Mangalore News: ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಮಂಗಳೂರಿನ ಮನೆ ಮೇಲೆ ಕಲ್ಲು ತೂರಾಟ, ವಸ್ತುಗಳು ಜಖಂ
Attack on MLC House ಮಂಗಳೂರಿನಲ್ಲಿರುವ ವಿಧಾನಪರಿಷತ್ ಸದಸ್ಯ ಇವಾನ್ ಡಿಸೋಜಾ(MLC Ivan Dsouza) ನಿವಾಸದ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.ವರದಿ: ಹರೀಶ ಮಾಂಬಾಡಿ.ಮಂಗಳೂರು
ಮಂಗಳೂರು: ರಾಜ್ಯಪಾಲರ ವಿರುದ್ಧದ ಎಂಎಲ್‌ಸಿ ಐವನ್ ಡಿಸೋಜಾ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿರುದ್ಧ ಈಗಾಗಲೇ ಪ್ರತಿರೋಧಗಳು ವ್ಯಕ್ತವಾಗಿದ್ದವು. ಅದೀಗ ವಿಕೋಪಕ್ಕೆ ತೆರಳಿದೆ. ಬುಧವಾರ ರಾತ್ರಿ 11ಗಂಟೆ ಸುಮಾರಿಗೆ ಐದಾರು ಮಂದಿ ದುಷ್ಕರ್ಮಿಗಳಿದ್ದ ತಂಡ ಐವನ್ ಮನೆಗೆ ಕಲ್ಲು ತೂರಾಡಿ ಪರಾರಿಯಾಗಿದ್ದಾರೆ. ಆದರೆ ಈ ಕೃತ್ಯ ನಡೆಸಿದವರು ಯಾರು ಎಂಬುದು ಇನ್ನೂ ಗೊತ್ತಾಗಬೇಕಷ್ಟೇ. ಸುಮಾರು 5ರಿಂದ 6ಮಂದಿಯಿದ್ದ ತಂಡ ರಾತ್ರಿ 11ಗಂಟೆ ಸುಮಾರಿಗೆ ವೆಲೆನ್ಸಿಯಾದಲ್ಲಿರುವ ಐವನ್ ಡಿಸೋಜರ ಮನೆ ಬಳಿ ಹೆಲ್ಮೆಟ್ ಧರಿಸಿ ಬಂದಿದ್ದಾರೆ. ಕಲ್ಲು ತೂರಾಡಿ ಘೋಷಣೆಗಳನ್ನು ಕೂಗಿ ಪರಾರಿಯಾಗಿದೆ ಎನ್ನಲಾಗಿದೆ.
ಈ ಸಂದರ್ಭ ಐವನ್ ಡಿಸೋಜ ಮನೆಯಲ್ಲಿರದೆ ಬೆಂಗಳೂರಿನಲ್ಲಿ ಪಕ್ಷದ ಮೀಟಿಂಗ್‌ಗೆಂದು ಹೋಗಿದ್ದರು ಎನ್ನಲಾಗಿದೆ.
ಒಮ್ಮೆ ಕಲ್ಲು ತೂರಾಟ ನಡೆಸಿ ನಂತರ 2 ನಿಮಿಷ ಬಿಟ್ಟು ಮತ್ತೆ ಬೈಕ್ ನಲ್ಲಿ ಬಂದ ಯುವಕರು ಕಲ್ಲು ತೂರಾಟ ಮುಂದುವರಿಸಿದ್ದಾರೆ. ಇದರಿಂದ ಐವನ್ ಮನೆಯ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಯಾವುದೇ ಹಾನಿಯಾಗಿಲ್ಲ ವೆಂದು ಹೇಳಲಾಗಿದೆ. ಸದ್ಯ ಅವರ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಐವನ್ ಬಂಧನಕ್ಕೆ 24 ತಾಸು ಗಡುವು
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವಿರುದ್ದ ಪ್ರಕರಣ ದಾಖಲಿಸಲು ಬಿಜೆಪಿ ಯುವ ಮೋರ್ಚಾ ಪೊಲೀಸರಿಗೆ 24 ಗಂಟೆಗಳ ಗಡುವು ನೀಡಿದೆ. ಎಫ್ ಐ ಆರ್ ದಾಖಲಿಸಬೇಕು ಎಂದು ಒತ್ತಾಯಿಸಲು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಆ.21ರ ಬುಧವಾರ ಬರ್ಕೆ ಠಾಣೆಗೆ ಆಗಮಿಸಿದರು. ಎಸಿಪಿ ಪ್ರತಾಪ ಸಿಂಗ್ ಥೋರಟ್ ಅವರ ಜತೆ ಮೋರ್ಚಾ ಪದಾಧಿಕಾರಿಗಳು ಮಾತುಕತೆ ನಡೆಸಿದರು.
ಪೊಲೀಸರು ಇನ್ನೂ ಕೂಡ ಕಾನೂನು ಅಭಿಪ್ರಾಯ ಪಡೆಯಬೇಕಾಗಿದೆ ಎನ್ನುತ್ತಿದ್ದಾರೆ. ಹಾಗಾಗಿ ಮತ್ತೆ ಗಡುವು ನೀಡಿದ್ದೇವೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ತಿಳಿಸಿದರು.
ಐವನ್ ವಿರುದ್ಧ ಆರೋಪವೇನು?
ಮೂಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ನಡೆಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಮಂಗಳೂರು ಪಾಲಿಕೆಯ ಮುಂಭಾಗ ಕಾಂಗ್ರೆಸ್ ನಡೆಸುತ್ತಿರುದ್ದ ಪ್ರತಿಭಟನೆ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ರಾಜ್ಯಪಾಲರ ವಿರುದ್ಧ ಪ್ರಚೋದನಕಾರಿ ಹಾಗೂ ದಂಗೆ ಎಬ್ಬಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದು ಇದರ ಈ ಹೇಳಿಕೆ ವಿರುದ್ಧ ಅಖಿಲೇಶ್ ಎಂಬುವವರು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಅದರಂತೆ ಬರ್ಕೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
(ವರದಿ: ಹರೀಶ ಮಾಂಬಾಡಿ.ಮಂಗಳೂರು)