್ತಾರೆ. ತಂದೆ ತಾಯಿಯ ಕೊರಗು ಕಾಡುತ್ತಲೇ ಇದ್ದ ಇವರಿಗೆ ಒಂದು ‌ದಿನ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸಿ ಚಿತ್ರದುರ್ಗದ ಬೆಟ್ಟವನ್ನು ‌ಏರುತ್ತಾರೆ.

ಆದರೆ ಈತ ಬೆಟ್ಟವನ್ನು ಏರುವ ಶೈಲಿಯನ್ನು ‌ನೋಡಿದ ಪ್ರೇಕ್ಷಕರು ಮೂಕವಿಸ್ಮಿತರಾಗುತ್ತಾರೆ ಅಲ್ಲದೇ, ಚಪ್ಪಾಳೆ ತಟ್ಟುತ್ತಾರೆ. ಆದರೆ ಸಾಯಲು ಮುಂದಾಗಿದ್ದ ಜ್ಯೋತಿರಾಜ್‌ಗೆ ಜನರನ್ನು ನೋಡಿ ಇಂದು ಬೇಡ ನಾಳೆ ನೋಡೋಣ ಎಂದು ವಾಪಸು ಬರುವಾಗ, ಕೆಳಗೆ ನೆರೆದ ಜನ ಅಭಿನಂದಿಸುತ್ತಾರೆ, ಈತನ ಜೊತೆ ಪೋಟೊ ಕ್ಲಿಕ್ಕಿಸಿಕೊಂಡು ಸಾಧನೆಯ ಬಗ್ಗೆ ಗೌರವದ ಮಾತುಗಳನ್ನಾಡುತ್ತಾರೆ. ಆ ದಿನವೇ ತನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಯಿತು ಎಂದು ಜ್ಯೋತಿರಾಜ್ ವಿವರಿಸಿದಾಗ ಅವರ ಕಣ್ಣಂಚಲ್ಲಿ ನೀರಿನ ತೇವ ಕಾಣಿಸಿಕೊಂಡಿತು.

ಸಾಯಲು ಹೋದ ಯುವಕ ಇದೀಗ ಸಾಧನೆಯ ಶಿಖರವೇರುತ್ತಾ ಕರ್ನಾಟಕದ ಮನೆ ಮಗನಾಗಿ, ಅನೇಕರ ಪಾಲಿಗೆ ದೇವರಾಗಿ, ಅನೇಕರ ಜೀವ ಕಾಪಾಡಿದ, ಜೀವ ಕಳೆದುಹೋದವರ ಮನೆಯವರಿಗಾಗಿ ಪ್ರಾಣವನ್ನು ಪಣಕ್ಕಿಟ್ಟ ಓರ್ವ ಸಂತನಾಗಿ ಇಂದು ಎತ್ತರಕ್ಕೆ ಬೆಳೆದಿದ್ದಾರೆ.

ಕಾರಿಂಜ ಬೆಟ್ಟ ಏರುತ್ತಿರುವ ಜ್ಯೋತಿರಾಜ್
ಕಾರಿಂಜ ಬೆಟ್ಟ ಏರುತ್ತಿರುವ ಜ್ಯೋತಿರಾಜ್

11 ಆಪರೇಷನ್‌

ಶವಗಳನ್ನು ಹುಡುಕಲು ಕೋತಿರಾಜ್ ಅನೇಕ ಬಾರಿ ಜೋಗ ಜಲಪಾತವನ್ನು ಇಳಿದು ಏರಿದ್ದಾರೆ. ಜಲಪಾತದ ಕಂದಕಕ್ಕೆ ಬಿದ್ದು, ಎರಡು ದಿನ ಕಾಣೆಯಾಗಿದ್ದರು. ಇಲ್ಲಿಯ ತನಕ ಅವರಿಗೆ ಒಟ್ಟು 11 ಆಪರೇಷನ್‌ ಆಗಿದೆ. ಕೈ, ಕಾಲಿಗೆ 4 ರಾಡ್ ಹಾಕಿಸಿಕೊಂಡಿದ್ದಾರೆ. ಆದರೆ, ಇವರು ಬಂಡೆಗಳನ್ನು ಹತ್ತಿ ಬಿದ್ದಿರುವುದು ಕಡಿಮೆ. ಅವರಿವರನ್ನು ಕಾಪಾಡಲು ಹೋದಾಗ ಬಿದ್ದು ಗಾಯಳಾಗಿರುವುದೇ ಹೆಚ್ಚು ಅನ್ನೋದು ಅವರ ಮಾತು.

