Dakshina Kannada News: ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ (ಬ್ಯಾಸ್ಟಿಲ್ ಡೇ) ಕವಾಯತಿನಲ್ಲಿ ಮಂಗಳೂರು ಮೂಲದ ದಿಶಾ ಅಮೃತ್ ಭಾಗಿ
ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಜು.14ರಂದು ಬಾಸ್ಟಿಲ್ಸ್ ಡೇ ಪರೇಡ್ (ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ) ನಡೆಯಲಿದೆ. ಲೆಫ್ಟಿನೆಂಟ್ ಕಮಾಂಡರ್ ಮಂಗಳೂರಿನ ದಿಶಾ ಅಮೃತ್ ಈ ಬಾರಿ ಪ್ಯಾರಿಸ್‌ನ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗವಹಿಸಲಿದ್ದು, ನಾಡಿಗೆ ಮತ್ತೊಮ್ಮೆ ಹಿರಿಮೆ ತರಲಿದ್ದಾರೆ.
ಮಂಗಳೂರು: ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸಿ ನಾಡಿಗೆ ಹೆಮ್ಮೆ ತಂದ ಲೆಫ್ಟಿನೆಂಟ್ ಕಮಾಂಡರ್ ಮಂಗಳೂರಿನ ದಿಶಾ ಅಮೃತ್ ಈ ಬಾರಿ ಪ್ಯಾರಿಸ್‌ನ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗವಹಿಸಲಿದ್ದು, ನಾಡಿಗೆ ಮತ್ತೊಮ್ಮೆ ಹಿರಿಮೆ ತರಲಿದ್ದಾರೆ.
ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಜು.14ರಂದು ಬಾಸ್ಟಿಲ್ಸ್ ಡೇ ಪರೇಡ್ (ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ) ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಈ ಭಾರತದ ನೌಕಾ ದಳ, ಭೂ ದಳ, ವಾಯು ದಳ ಸೇರಿದಂತೆ ಮೂರು ತುಕಡಿಗಳು ಭಾಗವಹಿಸಲಿವೆ.
ಜು.14 ರಂದು ನಡೆಯಲಿರುವ ಬ್ಯಾಸ್ಟಿಲ್ ಪರೇಡ್‌ನಲ್ಲಿ ಭಾಗವಹಿಸಲು ಈಗಾಗಲೇ ನೌಕಾಪಡೆಯ ನಾಲ್ಕು ಮಂದಿ ಅಧಿಕಾರಿಗಳು ಹಾಗೂ 64 ನಾವಿಕರ ತಂಡ ಪ್ಯಾರಿಸ್ ತಲುಪಿದೆ. ಈ ನಾಲ್ವರು ಅಧಿಕಾರಿಗಳ ಪೈಕಿ ದಿಶಾ ಅಮೃತ್ ಕೂಡ ಓರ್ವರಾಗಿದ್ದಾರೆ. ನೌಕಾ ತುಕಡಿಯನ್ನು ಕಮಾಂಡರ್ ವ್ರತ್ ಬಘೇಲ್ ಮುನ್ನಡೆಸಲಿದ್ದು, ಲೆ. ಕಮಾಂಡರ್ ದಿಶಾ ಅಮೃತ್ ಹಾಗೂ ಲೆಫ್ಟಿನೆಂಟ್ ಕಮಾಂಡರ್ ರಜತ್ ತ್ರಿಪಾಠಿ, ಲೆಫ್ಟಿನೆಂಟ್ ಕಮಾಂಡರ್ ಜಿತಿನ್ ಲಲಿತಾ ಧರ್ಮರಾಜ್ ಅವರು ತುಕಡಿಯನ್ನು ಪ್ರತಿನಿಧಿಸಲಿದ್ದಾರೆ.
ಫ್ರಾನ್ಸ್‌ನ ರಾಷ್ಟ್ರೀಯ ದಿನಾಚರಣೆ ಮಾತ್ರ ಅಲ್ಲದೇ, ಅದೇ ದಿನ ಇಂಡೋ-ಫ್ರಾನ್ಸ್ ಕಾರ್ಯತಂತ್ರ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವೂ ನಡೆಯುತ್ತಿರುವುದು ಗಮನಾರ್ಹವಾಗಿದೆ.
