Shiradi Road: ಶಿರಾಡಿ ಕಾಂಕ್ರೀಟ್ ರಸ್ತೆಯೇ ಲಗಾಡಿ: ಪ್ರಾಣಸಂಕಟ ನೀಡುವ ದಕ್ಷಿಣ ಕನ್ನಡ ಸಂಪರ್ಕಿಸುವ ಹೆದ್ದಾರಿಯಲ್ಲಿ ಸಂಚಾರ ಹುಷಾರು
ಕನ್ನಡ ಸುದ್ದಿ  /  ಕರ್ನಾಟಕ  /  Shiradi Road: ಶಿರಾಡಿ ಕಾಂಕ್ರೀಟ್ ರಸ್ತೆಯೇ ಲಗಾಡಿ: ಪ್ರಾಣಸಂಕಟ ನೀಡುವ ದಕ್ಷಿಣ ಕನ್ನಡ ಸಂಪರ್ಕಿಸುವ ಹೆದ್ದಾರಿಯಲ್ಲಿ ಸಂಚಾರ ಹುಷಾರು

Shiradi Road: ಶಿರಾಡಿ ಕಾಂಕ್ರೀಟ್ ರಸ್ತೆಯೇ ಲಗಾಡಿ: ಪ್ರಾಣಸಂಕಟ ನೀಡುವ ದಕ್ಷಿಣ ಕನ್ನಡ ಸಂಪರ್ಕಿಸುವ ಹೆದ್ದಾರಿಯಲ್ಲಿ ಸಂಚಾರ ಹುಷಾರು

Shiradi Ghat bad roads ಬೆಂಗಳೂರು-ಮಂಗಳೂರು ನಡುವಿನ ಶಿರಾಡಿ ಘಟ್ಟದ ರಸ್ತೆಗಳ ದುಸ್ಥಿತಿಯನ್ನು ಕಂಡು ಪ್ರವಾಸಿಗರೇ ಸಂಚಾರಕ್ಕೆ ಹೆದರುತ್ತಿದ್ದಾರೆ. ಇಲ್ಲಿದೆ ವಿವರವಾದ ವರದಿ.

ಶಿರಾಡಿ ಘಾಟ್‌ನ ರಸ್ತೆಯ ದುಸ್ಥಿತಿ ಹೀಗಿದೆ.
ಶಿರಾಡಿ ಘಾಟ್‌ನ ರಸ್ತೆಯ ದುಸ್ಥಿತಿ ಹೀಗಿದೆ.

ಮಂಗಳೂರು: ಕ್ರಿಸ್ಮಸ್ ರಜೆ, ಹೊಸ ವರ್ಷಾಚರಣೆ ಹಿನ್ನೆಲೆ ಸಾಲು ಸಾಲು ಪ್ರವಾಸಿಗರ ದಂಡು ಕರಾವಳಿಯತ್ತ ಧಾವಿಸಿ ಬರುತ್ತಿದೆ. ಇದೇ ನೆಪದಲ್ಲಿ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯಗಳಿಗೂ ಮಿತಿಮೀರಿ ಭಕ್ತರ ಸಹಿತ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಬೀಚ್ ಗಳು ತುಂಬಿ ಹೋಗಿದ್ದರೆ, ಮಂಗಳೂರಿನಲ್ಲಿ ಟ್ರಾಫಿಕ್ ಜಾಮ್. ಕರಾವಳಿಯಿಡೀ ಹಬ್ಬದ ವಾತಾವರಣದಲ್ಲಿ ಸಂಭ್ರಮಿಸುತ್ತಿದ್ದರೆ, ಕರಾವಳಿಗೆ ಘಟ್ಟವಿಳಿದು ಬರುವ ವಾಹನ ಚಾಲಕರು ಮಾತ್ರ ಹಿಡಿಶಾಪ ಹಾಕುತ್ತಿದ್ದಾರೆ.