900 ಅಡಿ ಆಳದ ಜೋಗದಲ್ಲಿ ಸುಮಾರು ಸಲ ಇಳಿದಿದ್ದಾರೆ. ಅಷ್ಟೇ ಏಕೆ ದೇಶದಾದ್ಯಂತ ಜನರನ್ನು ಕಾಪಾಡಲು ಹೋಗಿದ್ದಾರೆ. ಜೋಗ ಒಂದರಲ್ಲೇ ಒಟ್ಟು 9 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಜಲಪಾತವನ್ನು 18 ಬಾಕಿ ಹತ್ತಿಳಿದಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಪೈಕಿ 3 ಬಾರಿ ಶೂಟಿಂಗ್‌ಗಾಗಿ ಹತ್ತಿದ್ದಾರೆ. ಕೆರೆ, ಬಾವಿಯಲ್ಲಿ ಅವರಿವರು ಬಿದ್ರೆ ಸಹಾಯ ಮಾಡ್ತಿದ್ದಾರೆ.

‘ಯಾರೇ ಬಿದ್ರೂ ನಮ್ಮ ತಂಗಿ, ತಮ್ಮ ಎಂದುಕೊಂಡು ಕಾಪಾಡಲು ಹೋಗ್ತೇ‌ನೆ. ಜೋಗದಲ್ಲಿ ಇಳಿದಾಗ ನಾನು ಉಳಿಯಲ್ಲ ಎಂದುಕೊಂಡಿದ್ದೆ. ಆ ದೇವರು ದೊಡ್ಡವನು, ಕಾಪಾಡಿದ. ಕರ್ನಾಟಕದ ಜನರ ಆಶೀರ್ವಾದದಿಂದ ಬದುಕಿದೆ‘ ಎಂದು ಕೋತಿರಾಜ್ ಹೇಳಿದರು. ಇಲ್ಲಿಯತನಕ ಒಟ್ಟು 50ಕ್ಕೂ ಹೆಚ್ಚು ಯುವಕರಿಗೆ ಕೋತಿರಾಜ್ ತರಬೇತಿ ನೀಡಿದ್ದಾರೆ. ಪ್ರಸ್ತುತ 10 ಯುವಕರು ತರಬೇತಿ ಪಡೆಯುತ್ತಿದ್ದಾರೆ. ಬಂಡೆ ಹತ್ತುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಇವರಿಂದ ತರಬೇತಿ ಪಡೆದ 16-20 ಯುವಕರು ಸೇನೆ ಸೇರಿದ್ದಾರೆ. ಇಬ್ಬರು ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದಾರೆ. ಕರ್ನಾಟಕ ನನ್ನ ಉಸಿರು, ಹೆಸರು ನೀಡಿದ ದೇವತೆ, ಹಾಗಾಗಿ ನಾನು ಕರ್ನಾಟಕದಲ್ಲಿಯೇ ಬದುಕನ್ನು ಕಳೆಯಬೇಕು ಎಂಬ ಮಹದಾಸೆ ನನ್ನದು ಎಂದು ಹೇಳಿಕೊಂಡಿದ್ದಾರೆ.

ಮಲೆನಾಡು ನನ್ನ ಇಷ್ಟದ ಊರು

ಕಳೆದ ವರ್ಷ ಬೆಳ್ತಂಗಡಿಯ ಗಡಾಯಿಕಲ್ಲು ಹತ್ತಿದ್ದೆ ಹಾಗೆಯೇ ಉಡುಪಿ, ಮಂಗಳೂರಿನ ಬಹುಮಹಡಿಯ ಕಟ್ಟಡವನ್ನು ಹತ್ತಿದ್ದು,ಅದರಲ್ಲಿ ಬಂದ ಹಣದಿಂದ ರೋಪು, ಸೇಪ್ಟಿ ಜಾಕೆಟನ್ನು ಖರೀದಿಸಿದ್ದೆನೆ. ಮಲೆನಾಡು ತನಗೆ ಅತ್ಯಂತ ಇಷ್ಟದ ಊರು, ತಾನು ದೈವ, ದೇವರಲ್ಲಿ ನಂಬಿಕೆಯುಳ್ಳವನು. ಧರ್ಮಸ್ಥಳ,ಕೊರಗಜ್ಜನ ಕ್ಷೇತ್ರ ಹೀಗೆ ಹಲವು ದೈವ, ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದನೆ. ಮಂಗಳೂರಿನಲ್ಲಿರುವ ಅತ್ಯಂತ ದೊಡ್ಡ ಬಹುಮಹಡಿಯ ಕಟ್ಟಡವನ್ನು ಹತ್ತಬೇಕೆಂಬ ಬಯಕೆ ಇದೆ. ಕಳೆದ ಬಾರಿ ಇದಕ್ಕೆ ಸಂಬಂಧಪಟ್ಟವರಿಂದ ಅನುಮತಿ ಕೋರಿದ್ದೆ ಆದರೆ ಸಿಕ್ಕಿರಲಿಲ್ಲ.ಈ ಬಾರಿಯು ಅನುಮತಿ ಕೋರಿದ್ದು,ಇದುವರೆಗೆ ಸಿಕ್ಕಿರುವುದಿಲ್ಲ ಎಂದರು.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner