Mangalore News: ಅಕ್ರಮ ಗೋಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು, ಹಿಂದೂ ಸಂಘಟನೆಗಳಿಂದ ರಸ್ತೆ ತಡೆದು ಪ್ರತಿಭಟನೆ-mangalore news vehicle carrying illegal cattles hit person died in dakshin kannada hindu activists midnight protest hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಅಕ್ರಮ ಗೋಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು, ಹಿಂದೂ ಸಂಘಟನೆಗಳಿಂದ ರಸ್ತೆ ತಡೆದು ಪ್ರತಿಭಟನೆ

Mangalore News: ಅಕ್ರಮ ಗೋಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು, ಹಿಂದೂ ಸಂಘಟನೆಗಳಿಂದ ರಸ್ತೆ ತಡೆದು ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ಪ್ರಕರಣ ಹೆಚ್ಚುತ್ತಿದ್ದು, ಗೋ ಸಾಗಣೆ ಮಾಡುತ್ತಿದ್ದ ವಾಹನ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ವ್ಯಕ್ತಿ ಸಾವಿನ ಹಿನ್ನೆಲೆಯಲ್ಲಿ ಶಾಸಕರಾದ ಭಾಗೀರಿಥಿ ಮುರುಳ್ಯ, ಹರೀಶ್‌ ಪೂಂಜಾ ಮತ್ತಿತರರ ನೇತೃತ್ವದಲ್ಲಿ ರಾತ್ರಿ ನಡೆದ ಪ್ರತಿಭಟನೆ
ವ್ಯಕ್ತಿ ಸಾವಿನ ಹಿನ್ನೆಲೆಯಲ್ಲಿ ಶಾಸಕರಾದ ಭಾಗೀರಿಥಿ ಮುರುಳ್ಯ, ಹರೀಶ್‌ ಪೂಂಜಾ ಮತ್ತಿತರರ ನೇತೃತ್ವದಲ್ಲಿ ರಾತ್ರಿ ನಡೆದ ಪ್ರತಿಭಟನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳ ನೆಕ್ಕಿತಡ್ಕ ಎಂಬಲ್ಲಿ ಶನಿವಾರ ರಾತ್ರಿ ಉಪ್ಪಿನಂಗಡಿ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಅಕ್ರಮ ದನ ಸಾಗಾಟದ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳೀಯ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ (65) ಎಂಬವರು ಮೃತಪಟ್ಟಿದ್ದಾರೆ.ಈ ವಹಿನ್ನೆಲೆಯಲ್ಲಿ ತಡ ರಾತ್ರಿ ಹಿಂದೂ ಪರ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ಸಲ್ಲಿಸಿದ್ದು. ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿದ್ದಾರೆ. ಘಟನೆಗಕಾರಣವಾದ ಇಬ್ಬರು ಆರೋಪಿಗಳನ್ನು ಕಡಬ ಪೊಲೀಸರು ಈಗಾಲೇ ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ

ಮರ್ಧಾಳ ನೆಕ್ಕಿತ್ತಡ್ಕ ಸಮೀಪದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಎಂಬವರು ಶನಿವಾರ ರಾತ್ರಿ ವೇಳೆಗೆ ತನ್ನ ಕಾರನ್ನು ಮರ್ಧಾಳದಲ್ಲಿ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಸುಬ್ರಹ್ಮಣ್ಯ ಕಡೆಯಿಂದ ಕಡಬ ಕಡೆಗೆ ಅಕ್ರಮ ದನ ಸಾಗಾಟ ಮಾಡುತ್ತಿದ್ದ ಮಾರುತಿ 800 ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿತ್ತು.

ವಿಠಲ ರೈಯವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆರೋಪಿಯು ಕಾರನ್ನು ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಒಳರಸ್ತೆಯಲ್ಲಿ ನಿಲ್ಲಿಸಿ ದನವನ್ನು ಪಕ್ಕದ ತೋಟದಲ್ಲಿ ಕಟ್ಟಿ ಪರಾರಿಯಾಗಿದ್ದ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು‌.

