ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಎಳನೀರು ಕುಡಿದು ನೂರಕ್ಕೂ ಅಧಿಕ ಮಂದಿ ಅಸ್ವಸ್ಥ ಪ್ರಕರಣ; ಮಂಗಳೂರು ಹೊರವಲಯದ ಬೊಂಡ ಫ್ಯಾಕ್ಟರಿಗೆ ಬೀಗ

Mangalore News: ಎಳನೀರು ಕುಡಿದು ನೂರಕ್ಕೂ ಅಧಿಕ ಮಂದಿ ಅಸ್ವಸ್ಥ ಪ್ರಕರಣ; ಮಂಗಳೂರು ಹೊರವಲಯದ ಬೊಂಡ ಫ್ಯಾಕ್ಟರಿಗೆ ಬೀಗ

ಮಂಗಳೂರಿನಲ್ಲಿ ಎಳನೀರು ಕುಡಿದು ನೂರಾರು ಮಂದಿ ಅಸ್ವಸ್ಥಗೊಂಡಿದ್ದ ಪ್ರಕರಣ ಸಂಬಂಧ ಆರೋಗ್ಯಾಧಿಕಾರಿಗಳು ಬೋಂಡ ಫ್ಯಾಕ್ಟರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಇದು ಕಾಲರಾ ಅಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ. (ವರದಿ: ಹರೀಶ ಮಾಂಬಾಡಿ)

ಎಳೆನೀರು ಕುಡಿದು ಹಲವರು ಅಸ್ವಸ್ಥಗೊಂಡಿದ್ದ ಪ್ರಕರಣ ಸಂಬಂಧ ಮಂಗಳೂರಿನ ಎಳೆನೀರು ಪ್ಯಾಕ್ಟರಿಗೆ ಬೀಗ ಜಡಿಯಲಾಗಿದೆ.
ಎಳೆನೀರು ಕುಡಿದು ಹಲವರು ಅಸ್ವಸ್ಥಗೊಂಡಿದ್ದ ಪ್ರಕರಣ ಸಂಬಂಧ ಮಂಗಳೂರಿನ ಎಳೆನೀರು ಪ್ಯಾಕ್ಟರಿಗೆ ಬೀಗ ಜಡಿಯಲಾಗಿದೆ. (Pixabay)

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಹೊರವಲಯದ ಅಡ್ಯಾರ್ ಎಂಬಲ್ಲಿ ಬೊಂಡ ಫ್ಯಾಕ್ಟರಿ (ಎಳನೀರು ಮಾರಾಟ)ಯ ಎಳನೀರು ಕುಡಿದು ಸುಮಾರು 137 ಮಂದಿ ಅಸ್ವಸ್ಥರಾಗಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಆಹಾರ ಸುರಕ್ಷತಾಧಿಕಾರಿ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪರಿಶೀಲನೆ ಬಳಿಕ ಫ್ಯಾಕ್ಟರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಏ.11ರಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಮತ್ತು ತಂಡದವರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಮತ್ತು ಮುಂದಿನ ಆದೇಶದವರೆಗೆ ಎಳನೀರು ಮತ್ತು ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ತಿಳುವಳಿಕೆ ನೋಟೀಸ್ ನೀಡಿ ಬಂದ್ ಮಾಡಿಸಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದೇ ವೇಳೆ ಆರೋಗ್ಯಾಧಿಕಾರಿಗಳ ತಂಡ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವವರ ಆರೋಗ್ಯವನ್ನು ವಿಚಾರಿಸಿದ್ದಾರೆ. ತುಂಬೆಯಲ್ಲರುವ ಫಾದರ್ ಮುಲ್ಲರ್ ಆಸ್ಪತ್ರೆ, ಬಿ.ಸಿ.ರಸ್ತೆಯ ಪೆರ್ಲಯ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಬಂಟವಾಳ, ಕಲ್ಲಡ್ಕದ ಪುಷ್ಪರಾಜ್ ಆಸ್ಪತ್ರೆ, ಮಂಗಳೂರು ನಗರದ ಹೈಲ್ಯಾಂಡ್ , ಯುನಿಟಿ , ಕಣಚೂರು, ಯೆನೆಪೋಯ, ಇಂಡಿಯಾನ, ಕೊಲಾಸೊ ಹಾಗೂ ಇತರೆ ವಿವಿಧ ಆಸ್ಪತ್ರೆಗಳಿಗೆ ತಂಡಗಳಾಗಿ ಭೇಟಿ ನೀಡಿದ್ದಾರೆ.

