ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಮಂಗಳೂರು ನಗರಕ್ಕೆ ಬೇಕಿವೆ ತಂಗುದಾಣಗಳು, ಬಸ್‌ಗೆ ಕಾಯುವವರ ಸಂಕಟ ಕೇಳೋರು ಯಾರು

Mangalore News: ಮಂಗಳೂರು ನಗರಕ್ಕೆ ಬೇಕಿವೆ ತಂಗುದಾಣಗಳು, ಬಸ್‌ಗೆ ಕಾಯುವವರ ಸಂಕಟ ಕೇಳೋರು ಯಾರು

ಯಾವುದೇ ಊರಲ್ಲಿ ಬಸ್‌ ತಂಗುದಾಣಗಳು( Bus Shelter) ಇರುತ್ತವೆ. ಮಂಗಳೂರು( Mangalore) ನಗರದಲ್ಲಿ ಇದ್ದರೂ ಕಡಿಮೆ. ಇದಕ್ಕೆ ಈಗ ಒತ್ತಾಯ ಜೋರಾಗಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ಮಂಗಳೂರಿನಲ್ಲಿ ತಂಗುದಾಣವಿಲ್ಲದೇ ಕಾಯುವವರ ಸ್ಥಿತಿ ನೋಡಿ
ಮಂಗಳೂರಿನಲ್ಲಿ ತಂಗುದಾಣವಿಲ್ಲದೇ ಕಾಯುವವರ ಸ್ಥಿತಿ ನೋಡಿ

ಮಂಗಳೂರು: ಸಣ್ಣ ಮಳೆ ಬಂದರೂ ವಿಪರೀತ ಸೆಖೆ ಇನ್ನೂ ಕಡಿಮೆಯಾಗಿಲ್ಲ. ಬಿಸಿಲ ಧಗೆಗೆ ನಡೆದಾಡಲೂ ಆಗದಂಥ ಸ್ಥಿತಿ. ಕಡಲತಡಿ ಮಂಗಳೂರಿನಲ್ಲಿ ಎಲ್ಲೂ ತಂಗಾಳಿಯೇ ಇಲ್ಲ ಎಂಬಂಥ ವಾತಾವರಣ. ಈ ವೇಳೆ ಬಸ್ ಪ್ರಯಾಣಿಕರ ಸ್ಥಿತಿ ಏನಾಗಬೇಡ? ಮಂಗಳೂರು ಸ್ಮಾರ್ಟ್ ಸಿಟಿ ಆಗುತ್ತಿದೆ. ಆದರೆ ಸ್ಮಾರ್ಟ್ ಆದ ಬಸ್ ನಿಲ್ದಾಣಗಳು ಇನ್ನೂ ರಚನೆಯಾಗಿಲ್ಲ. ಅದಕ್ಕೆ ಕಾಲ ಇನ್ನೂ ಕೂಡಿ ಬಂದಿಲ್ಲ. ಮಧ್ಯಾಹ್ನವಂತೂ ಮಂಗಳೂರಿನಲ್ಲಿ ಪ್ರಯಾಣವೇ ಸುಸ್ತು ಎಂಬಂಥ ಪರಿಸ್ಥಿತಿ. ಇಂಥ ಹೊತ್ತಿನಲ್ಲಿ ತಲೆ ಮೇಲೊಂದು ಸೂರು ಇದ್ದರೆ ಅಷ್ಟೇ ಸಾಕು ಎಂಬಂತಿರುತ್ತದೆ. ಆದರೆ ಮಂಗಳೂರಿನ ಹಂಪನಕಟ್ಟೆ, ಜ್ಯೋತಿಯಿಂದ ಬಂಟ್ಸ್ ಹಾಸ್ಟೆಲ್ ರಸ್ತೆ, ಪಂಪ್ ವೆಲ್, ಕಂಕನಾಡಿ, ಬಂಟ್ಸ್ ಹಾಸ್ಟೆಲ್, ಬಲ್ಲಾಳ್ ಬಾಗ್, ಬಿಜೈ ಸೇರಿ ಹಲವು ಕಡೆಗಳಲ್ಲಿ ಬಸ್ ನಿಲ್ಲುವ ಜಾಗದಲ್ಲಿ ಪ್ರಯಾಣಿಕರು ಬಿಸಿಲಲ್ಲೇ ನಿಲ್ಲಬೇಕು. ಇನ್ನು ಮಳೆ ಆರಂಭವಾದರೆ ಕೇಳುವುದೇ ಬೇಡ. ಪರಿಸ್ಥಿತಿ ಚಿಂತಾಜನಕ.

ಟ್ರೆಂಡಿಂಗ್​ ಸುದ್ದಿ

ಸ್ಟೇಟ್ ಬ್ಯಾಂಕ್ ನಿಲ್ದಾಣದ ಸ್ಥಿತಿ ಹೇಗಿದೆ?

