ಬೆಳ್ತಂಗಡಿ: ಪ್ರೇತಬಾಧೆ ಸುದ್ದಿಯಾಗಿದ್ದ ಮಾಲಾಡಿ ಮನೆ ಮತ್ತೆ ಸಹಜಸ್ಥಿತಿಗೆ, ನಡೆದದ್ದೇನು ಎಂಬುದೇ ಕುತೂಹಲಕಾರಿ
ಬೆಳ್ತಂಗಡಿಯ ಮಾಲಾಡಿ ಗ್ರಾಮದಲ್ಲಿ ಮನೆಯೊಂದರಲ್ಲಿ ಪ್ರೇತಕಾಟ ಇದೆ ಎಂಬ ಸುದ್ದಿ ವೈರಲ್ ಆಗಿತ್ತು. ಈ ಸುದ್ದಿ ಈಗ ತಣ್ಣಗಾಗಿದ್ದು, ಮನೆಯೂ ಸಹಜ ಸ್ಥಿತಿಗೆ ಮರಳಿದೆ. ಪ್ರೇತಬಾಧೆ ಸುದ್ದಿಯಾಗಿದ್ದ ಮಾಲಾಡಿ ಮನೆಯಲ್ಲಿ ನಡೆದದ್ದೇನು ಎಂಬುದೇ ಕುತೂಹಲಕಾರಿ ವಿಚಾರ.

ಮಂಗಳೂರು: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಕೆಲ ಸುದ್ದಿ ಮಾಧ್ಯಮಗಳು ಬಿತ್ತರಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಲ್ಲಿ ಪ್ರೇತಬಾಧೆ ಪ್ರಕರಣವೀಗ ತಣ್ಣಗಾಗಿದೆ. ವಿಚಿತ್ರ ಘಟನೆಗಳಿಂದ ಸುದ್ದಿಯಾಗಿದ್ದ ಮಾಲಾಡಿ ಗ್ರಾಮದ ಕೊಲ್ಪೆದ ಬೈಲು ಉಮೇಶ್ ಶೆಟ್ಟಿ ಅವರ ಮನೆಯ ಎಲ್ಲಾ ಸಮಸ್ಯೆಗಳು ಪರಿಹಾರಗೊಂಡಿವೆ ಎಂದು ಮನೆ ಮಂದಿ ತಿಳಿಸಿದ್ದಾರೆ. ಸಮಸ್ಯೆ ಕಂಡು ಬಂದ ಬಳಿಕ ಮನೆ ತೊರೆದಿದ್ದ ಕುಟುಂಬ ಮತ್ತೆ ಮನೆಗೆ ವಾಪಸಾಗಿದೆ.
ಏನಾಗುತ್ತಿತ್ತು
ಕತ್ತಲಾಗುತ್ತಿದ್ದಂತೆ ಬಟ್ಟೆಗಳಿಗೆ ಬೆಂಕಿ ಹಿಡಿಯುವುದು, ಪಾತ್ರೆ- ಪಗಡೆ ಬೀಳುವುದು, ಯಾರೋ ಚಲಿಸಿದಂತಾಗುವುದು ಹೀಗೆ ಹಲವು ರೀತಿಯ ವಿಚಿತ್ರ ಘಟನೆ ನಡೆಯುತ್ತಿರುವುದಾಗಿ ಮನೆ ಮಂದಿ ಹೇಳಿದ್ದರು. ಆದರೆ ಈಗ ಅವೆಲ್ಲ ನಿವಾರಣೆಯಾಗಿದೆ. ಇದಕ್ಕೆ ಪರಿಹಾರ ಮಾಡಿಕೊಳ್ಳಲಾದ ಬಳಿಕ ಯಾವುದೇ ಸಮಸ್ಯೆ ಇಲ್ಲ ಎಲ್ಲವೂ ಸರಿಯಾಗಿದೆ ಎಂದು ಮನೆಯವರು ತಿಳಿಸಿದ್ದಾರೆ.
ಎಲ್ಲವೂ ಸಿಕ್ಕಿದೆ
ಬೀಗ ಹಾಕಿದ್ದ ಕಪಾಟಿನಲ್ಲಿದ್ದ ಚಿನ್ನವು ನಾಪತ್ತೆಯಾಗಿತ್ತೆಂದು ಮನೆಯವರು ಹೇಳಿದ್ದರು ಆದರೆ ಅದು ಈಗ ದೇವರ ಫೋಟೋದ ಹಿಂದೆ ಪತ್ತೆಯಾಗಿದೆ ಎಂದು ಮನೆಯವರೆ ತಿಳಿಸಿದ್ದಾರೆ. ಜನ ಸೇರಿದಾಗ ಏನೂ ಆಗ್ತಿರಲಿಲ್ಲ. ವಿಶೇಷ ಎಂದರೆ ಸುದ್ದಿ ತಿಳಿದು ಇಲ್ಲಿ ಜನ ಸೇರಿದಾಗ ಇಂತಹ ಯಾವುದೇ ಘಟನೆಗಳು ನಡೆಯುತ್ತಿರಲಿಲ್ಲ. ಒಟ್ಟಿನಲ್ಲಿ ಇದೊಂದು ವಿಚಿತ್ರ ಘಟನೆಯಾಗಿದ್ದು ಇದರ ಸತ್ಯಾಸತ್ಯತೆ ಇನ್ನೂ ನಿಗೂಢವಾಗಿಯೇ ಮುಂದುವರಿದಿದೆ. ಹಾಗೂ ಮನೆಯವರ ಮೇಲೆ ಅನುಮಾನ ಮೂಡುವಂತೆ ಮಾಡಿದೆ.
ಸಮೂಹಸನ್ನಿ ಪ್ರಕರಣವೇ
ವಿಮರ್ಶಕರು ಕೂಡ ಇದೊಂದು ಸಮೂಹ ಸನ್ನಿ ಪ್ರಕರಣ ಇರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ಬೆಳ್ತಂಗಡಿಯ ಮಾಲಾಡಿ ಮನೆಯ ಪ್ರೇತಕಾಟದ ಸುದ್ದಿಯನ್ನು ಹರಡಿದವರು ಕೂಡ ಗಮನಿಸಬೇಕಾಗಿತ್ತು. ಇಂಥ ಪ್ರಕರಣ ನಡೆದ ಕೂಡಲೇ ಇದರ ಸತ್ಯಾಸತ್ಯತೆಯನ್ನು ಗಮನಿಸದೆ ಸುದ್ದಿಗಳೂ ವೈರಲ್ ಆಗಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡು ಮತ್ತಷ್ಟು ಗೊಂದಲ ಸೃಷ್ಟಿ ಆಗಿತ್ತು.
