Mangalore News: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದ್ದಕ್ಕೆ ಕತ್ತಿಯಿಂದ ಹಲ್ಲೆ
ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಕಡಬ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ನಡೆದಿವೆ.ವರದಿ: ಹರೀಶ್ ಮಾಂಬಾಡಿ. ಮಂಗಳೂರು
ಮಂಗಳೂರು: ಮಗು ಮಲಗಿದೆ, ಜೋರಾಗಿ ಮಾತನಾಡಬೇಡಿ ಎಂದಿದ್ದಕ್ಕೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಮೇಶ್ ಹಾಗೂ ಅವರ ಪತ್ನಿ ಸಣ್ಣ ಮಗನೊಂದಿಗೆ ಬಳ್ಪದಲ್ಲಿ ವಾಸವಾಗಿದ್ದು, ಸಂಜೆ ಮನೆಯಲ್ಲಿರುವಾಗ ಅವರ ಸಂಬಂಧಿ ಸುಂದರ ಹೊಸ್ಮಠ ಅವರು ಮನೆಗೆ ಬಂದಿದ್ದು, ಕುಳಿತುಕೊಂಡು ಜೋರಾಗಿ ಮಾತನಾಡುತ್ತಿದ್ದರು. ಈ ವೇಳೆ ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ರಮೇಶ್ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಸುಂದರ ಅವರು ಕತ್ತಿಯಿಂದ ರಮೇಶ್ ಅವರಿಗೆ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಗಾಯಗೊಂಡ ರಮೇಶ್ ಅವರು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರಮೇಶ್ ಅಪಾಯದಿಂದ ಪಾರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹಲ್ಲೆ ಘಟನೆಯ ಕುರಿತು ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜಾನುವಾರು ವಧೆ ಮಾಡಿ ಮಾಂಸ ಮಾಡುತ್ತಿದ್ದ ವೇಳೆ ಪೊಲೀಸ್ ದಾಳಿ
ಕಡಬ ತಾಲೂಕು ಕೊಯಿಲ ಗ್ರಾಮದ ಕೆಮ್ಮಾರ ಆಕೀರ ಎಂಬಲ್ಲಿ, ಇಲ್ಯಾಸ್ ಎಂಬವರ ಮನೆಯಲ್ಲಿ ಅಕ್ರಮವಾಗಿ ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕಡಬ ಪೊಲೀಸ್ ಠಾಣಾ ಪಿ.ಎಸ್.ಐ ಅಭಿನಂಧನ್ ಎಂ.ಎಸ್ ಹಾಗೂ ಸಿಬ್ಬಂದಿಗಳು ದಾಳಿ ಮಾಡಿರುವ ಘಟನೆ ನಡೆದಿದೆ.
ಪೊಲೀಸ್ ದಾಳಿ ವೇಳೆ ಕೊಯಿಲ ಗ್ರಾಮದ ಇಲ್ಯಾಸ್ ಮತ್ತು ಬೆಳ್ತಂಗಡಿ ತಾಲೂಕು ಕಲ್ಲೇರಿ ನಿವಾಸಿ ಮಹಮ್ಮದ್ ಆಮು ಎಂಬವರು ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಜಾನುವಾರುಗಳ ವಧೆ ಮಾಡುತ್ತಿರುವುದು ತಪಾಸಣೆ ವೇಳೆ ಕಂಡುಬಂದಿದ್ದು, ಸ್ಥಳದಲ್ಲಿದ್ದ ಜಾನುವಾರುಗಳ ಮಾಂಸ, ತ್ಯಾಜ್ಯ ಹಾಗೂ ಜಾನುವಾರು ವಧೆಗೆ ಬಳಸಿದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಓರ್ವ ಆರೋಪಿ ಇಲ್ಯಾಸ್ ನನ್ನು ಪೊಲೀಸರು ಬಂಧಿಸಿದ್ದು ಇನ್ನೋರ್ವ ಆರೋಪಿ ಮಹಮ್ಮದ್ ಆಮು ಎಂಬಾತ ಪರಾರಿಯಾಗಿದ್ದಾನೆ. ಆತನ ಸೆರೆಗೆ ಪೊಲೀಸರು ಬಲೆಯನ್ನು ಬೀಸಿದ್ದಾರೆ.
ಈ ಬಗ್ಗೆ ಕಡಬ ಪೊಲೀಸರು ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆಯಂತೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತ್ರಿವಳಿ ಕೊಲೆ: ಮನೆ ತಲುಪಿದ ಮೃತದೇಹಗಳು
ತುಮಕೂರಿನ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ನಿಧಿ ಆಸೆಗೆ ಮಾ.22 ರಂದು ಬೆಳ್ತಂಗಡಿಯ ಮೂವರನ್ನು ಕೊಲೆ ಮಾಡಿ ಕಾರಿನಲ್ಲಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಪರೀಕ್ಷೆ ಬಳಿಕ ಇದೀಗ ಮೂವರ ಮೃತದೇಹವನ್ನು ಮನೆಮಂದಿಗೆ 7 ದಿನದ ಬಳಿಕ ಮಾ.28 ರಂದು ಹಸ್ತಾಂತರ ಮಾಡಿದ್ದು, ಮಾ.29 ರಂದು ಶುಕ್ರವಾರ ಬೆಳಗ್ಗೆ ಮನೆಗೆ ತಲುಪಿದೆ.
ಮೂವರ ಮೃತದೇಹ ಮಾ.29 ರಂದು ಬೆಳಗ್ಗೆ ಶಾಹುಲ್ ಹಮೀದ್ ಹಾಗೂ ಇಸಾಕ್ ರವರ ಮೃತದೇಹ ಬೆಳಗಿನ ಜಾವ ಉಜಿರೆ ಮೊಯ್ಯುದ್ದಿನ್ ಜುಮಾ ಮಸೀದಿ ಹಳೆಪೇಟೆಗೆ ತಲುಪಿದೆ ಹಾಗೂ ಸಿದ್ದೀಕ್ ರವರ ಮೃತದೇಹ ಶಿರ್ಲಾಲ್ ಮಸೀದಿಗೆ ತಲುಪಿದೆ.
ಅಲ್ಲಿಂದ ಮೂವರ ಮೃತ ದೇಹಗಳನ್ನು ಕುಟುಂಬದವರ ಆಕ್ರಂದನದ ನಡುವೆ ಅಂತ್ಯಕ್ರಿಯೆ ನಡೆಸಲಾಯಿತು.
ಕಳೆದ ವಾರ ತುಮಕೂರಿನ ವ್ಯಕ್ತಿಯೊಬ್ಬರು ಚಿನ್ನದ ನಿಧಿ ಆಸೆ ತೋರಿಸಿ ಈ ಮೂವರನ್ನು ಕರೆಯಿಸಿಕೊಂಡಿದ್ದರು. ಆನಂತರ ಇವರಿದ್ದ ಕಾರಿಗೆ ಬೆಂಕಿ ಹಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಘಟನೆ ಕುರಿತು ತುಮಕೂರು ಪೊಲೀಸರು ತನಿಖೆ ಕೈಗೊಂಡಿದ್ದರು. ಬಂಗಾರದ ಆಸೆಗೆ ಬಿದ್ದ ಮೂವರು ಜೀವವನ್ನು ಕಳೆದುಕೊಂಡಿದ್ದರು.
(ವರದಿ: ಹರೀಶ್ ಮಾಂಬಾಡಿ. ಮಂಗಳೂರು)
ವಿಭಾಗ