Arecanut News: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘಕ್ಕೆ ಯುವ ಮುಖ, ಹೊಸ ಅಧ್ಯಕ್ಷರ ಯೋಜನೆಗಳು ಏನೇನು?
ಕರ್ನಾಟಕವೂ ಪ್ರಮುಖ ಅಡಿಕೆ ಬೆಳೆಯುವ ರಾಜ್ಯ. ಇಲ್ಲಿಯೂ ಅಡಿಕೆ ಬೆಳೆಗಾರರ ಸಂಘವೂ ಪ್ರಬಲವಾಗಿದೆ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘಕ್ಕೆ ಮಹೇಶ್ ಪುಚ್ಚಪ್ಪಾಡಿ ಆಯ್ಕೆಯಾಗಿದ್ದಾರೆ. ಅವರ ಯೋಜನೆಗಳ ಕುರಿತು ಮಾತನಾಡಿದ್ದಾರೆ.ಸಂದರ್ಶನ: ಹರೀಶ ಮಾಂಬಾಡಿ, ಮಂಗಳೂರು

ಮಂಗಳೂರು: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ನೂತನ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗುತ್ತಿಗಾರು ಕಮಿಲದ ಮಹೇಶ್ ಪುಚ್ಚಪ್ಪಾಡಿ ಹಾಗೂ ಕಾರ್ಯದರ್ಶಿಯಾಗಿ ಕೋಡಪದವು ಕೆಲಿಂಜದ ವೆಂಕಟಗಿರೀಶ್ ಸಿ.ಜಿ. ಆಯ್ಕೆಯಾಗಿದ್ದಾರೆ.
ಈಚೆಗೆ ನಡೆದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಶಂ. ನಾ. ಖಂಡಿಗೆ ಪೆರ್ಲ, ಎಂ.ಡಿ. ವಿಜಯಕುಮಾರ್ ಮಡಪ್ಪಾಡಿ ಹಾಗೂ ಜತೆ ಕಾರ್ಯದರ್ಶಿಯಾಗಿ ಸಾಯಿಶೇಖರ್ ಕರಿಕಳ ಪಂಜ ಆಯ್ಕೆಯಾದರು. ಸಂಘದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಕಿನಿಲ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಇತ್ತೀಚಿನ ದಿನಗಳಲ್ಲಿ ಅಡಿಕೆಯ ಮೌಲ್ಯವರ್ಧನೆಯ ಕುರಿತು ಮಾತುಗಳು ಕೇಳಿಬರುತ್ತಿವೆ. ಅಡಿಕೆಯಿಂದ ಐಸ್ ಕ್ರೀಮ್, ಕಾಫಿ, ಟೂತ್ ಪೇಸ್ಟ್ ಸಹ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ ಸಂಶೋಧಕರು ಇದ್ದಾರೆ. ಆದರೆ ಇವು ದಾಖಲುಗೊಂಡಿವೆಯೇ ವಿನಃ ಜನಪ್ರಿಯಗೊಂಡಿಲ್ಲ. ಹೀಗಾಗಿ ಅಡಿಕೆಯ ಮಾರುಕಟ್ಟೆಯ ವಿಸ್ತಾರ ಸಾಂಪ್ರದಾಯಿಕವಾದ ನೆಲೆಗಟ್ಟಿನಲ್ಲಿ ಇದೆಯೇ ಹೊರತು, ಹೊಸತನವನ್ನು ಕಂಡುಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಡಿಕೆ ಬೆಳೆಗಾರರ ಸಂಘಟನೆಗಳಿಗೆ ಬೆಳೆಗಾರನ ಹಿತರಕ್ಷಣೆ ಹಾಗೂ ಮಾರುಕಟ್ಟೆಯ ಮೌಲ್ಯವರ್ಧನೆಯ ಕುರಿತು ಗಮನಹರಿಸುವುದೂ ಇದೆ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಈ ನಿಟ್ಟಿನಲ್ಲಿ ಏನು ಮಾಡುತ್ತಿದೆ. ಈ ಕುರಿತು ನೂತನ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅವರೊಂದಿಗೆ ಎಚ್.ಟಿ. ಕನ್ನಡ ಮಾತುಕತೆ ನಡೆಸಿದ ಸಂದರ್ಭ ಅವರು ಹೇಳಿದ ವಿಚಾರಗಳಿವು.
