ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಮಂಗಳೂರು ಭಾಗದಲ್ಲಿ ಚಡ್ಡಿ ಬನಿಯನ್ ಗ್ಯಾಂಗ್‌ನಿಂದ ಕಳ್ಳತನ, ಪೊಲೀಸ್‌ ಅಲರ್ಟ್‌

Mangalore News: ಮಂಗಳೂರು ಭಾಗದಲ್ಲಿ ಚಡ್ಡಿ ಬನಿಯನ್ ಗ್ಯಾಂಗ್‌ನಿಂದ ಕಳ್ಳತನ, ಪೊಲೀಸ್‌ ಅಲರ್ಟ್‌

Crime News ಮಂಗಳೂರು ಭಾಗದಲ್ಲಿ ಚಡ್ಡಿ ಬನಿಯನ್‌ ಗ್ಯಾಂಗ್‌ ಕಳ್ಳತನದಲ್ಲಿ ನಿರತರಾಗಿರುವ ಪ್ರಕರಣ ವರದಿಯಾಗುತ್ತಿವೆ.ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.ವರದಿ: ಹರೀಶ ಮಾಂಬಾಡಿ.ಮಂಗಳೂರು

ಮಂಗಳೂರಿನಲ್ಲಿ ಚಡ್ಡಿ ಬನಿಯನ್‌ ಗ್ಯಾಂಗ್‌ ದರೋಡೆಗೆ ಇಳಿದಿರುವ ಆತಂಕ ಎದುರಾಗಿದೆ.
ಮಂಗಳೂರಿನಲ್ಲಿ ಚಡ್ಡಿ ಬನಿಯನ್‌ ಗ್ಯಾಂಗ್‌ ದರೋಡೆಗೆ ಇಳಿದಿರುವ ಆತಂಕ ಎದುರಾಗಿದೆ.

ಮಂಗಳೂರು: ಕಳೆದ ತಿಂಗಳು ಮಂಗಳೂರು ಹೊರವಲಯದ ಉಳಾಯಿಬೆಟ್ಟು ಪರಿಸರದಲ್ಲಿ ಉದ್ಯಮಿ ಮನೆಗೆ ತಂಡವೊಂದು ನುಗ್ಗಿ ದರೋಡೆ ನಡೆಸಿದ ಘಟನೆಯ ಬಳಿಕ ಕೃತ್ಯ ನಡೆಸಿದವರಲ್ಲೊಬ್ಬರು ಡ್ರೈವರ್ ಆಗಿ ಅಲ್ಲೇ ಕೆಲಸ ಮಾಡುತ್ತಿದ್ದ ಎಂದು ಆರೋಪಿಗಳನ್ನು ಬಂಧಿಸಿದ ಬಳಿಕ ತಿಳಿದುಬಂತು. ಇದು ಲೋಕಲ್ ಗ್ಯಾಂಗ್ ನ ಕೃತ್ಯವಾದರೆ, ಹೊರಜಿಲ್ಲೆ, ಹೊರರಾಜ್ಯಗಳಲ್ಲೂ ಸಕ್ರಿಯವಾಗಿರುವ ಚಡ್ಡಿ ಬನಿಯನ್ ಗ್ಯಾಂಗ್ ಮಂಗಳೂರಲ್ಲೂ ಸಕ್ರಿಯವಾಗಿದೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಕೋಡಿಕಲ್ ನಲ್ಲಿ ಘಟನೆ ನಡೆದಿದೆ.ಕಚ್ಚಾ ಬನಿಯನ್ ಗ್ಯಾಂಗ್ ಅಲಿಯಾಸ್ ಚಡ್ಡಿ ಗ್ಯಾಂಗ್ ವಿಲಕ್ಷಣ ಮಾದರಿಯಲ್ಲಿ ಕಳ್ಳತನಕ್ಕೆ ಇಳಿಯುತ್ತದೆ. ಸೊಂಟಕ್ಕೆ ಎರಡು ಚಪ್ಪಲಿಯನ್ನು ಸಿಕ್ಕಿಸಿಕೊಂಡು ಇಳಿಯುವ ಈ ತಂಡ, ಕೃತ್ಯ ನಡೆಸಿದ ಸ್ಥಳದಲ್ಲಿ ಒಂದು ಚಪ್ಪಲಿ ಬಿಟ್ಟು ಹೋಗುವುದುಂಟು. ಕಳೆದ ಡಿಸೆಂಬರ್ ನಲ್ಲಿ ಉಡುಪಿಯಲ್ಲಿ ಈ ಮಾದರಿಯ ಕೃತ್ಯ ನಡೆದಿದೆ ಎನ್ನಲಾಗಿದೆ.