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರಯಾಣಿಕರು ಸಂಚಾರ ಮಾಡಲು ಖಾಸಗಿ ಬಸ್ ಗಳನ್ನು ಅವಲಂಬಿಸುತ್ತಾರೆ. ಮಂಗಳೂರಿನ ಮುಖ್ಯ ಖಾಸಗಿ ಬಸ್ ತಂಗುದಾಣವೆಂದರೆ, ಅದು ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣ. ಇದು ಸಿಟಿ ಬಸ್ ಗಳು ಹಾಗೂ ಪುತ್ತೂರು, ಬಂಟ್ವಾಳ, ಧರ್ಮಸ್ಥಳ, ಶಿವಮೊಗ್ಗ, ಉಡುಪಿ ಕಡೆಗಳಿಗೆ ತೆರಳುವ ಖಾಸಗಿ ಬಸ್ಸುಗಳ ಆರಂಭಿಕ ಪಾಯಿಂಟ್ ಆಗಿದೆ. ಆದರೆ ಈ ಬಸ್ ನಿಲ್ದಾಣದಲ್ಲಿ ಮಳೆ ಬಂದರೆ ಅಥವಾ ಉರಿಬಿಸಿಲು ಇದ್ದರೆ, ಪ್ರಯಾಣಿಕರು ನರಕ ಅನುಭವಿಸಬೇಕಾಗುತ್ತದೆ.

ಆರಂಭದಿಂದಲೂ ಇಲ್ಲಿ ಸಮಸ್ಯೆಗಳ ಸರಮಾಲೆಯೇ ಇತ್ತು, ಇನ್ನೂ ಮುಂದುವರಿದಿದೆ. ಬಸ್ ನಿಲ್ದಾಣ ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷಗಳಾದರೂ ಇನ್ನೂ ಪೂರೈಸಲು ಕಾಲ ಕೂಡಿ ಬಂದಿಲ್ಲ. ಎರಡು ಸಾಲುಗಳಲ್ಲಿ ಶೆಲ್ಟರ್ ಇದ್ದರೆ, ಮೂರು ಸಾಲುಗಳಲ್ಲಿ ಬಿಸಿಲಲ್ಲೇ ಜನರು ನಿಲ್ಲಬೇಕು. ಪುತ್ತೂರು, ಧರ್ಮಸ್ಥಳ ಕಡೆಗೆ ತೆರಳುವ ಪ್ರಯಾಣಿಕರಿಗೆ ಬಿಸಿಲೇ ಗತಿ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಆಯಾಸವಾದರೆ, ಕುಳಿತುಕೊಳ್ಳಲು ಆಸನ ಇಲ್ಲ. ಹಳೇ ಬಸ್ ನಿಲ್ದಾಣದ ಒಳಗೆ ನೀರು ಸೇರಿದಂತೆ ತಿನಿಸುಗಳ ಮಾರಾಟಕ್ಕೂ ಅವಕಾಶವಿತ್ತು. ಈಗ ಅದೂ ಇಲ್ಲ.

ನಂತೂರು ಎಂಬ ಮಹಾಸಾಗರ:

ನಂತೂರು ಜಂಕ್ಷನ್ ನಿಂದ ಮಲ್ಲಿಕಟ್ಟೆ ಕಡೆಗೆ ತೆರಳುವ ಮಾರ್ಗದಲ್ಲಿ ಸಿಗುವ ಬಸ್ ನಿಲ್ಲುವ ಜಾಗ ಹಾಗೂ ಅದರ ಸರಿಯಾಗಿ ಎದುರುಭಾಗದಲ್ಲಿ ಆರಂಭಗೊಳ್ಳುವ ಡಿವೈಡರ್ ವಿಚಿತ್ರವಾದ ಸಂಕಟವನ್ನು ಪ್ರಯಾಣಿಕರಿಗೆ ತಂದೊಡ್ಡುತ್ತದೆ. ಇಲ್ಲಿಯೇ ಮಂಗಳೂರು ಸಿಟಿಯೊಳಗೆ ಹೋಗುವ ಬಸ್ಸುಗಳನ್ನು ಹತ್ತಲು ಸ್ಥಳಾವಕಾಶ ಮಾಡಿಕೊಳ್ಳಬೇಕು. ಅಲ್ಲೇ ಬಸ್ಸುಗಳು ನಿಲ್ಲುವುದರಿಂದ ಟ್ರಾಫಿಕ್ ಜಾಮ್. ಇದರ ಎದುರುಭಾಗದಲ್ಲಿ ಶಕ್ತಿನಗರ ಕಡೆಗೆ ಹೋಗುವ ಬಸ್ಸುಗಳು ನಿಲ್ಲುವ ಸ್ಥಳವೂ ಹಾಗೇ ಇದೆ. ವ್ಯತ್ಯಾಸವೇನಿಲ್ಲ.