1. ಅಡಿಕೆ ಬೆಳೆಗಾರರ ಸಂಘದ ಧ್ಯೇಯೋದ್ದೇಶಗಳೇನು?
ಮಹೇಶ್ ಪುಚ್ಚಪ್ಪಾಡಿ: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪನೆಯಾಗಿತ್ತು. ಅಡಿಕೆಗೆ ಬ್ರಿಟಿಷ್ ಸರ್ಕಾರವು ತೆರಿಗೆ ವಿಧಿಸಿದ ಸಂದರ್ಭ ಹೋರಾಟ ನಡೆದಿತ್ತು.ಆಗಲೇ ಬೆಳೆಗಾರರ ಸಂಘ ರಚನೆಯಾಗಿತ್ತು. ಅದಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ ಎಂಬ ಹೆಸರಿನಲ್ಲಿ ಕೃಷಿಕರ ರಕ್ಷಣೆಗೆ ಕೆಲಸ ಮಾಡಿತ್ತು. 1965ರಲ್ಲಿ ಅಡಿಕೆ ಬೆಳೆಗಾರರ ಸಂಘವಾಗಿ ಮಾರ್ಪಾಡಾಗಿ ಅಡಕೆ ಧಾರಣೆ ಕುಸಿತದ ಸಂದರ್ಭ ಅಖಿಲ ಭಾರತ ಅಡಕೆ ಬೆಳೆಗಾರರ ಸಂಘವಾಗಿ ಬದಲಾಗಿ ರಾಜ್ಯಮಟ್ಟದಲ್ಲಿ ಮಾಡಿತು. ಅಡಿಕೆ ಧಾರಣೆ ಕುಸಿತದ ಸಂದರ್ಭ ವಾರಣಾಸಿ ಸುಬ್ರಾಯ ಭಟ್ ಅವರ ನೇತೃತ್ವದಲ್ಲಿ ಕ್ಯಾಂಪ್ಕೋ ಸ್ಥಾಪನೆಯಾಯಿತು. ಆಗ ಅವರು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿದ್ದರು. ನಂತರ ಅಡಿಕೆ ಬೆಳೆಗಾರರ ಸಂಘ ಮಾಡುವ ಬಹುಪಾಲು ಕೆಲಸವೂ ಕ್ಯಾಂಪ್ಕೋ ಮಾಡುತ್ತಿದೆ. ಹೀಗಾಗಿ ಅಡಿಕೆ ಬೆಳೆಗಾರರ ಸಂಘ ಬೆಳೆಗಾರರ ಸಂಘಟನೆ ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಅಗತ್ಯ ಇದ್ದಾಗ ಹೋರಾಟ ಮಾಡುತ್ತದೆ. ಸದ್ಯ ಅಡಿಕೆ ಬೆಳೆಗಾರರ ಸಂಘಟನೆ ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.
2. ಪ್ರಸ್ತುತ ಸನ್ನಿವೇಶದಲ್ಲಿ ಬೆಳೆಗಾರನ ಸ್ಥಿತಿಗತಿ ಏನು? ಯಾವ ಸವಾಲುಗಳನ್ನು ಎದುರಿಸುತ್ತಿದ್ದಾನೆ?
