ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ವಿರೋಧ ಪಕ್ಷದವರ ಮನೆ ಬಾಗಿಲಿಗೂ ಹೋಗಿ ವರ್ಷದ ಸಾಧನೆ ವರದಿ ನೀಡಿದ ಪುತ್ತೂರು ಶಾಸಕ, ಏನಿದೆ ವಿಶೇಷ

Mangalore News: ವಿರೋಧ ಪಕ್ಷದವರ ಮನೆ ಬಾಗಿಲಿಗೂ ಹೋಗಿ ವರ್ಷದ ಸಾಧನೆ ವರದಿ ನೀಡಿದ ಪುತ್ತೂರು ಶಾಸಕ, ಏನಿದೆ ವಿಶೇಷ

ಕರ್ನಾಟಕದಲ್ಲಿ ಒಂದು ವರ್ಷದ ಅವಧಿಯನ್ನೂ ಈಗಿನ ಶಾಸಕರು ಮುಗಿಸಿದ್ದಾರೆ. ಅವರಲ್ಲಿ ಪುತ್ತೂರು ಕಾಂಗ್ರೆಸ್‌ ಶಾಸಕ( Puttur MLA) ಭಿನ್ನವಾಗಿ ನಿಲ್ಲುತ್ತಾರೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ವಿರೋಧ ಪಕ್ಷದವರ ಮನೆಗೂ ಹೋದ ಪುತ್ತೂರು ಶಾಸಕ ಅಶೋಕಕುಮಾರ್‌ ರೈ.
ವಿರೋಧ ಪಕ್ಷದವರ ಮನೆಗೂ ಹೋದ ಪುತ್ತೂರು ಶಾಸಕ ಅಶೋಕಕುಮಾರ್‌ ರೈ.

ಮಂಗಳೂರು: ‘’ಚುನಾವಣೆ ನಡೆಯುವಾಗ ನಮ್ಮ ಮನೆ ಬಾಗಿಲಿಗೆ, ಗೆದ್ದ ಬಳಿಕ ಜನಪ್ರತಿನಿಧಿ ಮನೆ ಬಾಗಿಲಿಗೆ ನಾವು’’ ಎಂಬ ನಾಣ್ಣುಡಿ ಆಗಾಗ ಕೇಳಿಬರುವುದುಂಟು. ಎಂ.ಎಲ್.ಎ, ಎಂ.ಪಿಗಳಾದ ಮೇಲೆ ಅವರ ಮನೆಯ ಹಜಾರದಲ್ಲಿ ಅರ್ಜಿ ಹಿಡಿದು ಕಾಯುವುದು ಮಾಮೂಲು ಎಂಬಂತಾಗಿದೆ. ಆದರೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿಯ ಹೋರಾಟದ ಬಳಿಕ ಆಯ್ಕೆಯಾದ ಬಳಿಕ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರಮುಖರ ಮನೆಗಳಿಗೆ ತೆರಳಿ ಮಾತುಕತೆ ನಡೆಸಿ, ತನ್ನ ಶಾಸಕತ್ವದ ಅವಧಿಯ ಬೇಕು, ಬೇಡಗಳ ಕುರಿತು ಪರಾಮರ್ಶೆ ನಡೆಸಿದರು.ಇದೀಗ ಹತ್ತೂರ ಗಮನ ಸೆಳೆದಿದ್ದು, ಇದಕ್ಕೆ ಕಾರಣ ಅವರು ಭೇಟಿ ನೀಡಿದ ಮನೆಗಳಲ್ಲಿ ಪ್ರಮುಖ ಬಿಜೆಪಿ ಮುಖಂಡರದ್ದು ಎಂಬ ಕಾರಣಕ್ಕೆ.

ಟ್ರೆಂಡಿಂಗ್​ ಸುದ್ದಿ

ಅಶೋಕ್ ರೈ ಏನಂತಾರೆ?

ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಒಂದು ವರ್ಷ ಪೂರೈಸಿದ್ದೇನೆ. ಸಮಗ್ರ ಪುತ್ತೂರಿನ ಅಭಿವೃದ್ಧಿಯ ಕನಸನ್ನು ನನಸು ಮಾಡುವುದು ಮೊದಲನೇ ಆದ್ಯತೆ. ಶಾಸಕನಾದ ಬಳಿಕ ಜನರೊಂದಿಗೆ ಬೆರೆಯುವ ರೀತಿ, ನನ್ನಲ್ಲಿ ಏನಾದರೂ ತಪ್ಪಾಗಿದೆಯೇ? ತಿದ್ದಿಕೊಳ್ಳುವಂತಹ ವಿಚಾರ ಏನಾದರೂ ಇದೆಯೇ? ಪುತ್ತೂರು ಅಭಿವೃದ್ದಿಯಾಗಬೇಕಾದರೆ ನಾನು ಏನು ಮಾಡಬೇಕು? ಪುತ್ತೂರು ಕ್ಷೇತ್ರದಲ್ಲಿರುವ ಮುಖ್ಯ ಸಮಸ್ಯೆಯಾದರೂ ಏನು? ಮೊದಲಾದ ವಿಚಾರಗಳನ್ನು ಮುಂದಿಟ್ಟು ತಿಳಿಯಲು ಉದ್ಯಮಿಗಳು, ಕೃಷಿಕರ ಬಳಿ ತೆರಳಿ ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೃಷಿಕರಾದ ಸೇಡಿಯಾಪು ಜನಾರ್ಧನ್ ಭಟ್, ಬಂಗಾರಡ್ಕ ವಿಶ್ವೇಶ್ವರ್ ಭಟ್, ಉದ್ಯಮಿಗಳಾದ ಮಹಮ್ಮದ್ ಹಾಜಿ, ಬಲರಾಮ ಆಚಾರ್ಯ, ಸತ್ಯಶಂಕರ್ ಭಟ್, ಗೋಪಾಲಕೃಷ್ಣ ಹೇರಳೆ ಹಾಗೂ ಚರ್ಚ್ ನ ಧರ್ಮ ಗುರುಗಳಾದ ಲಾರೆನ್ಸ ಮಸ್ಕರೇನಸ್ ಇವರನ್ನು ಭೇಟಿ ಆಗಿ ಹಲವು ಅಮೂಲ್ಯ ಸಲಹೆಗಳನ್ನು ಸ್ವೀಕರಿಸಿದೆನು ಎಂದು ಅಶೋಕ್ ರೈ ಹೇಳುತ್ತಾರೆ.

ಬಿಜೆಪಿ ಒಲವಿದ್ದು, ಬಳಿಕ ಕಾಂಗ್ರೆಸ್ ಗೆ ಬಂದಿದ್ದ ಅಶೋಕ್ ರೈ

ವರ್ಷದ ಹಿಂದಷ್ಟೆ ಕಾಂಗ್ರೆಸ್ ಸೇರಿ, ಬಿಜೆಪಿಯ ಭಿನ್ನಮತದ ಲಾಭ ಪಡೆದು ಮೊದಲ ಯತ್ನದಲ್ಲೇ ಶಾಸಕರಾದವರು ಅಶೋಕ್ ಕುಮಾರ್ ರೈ. 2023ರ ಮಾರ್ಚ್ ನಲ್ಲಿ ಕಾಂಗ್ರೆಸ್ ಸೇರಿದ್ದ ಅಶೋಕ್ ರೈ ಅವರು ಅರುಣ್ ಕುಮಾರ್ ಪುತ್ತಿಲ ಬಂಡಾಯದ ಲಾಭ ಪಡೆದು ಪ್ರಥಮ ಸ್ಪರ್ಧೆಯಲ್ಲೇ ಶಾಸಕರಾದವರು. ಪ್ರಮುಖ ಬಿಜೆಪಿ ನಾಯಕರಾದ ವಿಶ್ವೇಶ್ವರ ಭಟ್ ಬಂಗಾರಡ್ಕ, ಗೋಪಾಲಕೃಷ್ಣ ಹೇರಳೆ ಅವರೆದುರು ಕುಳಿತು ನನ್ನ ಸಾಧನೆ ಹೇಗಿದೆ? ನನ್ನಿಂದ ಏನು ಬದಲಾವಣೆ, ತಿದ್ದುಪಡಿ ಬಯಸುತ್ತೀರಿ ಎಂದು ಕೇಳಿದ್ದು ಗಮನಾರ್ಹ.