ಇದುವರೆಗೆ 137 ಮಂದಿ ಎಳನೀರು ಕುಡಿದು ಅಸ್ವಸ್ಥರಾಗಿದ್ದು, ಹೊರರೋಗಿಗಳಾಗಿ 84, ಒಳರೋಗಿಗಳಾಗಿ 53 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಇದುವರೆಗೆ 23 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಆಸ್ಪತ್ರೆಯಲ್ಲಿರುವ ಎಲ್ಲರ ಆರೋಗ್ಯವು ಸ್ಥಿರವಾಗಿದೆ. ಆರೋಗ್ಯ ಇಲಾಖೆಯಿಂದ ನಿರಂತರವಾಗಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿರುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಏನಿದು ಎಳನೀರು ಪ್ರಕರಣ?

ಮಂಗಳೂರು ಹೊರವಲಯದಲ್ಲಿ ಎಳೆನೀರು ಮಾರಾಟ ಮಾಡುವ ಬೊಂಡ ಫ್ಯಾಕ್ಟರಿ ಎಂಬ ಘಟಕವೊಂದಿದೆ. ಇಲ್ಲಿ ಐಸ್ ಕ್ರೀಂ ಮಾರಾಟವನ್ನೂ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಈ ಘಟಕವಿದ್ದು, ಜನಪ್ರಿಯವಾಗಿದೆ. ಬೇಸಿಗೆ ಹಿನ್ನೆಲೆ ಇಲ್ಲಿ ಜನಸಂದಣಿ ಯಾವಾಗಲೂ ದಟ್ಟೈಸುತ್ತದೆ. ಆದರೆ ಸೋಮವಾರ (ಏಪ್ರಿಲ್ 8) ಅಡ್ಯಾರ್ ಕಣ್ಣೂರು ಮತ್ತು ತುಂಬೆ ನಿವಾಸಿಗಳು ಅಡ್ಯಾರ್ ನಲ್ಲಿರುವ ಬೊಂಡ ಫ್ಯಾಕ್ಟರಿಯಿಂದ ಎಳನೀರನ್ನು ಲೀಟರ್ ಲೆಕ್ಕದಲ್ಲಿ ಖರೀದಿಸಿ ಕುಡಿದಿದ್ದಾರೆ. ಇದಾಗ ಮರುದಿನವೇ ಮಂಗಳವಾರ (ಏಪ್ರಿಲ್ 9) ಬೆಳಗ್ಗೆಯಿಂದ ಸಂಜೆಯ ತನಕ ವಾಂತಿ ಮತ್ತು ಭೇದಿಯಿಂದ ಬಳಲಿದ್ದಾರೆ. ತೀವ್ರ ಅಸ್ವಸ್ಥಗೊಂಡ ನಂತರ ಸಮೀಪದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ವೈದ್ಯರು ಪರೀಕ್ಷಿಸಿ ಔಷಧೋಪಚಾರ ಪಡೆದು ಗುಣಮುಖರಾಗದೆ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ (ಏಪ್ರಿಲ್ 10) ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಅವರಿಗೆ ವಾಟ್ಸಪ್ ಮುಖಾಂತರ ದೂರು ಸಲ್ಲಿಕೆಯಾಗಿದ್ದು ತಕ್ಷಣವೇ ಬೊಂಡ ಫ್ಯಾಕ್ಟರಿಗೆ ಭೇಟಿ ನೀಡಿ ಎಳನೀರಿನ ಸ್ಯಾಂಪಲ್‌ಅನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮ ಕೈಗೊಂಡರು. ಇಡೀ ಫ್ಯಾಕ್ಟರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಶುಚಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಜಿಲ್ಲಾ ಆರೋಗ್ಯಾಧಿಕಾರಿ ಜತೆ ದೂರವಾಣಿ ಮೂಲಕ ಮಾತನಾಡಿ, ಹೆಚ್ಚಿನ ಚಿಕಿತ್ಸೆಗೆ ರೋಗಿಗಳನ್ನು ಮಂಗಳೂರಿಗೆ ಕಳಿಸುವಂತೆ ತಿಳಿಸಿದ್ದರು. ಇದು ಕಾಲರಾ ಅಲ್ಲ ಎಂದು ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. (ವರದಿ: ಹರೀಶ ಮಾಂಬಾಡಿ)

IPL_Entry_Point