ನವರಾತ್ರಿ ವಿಶೇಷ: ಮಂಗಳೂರಿನಲ್ಲಿ ಹುಲಿವೇಷ ತಂಡ ಕಟ್ಟಿದ ಬಾಲಕ, ಎರಡನೇ ವರ್ಷದ ಕುಣಿತಕ್ಕೆ ಸಿದ್ಧತೆ-mangalore news tiger dance on dasara occasion a boy has formed a tiger costume team ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ನವರಾತ್ರಿ ವಿಶೇಷ: ಮಂಗಳೂರಿನಲ್ಲಿ ಹುಲಿವೇಷ ತಂಡ ಕಟ್ಟಿದ ಬಾಲಕ, ಎರಡನೇ ವರ್ಷದ ಕುಣಿತಕ್ಕೆ ಸಿದ್ಧತೆ

ನವರಾತ್ರಿ ವಿಶೇಷ: ಮಂಗಳೂರಿನಲ್ಲಿ ಹುಲಿವೇಷ ತಂಡ ಕಟ್ಟಿದ ಬಾಲಕ, ಎರಡನೇ ವರ್ಷದ ಕುಣಿತಕ್ಕೆ ಸಿದ್ಧತೆ

ನವರಾತ್ರಿ ಬಂತೆಂದರೆ,ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹುಲಿವೇಷದ ಸದ್ದುಕೇಳಿಬರುತ್ತದೆ. ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿವೇಷಕ್ಕೆ ಭಾರಿ ಡಿಮಾಂಡ್ ಶುರುವಾಗಿದೆ. ದಶಕಗಳ ಹಿಂದೆ ಹಿರಿಯರ ತಂಡ ವೇಷ ಹಾಕುತ್ತಿದ್ದರೆ,ಈಗ ಬಾಲಕರೂ ಹಿಂದೆ ಉಳಿದಿಲ್ಲ. (ವರದಿ:ಹರೀಶ ಮಾಂಬಾಡಿ,ಮಂಗಳೂರು)

ದಶಕಗಳ ಹಿಂದೆ ಹಿರಿಯರ ತಂಡ ಹುಲಿ ವೇಷ ಹಾಕುತ್ತಿದ್ದರೆ, ಈಗ ಬಾಲಕರೂ ಹಿಂದೆ ಉಳಿದಿಲ್ಲ.
ದಶಕಗಳ ಹಿಂದೆ ಹಿರಿಯರ ತಂಡ ಹುಲಿ ವೇಷ ಹಾಕುತ್ತಿದ್ದರೆ, ಈಗ ಬಾಲಕರೂ ಹಿಂದೆ ಉಳಿದಿಲ್ಲ.

ಮಂಗಳೂರು: ನವರಾತ್ರಿ ಬಂತೆಂದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹುಲಿವೇಷದ ಸದ್ದು ಕೇಳಿಬರುತ್ತದೆ. ಅದರಲ್ಲೂ ಹುಲಿಗಳನ್ನು ಕುಣಿಸುವ ತಾಸೆಯ ಪೆಟ್ಟಿನ ಅಬ್ಬರ ತಾರಕಕ್ಕೇರಿದಾಗ ಸುಮ್ಮನೆ ಕುಳಿತವರೂ ನೃತ್ಯ ಮಾಡಲು ಹೊರಡುತ್ತಾರೆ. ವಿಶೇಷವಾಗಿ ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿವೇಷಕ್ಕೆ ಭಾರಿ ಡಿಮಾಂಡ್ ಶುರುವಾಗಿದೆ. ದಶಕಗಳ ಹಿಂದೆ ಹಿರಿಯರ ತಂಡ ವೇಷ ಹಾಕುತ್ತಿದ್ದರೆ, ಈಗ ಬಾಲಕರೂ ಹಿಂದೆ ಉಳಿದಿಲ್ಲ.