ನಾನು ಎಲ್ಲರಿಗೂ ಶಾಸಕ ಎನ್ನುತ್ತಾರೆ ಅಶೋಕ

ನನ್ನ ಒಂದು ವರ್ಷದ ಕೆಲಸದ ಕುರಿತು ಫೀಡ್ ಬ್ಯಾಕ್ ಪಡೆಯುತ್ತಿರುವುದು ನಿಜ.ಹಾಗೆಂದು ಅವರು ಕಾಂಗ್ರೆಸಿಗರು, ಬಿಜೆಪಿಗರು ಎಂಬ ಕಾರಣಕ್ಕೆ ಆಯ್ಕೆ ಮಾಡಿದ್ದಲ್ಲ. ಇಲ್ಲಿ ಕಾಂಗ್ರೆಸ್, ಬಿಜೆಪಿ ಭೇದವಿಲ್ಲ. ಉದ್ಯಮ, ಕೃಷಿ, ಶಿಕ್ಷಣ, ಧಾರ್ಮಿಕ, ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಮುಖಂಡರನ್ನು ಅವರ ಪಕ್ಷ ನೋಡದೆ ಭೇಟಿ ಮಾಡಿದ್ದೇನೆ. ಹೊಗಳಿದವರೂ ಇದ್ದಾರೆ. ತಿದ್ದಿಕೊಳ್ಳಲು ಸಲಹೆ ನೀಡಿದವರೂ ಇದ್ದಾರೆ. ಎರಡನ್ನೂ ಸಮಾನವಾಗಿ ಸ್ವೀಕರಿಸುವೆ. ನಾನು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದೇನೆ. ಆದರೆ ಎಲ್ಲ ಜನರಿಗೂ ನಾನು ಶಾಸಕ ಎನ್ನುತ್ತಾರೆ ಅಶೋಕ್ ರೈ.

ಬಂಗಾರಡ್ಕ ವಿಶ್ವೇಶ್ವರ ಭಟ್ ಹೀಗೆ ಬರೆಯುತ್ತಾರೆ

ಪುತ್ತೂರಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮುಖಂಡರಲ್ಲಿ ಓರ್ವರಾದ ಬಂಗಾರಡ್ಕ ವಿಶ್ವೇಶ್ವರ ಭಟ್ ಅವರು ಫೇಸ್ ಬುಕ್ ನಲ್ಲಿ ಅಶೋಕ್ ರೈ ಅವರ ನಡೆ ಕುರಿತು ಹೀಗೆ ಬರೆದಿದ್ದಾರೆ.

‘’ನಮ್ಮ ಹಳೇ ಭಾಜಪಾ ಸ್ನೇಹಿತ, ಪುತ್ತೂರು ಶಾಸಕ, ಅಶೊಕ್ ರೈ ಕೋಡಿಂಬಾಡಿ ನಿಮ್ ಮನೆಗೆ ಮದ್ಯಾಹ್ನ ಬರ್ತೇನೆ ಅಂತಾ ತಿಳಿಸಿದ್ರು. ಸ್ವಲ್ಪ ಹೊತ್ತಾದ ಮೇಲೆ ಅವರ ಪಿ.ಏ. ಯವರು ದಾರಿ ಸಮಯ ಎಲ್ಲ ನಿಗದಿಪಡಿಸ್ಕೊಂಡ್ರು.. ನಾನು ವಿಶ್ಯ ಏನು ಅಂತಾ ಕೇಳಿದಾಗ, ಅವರು.. ಶಾಸಕರು ನಿಮ್ಮಲ್ಲಿಗೆ ಹೋಗೋಣ ಅಂತಾ ಹೇಳಿದ್ರು.. ಹೀಗೆ ಸುಮ್ಮನೆ ಇರ್ಬೇಕು ಅಂದ್ರು.

ಶಾಸಕರು ಬರುವಾಗ ನಮ್ಮ ಭಾಜಪಾದ ಎರಡು ಹಳೇ ಬೂತ್ ಅಧ್ಯಕ್ಷರನ್ನು ಬರಿಸ್ಕೊಂಡೆ. ನಮ್ಮ ತೋಟದ ಕೆಲಸದೋರೆಲ್ಲರನ್ನು ಅವರೆದು ತಂದು ನಿಲ್ಲಿಸಿದೆ. ಅವರಲ್ಲಿ ನಿಮ್ಮ ಅವಹಾಲುಗಳಿದ್ರೆ ಹೇಳ್ಕೊಳ್ಳಿ ಅಂದೆ.

ಶಾಸಕರುಗಳು (ಅಪವಾದಗಳು ಇವೆ) ಸಾಮಾನ್ಯವಾಗಿ ಸುತ್ತಾಡ್ತಾ ಇರ್ತಾರೆ. ಆದರೆ ಅವರ ಬೇಟಿಗಳು ಅವರ ಪಕ್ಷದೋರು ಹಾಗೂ ಅವರ ವರ್ತುಲದ ಒಳಗಿರೋರ ಮದ್ಯೆಯೇ. ಹಾಗಾಗಿ ಬಂದ ವಿಶ್ಯಗಳೆಲ್ಲ ಮಾತಾಡಿದ ಮೇಲೆ ನಾನೇ ಈ ಬಗ್ಗೆ ಹೇಳಿದೆ.