ಕರಾವಳಿಯ ನೆಲದ ಭಾಷೆ ತುಳುವಿನಲ್ಲಿ ಲಗಾಡಿ ಎಂದರೆ ಇನ್ನು ಸುಧಾರಣೆಯಾಗದ ಸ್ಥಿತಿ ತಲುಪುತ್ತಿದೆ ಎಂದರ್ಥ. ಈ ಪದಬಳಕೆ ಮಂಗಳೂರು ಬೆಂಗಳೂರು ಸಾಗುವ ವೇಳೆ ಶಿರಾಡಿ ಘಾಟಿಯಲ್ಲಿ ಸಂಚರಿಸುವ ಸಂದರ್ಭ ವಾಹನ ಚಾಲಕರಿಂದ ಯಥೇಚ್ಛವಾಗಿ ಬಳಕೆಯಾಗುತ್ತದೆ. ತುಳು ಭಾಷಿಕರು ಹೇಳುವುದು ಹೀಗೆ "ಎಂಚಿನ ಮಾರ್ರೆ ರೋಡು ಪೂರ್ತಿ ಲಗಾಡಿ" ಅಂದರೆ, ‘’ಏನಿದು? ರಸ್ತೆ ಪೂರ್ತಿ ಹಾಳಾಗಿ ಹೋಗಿದೆ.’’

ಕಾರಣ ಇಷ್ಟೇ..ಡಾಂಬರು ಆಗಾಗ ಹಾಳಾಗುತ್ತದೆ ಎಂದು ಅದು ಬೇಡವೇ ಬೇಡ, ದಪ್ಪ ಕಾಂಕ್ರೀಟ್ ಹಾಕ್ತೇವೆ ಎಂದು ಯೋಜನೆ ರೂಪಿಸಿ ಹಾಕಿದ ಕಾಂಕ್ರೀಟ್ ಕೂಡಾ ಹಾಳಾಗಿ ಹೋಗಿದೆ. ಕಾಂಕ್ರೀಟ್ ಬಹಳಷ್ಟು ವರ್ಷ ಬಾಳಿಕೆ ಬರಬಹುದು ಎಂಬ ನಂಬಿಕೆ ಕುಸಿದಿದೆ‌.

ಮಂಗಳೂರು-ಹಾಸನ ರಸ್ತೆ ಪ್ರಯಾಣ ಸಂಕಷ್ಟ

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಹಾಸನವರೆಗಿನ ಪ್ರಯಾಣದಲ್ಲಿ ಬಿ.ಸಿ.ರೋಡ್ ನಿಂದ ಅಡ್ಡಹೊಳೆಯವರೆಗೆ ರಸ್ತೆ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಇನ್ನೊಂದೆಡೆ ಈಗಾಗಲೇ ತಿಂಗಳುಗಟ್ಟಲೆ ರಸ್ತೆ ಬಂದ್ ಮಾಡಿ ಕಾಂಕ್ರೀಟ್ ಕಾಮಗಾರಿ ನಿರ್ವಹಿಸಿ ಭರ್ಜರಿಯಾಗಿಯೇ ಉದ್ಘಾಟನೆಗೊಂಡಿದ್ದ ಶಿರಾಡಿ ಘಾಟಿಯ ಕಾಂಕ್ರೀಟ್ ರಸ್ತೆಯನ್ನು ಯಾರೋ ಹಾರೆ ಪಿಕ್ಕಾಸಿನಿಂದ ಅಗೆದು ಗುಂಡಿ ಮಾಡಿದರೆ ಹೇಗಿರುತ್ತದೋ ಹಾಗೆ ಕಿತ್ತು ಹೋಗಿದೆ. ಹೀಗಾಗಿ ಸಕಲೇಶಪುರದಿಂದ ಬಿ.ಸಿ.ರೋಡ್ ವರೆಗೆ ರಸ್ತೆ ಪ್ರಯಾಣ ಅತ್ಯಂತ ತ್ರಾಸದಾಯಕವಾಗಿದ್ದು, ಪ್ರಯಾಣಿಕರ ಮೈಕೈ ನೋಯುವುದಷ್ಟೇ ಅಲ್ಲ, ವಾಹನಗಳ ಮೇಲ್ಮೈ ಹಾಗೂ ಕ್ಷಮತೆಗೆ ಏಟು ಕೊಟ್ಟಂತಾಗುತ್ತದೆ.

