ಸಾವಿನಲ್ಲೂ ಸಾರ್ಥಕತೆ ಮೆರೆದ ಬಂಟ್ವಾಳದ ಯುವಕ ಪ್ರಥಮ್ ಬಂಗೇರ; ಅಂಗಾಂಗ ದಾನ ಮಾಡಿ ಅಮರನಾದ ಯುವ ವಕೀಲ
ಅಪಘಾತವೊಂದರಲ್ಲಿ ಪ್ರಾಣ ಕಳೆದುಕೊಂಡ ಯುವ ವಕೀಲ ಪ್ರಥಮ್ ಬಂಗೇರ ತಮ್ಮ ದೇಹದ ಅಂಗಾಂಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ಈ ಯುವ ವಕೀಲನ ಹೆಸರು ಪ್ರಥಮ್ ಬಂಗೇರ. ವಯಸ್ಸು 27. ಸದಾ ಚಟುವಟಿಕೆಯ ವ್ಯಕ್ತಿ. ಲವಲವಿಕೆಯಿಂದ ಕೂಡಿರುವ ಹುಡುಗ. ಸಾಂಸ್ಕೃತಿಕ ಚಟುವಟಿಕೆಗಳಿದ್ದಾಗ ಡ್ಯಾನ್ಸ್ ಶೋ ನೀಡುವುದರಲ್ಲಿ ಮುಂದು. ಯಾರಿಗಾದರೂ ಕಷ್ಟವಿದ್ದರೆ ಉಪಕಾರ ಮಾಡುವುದರಲ್ಲೂ ಮೊದಲಿಗ. ಬಡವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ತಂದೆ ವಾಮನ ಸಾಲಿಯಾನ್ ಅವರು ಮಗನನ್ನು ಎಲ್‌ಎಲ್‌ಬಿ ಓದಿಸಿದರು. ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಪ್ರಥಮ್, ತನ್ನ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಹಿರಿಯ ವಕೀಲರೊಬ್ಬರ ಬಳಿ ಪ್ರಾಕ್ಟೀಸ್ ಮಾಡುತ್ತಿದ್ದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅಪಘಾತವೊಂದು ಆತನ ಪ್ರಾಣವನ್ನೇ ಕಸಿದಿತ್ತು.
ಕಳೆದ ವಾರ ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಪ್ರಥಮ್ ಬೈಕಿನಲ್ಲಿ ತೆರಳುತ್ತಿದ್ದಾಗ ಅಲ್ಲಿದ್ದ ಡಿವೈಡರ್‌ಗೆ ಡಿಕ್ಕಿಯಾಗಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ವಾರ ಕೋಮಾದಲ್ಲಿದ್ದು ಸಾವು, ಬದುಕಿನ ನಡುವೆ ಹೋರಾಡಿದ ಪ್ರಥಮ್ ಬಂಗೇರ ಅವರ ಮೆದುಳು ಭಾನುವಾರ ರಾತ್ರಿ ನಿಷ್ಕ್ರಿಯವಾಗಿದೆ. ವೈದ್ಯರು ಇನ್ನು ಬದುಕುವುದಿಲ್ಲ ಎಂದು ಹೇಳಿದ್ದಾರೆ.
ಈ ಸಂದರ್ಭ ಪ್ರಥಮ್ ತಂದೆ ಮತ್ತು ಸಹೋದರ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ತನ್ನ ಮಗನಂತೆ ಇನ್ನು ಯಾರೋ ಸಮಸ್ಯೆ ಅನುಭವಿಸುತ್ತಿರುವುದನ್ನು ಮನಗಂಡು ಆತನ ಎರಡು ಕಣ್ಣು, ಎರಡು ಕಿಡ್ನಿ, ಲಿವರ್, ಕರುಳಿನ ಭಾಗವನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಈ ರೀತಿಯಾಗಿ ಅಂಗಾಂಗ ದಾನ ಮಾಡುವ ಮೂಲಕ ಪ್ರಥಮ್ ಸಾವಿನ ಬಳಿಕವೂ ಅಮರನಾಗಿದ್ದಾರೆ.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಎಲ್‌ಎಲ್‌ಬಿ ಶಿಕ್ಷಣ ಪಡೆದು ಬಿ.ಸಿ.ರೋಡಿನ ಕೆ.ವೆಂಕಟ್ರಮಣ ಶೆಣೈಯವರ ಬಳಿ ವಕೀಲವೃತ್ತಿಯನ್ನು ಅಭ್ಯಾಸ ಮಾಡುತ್ತಿದ್ದ ಪ್ರಥಮ್, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚುರುಕಾಗಿದ್ದ ಹುಡುಗ. ಒಳ್ಳೆಯ ನೃತ್ಯಪಟುವೂ ಆಗಿದ್ದರು. ಕಳೆದ ನವೆಂಬರ್ ತಿಂಗಳಿನಲ್ಲಿ ಇವರ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ತಂದೆ ಮತ್ತು ಸಹೋದರನೊಂದಿಗೆ ಬಿ.ಸಿ.ರೋಡಿನ ಕೈಕುಂಜೆಯಲ್ಲಿ ವಾಸವಾಗಿದ್ದ ಪ್ರಥಮ್, ತಂದೆ ಜೊತೆ ವೆಲ್ಡಿಂಗ್ ಕೆಲಸಕ್ಕೂ ಕೈಜೋಡಿಸುತ್ತಿದ್ದ ಪ್ರೀತಿಯ ಮಗ. ಇದೀಗ ಸಾವಿನಲ್ಲೂ ಆತ ಸಾರ್ಥಕ್ಯ ಮೆರೆದಿದ್ದಾರೆ.