ಅದಕ್ಕೆ ಅವರು ಕೊಟ್ಟ ಉತ್ತರ ಬಹಳ ಪ್ರಬುದ್ಧ. ನಾವು ಶಾಸಕರಾದ ಮೇಲೆ ನಮಗೆ ಅಧಿಕಾರದ ಬಲ ಇರ್ತದೆ.ಹಾಗಾಗಿ ಸುತ್ತ ಇರೋ ಎಲ್ಲರೂ ನಮ್ಮನ್ನು ಹೊಗಳೋದು ಹಾಗೂ ನಾವು ಮಾಡಿದ್ದು ಸರಿ ಅಂತಾನೇ ಹೇಳೋದು. ಹಾಗಾಗಿ ನಿಮ್ಮಾಗೆ ಸ್ವಲ್ಪ ಪಟಕ್ಕ ಅಂತಾ ಹೇಳೋರು ಹೇಳಿದರೆ ನಮ್ಮ ದಾರಿ ಸರಿಯಾ ಅನ್ನೋ ವಿಮರ್ಷೆ ಮಾಡಲು ಸುಲಭ. ಅಂತಾ ಹೇಳಿದ್ರು. ಅಷ್ಟ್ರ ಮಟ್ಟಿಗೆ ಅದು ಬಹಳ ಪ್ರಬುದ್ದ ಮಾನಸಿಕತೆ ಅಂತಾ ಅನ್ಸಿತು. ಕಾರಣ ತುಂಬಾ ಸಾಮಾನ್ಯಾರಾಗಿದ್ದೋರು ಅಧಿಕಾರಕ್ಕೆ ಬಂದಾಗ ಕಾಲು ನೆಲದಿಂದ ತಪ್ಪಿದ ಉದಾಹರಣೆ ನಾನು ಬಹಳ ನೋಡಿದ್ದೇನೆ.\

ಆ ಮೇಲೆ ಕೃಷಿಯ ಬಗ್ಗೆ ನಿಮ್ಮ ಸಲಹೆಗಳೇನಾದ್ರು ಇದೆಯಾ ಅಂತಾ ಕೇಳಿದ್ರು. CPCRI ನಲ್ಲಿ ಬಹಳ ನಿಷ್ಟಾವಂತ ಅಧಿಕಾರಿಗಳು ಕೆಲವರಿದ್ದಾರೆ. ಆದರೆ ಒಂದು ಸಂಸ್ಥೆಯಾಗಿ ಅದು ಬಹಳ ಅಪ್ರಸ್ಥುತ. ಹಳದಿ ರೋಗ, ವಗೈರೆ ಬಿಡಿ.. ಮಾಮೂಲು ಒಂದು ಕೃಷಿ ಯಂತ್ರಗಳಂತ ಆಸಕ್ತಿ ರೈತರಲ್ಲಿ ಮೂಡಿಸುವುದು, ಮಾಮೂಲು ಅಡಿಕೆಯಲ್ಲಿ ಸುರಿ ಬೀಳೋದಕ್ಕೆ ಸರಳ ಪರಿಹಾರವನ್ನು ಪ್ರಚಾರ ಮಾಡುವಷ್ಟು ಅವರು ಈಗಕ್ಕೆ ಇಲ್ಲ. ಕೇಂದ್ರ ಸರಕಾರದ ವ್ಯಾಪ್ತಿಯಾದರೂ ನಿಮ್ಮ ಡೇರಿಂಗ್ ಕ್ರಮದ ಮೂಲಕ ಚಾಟಿ ಬೀಸಿ ಅಂದೆ.