ಮಂಗಳೂರಿನ ಹೃದಯಭಾಗದಲ್ಲೇ ಕೃತ್ಯ

ಭಾನುವಾರ ನಸುಕಿನ ವೇಳೆ ಮಂಗಳೂರಿನ ಹೃದಯಭಾಗದಲ್ಲಿರುವ ಕೋಡಿಕಲ್ ನ ವಿವೇಕಾನಂದನಗರದಲ್ಲಿ ಮನೆಯವರು ಮಲಗಿದ್ದಾಗ ಕಳ್ಳರು ನುಗ್ಗಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಸುಮಾರು 2 ಗಂಟೆ ವೇಳೆ ಮನೆಯ ಕಿಟಕಿ ಸರಳುಗಳನ್ನು ಕಿತ್ತು ಒಳನುಗ್ಗಿರುವ ಸುಮಾರು 5 ಮಂದಿ ಕಳ್ಳರ ತಂಡ, ಮನೆಯ ಕೋಣೆಯೊಳಗೆ ಜಾಲಾಡಿ, ಬಳಿಕ ಮನೆಯವರು ಮಲಗಿದ್ದ ಬೆಡ್ ರೂಮ್ ಪ್ರವೇಶಿಸಿದೆ. ಕಪಾಟಿನಲ್ಲಿ ಇಟ್ಟಿದ್ದ 10 ಸಾವಿರ ರೂ ನಗದು ಕಳವು ಮಾಡಿದೆ. ಮರುದಿನ ಮನೆಯವರು ಎದ್ದಾಗಲಷ್ಟೇ ಮನೆ ಮಂದಿ ಗಮನಕ್ಕೆ ಕೃತ್ಯ ಬೆಳಕಿಗೆ ಬಂದಿದೆ.

ಚಡ್ಡಿಯಲ್ಲಿ ಬಂದಿದ್ದ ಕಳ್ಳರು

ಕೃತ್ಯ ನಡೆದಿರುವ ಮನೆ ಪಕ್ಕದ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಕೃತ್ಯದ ದೃಶ್ಯಗಳು ಸೆರೆಯಾಗಿವೆ. ಚಡ್ಡಿ ಧರಿಸಿರುವ ಐವರು ಕಳ್ಳರು ಟಾರ್ಚ್ ಹಿಡಿದು ಮನೆ ಬಳಿ ಬೆಳಗಿನ ಜಾವ ಸುಮಾರು 2.04ಕ್ಕೆ ಒಳಪ್ರವೇಶಿಸಿ, 3.42ಕ್ಕೆ ವಾಪಸಾಗುತ್ತಾರೆ. ಓರ್ವನ ಬಳಿ ಬ್ಯಾಗ್ ಇತ್ತು. ಈ ಮನೆ ರಸ್ತೆ ಪಕ್ಕದಲ್ಲೇ ಇದ್ದು, ಸುತ್ತಮುತ್ತಲೂ ಮನೆಗಳಿದ್ದರೂ ಕಳ್ಳರ ಕೃತ್ಯ ಯಾರಿಗೂ ಗೊತ್ತಾಗಿಲ್ಲ. ಟಾರ್ಚ್ ಹಿಡಿದು, ಮನೆಯನ್ನು ಯಾವುದೇ ಆತಂಕವಿಲ್ಲದೆ ಹೊರಬಂದಿದ್ದಾರೆ, ಸುಮಾರು ಒಂದೂವರೆ ತಾಸು ಮನೆಯನ್ನು ಜಾಲಾಡಿದ್ದು, ಮನೆಯವರಿಗೆ ಈ ವಿಚಾರ ಗೊತ್ತೇ ಆಗಿಲ್ಲ.