ಮಹೇಶ್ ಪುಚ್ಚಪ್ಪಾಡಿ: ಸದ್ಯ ಅಡಿಕೆ ಬೆಳೆಗಾರರಿಗೆ ಮಾರುಕಟ್ಟೆಯ ದೃಷ್ಟಿಯಿಂದ ಉತ್ತಮವಾದ ಧಾರಣೆ ಲಭ್ಯವಾಗುತ್ತಿದೆ. ಕ್ಯಾಂಪ್ಕೋ ಸೇರಿದಂತೆ ಸಹಕಾರಿ ಸಂಸ್ಥೆಗಳು ಅಡಿಕೆ ಬೆಳೆಗಾರರ ಬೆನ್ನಿಗೆ ನಿಂತಿವೆ . ಅಡಿಕೆ ಬೆಳೆಗಾರನಿಗೆ ಸದ್ಯ ಮಾರುಕಟ್ಟೆಯ ಚಿಂತೆ ಇಲ್ಲ. ಆದರೆ ಹವಾಮಾನ ವೈಪರೀತ್ಯ, ವಿವಿಧ ರೋಗಗಳ ಸಮಸ್ಯೆ ಕಾಡುತ್ತಿದೆ. ಅಡಿಕೆ ಹಳದಿ ಎಲೆರೋಗ ಸೇರಿದಂತೆ ಇನ್ನಷ್ಟು ಹೊಸ ರೋಗಗಳು ಅಡಿಕೆಯನ್ನು ಕಾಡುತ್ತಿವೆ. ಹವಾಮಾನ ವೈಪರೀತ್ಯದಿಂದ ಅಡಿಕೆ ಬೆಳೆಗೆ ನಷ್ಟವಾಗುತ್ತಿದೆ. ಹೀಗಾಗಿ ಧಾರಣೆ ಲಭ್ಯವಾದರೂ, ಮಾರುಕಟ್ಟೆ ಸಮಸ್ಯೆ ಇಲ್ಲವಾದರೂ ಅಡಿಕೆ ಬೆಳೆಗೆ ಕಾಡುವ ರೋಗ ಬೆಳೆಗಾರರನ್ನು ಕಾಡುತ್ತಿದೆ. ಈ ಸವಾಲು ಎದುರಿಸಲು ಹಲವು ಮಜಲುಗಳಿಂದ ಯೋಜನೆ, ಯೋಚನೆ ಆಗಬೇಕಿದೆ.
3. ಪ್ರತಿ ಬಾರಿಯೂ ಪರ್ಯಾಯ ಬೆಳೆಯ ಕುರಿತ ಮಾತುಗಳು ಕೇಳಿಬರುತ್ತವೆ. ಅಡಿಕೆ ಬೆಳೆಗಾರನಿಗೆ ಆದಾಯ ಹಾಗೂ ಕೃಷಿ ಭೂಮಿ ಸಂವರ್ಧನೆಗೆ ಅನುಕೂಲವಾಗುವಂತೆ ಯಾವ ಪರ್ಯಾಯ ಬೆಳೆ ಸೂಕ್ತ?
ಮಹೇಶ್ ಪುಚ್ಚಪ್ಪಾಡಿ: ಅಡಿಕೆ ಬೆಳೆಗೆ ಭವಿಷ್ಯ ಇಲ್ಲ ಎನ್ನುವುದು ಹಲವು ಸಮಯಗಳಿಂದಲೂ ಇದೆ. ಕ್ಯಾಂಪ್ಕೋ ಸ್ಥಾಪನೆಯಾದ ಬಳಿಕ ವಾರಣಾಸಿ ಸುಬ್ರಾಯ ಭಟ್ ಅವರೂ ಅಡಿಕೆಯ ಭವಿಷ್ಯದ ಬಗ್ಗೆ ಹೇಳಿದ್ದರು. ವಿಪರೀತವಾಗಿರುವ ಯಾವುದಾದರೂ ಸಂಕಷ್ಟವೇ ಆಗಿದೆ. ಅಂದು ವಾರಣಾಸಿ ಸುಬ್ರಾಯ ಭಟ್ಟರೂ ಪರೋಕ್ಷವಾಗಿ ಹೇಳಿರುವುದು ಇದೇ. ಧಾರಣೆ ಇದೆ, ಮಾರುಕಟ್ಟೆ ಇದೆ ಎಂದು ಅತಿಯಾಗಿ ಅಡಿಕೆಯನ್ನು ಬೆಳೆಯಬೇಡಿ ಎಂದೇ ಪರೋಕ್ಷವಾಗಿ ಹೇಳಿರುವುದು. ಈಗ ಧಾರಣೆ ಇದೆ ಎಂದು ಅಡಿಕೆ ಬೆಳೆ ವಿಸ್ತರಣೆ ಅಪಾಯಕಾರಿಯೇ ಆಗಿದೆ. ಅಡಿಕೆ ಬಳಕೆ ಹಾಗೂ ಪೂರೈಕೆಯ ವ್ಯತ್ಯಾಸವನ್ನೂ ಗಮನಿಸಬೇಕಾದ ಅಗತ್ಯ ಇದೆ. ಹಾಗೆಂದು ಅಡಿಕೆ ಧಾರಣೆಯ ನಡುವೆ ಅಡಿಕೆ ಪರ್ಯಾಯ ಯಾವುದು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಅಡಿಕೆಯಷ್ಟೇ ಆದಾಯ ತರಬಲ್ಲ ಇನ್ನೊಂದು ಕೃಷಿ ಸದ್ಯಕ್ಕಿಲ್ಲ ನಿಜ. ಆದರೆ ಭವಿಷ್ಯದ ದೃಷ್ಟಿಯಿಂದ ಅಡಿಕೆಯ ಜೊತೆಗೆ ಮತ್ತೊಂದು ಬೆಳೆಯನ್ನೂ ಕೃಷಿಕರು ಬೆಳೆಯಲೇಬೇಕಿದೆ. ಅಡಿಕೆಯ ಜೊತೆಗೆ ಕಾಳುಮೆಣಸು, ಕೊಕೋ, ತಾಳೆ, ಹಣ್ಣುಗಳ ಕೃಷಿ, ಬಾಳೆ ಇತ್ಯಾದಿಗಳನ್ನು ಬೆಳೆಯುವುದರ ಜೊತೆಗೆ ಸ್ಥಳೀಯ ಮಾರುಕಟ್ಟೆಯ ಕಡೆಗೂ ಗಮನಹರಿಸಬೇಕಿದೆ.
4. ಇಂದು ಅಡಿಕೆ ಧಾರಣೆ ಕುಸಿತದ ಮಾತು ಕೇಳಿಬರುತ್ತಿದೆ. ಇದಕ್ಕೆ ಏನು ಕಾರಣ?
ಮಹೇಶ್ ಪುಚ್ಚಪ್ಪಾಡಿ:ಅಡಿಕೆ ಧಾರಣೆ ಕುಸಿತದ ಬಗ್ಗೆ ಮಾತುಗಳು ಇರುವುದು ನಿಜ. ಕೊರೋನಾ ಸಮಯದಲ್ಲಿ ಒಮ್ಮೆಲೇ ಅಡಿಕೆ ಧಾರಣೆ ಏರಿಕೆ ಆಗಿರುವುದು ಈಗ ಕುಸಿತವಾಗಿದೆ ಎನ್ನುವುದಕ್ಕೆ ಪ್ರಮುಖ ಕಾರಣ. ಆದರೆ ಸದ್ಯ ಅಡಿಕೆಗೆ ಕಡಿಮೆಯಲ್ಲದ ಧಾರಣೆ ಇದೆ. ಈ ಧಾರಣೆ ಸ್ಥಿರತೆಯಾಗಬೇಕಿದೆ. ಅಡಿಕೆ ಬೆಳೆಗಾರರಿಗೆ ಹೆಚ್ಚು ಧಾರಣೆ ಸಿಗಬೇಕು ನಿಜ. ಅಡಿಕೆ ಬೆಳೆಗಾರರ ಸಂಘವೂ ಅದೇ ಅಭಿಪ್ರಾಯ ಹೊಂದಿದೆ. ಹಾಗೆಂದು ಅತಿಯಾದ ನಿರೀಕ್ಷೆ ಕೂಡಾ ಸರಿಯಲ್ಲ. ಅಡಿಕೆ ಅಕ್ರಮವಾಗಿ ಆಮದು, ಅಡಿಕೆ ಮಾರುಕಟ್ಟೆ ಒಳಗಿನ ಆಟಗಳು ಕೂಡಾ ಈಗ ಧಾರಣೆ ಏರಿಳಿತಕ್ಕೆ ಕಾರಣವಾಗಿದೆ. ಸದ್ಯ ಈ ಧಾರಣೆಗಿಂತ ಕಡಿಮೆ ಬಾರದಂತೆ ಸಂಸ್ಥೆಗಳ ಜೊತೆ ಅಡಿಕೆ ಬೆಳೆಗಾರರೂ ಕೈ ಜೋಡಿಸಬೇಕಿದೆ.