ಇನ್ನು ಅಡಿಕೆ ರೈತರಿಗೆ ಅಧಿಕೃತ ಸ್ವರವೇ ಇಲ್ಲ. ನೀವ್ಯಾಕೆ ಒಂದು ಅಡಿಕೆ ಬೋರ್ಡು ಮಾಡಬಾರದು ಅಂದೆ. ಇನ್ನು ಹಳದಿ ರೋಗಕ್ಕೆ ಪರಿಹಾರ ಹಾಗೂ ಜತಯಲ್ಲಿ ಅಡಿಕೆಗೆ ಪರ್ಯಾಯ, ಕೃಷಿ ಇಲಾಖೆಯಲ್ಲಿ ರೈತರ ಸಬ್ಸಿಡಿಯಲ್ಲಿ ಆಗುವ ಸೋರಿಕೆಯನ್ನು ಹತೋಟಿ ವಗೈರೆ ಸಲಹೆ ನೀಡಿದೆ. ಶಾಸಕರಿಗೆ ಕೇಳುವ ಶ್ರದ್ಧೆ ಆಸಕ್ತಿ ಇದೆ ಅಂತಾ ಅನ್ಸಿತು.

ಮೆಡಿಕಲ್ ಕಾಲೇಜು ಸ್ಥಾಪನೆಗೆ ಇರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ವಿವರವಾಗಿ ನಾನು ಹೇಳಿದಾಗ ಅವರಿಗೆ ಅದರ ಅರಿವು ಹಾಗೂ ಅದ್ಯಯನ ಈಗಾಗಲೇ ಇತ್ತು ಅನ್ಸಿತು. ಅಲ್ಲದೆ ಅದರ ಹೊರತಾಗಿ ಪರ್ಯಾಯ ದಾರಿಯಲ್ಲಿ (60% ರಾಜ್ಯದ ಹಣವಾದ ಕಾರಣ) ನೋಡ್ತಾ ಇದ್ದೇನೆ ಅಂದ್ರು.

ಹಾಗಾಗಿ ಕಾಲು ಘಂಟಗೆ ಅಂತಾ ಬಂದ ಶಾಸಕರು ಸುಮಾರು ಎರಡು ಘಂಟೆ ನೇರವಾಗಿ ಊರಿನ ವಿಚಾರಗಳ ಬಗ್ಗೆಯೇ ವಿಮರ್ಷೆ ಮಾಡಿದ್ದು ಕುಶಿ ಆಯ್ತು. ನಮ್ಮದೇ ಶಾಸಕರು ತುಂಬಾ ಜನ ಆಗಿದ್ರೂ ಶಾಸಕರಾದ ಮೇಲೆ ಅಷ್ಟು ಹೊತ್ತು ನಮ್ಮಲ್ಲಿ ಕೂತದ್ದು ಇಲ್ಲ..

ಕೊನೆಗೆ ಎಂತಾ ಅಂತಾ ಕೇಳ್ತೀರಾ..? ನಿಮ್ಮ ಡೇರಿಂಗ್ ಕ್ರಮ ಈಗ ಜನಕ್ಕೆ ಕುಶಿ ಆಗಿದೆ. ಅದನ್ನು ನಾಲ್ಕು ವರ್ಷ Sustain ಮಾಡಲು ಬಹಳ ಶ್ರಮ ಬೇಕು. ಅದು ಹೆಚ್ಚು ಕಡಿಮೆ ಆಗಿ ಡೇರಿಂಗ್ ಹೋಗಿ ಅರೊಗೆಂಟ್ ಅಂತಾ ಎನಿಸದಂತೆ ಗಮನಕೊಡಿ. ನೀವು ನಮ್ಮಲ್ಲೇ ಇರುವಂತಹಾ ವಾತಾವರಣ ಅಂದು ಉಳಿಸ್ತಿದ್ರೆ ಈಗಾ ನೀವು ಭಾಜಪಾದ ಶಾಸಕರ ಆಗಿರ್ತಿದ್ರಿ. ಅಂತಾ ಹೇಳಿ ಗೌರವಪೂರ್ವಕವಾಗಿ ಬೀಳ್ಕೊಟ್ಟೆ.

ಕೆಲವರು ಭಾಜಪಾದ ಶಾಸಕರು.. ಕೆಲವರು ಕಾಂಗ್ರೇಸಿನ ಶಾಸಕರು. ಇನ್ನು ಇದೆಲ್ಲಕ್ಕಿಂತ ಬಹಳ ಮೇಲೆ ನಮ್ಮೂರಿನ ಹಾಗೂ ರಾಜ್ಯದ ಶಾಸಕರು ಅನ್ನೋ ಅಂಶ ಇರುತ್ತೆ ಹಾಗೂ ಅದು ಬಹಳ ಗಣನೀಯ ಅಂತಾ..’’

ವರದಿ: ಹರೀಶ ಮಾಂಬಾಡಿ, ಮಂಗಳೂರು

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ಟಿ20 ವರ್ಲ್ಡ್‌ಕಪ್ 2024