Mangalore News: ಗೂಗಲ್ ದಾರಿ ನೋಡಿ ಬಂಟ್ವಾಳ ಬಳಿ ರೈಲ್ವೆ ಸೇತುವೆಯಡಿ ಸಿಲುಕಿದ ಘನ ಲಾರಿ: ಹೀಗಿತ್ತು ಪೇಚಾಟದ ಸನ್ನಿವೇಶ
Mangalore News ಬಹುಪಾಲು ಚಾಲಕರು ಗೂಗಲ್ ಬಳಸಿಯೇ ವಾಹನ ಚಲಾಯಿಸುತ್ತಾರೆ. ಅದರಲ್ಲೂ ದೂರದಿಂದ ಬರುವವರಿಗೆ ಇದು ಅನಿವಾರ್ಯ. ಕೆಲವೊಮ್ಮೆ ಇದೇ ತೊಂದರೆಗೂ ಸಿಲುಕಿಸುವ ಸಾಧ್ಯತೆಯಿರುತ್ತದೆ. ಇಂತಹ ಘಟನೆ ಮಂಗಳೂರು ಸಮೀಪ ನಡೆದಿದೆ.
ಮಂಗಳೂರು: ಈಗ ಬಹುತೇಕರು ಗೂಗಲ್ ಗುರುವನ್ನು ಗಮನಿಸಿಯೇ ವಾಹನ ಚಲಾಯಿಸುವುದು. ಆತನ ಮಾರ್ಗದರ್ಶನ ಕೆಲವೊಮ್ಮೆ ಸರಿಯೂ ಇರುತ್ತದೆ. ಮತ್ತೆ ಕೆಲವೊಮ್ಮೆ ದಿಕ್ಕು ತಪ್ಪಿಸಿ ಏನೆಲ್ಲಾ ಅನಾಹುತಕ್ಕೆ ದಾರಿಯಾಗಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಇದು ನಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಅದೂ ಗೂಗಲ್ ಮ್ಯಾಪ್ ಹಾಕಿ ಸಂಚರಿಸುವ ಸಂದರ್ಭ ತೋರಿಸಿದ ದಾರಿಯಲ್ಲಿ ಸಾಗಿದ ಘನಗಾತ್ರದ ಲಾರಿಯೊಂದು ಮೊಡಂಕಾಪು ರೈಲ್ವೆ ಮೇಲ್ಸೇತುವೆಯಡಿ ಸಿಲುಕಿಕೊಂಡ ಘಟನೆ ಶನಿವಾರ ನಡೆದಿದೆ. ಬಳಿಕ ಬಂಟ್ವಾಳದ ಮೆಲ್ಕಾರ್ ನಲ್ಲಿರುವ ಟ್ರಾಫಿಕ್ ಠಾಣಾ ಪೊಲೀಸರು ಲಾರಿಯನ್ನು ಸುರಕ್ಷಿತವಾಗಿ ಮೇಲ್ಸೇತುವೆಯಿಂದ ಸರಿಪಡಿಸಿ ಸೂಕ್ತ ಮಾರ್ಗದೊಂದಿಗೆ ಸುಗಮ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಕೆಮಿಕಲ್ ತುಂಬಿದ ಬ್ಯಾರಲ್ ಗಳನ್ನು ಸಾಗಿಸುತ್ತಿದ್ದ ದೊಡ್ಡ ಟ್ರಕ್ ಮಾದರಿಯ ಘನಗಾತ್ರದ ಲಾರಿಯ ಚಾಲಕ ಗೂಗಲ್ ಮ್ಯಾಪ್ ಹಾಕಿದ್ದರು. ಈ ಸಂದರ್ಭ ಯಾವುದೋ ಸಂದರ್ಭ ರೂಟ್ ಪೊಳಲಿ ಮಾರ್ಗದತ್ತ ತೋರಿಸಿತು. ಬಿ.ಸಿ.ರೋಡ್ ಕಳೆದು, ಹೆದ್ದಾರಿಯಿಂದ ಪೊಳಲಿ ದ್ವಾರದತ್ತ ಪಥ ಬದಲಾಯಿಸಿದ ಚಾಲಕ ನೇರವಾಗಿ ಸಣ್ಣ ಮಾರ್ಗದಲ್ಲಿ ಮುಂದೆ ಹೋದಾಗ, ಘನ ಗಾತ್ರದ ವಾಹನಗಳು ಹೋಗಬಾರದು ಎಂದು ರೈಲ್ವೆ ಸೇತುವೆಯಡಿ ಕಬ್ಬಿಣದ ರಾಡ್ ಹಾಕಿದ್ದು ಕಂಡು ಕಕ್ಕಾಬಿಕ್ಕಿಯಾಗಿದ್ದಾನೆ. ಇದೇ ಮೊದಲ ಬಾರಿ ಬಂದ ಲಾರಿ ಚಾಲಕ ಮ್ಯಾಪ್ ತೋರಿಸಿದ ಜಾಗಕ್ಕೆ ಹೋಗಿ ಸಮಸ್ಯೆ ಅನುಭವಿಸಿದ್ದಾನೆ. ಘಟನೆಯಿಂದ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಮೆಲ್ಕಾರ್ ಟ್ರಾಫಿಕ್ ಠಾಣಾ ಎಎಸ್ಸೈ ಸುರೇಶ್ ಪಡಾರ್, ಸಂಚಾರಕ್ಕೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಕ್ರೇನ್ ತರಿಸಿ ಲಾರಿಯನ್ನು ಬದಿಗೆ ತರಿಸಿದರು.