ಟ್ರೆಂಡಿಂಗ್​ ಸುದ್ದಿ

ಉತ್ತರ ಭಾರತದಲ್ಲಿ ಚಡ್ಡಿ ಬನಿಯನ್ ಗ್ಯಾಂಗ್ ಅಥವಾ ಕಚ್ಚಾ ಬನಿಯನ್ ಗ್ಯಾಂಗ್ ಸಕ್ರಿಯವಾಗಿದೆ. ಮಂಗಳೂರಿಗೆ ಇದು ಹೊಸದು. ಕಳೆದ ಡಿಸೆಂಬರ್ ನಲ್ಲಿ ಉಡುಪಿಯಲ್ಲಿ ಇಂಥ ಗ್ಯಾಂಗ್ ಒಂದು ಕೃತ್ಯ ನಡೆಸಿತ್ತು.

ಸಾರ್ವಜನಿಕರೇ ಎಚ್ಚರ ಪೊಲೀಸರ ನಂಬರ್ ನಿಮ್ಮಲ್ಲಿರಲಿ

ಮಂಗಳೂರು ನಗರದಲ್ಲಿ ಅಂತರರಾಜ್ಯ ಕಳ್ಳರು /ಚಡ್ಡಿ ಗ್ಯಾಂಗ್ /ಮನೆ ಕಳ್ಳತನ ಮಾಡುವವರು ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಜಾಗ್ರತೆಯನ್ನು ವಹಿಸುವುದು ಅಗತ್ಯವಿದೆ.

ಸಾರ್ವಜನಿಕರು ರಾತ್ರಿ ಸಮಯ ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳುವುದು.ತಮ್ಮ ಬೆಲೆಬಾಳುವ ಸೊತ್ತುಗಳನ್ನು ಮನೆಯಲ್ಲಿಡದೆ ಸೇಫ್ ಲಾಕರ್ ನಲ್ಲಿ ಇಡುವುದು.` ಮನೆಯ ಮತ್ತು ವಾಸ್ತವ್ಯದ ಪರಿಸರದಲ್ಲಿ ಇರುವ ಸಿಸಿ ಕ್ಯಾಮರಗಳನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳುವುದು.ಯಾವುದೇ ಅಪರಿಚಿತ, ಸಂಶಯಾಸ್ಪದ ವ್ಯಕ್ತಿಗಳು, ಮಹಿಳೆಯರು ಕಂಡು ಬಂದಲ್ಲಿ ಕೂಡಲೇ ತುರ್ತು ಕರೆ ಸೇವೆ 112 ಗೆ ಕರೆ ಮಾಡುವುದು. ನಿಮ್ಮ ವಸತಿ / ಬಡಾವಣೆ / ಪರಿಸರದಲ್ಲಿ ದಾರಿ ದೀಪ, ಸಾರ್ವಜನಿಕ ದೀಪಗಳು ಉರಿಯುತ್ತಿರುವ ಬಗ್ಗೆ ದೃಢಪಡಿಸುವುದು, ಇಲ್ಲದೆ ಇದ್ದಲ್ಲಿ ಮೆಸ್ಕಾಂ / ಮಂಗಳೂರು ಮಹಾನಗರ ಪಾಲಿಕೆ/ ಸ್ಥಳೀಯ ಕಾರ್ಪೋರೇಟರ್ಗಳಿಗೆ ತಿಳಿಸುವುದು. ಒಂಟಿ ಮನೆಗಳು/ ಲಾಕ್ಡ್ ಹೌಸ್/ಹಿರಿಯ ನಾಗರೀಕರು / ಮಹಿಳೆಯರು ಮಾತ್ರ ವಾಸ್ತವ್ಯ ಇರುವ ಮನೆಗಳು ಇದ್ದಲ್ಲಿ ಬೀಟ್ ಪೊಲೀಸ್ ರಿಗೆ ಮಾಹಿತಿ ನೀಡಬೇಕು ಎಂಬ ಸೂಚನೆಯನ್ನು ಪೊಲೀಸ್ ಠಾಣೆಗಳಿಂದ ಹೊರಡಿಸಲಾಗಿದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು