ಕನ್ನಡ ಸುದ್ದಿ  /  ಕರ್ನಾಟಕ  /  ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ಇನ್ನಿಲ್ಲ -Kumble Sridhar Rao

ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ಇನ್ನಿಲ್ಲ -Kumble Sridhar Rao

ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರು ವಿಧಿವಶರಾಗಿದ್ದಾರೆ. ಪುತ್ತೂರಿನಲ್ಲಿ ಶುಕ್ರವಾರ ನಿಧನ ಹೊಂದಿದ್ದಾರೆ. 76ರ ಹರೆಯದ ಶ್ರೀಧರ ರಾವ್ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಬೇರಿಕೆ ಎಂಬಲ್ಲಿ ನೆಲೆಸಿದ್ದರು. (ವರದಿ: ಹರೀಶ್ ಮಾಂಬಾಡಿ)

ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ವಿಧಿವಶ -Kumble Sridhar Rao
ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ವಿಧಿವಶ -Kumble Sridhar Rao

ಮಂಗಳೂರು: ಕರಾವಳಿಯ ಪ್ರಸಿದ್ಧ ಕಲಾಪ್ರಕಾರವಾದ ಯಕ್ಷಗಾನದ ತೆಂಕುತಿಟ್ಟು ಮೇಳಗಳಲ್ಲಿ ಪ್ರಸಿದ್ಧಿ ಹೊಂದಿ, ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ (Kumble Sridhar Rao) ವಿಧಿವಶರಾಗಿದ್ದಾರೆ. ಪುತ್ತೂರಿನಲ್ಲಿ ಶುಕ್ರವಾರ (ಜುಲೈ 5) ನಿಧನ ಹೊಂದಿದ್ದಾರೆ. 76ರ ಹರೆಯದ ಶ್ರೀಧರ ರಾವ್ ಅವರು ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಬೇರಿಕೆ ಎಂಬಲ್ಲಿ ನೆಲೆಸಿದ್ದರು. ಮುಂಜಾನೆ ತೀವ್ರ ಎದೆನೋವು ಕಾಣಿಸಿದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಮಾರು ಆರು ದಶಕಗಳಷ್ಟು ಕಾಲ ಯಕ್ಷರಂಗಭೂಮಿಯಲ್ಲಿ ಕಲಾವಿದ್ವತ್ ಪ್ರದರ್ಶಿಸಿ ಪ್ರಖ್ಯಾತರಾಗಿದ್ದರು. ಪತ್ನಿ, ಪತ್ರಕರ್ತ ಗಣೇಶ್ ಪ್ರಸಾದ್ ಸೇರಿದಂತೆ ಮೂವರು ಪುತ್ರರನ್ನು ಅಗಲಿದ್ದಾರೆ.

ಧರ್ಮಸ್ಥಳ ಮೇಳದಲ್ಲಿ ಸ್ತ್ರೀಪಾತ್ರಗಳಲ್ಲಿ ಮಿಂಚಿದ್ದ ಕುಂಬಳೆ ಶ್ರೀಧರ ರಾವ್

ಕುಂಬಳೆ ಶ್ರೀಧರ ರಾವ್ ಅವರು ಧರ್ಮಸ್ಥಳ ಕ್ಷೇತ್ರದ ಯಕ್ಷಗಾನ ಮಂಡಳಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದವರು. ಅವರು ಗರತಿ ಸ್ತ್ರೀ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಬಳಿಕ ಕಿರೀಟ ವೇಷಗಳಲ್ಲಿ ಅವರು ಮಿಂಚಿದರು. 1948 ರಲ್ಲಿ ಕಾಸರಗೋಡು ಜಿಲ್ಲೆಯ ಕುಂಬ್ಳೆಯಲ್ಲಿ ಮಹಾಲಿಂಗ ಮತ್ತು ಕಾವೇರಿ ದಂಪತಿಗಳ ಮಗನಾಗಿ ಜನಿಸಿದ ಇವರು, ಎಳವೆಯಲ್ಲೇ ಯಕ್ಷಗಾನದತ್ತ ಆಕರ್ಷಿತರಾಗಿ ಇರಾ, ಮೂಲ್ಕಿ, ಕೂಡ್ಲು, ಕರ್ನಾಟಕ, ಧರ್ಮಸ್ಥಳ ಮೇಳಗಳಲ್ಲಿ ಒಟ್ಟು ಆರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಕುಂಬ್ಳೆ ಕಮಲಾಕ್ಷ ನಾಯಕ್‍ರಲ್ಲಿ ನಾಟ್ಯಾಭ್ಯಾಸ ಹಾಗೂ ಶೇಣಿ ಗೋಪಾಲಕೃಷ್ಣ ಭಟ್ಟರಿಂದ ಅರ್ಥಗಾರಿಕೆಯನ್ನು ಕಲಿತು, 13ನೇ ವಯಸ್ಸಿನಲ್ಲಿಯೇ ಕಲಾ ಸೇವೆಯನ್ನು ಆರಂಭಿಸಿದ ಇವರು ಕುಂಡಾವು, ಕೂಡ್ಲು, ಮುಲ್ಕಿ, ಕರ್ನಾಟಕ ಹಾಗೂ ದೀರ್ಘ ಕಾಲ ಧರ್ಮಸ್ಥಳ ಮೇಳ ಹೀಗೆ ನಿರಂತರ ಆರು ದಶಕಗಳ ಕಾಲ ಕಲಾಸೇವೆಗೈದಿದ್ದರು. ಈ ಪೈಕಿ 40 ವರ್ಷಗಳಿಗೂ ಮಿಕ್ಕಿ ಧರ್ಮಸ್ಥಳ ಮೇಳವೊಂದರಲ್ಲೇ ನಿರಂತರ ಸೇವೆ ಸಲ್ಲಿಸಿದ ಇವರು, ಸ್ತ್ರೀ ವೇಷಧಾರಿಯಾಗಿ ಪ್ರಸಿದ್ದರಾಗಿದ್ದರು. ಅಂತೆಯೇ ಪುರುಷ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡಿದ್ದರು.

ಟ್ರೆಂಡಿಂಗ್​ ಸುದ್ದಿ

ಆರಂಭದಲ್ಲಿ ಸ್ತ್ರೀ ವೇಷ, ಪುಂಡು ವೇಷಗಳನ್ನು ಮಾಡುತ್ತಿದ್ದು, ಅನಂತರ ರಾಜ ವೇಷಗಳನ್ನೇ ಹೆಚ್ಚಾಗಿ ಮಾಡುತ್ತಿದ್ದರು. ದಮಯಂತಿ, ಚಂದ್ರಮತಿ, ಸೀತೆ, ಶ್ರೀದೇವಿ, ಅಮ್ಮು ಬಳ್ಳಾಲ್ತಿ, ಶ್ರೀರಾಮ, ಶ್ರೀಕೃಷ್ಣ, ಅರ್ಜುನ, ಕರ್ಣ, ಭೀಷ್ಮ, ಧರ್ಮರಾಯ ಮೊದಲಾದ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯಲ್ಲಿ ಈಶ್ವರ, ಸೀತಾ ಪರಿತ್ಯಾಗದಲ್ಲಿನ ಸೀತಾ, ಲಕ್ಷ್ಮಣ, ಶ್ರೀ ದೇವಿ ಮಹಾತ್ಮೆಯಲ್ಲಿನ ಶ್ರೀ ದೇವಿ ಮೊದಲಾದ ಪಾತ್ರಗಳ ಮೂಲಕ ಪ್ರಸಿದ್ದಿಯನ್ನು ಪಡೆದ ಇವರು, ಯಕ್ಷಗಾನ ದಿಗ್ಗಜ ಶೇಣಿಯವರ ರಾವಣ, ವಾಲಿ ಪಾತ್ರಗಳಿಗೆ ಮಂಡೋದರಿ, ತಾರೆಯಾಗಿಯೂ ಪಾತ್ರಗಳನ್ನು ಮಾಡಿರುತ್ತಾರೆ.

ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಗೌರವಕ್ಕೆ ಪಾತ್ರರಾಗಿರುವ ಕುಂಬ್ಳೆ ಶ್ರೀಧರ ರಾಯರು ದುಬಾಯಿ, ಬೆಹರಿನ್‍ಗಳಲ್ಲಿಯೂ ವೇಷಗಳನ್ನು ಮಾಡಿದ್ದಾರೆ. ಇವರ ಕಲಾ ಸೇವೆಯನ್ನು ಪರಿಗಣಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀ ಕ್ಷ್ರೇತ್ರ ಧರ್ಮಸ್ಥಳದ ಸನ್ಮಾನ, ಎಡನೀರು ಮಠದ ಸನ್ಮಾನ ಸೇರಿದಂತೆ ಹಲವಾರು ಗೌರವಾದಗಳು ಲಭಿಸಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಯಕ್ಷಗಾನ ಕಲಾರಂಗ ಸೇರಿದಂತೆ ವಿವಿಧ ಸಂಘಟನೆಗಳು ಇವರ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ. (ವರದಿ: ಹರೀಶ್ ಮಾಂಬಾಡಿ)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)