ಬಂಟ್ಸ್ ಹಾಸ್ಟೆಲ್, ಪಂಪ್ ವೆಲ್, ಕಂಕನಾಡಿ ಬಸ್ ಸ್ಟಾಪ್ ಎಲ್ಲಿದೆ?

ಮಂಗಳೂರಿನಿಂದ ಕಾಸರಗೋಡು, ಬಿ.ಸಿ.ರೋಡ್, ಬಂಟ್ವಾಳ, ಪುತ್ತೂರು ಕಡೆಗಳಿಗೆ ತೆರಳುವ ಪ್ರಯಾಣಿಕರು ಬಸ್ಸುಗಳಿಗಾಗಿ ಸಂಜೆ, ಬೆಳಗ್ಗೆ, ಮಧ್ಯಾಹ್ನದ ಹೊತ್ತಲ್ಲೆಲ್ಲಾ ಬಸ್ಸುಗಳಿಗಾಗಿ ಕಂಕನಾಡಿ ಸರ್ಕಲ್ ಬಳಿ ಕಾಯುತ್ತಿರುತ್ತಾರೆ. ಆದರೆ ಅವರು ನಿಲ್ಲುವುದಾದರೂ ಎಲ್ಲಿ? ಬಸ್ ನಿಲ್ದಾಣವೆನ್ನುವುದು ಶಾಪಿಂಗ್ ಮಾಲ್ ನ ಎದುರು ಸಣ್ಣದಾಗಿ ಕಣ್ಣಿಗೆ ಕಾಣದಂತಿದ್ದರೆ, ಬಸ್ಸುಗಳೆಲ್ಲವೂ ಹತ್ತು ಹೆಜ್ಜೆ ದೂರವೇ ನಿಂತು, ‘’ಬೇಗ, ಬೇಗ, ಬೇಗ’’ ಎಂಬ ಧ್ವನಿಯೊಂದಿಗೆ ಪ್ರಯಾಣಿಕರ ಬಿಪಿಯ ವೇಗವನ್ನೂ ಏರಿಸುತ್ತದೆ. ಪ್ರಯಾಣಿಕರು ಕಂಕನಾಡಿಯಲ್ಲಿ ಹಿಂದೆ ಎಂಎಲ್ಎ ಆಗಿದ್ದ ಬ್ಲೇಸಿಯಸ್ ಡಿಸೋಜ ಅವರ ಮನೆ ಇದ್ದ ಜಾಗದ ಎದುರು (ಈಗ ಶಾಪಿಂಗ್ ಮಾಲ್ ಆಗಿದೆ) ಬಸ್ಸಿಗಾಗಿ ಕಾಯುತ್ತಾರೆ. ರಣಬಿಸಿಲಿನಲ್ಲೂ ಅಲ್ಲೇ ಬಸ್ಸಿಗೆ ಕಾಯಬೇಕು.

ಸ್ಮಾರ್ಟ್ ಸಿಟಿಯಾಗುತ್ತಿರುವ ಮಂಗಳೂರಿನಲ್ಲಿ ಸ್ಮಾರ್ಟ್ ಬಸ್ ನಿಲ್ದಾಣವೇ ಇಲ್ಲ ಎಂಬಂತಾಗಿದೆ. ಇದೇ ಪರಿಸ್ಥಿತಿ, ಬಂಟ್ಸ್ ಹಾಸ್ಟೆಲ್, ಪಂಪ್ ವೆಲ್ ಗಳಲ್ಲಿದೆ. ಹಾಗೆಯೇ ಹಳೇ ಬಸ್ ಸ್ಟ್ಯಾಂಡ್ ಇದ್ದ ಜಾಗದ ಬಳಿ ಮಿಲಾಗ್ರೀಸ್ ಎದುರೂ ಬಸ್ ಪ್ರಯಾಣಿಕರಿಗೆ ನಿಲ್ಲಲು ಸುರಕ್ಷಿತವಾದ ಜಾಗವೇ ಇಲ್ಲ.

ಮಂಗಳೂರಿನಲ್ಲಿ ಬಸ್ ಪ್ರಯಾಣಿಕರು ಎರಡನೇ ದರ್ಜೆಯ ಪ್ರಜೆಗಳೇನೋ ಎಂದು ಭಾಸವಾಗುವಂಥ ಪರಿಸ್ಥಿತಿ ಇದೆ ಎಂಬ ಭಾವನೆ ಬಾವುಟಗುಡ್ಡೆ, ಅಂಬೇಡ್ಕರ್ ಸರ್ಕಲ್ ಬಳಿಯ ಬಸ್ ಗಾಗಿ ಕಾಯುವ ಪ್ರಯಾಣಿಕರನ್ನು ಸಂಜೆಯ ವೇಳೆ ಗಮನಿಸಿದಾಗ ಮೂಡುತ್ತದೆ.

ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point

ವಿಭಾಗ