ಶಿರಾಡಿ ಘಾಟ್ ನಲ್ಲಿ ಏನಾಗಿದೆ

ಮಂಗಳೂರಿನಿಂದ ಬೆಂಗಳೂರಿಗೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಇವರಲ್ಲಿ ವಾರಕ್ಕೊಮ್ಮೆ, ವಾರಕ್ಕೆರಡು ಬಾರಿ ಹೋಗಿ ಬರುವವರು ಹಲವರಿದ್ದಾರೆ. ವರ್ಕ್ ಫ್ರಂ ಹೋಂ ಪದ್ಧತಿ ಬಂದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳು ಬೆಂಗಳೂರಿಗೆ ವಾರಕ್ಕೆರಡು ಬಾರಿ ಬಸ್ಸಿನಲ್ಲೋ ಅಥವಾ ತಿಂಗಳಿಗೆರಡು ಬಾರಿ ಕಾರಿನಲ್ಲೋ ಹೋಗಿ ಬರುವವರಿದ್ದಾರೆ. ಕೆಲವರು ವೀಕೆಂಡ್ ನಲ್ಲಿ ಊರಿಗೆ ಬಂದು ಮತ್ತೆ ಬೆಂಗಳೂರಿಗೆ ಹೋಗುವವರೂ ಇದ್ದಾರೆ. ಅಂಥವರೊಬ್ಬರು ಶಿರಾಡಿ ಘಾಟ್ ನಲ್ಲಿನ ನೈಜ ಚಿತ್ರಣವನ್ನು ಸೆರೆಹಿಡಿದು, ಟ್ವೀಟ್ ಮಾಡಿದ್ದಾರೆ. ಹಿಂದೆಯೂ ಶಿರಾಡಿ ಘಾಟ್ ಸಂಪೂರ್ಣ ಹದಗೆಟ್ಟು ಹೋಗಿದ್ದಾಗ ಹ್ಯಾಷ್ ಟ್ಯಾಗ್ ಸೇವ್ ಎನ್.ಎಚ್. 75 (#saveNH75) ಅಭಿಯಾನವನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಬಲ ಮಾಧ್ಯಮವಾದ ಆಗಿನ ಟ್ವಿಟ್ಟರ್ ನಲ್ಲಿ ಮಾಡಿ ಗಮನ ಸೆಳೆದಿದ್ದರು. ಇದು ಕೇಂದ್ರ ಸಚಿವರು ಈ ಕುರಿತು ಗಮನಹರಿಸುವಂತೆ ಮಾಡಿತ್ತು. ಮಾಧ್ಯಮಗಳಲ್ಲಿ ಈ ಕುರಿತು ವರದಿಗಳೂ ಆಗಿದ್ದವು. ಇವರ ಹೆಸರು ಗೋಪಾಲ ಪೈ.

ಇದೀಗ ಮತ್ತೆ ಅವರು ಇಂಥದ್ದೊಂದು ಅಭಿಯಾನ ಮಾಡಲು ಪ್ರೇರೇಪಣೆಯಾದದ್ದು ಇತ್ತೀಚಿನ ಕೆಲ ದಿನಗಳಲ್ಲಿ ಶಿರಾಡಿ ರಸ್ತೆಯಲ್ಲಿ ಕಂಡುಬಂದ ಹೊಂಡಗಳು. ಶಿರಾಡಿಯ ಕಾಂಕ್ರೀಟ್ ರಸ್ತೆಯುದ್ದಕ್ಕೂ ಇಂಥ ಅನಿರೀಕ್ಷಿತ ಗುಂಡಿಗಳಿವೆ. ಹೆಗ್ಗದ್ದೆಯಿಂದ 300 ಮೀಟರ್ ನಲ್ಲಿ ಮಂಗಳೂರು ಕಡೆ ಬರುವಾಗ ಚೌಡೇಶ್ವರಿ ದೇವಸ್ಥಾನದ ಬಳಿ ಮೂರು ಹೊಂಡಗಳಿವೆ ಅವುಗಳ ಚಿತ್ರಗಳನ್ನು ಹಾಕಿದ್ದೇನೆ ಎಂದಿರುವ ಗೋಪಾಲ ಪೈ, ಇದನ್ನು x ನಲ್ಲಿ ಶೇರ್ ಮಾಡಿದ್ದಾರೆ. ಅದರ ಲಿಂಕ್ ಇಲ್ಲಿದೆ.