ದಿಶಾ ಅವರು ಮಂಗಳೂರಿನ ಬೋಳೂರು ತಿಲಕ್ ನಗರದ ಅಮೃತ್ ಕುಮಾರ್ ಮತ್ತು ಲೀಲಾ ಅಮೃತ್ ದಂಪತಿ ಪುತ್ರಿಯಾಗಿದ್ದಾರೆ. ಬಾಲ್ಯದಲ್ಲೇ ನೌಕಾಪಡೆ ಅಧಿ ಕಾರಿಯಾಗಬೇಕೆಂದು ಕನಸು ಕಂಡವರು ದಿಶಾ ಅಮೃತ್. ದಿಶಾ ಅವರು ಮಂಗಳೂರಿನ ಕೆನರಾ, ಅಲೋಶಿಯಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ, ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿತು ಬಳಿಕ ತನ್ನ ಇಚ್ಚೆಯಂತೆ ನೌಕಾಪಡೆ ಸೇರಿದರು. 2016ರಲ್ಲಿ ನೌಕಾಪಡೆ ಸೇರಿದ ಇವರು ಪ್ರಸ್ತುತ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದು, ಇವರ ಪತಿ ರಾಹುಲ್ ಭಾರತೀಯ ಸೇವೆಯಲ್ಲಿ ಜನರಲ್ ಆಗಿದ್ದಾರೆ.
ಪ್ರಸಕ್ತ ವರ್ಷ ಭಾರತ- ಫ್ರಾನ್ಸ್ ನಿರ್ಣಾಯಕ ಪಾಲುದಾರಿಕೆಯ ತ್ರೈಮಾಸಿಕ ಶತಮಾನವನ್ನು ಸಂಕೇತಿಸುತ್ತದೆ. ಉಭಯ ರಾಷ್ಟ್ರಗಳು ಸಾಗರ ರಕ್ಷಣಾ ವಲಯ ಸಹಿತ ನೌಕಾರಂಗದಲ್ಲಿ ಗಾಢ ಬಾಂಧವ್ಯವನ್ನು ಹೊಂದಿವೆ. ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಕವಾಯತು ನೌಕಾ ಶಕ್ತಿಯ ಎಲ್ಲ ಆಯಾಮಗಳನ್ನು ಒಳಗೊಂಡ ಸದೃಢ ಕವಾಯತಾಗಿ ಹೊರಹೊಮ್ಮಲಿದೆ. ಈ ಪರೇಡ್ ಭಾರತ-ಫ್ರಾನ್ಸ್ ನಡುವೆ ವ್ಯೂಹಾತ್ಮಕ - ದ್ವಿಪಕ್ಷೀಯ ಬಾಂಧವ್ಯದ ಬೆಳವಣಿಗೆಯನ್ನು ಪ್ರತಿಬಿಂಬಿಸಲಿದೆ.
ದಿಶಾ ಅಮೃತ್ ತಂದೆ ಅನೃತ್ ಕುಮಾರ್ ಬೋಳೂರು ಮಾತನಾಡಿ ದಿಶಾ ಅಮೃತ್ ಗೆ ನೌಕಾಪಡೆಯ ಅಧಿಕಾರಿಯಾಗಬೇಕೆಂದು ಬಾಲ್ಯದಿಂದಲೇ ಕನಸು ಇತ್ತು. ಈ ಗುರಿಯಿಟ್ಟುಕೊಂಡು ಸಾಧನೆ ಮಾಡಿದ ದಿಶಾ ಅಮೃತ್ ಸಾಧನೆ ನಮಗೆ ಹೆಮ್ಮೆ ಎನಿಸುತ್ತಿದೆ. ಮತ್ತಷ್ಟು ಸಾಧನೆ ಮಾಡಬೇಕೆಂಬ ತುಡಿತ ದಿಶಾ ಅಮೃತ್ ಗೆ ಇದೆ ಎನ್ನುತ್ತಾರೆ.