ಮಂಗಳೂರು ಹೊರವಲಯದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ಬಾಲಕ, ಸ್ನೇಹಿತರನ್ನು ಕೂಡಿಕೊಂಡು ಹುಲಿವೇಷದ ತಂಡವೊಂದನ್ನು ಕಟ್ಟಿದ್ದು, ಈ ಬಾರಿ 2ನೇ ವರ್ಷದ ಹುಲಿ ಕುಣಿತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಪೊಳಲಿಯ ಗೋಪಾಲ ದೇವಾಡಿಗ ಅವರ ಪುತ್ರ ತನ್ವಿತ್ ಅವರು ಗರುಡ ಫ್ರೆಂಡ್ಸ್ ಪೊಳಲಿ ಎಂಬ ಹೆಸರಿನಲ್ಲಿ ಹುಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷ 2 ದಿನಗಳ ಯಶಸ್ವಿ ಹುಲಿ ಕುಣಿತ ನಡೆದಿದ್ದು, ಈ ಬಾರಿ ಅ. 10 ಹಾಗೂ 11ರಂದು ತಮ್ಮ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಪೊಳಲಿ ತಾಯಿಯಲ್ಲಿ ಪ್ರಾರ್ಥಿಸಿ ಅ. 9ರಂದು ರಾತ್ರಿ ಊದು ಪೂಜೆ (ಹುಲಿವೇಷ ಹೊರಡುವ ಮುನ್ನ ನಡೆಯುವ ಪೂಜೆ) ನಡೆದು 11ರ ರಾತ್ರಿ ಪೊಳಲಿಯಲ್ಲಿ ಸ್ಟೇಜ್ ಪ್ರದರ್ಶನ ನೀಡಲಿದ್ದಾರೆ.

ಜಾತ್ರೆಯ ಸಂತೆ ಆದಾಯ ಬಳಕೆ

ಬಂಟ್ವಾಳ ಸರಕಾರಿ ಪಾಲೆಟೆಕ್ನಿಕ್‌ನಲ್ಲಿ ಡಿಪ್ಲೊಮಾ ಕಲಿಯುತ್ತಿರುವ ತನ್ವಿತ್, ಬಾಲ್ಯದಿಂದಲೂ ಏನಾದರೂ ಸಾಧಿಸಬೇಕು ಎಂದು ಹೊರಟ ಛಲವಂತ ಹುಡುಗ. ಹಲವು ವರ್ಷಗಳಿಂದ ಪೊಳಲಿ ದೇವಸ್ಥಾನದ ಜಾತ್ರೆಯ ಸಂದರ್ಭ ಅಂಗಡಿ ಹಾಕಿ ಒಂದಷ್ಟು ಆದಾಯ ಸಂಪಾದಿಸುತ್ತಿದ್ದ. ಜತೆಗೆ ಕೃಷಿಕರಿಂದ ಕಲ್ಲಂಗಡಿ ಹಣ್ಣನ್ನು ಖರೀದಿಸಿ ಅದನ್ನು ಮಾರಾಟ ಮಾಡಿ ಒಂದಷ್ಟು ಹಣ ಸಂಪಾದಿಸುತ್ತಿದ್ದ. ಈ ರೀತಿ ಸಂಪಾದನೆಯ ಹಣವನ್ನು ಹುಲಿ ಕುಣಿತಕ್ಕೆ ವಿನಿಯೋಗಿಸುತ್ತಿದ್ದಾನೆ. 2022ರಲ್ಲಿ ಈತ ಕರಡಿ ತಂಡವನ್ನು ಇಳಿಸಿ ಪ್ರದರ್ಶನ ನೀಡಿದ್ದನು.

ಕಳೆದ ಪೊಳಲಿ ಜಾತ್ರೆಯಲ್ಲಿ ಅಂಗಡಿ ಹಾಕಿ ಅದರಲ್ಲಿ ಬಂದ ಸುಮಾರು 20 ಸಾವಿರ ರೂ. ಆದಾಯವನ್ನು ಬಳಸಿಕೊಂಡು ಮೊದಲ ವರ್ಷ ಹುಲಿ ತಂಡವನ್ನು ಕಟ್ಟಿ ಪ್ರದರ್ಶನ ನೀಡಿದ್ದಾರೆ. ಕಳೆದ ವರ್ಷ ಒಟ್ಟು 1.5 ಲಕ್ಷ ರೂ. ನಷ್ಟು ಖರ್ಚಾಗಿದ್ದು, ಹುಲಿ ಕುಣಿತದಿಂದ ಬಂದ ಸಂಪಾದನೆ 1.4 ಲಕ್ಷ ರೂ. ಅಂದರೆ ಸುಮಾರು 10 ಸಾವಿರ ರೂ.ಗಳಷ್ಟು ನಷ್ಟ ಉಂಟಾಗಿತ್ತು. ಆದರೂ ಈ ಬಾರಿ ಮತ್ತೆ ಹುಲಿ ಕುಣಿತ ಪ್ರದರ್ಶನದ ಸಾಹಸಕ್ಕೆ ಕೈ ಹಾಕಿದ್ದಾರೆ.