5. ಅಡಿಕೆ ಮೌಲ್ಯವರ್ಧನೆಯ ಕುರಿತು ತಮ್ಮ ಅಭಿಪ್ರಾಯವೇನು? ಪ್ರಯೋಗಗಳು ಅಷ್ಟೊಂದು ಜನಪ್ರಿಯತೆ ಪಡೆಯದೇ ಇರಲು ಏನು ಕಾರಣ?
ಮಹೇಶ್ ಪುಚ್ಚಪ್ಪಾಡಿ: ಅಡಿಕೆಯ ಮೌಲ್ಯ ವರ್ಧನೆಯ ಕಡೆಗೆ ಗಮನ ಅಗತ್ಯ ಇದೆ. ಈಗಾಗಲೇ ಅಡಿಕೆಗೆ ಸಂಬಂಧಿಸಿದ ಹಲವು ಉತ್ಪನ್ನಗಳನ್ನು ತಯಾರಿಸಲಾಗಿದೆ. ಆದರೆ ಈಗಿನ ಅಡಿಕೆ ಧಾರಣೆಯನ್ನು ಗಮನಿಸಿದರೆ ಮೌಲ್ಯವರ್ಧನೆಗೆ ಇನ್ನಷ್ಟು ದುಬಾರಿಯಾಗುವುದು ಸಹಜವೇ ಆಗಿದೆ. ದುಬಾರಿಯಾಗುವ ಕಾರಣದಿಂದ ಸಹಜವಾಗಿಯೇ ಜನಪ್ರಿಯತೆ ಪಡೆಯದೇ ಇರಲು ಕಾರಣವಾಗುತ್ತದೆ. ಹೀಗಾಗಿ ಅಡಿಕೆ ಮೌಲ್ಯವರ್ಧನೆಗೆ ಸರಕಾರದ ನೆರವು ಅಗತ್ಯ ಇದೆ. ಅಡಿಕೆ ಮೌಲ್ಯವರ್ಧನೆಯ ಕಾರಣದಿಂದ ಇಲ್ಲಿನ ಅಡಿಕೆ ಇಲ್ಲಿಯೇ ಬಳಕೆಯಾಗುವಂತೆ ಆಗಲು ಸಾಧ್ಯವಿದೆ. ಉದ್ಯೋಗ ಸೃಷ್ಟಿಯಾಗಲು ಸಾಧ್ಯವಿದೆ. ಪರಿಸರ ಸ್ನೇಹಿಯಾದ ವ್ಯವಸ್ಥೆಯೂ ಜಾರಿಯಾಗುತ್ತದೆ. ಕರಾವಳಿ, ಮಲೆನಾಡುಗಳಲ್ಲಿ ಉದ್ಯಮಗಳೂ ಬೆಳೆಯುತ್ತವೆ. ಈ ನೆಲೆಯಲ್ಲಿ ಅಡಿಕೆ ಮೌಲ್ಯವರ್ಧನೆ ಮಾಡುವ ಸಂಸ್ಥೆಗಳು, ಉದ್ಯಮಗಳಿಗೆ ಸರ್ಕಾರದ ನೆರವು ಬೇಕಿದೆ.
(ಸಂದರ್ಶನ: ಹರೀಶ ಮಾಂಬಾಡಿ, ಮಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)
