ಭಾನುವಾರದ ಬೆಂಗಳೂರು – ಮಂಗಳೂರು ರೈಲು ಸಂಚಾರ ರದ್ದು: ಸಕಲೇಶಪುರ ಸಮೀಪ ರೈಲ್ವೆ ಹಳೆಯ ಮೇಲೆ ಮತ್ತೆ ಭೂಕುಸಿತ
ಈ ಮಾರ್ಗದಲ್ಲಿ ಮತ್ತೆ ಭೂಕುಸಿತ ರೈಲು ಸಂಚಾರಕ್ಕೆ ಕಂಟಕ ತಂದೊಡ್ಡಿದೆ. ಭಾರಿ ಮಳೆಯಾಗದಿದ್ದರೂ ಭೂಕುಸಿತ ಉಂಟಾಗುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಮಂಗಳೂರು: ಸಕಲೇಶಪುರ ಮತ್ತು ಬಾಳ್ಳುಪೇಟೆ ರೈಲ್ವೆ ನಿಲ್ದಾಣದ ಮಧ್ಯೆ ಶನಿವಾರ ಮಂಜಾನೆ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ತೆರವು ಕಾರ್ಯ ಪ್ರಗತಿಯಲ್ಲಿದೆ. ಈ ಮಾರ್ಗದ ರೈಲುಗಳ ಸಂಚಾರವು ಭಾನುವಾರದ ಮಟ್ಟಿಗೆ ರದ್ದಾಗಿದೆ.
ರೈಲು ಸಂಖ್ಯೆ16575 ಯಶವಂತಪುರ ಮಂಗಳೂರು ಜಂಕ್ಷನ್, ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್ ಪ್ರೆಸ್, ರೈಲು ಸಂಖ್ಯೆ 16595 ಬೆಂಗಳೂರು– ಕಾರವಾರ ಹಾಗೂ ರೈಲು ಸಂಖ್ಯೆ 16596 ಕಾರವಾರ - ಬೆಂಗಳೂರು ರದ್ದುಗೊಂಡಿದೆ. ಇಲಾಖೆಯ ಜನರಲ್ ಮ್ಯಾನೇಜರ್, ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ.
ಜುಲೈ 26ರ ಸಂಜೆ ಧಾರಾಕಾರ ಮಳೆಯಿಂದಾಗಿ ಸೇತುವೆಯೊಂದರ ಬಳಿ ಭೂಕುಸಿತವಾಗಿತ್ತು. ತಕ್ಷಣವೇ, ರೈಲ್ವೆಯ ಮೈಸೂರು ವಿಭಾಗ ಬೆಂಗಳೂರು-ಮಂಗಳೂರು ಸೆಕ್ಟರ್‌ನಲ್ಲಿ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಟ್ರ್ಯಾಕ್ ಮರುಸ್ಥಾಪನೆ ಕಾರ್ಯ ಪ್ರಾರಂಭಿಸಿತು. ಈ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲು ರೈಲ್ವೆಗೆ ಸುಮಾರು 10 ದಿನಗಳು ಬೇಕಾದವು.
ಆಗಸ್ಟ್ 4ರಂದು ಬೆಳಿಗ್ಗೆ 8.58ಕ್ಕೆ ರೈಲ್ವೆ ಹಳಿಯನ್ನು 'ಫಿಟ್' ಎಂದು ಪ್ರಮಾಣೀಕರಿಸಲಾಯಿತು. ಆರಂಭದಲ್ಲಿ ಗೂಡ್ಸ್ ರೈಲು ಓಡಿಸಿ ಸುರಕ್ಷತೆಯನ್ನು ಪರೀಕ್ಷಿಸಲಾಯಿತು. ಆಗಸ್ಟ್ 8ರಂದು ಮೊದಲ ಪ್ಯಾಸೆಂಜರ್ ರೈಲು ಗೋಮ್ಮಟೇಶ್ವರ ಎಕ್ಸ್‌ಪ್ರೆಸ್ ಮಧ್ಯಾಹ್ನ 12.37ಕ್ಕೆ ಯಶಸ್ವಿಯಾಗಿ ಹಾದುಹೋಯಿತು. ಆದರೆ ಮತ್ತೆ ಭೂಕುಸಿತ ರೈಲು ಸಂಚಾರಕ್ಕೆ ಕಂಟಕ ತಂದೊಡ್ಡಿದೆ. ಭಾರಿ ಮಳೆಯಾಗದಿದ್ದರೂ ಭೂಕುಸಿತ ಉಂಟಾಗುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.