ಎಂಜಿನಿಯರ್ ಆತ್ಮಹತ್ಯೆ ಯತ್ನ
ಇಂಜಿನಿಯರಿಂಗ್ ಮಾಡಿಯೂ ತನ್ನ ವಿದ್ಯೆಗೆ ಸರಿಯಾದ ಕೆಲಸ ಸಿಗಲಿಲ್ಲ ಎಂದು ಮನನೊಂದ ಯುವಕನೋರ್ವ ಬೆಂಗಳೂರಿನಿಂದ ಬಂದು ಕುತ್ತಿಗೆಗೆ ಚೂರಿಯಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧರ್ಮಸ್ಥಳ ಸಮೀಪ ಕಲ್ಲೇರಿ ಎಂಬಲ್ಲಿ ನಡೆದಿದೆ.
ಬೆಂಗಳೂರಿನ ಮಾದಾವರ ನಿವಾಸಿ ನಾರಾಯಣಪ್ಪ ಎಂಬವರ ಮಗ ಹಿತೇಶ್ (24) ಈ ಕೃತ್ಯ ಎಸಗಿದ ಯುವ.
ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದ ಈತ ವಿದ್ಯಾಭ್ಯಾಸ ಮಾಡಿದ ಬಳಿಕ ಎಷ್ಟೇ ಕೆಲಸ ಹುಡುಕಿದರೂ ಒಂದು ವರ್ಷದವರೆಗೂ ಕೆಲಸ ಸಿಗದೆ ಆರು ತಿಂಗಳ ಐಟಿ ಕೋರ್ಸ್ ಮಾಡಿದ್ದ. ಬಳಿಕ ಸಾಮಾನ್ಯ ಉದ್ಯೋಗಕ್ಕೆ ಸೇರಿಕೊಂಡಿದ್ದ. ಆದರೆ ಆ ಕೆಲಸದಲ್ಲಿ ತೃಪ್ತಿ ಇರದೆ,ಸಂಬಳವು ಕಡಿಮೆ ಹಾಗೂ ಯಾವುದೋ ಕಾರಣದಿಂದ ಹಣವನ್ನು ಕಳೆದುಕೊಂಡಿದ್ದ.
ಇದರಿಂದ ಬೇಸತ್ತು ಬೆಂಗಳೂರಿನಿಂದ ಬಸ್ ಮೂಲಕ ಬಂದು ಕೊಕ್ಕಡ ರಸ್ತೆಯ ಕಲ್ಲೇರಿ ಬಳಿಯ ರಸ್ತೆ ಪಕ್ಕದಲ್ಲಿ ಹೋಗಿ ಬ್ಯಾಗ್ ನಲ್ಲಿ ತಂದಿದ್ದ ಚೂರಿಯಿಂದ ಕುತ್ತಿಗೆ ಇರಿದುಕೊಂಡು,ರಕ್ತಸ್ರಾವದಿಂದ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು ಧರ್ಮಸ್ಥಳ ಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ , ಸಿಬ್ಬಂದಿ ಮಂಜುನಾಥ್ ,ಗೋವಿಂದಾ ರಾಜ್ , ಪ್ರಶಾಂತ್ ಬಂದು ಆಂಬುಲೆನ್ಸ್ ಗೆ ಕರೆ ಮಾಡಿದಾಗ ಸಕಾಲಕ್ಕೆ ಆಗಮಿಸದ ಕಾರಣ ಜೀವ ಉಳಿಸಲು ಪೊಲೀಸ್ ಜೀಪ್ ನಲ್ಲೇ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಸಾರ್ವಜನಿಕರ ಮತ್ತು ಪೊಲೀಸರ ಪ್ರಸಂಗಾವಧಾನತೆಯಿಂದ ಯುವಕ ಅಪಾಯದಿಂದ ಪಾರಾಗಿದ್ದಾನೆ.
ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ದಕ್ಷಿಣ ಕನ್ನಡದ ಪುತ್ಥೂರು ಸಮೀಪ ಸುಳ್ಯಪದವು ಎಂಬಲ್ಲಿ ಕಾಲೇಜು ವಿದ್ಯಾರ್ಥಿನಿ ಭಾನುವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕನ್ನಡ್ಕ ನಿವಾಸಿ ದೀಕ್ಷಾ (16) ಸಾವನ್ನಪ್ಪಿದಾಕೆ. ಈಕೆ ಮನೆಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವರದಿಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.