ಮಂಗಳೂರಿನಲ್ಲಿ ಎಕ್ಸ್‌ಪ್ರೆಸ್ ಬಸ್ ಡಿಕ್ಕಿಯಾಗಿ ಬ್ಯಾಂಡ್ ವಾದಕ ಸಾವು; ಕ್ಯಾಂಟಿನ್‌ಗೆ ಕಾರು ನುಗ್ಗಿ ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
Mangalore News: ಎಕ್ಸ್‌ಪ್ರೆಸ್ ಬಸ್ ಡಿಕ್ಕಿಯಾಗಿ ಬ್ಯಾಂಡ್ ವಾದಕ ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆಡಿದೆ. ಕ್ಯಾಂಟಿನ್‌ಗೆ ಕಾರು ಡಿಕ್ಕಿ ಹೊಡೆದ ಮೂವರು ಗಾಯಗೊಂಡಿದ್ದಾರೆ. ಇತರ ಅಪರಾಧಗಳ ಸುದ್ದಿಗಳ ವಿವರ ಇಲ್ಲಿದೆ.

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ತೇಕಲ್‌ತೋಟದ ಬಳಿ ಎಕ್ಸ್‌ಪ್ರೆಸ್ ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕಟಪಾಡಿ ತೇಕಲತೋಟದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಕುಮಾರ್ (55) ಮೃತ ದುರ್ದೈವಿ. ಮೂಲತಃ ಉಡುಪಿಯ ಕೆಮ್ಮಣ್ಣು ತೋನ್ಸೆ ಮೂಲದ ಕುಮಾರ್ ಕಳೆದ ಹಲವು ವರ್ಷಗಳಿಂದ ಬ್ಯಾಂಡ್ ವಾದಕರ ತಂಡದಲ್ಲಿ ಕೆಲಸ ಮಾಡಿಕೊಂಡು ತೇಕಲ್‌ತೋಟದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರುು. ವಿವಾಹಿತನಾಗಿದ್ದ ಮೃತ ಕುಮಾರ್ ಪತ್ನಿ ಮತ್ತು ವಿದೇಶದಲ್ಲಿರುವ ಮಗಳನ್ನು ಅಗಲಿದ್ದಾರೆ. ಶುಕ್ರವಾರ (ಏಪ್ರಿಲ್ 12) ಸಂಜೆ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ರಸ್ತೆಯ ಪಶ್ಚಿಮ ಬದಿಯಲ್ಲಿ ರಿಕ್ಷಾದಲ್ಲಿ ಬಂದಿಳಿದು ಹೆದ್ದಾರಿಯ ಮತ್ತೊಂದು ಮಗ್ಗುಲಿನಲ್ಲಿರುವ ತನ್ನ ಬಾಡಿಗೆ ಮನೆಯತ್ತ ಹೋಗುತ್ತಿದ್ದಾಗ ಉಡುಪಿಯಿಂದ ಮಂಗಳೂರಿನತ್ತ ಧಾವಿಸುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಕುಮಾರ್ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅಪಘಾತದ ಬಳಿಕ ಬಸ್ ಡಿವೈಡರ್ ಮೇಲೇರಿ ನಿಂತಿದ್ದು ಹೆದ್ದಾರಿ ಸಂಚಾರ ಸಂಪೂರ್ಣ ವೃತ್ಯಯಗೊಂಡು ಕೆಲವು ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಧಾವಿಸಿದ ಕಟಪಾಡಿ ಉಪಠಾಣೆಯ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕ್ಯಾಂಟಿನ್‌ಗೆ ನುಗ್ಗಿದ ಕಾರು; ಮಾಲೀಕ ಸೇರಿ ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
ಸುಳ್ಯ ಸಮೀಪ ಪೆರಾಜೆಯ ಮಸೀದಿ ಬಳಿ ಇರುವ ಕ್ಯಾಂಟಿನ್‌ಗೆ ಕಾರೊಂದು ನುಗ್ಗಿದ ಪರಿಣಾಮ ಮೂರು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ (ಏಪ್ರಿಲ್ 12) ಸಂಜೆ ನಡೆದಿದೆ. ಮಡಿಕೇರಿ ಕಡೆಯಿಂದ ಬಂದ ಕಾರು ರಸ್ತೆ ಬದಿಯ ಕ್ಯಾಂಟಿನ್‌ಗೆ ನುಗ್ಗಿ ಡಿಕ್ಕಿ ಹೊಡೆದ ಕಾರಣ ಚಹಾ ಕುಡಿಯುತ್ತಿದ್ದ ಇಬ್ಬರು ಹಾಗೂ ಕ್ಯಾಂಟಿನ್ ಮಾಲಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪೆರಾಜೆ ಪೀಚೆಯ ಲಿಖಿತ್, ಪೀಚೆ ಸುಮನ್ ಹಾಗೂ ಹೋಟೆಲ್ ಮಾಲಕ ನೌಫಲ್ ಎಂದು ಗುರುತಿಸಲಾಗಿದೆ.
ಅರಂತೋಡು ಕಡೆಗೆ ಹೋಗಿದ್ದ ಪೀಚೆ ಮನೆ ಲಿಖಿತ್ ಮತ್ತು ಸುಮನ್ ನೌಫಲ್ ರ ಹೋಟೆಲ್‌ನಲ್ಲಿ ಚಹಾ ಕುಡಿಯುತ್ತಿದ್ದ ವೇಳೆ ವೇಗವಾಗಿ ಬಂದ ರಿಡ್ಜ್ ಕಾರು ಕ್ಯಾಂಟಿನ್ ಗೆ ನುಗ್ಗಿ ಅನಾಹುತ ಆಗಿದೆ. ಗಾಯಳುಗಳನ್ನು ಸುಳ್ಯದ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಲಿಖಿತ್ ಪೀಚೆ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪಾದಚಾರಿಗೆ ಬೈಕ್ ಡಿಕ್ಕಿ; ಇಬ್ಬರಿಗೆ ಗಾಯ
ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಪಾದಚಾರಿ ಸಹಿತ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಶುಕ್ರವಾರ ರಾತ್ರಿ (ಏಪ್ರಿಲ್ 12) ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ಪಡುಬಿದ್ರಿ ಶ್ರೀ ದೇವಿ ಹೋಟೆಲ್ ಮುಂಭಾಗ ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಮಂಗಳೂರು ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಬಳಿಕ ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿಯಾಗಿತ್ತು. ಇಬ್ಬರು ಬೈಕ್ ಸವಾರು ಸೇರಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರು ತೀವ್ರವಾಗಿ ಗಾಯಗೊಂಡ ಕಾರಣ ಹೆಚ್ಚಿನ ಚಿಕಿತ್ಸೆಗೆ ಮುಕ್ಕ ಆಸ್ಪತ್ರೆಗೆ ರವಾನಿಸಲಾಗಿದೆ. ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