ದಶಕಗಳ ಹಿಂದೆ ಹಿರಿಯರ ತಂಡ ಹುಲಿವೇಷ ಹಾಕುತ್ತಿದ್ದರೆ, ಈಗ ಬಾಲಕರೂ ಹಿಂದೆ ಉಳಿದಿಲ್ಲ.
ದಶಕಗಳ ಹಿಂದೆ ಹಿರಿಯರ ತಂಡ ಹುಲಿವೇಷ ಹಾಕುತ್ತಿದ್ದರೆ, ಈಗ ಬಾಲಕರೂ ಹಿಂದೆ ಉಳಿದಿಲ್ಲ.

ಈ ಬಾರಿ ಡಬಲ್ ಹುಲಿಗಳು!

ಕಳೆದ ವರ್ಷ ಸುಮಾರು 15 ಮಂದಿ ಹುಲಿ ವೇಷ ಹಾಕಿದ್ದು, ತನ್ವಿತ್‌ನ ತಮ್ಮ ಮನ್ವಿತ್ ಸೇರಿ ಇಬ್ಬರು ಪಲ್ಟಿ ಹೊಡೆಯುವ ಸಾಹಸಿಗಳಿದ್ದರು. ಆದರೆ ಈ ಬಾರಿ ಒಂದಷ್ಟು ಇವರ ತಂಡ ಒಂದು ಹೆಜ್ಜೆ ಮುಂದೆ ಹೋಗಿದ್ದು, 30 ಮಂದಿ ಹುಲಿ ವೇಷಧಾರಿಗಳಿದ್ದು, 10 ಮಂದಿ ಪಲ್ಟಿ ಹೊಡೆಯುವವರಿದ್ದಾರೆ. ಈಗಾಗಲೇ ಮೂರು ಭಾನುವಾರಗಳಲ್ಲಿ ಅಭ್ಯಾಸವನ್ನು ಪೂರ್ತಿಗೊಳಿಸಿ ಮುಂದೆ ನವರಾತ್ರಿಯ ಎರಡು ದಿನಗಳಲ್ಲಿ ಸುಮಾರು 100 ಮನೆಗಳನ್ನು ಸಂಪರ್ಕಿಸುವ ಟಾರ್ಗೆಟ್ ಹೊಂದಿದ್ದಾರೆ.

ಹುಲಿಗಳ ತಲೆ ತಯಾರಿಸುವ ತನ್ವಿತ್

ಸಾಮಾನ್ಯವಾಗಿ ಹುಲಿ ತಂಡದವರು ಹುಲಿಯ ತಲೆಯನ್ನು ಬಾಡಿಗೆಗೆ ಪಡೆದು ಪ್ರದರ್ಶನ ನೀಡುತ್ತಾರೆ. ಹೊರಗಿನಿಂದ ತರುವುದಾದರೆ ಸುಮಾರು 15 ರಿಂದ 25 ಸಾವಿರ ರೂ.ಗಳಷ್ಟು ಬಾಡಿಗೆ ಹೇಳುತ್ತಾರೆ. ಆದರೆ ಈ ತಂಡದ ಬಳಿ ಅಷ್ಟು ಹಣ ಇಲ್ಲದೇ ಇರುವುದರಿಂದ ತನ್ವಿತ್ ತಾನೇ ತಲೆಗಳನ್ನು ತಯಾರಿಸಿ ಪ್ರದರ್ಶನಕ್ಕೆ ಬಳಸಿಕೊಳ್ಳುತ್ತಾರೆ. ಒಂದು ತಲೆ ಸಿದ್ಧಗೊಳ್ಳಬೇಕಾದರೆ ಸುಮಾರು ಮೂರ್ನಾಲ್ಕು ದಿನಗಳ ಕೆಲಸವಿದ್ದು, ತಮಗೆ ಬೇಕಾದಷ್ಟು ಹುಲಿಗಳ ತಲೆಗಳು ಈಗಾಗಲೇ ಸಿದ್ಧಗೊಂಡಿವೆ.

mysore-dasara_Entry_Point