ಗುಂಡ್ಯ – ಧರ್ಮಸ್ಥಳ ರಸ್ತೆಯೂ ಸರಿ ಇಲ್ಲ

ಗುಂಡ್ಯದಿಂದ ಧರ್ಮಸ್ಥಳಕ್ಕೆ ಸೌತಡ್ಕ ಮಾರ್ಗವಾಗಿ ತಿರುಗುವ ರಸ್ತೆಯೂ ಹಾಳಾಗಿ ಹೋಗಿದೆ. ಈಗ ಅಲ್ಲಲ್ಲಿ ತೇಪೆ ಹಾಕುವ ಕಾರ್ಯ ಆರಂಭವಾಗಿದೆಯಾದರೂ ಅನಿರೀಕ್ಷಿತವಾಗಿ ದೊಡ್ಡ ಗುಂಡಿಗಳು ಎದ್ದು ಕಾಣಿಸುತ್ತವೆ. ಸಾಮಾನ್ಯವಾಗಿ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ತೆರಳುವ ಯಾತ್ರಾರ್ಥಿಗಳು ಹೆದ್ದಾರಿಯಿಂದ ಈ ರಾಜ್ಯರಸ್ತೆಗೆ ಬರುತ್ತಾರೆ. ಈ ರಸ್ತೆ ಹಾಸನ ಮಂಗಳೂರು ಹೆದ್ದಾರಿಗೂ ಉಜಿರೆ ಮೂಲಕ ಚಾರ್ಮಾಡಿ ಘಾಟಿಯ ರಸ್ತೆಗೂ ಸಂಪರ್ಕ ಕಲ್ಪಿಸುತ್ತದೆ. ಆದರೂ ಶಿರಾಡಿಯಿಂದ ಮಂಗಳೂರಿಗೆ ಬರುವವರು ಗುಂಡ್ಯ ದಾಟಿದ ಬಳಿಕ ಈ ರಸ್ತೆಯಲ್ಲಿ ಸಾಗಿ, ಬಳಿಕ ಪುಂಜಾಲಕಟ್ಟೆ ಮಾರ್ಗವಾಗಿ ಬಿ.ಸಿ.ರೋಡಿಗೆ ಬಂದು ಮಂಗಳೂರು ಕಡೆ ಸಾಗುತ್ತಾರೆ. ಇದಕ್ಕೆ ಕಾರಣಗಳು ಇವು.

ನೆಲ್ಯಾಡಿ, ಉಪ್ಪಿನಂಗಡಿ, ಬಿ.ಸಿ.ರೋಡ್ ರಸ್ತೆ ಹಾಳು

ಗುಂಡ್ಯದಿಂದ ನೇರವಾಗಿ ಉಪ್ಪಿನಂಗಡಿ ಮೂಲಕ ಬಿ.ಸಿ.ರೋಡ್ ಕಡೆ ಸಾಗಿ ಮಂಗಳೂರಿಗೆ ಬಂದು ತಲುಪಿದಿರಿ ಎಂದರೆ ಹೋದ ಜೀವ ಮರಳಿ ಬಂದಂತಾಗುತ್ತದೆ. ಏಕೆಂದರೆ ಇಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ರಸ್ತೆ ಹೊಂಡ, ಡೈವರ್ಶನ್ ಹಾಗೂ ಧೂಳಿನ ಸ್ನಾನವಾಗುತ್ತದೆ. ವಾಹನದ ಯಾವುದಾದರೂ ಒಂದು ಭಾಗದಿಂದ ಧೂಳು ಒಳಗೆ ಸೇರುವಷ್ಟು ಧೂಳೆಬ್ಬಿಸುವ ರಸ್ತೆ ಇದು. ಇದರಲ್ಲಿ ಮಾಣಿ, ಕಲ್ಲಡ್ಕ ಭಾಗದಲ್ಲಿ ನೀವು ಸಂಚರಿಸುವವರಾದರೆ, ಸಮಯ ಹೆಚ್ಚೇ ಇಟ್ಟುಕೊಳ್ಳಬೇಕು. ಏಕೆಂದರೆ, ಕಲ್ಲಡ್ಕದಲ್ಲಿ ಚತುಷ್ಪಥ ರಸ್ತೆ ಭರದಿಂದ ಸಾಗುತ್ತಿದ್ದು, ಅಲ್ಲಿ ಇರುವ ಸರ್ವೀಸ್ ರಸ್ತೆಯ ಅರ್ಧ ಭಾಗವನ್ನೂ ನುಂಗಿದೆ. ಇನ್ನು ಕಲ್ಲಡ್ಕದಲ್ಲಿ ಜಗತ್ಪ್ರಸಿದ್ಧ ಚಹ ಸೇವನೆ ಮಾಡಲು ನೀವು ವಾಹನಗಳನ್ನು ನಿಲ್ಲಿಸುವಿರಾದರೆ ನಿಮ್ಮ ರಿಸ್ಕ್..

(ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)

Whats_app_banner