ರಸ್ತೆ ತಡೆ, ಪ್ರತಿಭಟನೆ

ವಿಷಯ ತಿಳಿದು ಹಿಂದೂ ಪರ ಸಂಘಟನೆಗಳು ತಡರಾತ್ರಿ ವೇಳೆಗೆ ಕಡಬದಲ್ಲಿ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಲ್ಲದೆ, ಎಸ್ಪಿ ಸ್ಥಳಕ್ಕಾಗಮಿಸುವಂತೆ ಪಟ್ಟು ಹಿಡಿದಿದ್ದರು.

ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಹಿಂದೂ ಮುಖಂಡ ಅರುಣ್ ಪುತ್ತಿಲ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮೊದಲಾದವರು ಭೇಟಿ ನೀಡಿ ಪ್ರತಿಭಟನಾಕಾರರಿಗೆ ಸಾಥ್ ನೀಡಿದ್ದರು.

ಈ ಭಾಗದಲ್ಲಿ ಅಕ್ರಮವಾಗಿ ದನದ ಸಾಗಾಟ ಜೋರಾಗಿಯೇ ನಡೆದಿದೆ. ಪ್ರಶ್ನಿಸುವವರ ಮೇಲೆಯೇ ದಾಳಿ ಮಾಡುವ ಇಲ್ಲವೇ ಹಲ್ಲೆ ನಡೆಸುವಂತಹ ಸನ್ನಿವೇಶವಿದೆ. ಅದೂ ವಾಹನಗಳು ಎಗ್ಗಿಲ್ಲದೇ ಸಂಚರಿಸುವುದರಿಂದ ಪೊಲೀಸರೂ ಏನು ಮಾಡದಂತಾಗಿದೆ. ಅಲ್ಲದೇ ಹೀಗೆ ದನ ಸಾಗಿಸಿಕೊಂಡು ವೇಗವಾಗಿ ಚಲಿಸುವಾಗ ಜನರಿಗೆ ಡಿಕ್ಕಿಯಾಗುವಂತಹ ಸನ್ನಿವೇಶಗಳೂ ಹೆಚ್ಚಿವೆ. ಈ ಘಟನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಕ್ರಮವಾಗಿ ನಡೆಯುವ ಚಟುವಟಿಕೆಗಳಿಗೆ ಹೀಗೆ ಜನ ಜೀವ ಕಳೆದುಕೊಂಡರೆ ಏನು ಮಾಡುವುದು. ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿಯೂ ಬಿಗಿ ತಪಾಸಣೆ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಭಾನುವಾರದ ಗಡುವು

ರಾತ್ರಿ ವೇಳೆಗೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಪ್ರತಿಭಟನಾಕಾರರ ಜೊತೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಸಾಗಾಟದ ಪ್ರಕರಣಗಳು ನಡೆಯುತ್ತಿರುವುದು ಪೊಲೀಸರ ಗಮನದಲ್ಲಿದೆ. ಇದಕ್ಕಾಗಿಯೇ ಪೊಲೀಸರು ತಪಾಸಣೆ ನಡೆಸಿ ಬಿಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಪ್ರಕರಣಗಳದಲ್ಲಿಯೂ ಆದಷ್ಟು ಬೇಗನೇ ಆರೋಪಿಗಳನ್ನು ಬಂಧಿಸುವ ಬಗ್ಗೆ ಭರವಸೆ ನೀಡಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದರು.

ಎಸ್ಪಿ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನುರಾತ್ರಿಯೇ ಕೊನೆಗೊಳಿಸಲಾಗಿತ್ತು. ಆರೋಪಿಗಳ ಬಂಧನಕ್ಕೆ ಭಾನುವಾರ ಮಧ್ಯಾಹ್ನದ ಗಡುವು ನೀಡಲಾಗಿತ್ತು. ಇಲ್ಲದೇ ಇದ್ದರೆ ಮತ್ತೆ ಪ್ರತಿಭಟನೆ ನಡೆಸುವುದು ಖಚಿತ ಎಂದು ಪ್ರತಿಭಟನಾ ನಿರತರರು ಎಚ್ಚರಿಕೆಯನ್ನು ನೀಡಿದ್ದರು.

ಈ ನಡುವೆ ಬೆಳಗ್ಗಿನ ಜಾವ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

(ವರದಿ: ಹರೀಶ ಮಾಂಬಾಡಿ. ಮಂಗಳೂರು)