ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಅಪರೂಪದ ಚಿಕಿತ್ಸೆ: ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಹೊರ ತೆಗೆದರು!
Rare Surgery: ಮಡಿಕೇರಿ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಪುತ್ರನ ಎದೆಗೆ ಹೊಕ್ಕಿದ್ದ ತೆಂಗಿನ ಗರಿಯನ್ನು ವೆನ್ಲಾಕ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ. ಅಪರೂಪದ ಶಸ್ತ್ರ ಚಿಕಿತ್ಸೆಯ ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Rare Surgery: ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಸಿಟಿವಿಎಸ್ ತಂಡ ವಿಶೇಷ ಶಸ್ತ್ರಚಿಕಿತ್ಸೆ ನಡೆಸಿ 12 ವರ್ಷದ ಬಾಲಕನ ಕುತ್ತಿಗೆಯ ಮೂಲಕ ಎದೆಗೂಡಿಗೆ ಸೇರಿದ ತೆಂಗಿನ ಗರಿ ಹಾಗೂ ಬಾಲಕನ ಕುತ್ತಿಗೆಗೆ ಹಾಕಿಕೊಂಡಿದ್ದ ಚೈನ್ ಹೊರ ತೆಗೆಯುವ ಮೂಲಕ ಜೀವದಾನ ನೀಡಿದ್ದಾರೆ.
ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಹೊರ ತೆಗೆದ ವೆನ್ಲಾಕ್ ಆಸ್ಪತ್ರೆ ವೈದ್ಯರ ತಂಡ
ಬಾಲಕನ ಕುಟುಂಬ ಅಸ್ಸಾಂ ರಾಜ್ಯದ ಗುವಾಹಟಿ ಮೂಲದವರಾಗಿದ್ದು ಮಡಿಕೇರಿಯಲ್ಲಿ ಕಾಫಿ ಎಸ್ಟೇಟ್‌ನಲ್ಲಿ ಹೆತ್ತವರು ಕೂಲಿ ಕೆಲಸ ಮಾಡುತ್ತಿದ್ದರು. ಶನಿವಾರ ಕಮಲ್ ಹುಸೇನ್ ಎಂಬ ಬಾಲಕ ಆಟವಾಡುತ್ತಿದ್ದಾಗ ಹತ್ತಿರದಲ್ಲಿದ್ದ ತೆಂಗಿನ ಮರದ ಗರಿಯೊಂದು ಬಾಲಕನ ಮೇಲೆ ಬಿದ್ದು ಅವಘಡ ಸಂಭವಿಸಿತ್ತು. ಇದರಿಂದ ತೆಂಗಿನಗರಿಯ ಕೊಂಬೆಯ ಭಾಗವೊಂದು ಬಾಲಕನ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಸ್ಟೀಲ್ ಚೈನ್‌ನೊಂದಿಗೆ ಎದೆಯೊಳಗೆ ಹೊಕ್ಕಿತ್ತು. ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಸಾಕ್ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ತಕ್ಷಣವೇ ಮಂಗಳೂರಿನ ವೆನ್ಸಾಕ್ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತೆಂಗಿನ ಗರಿಯ ತುಂಡು ಹಾಗೂ ಚೈನ್ ಹೊರತೆಗೆದು ಬಾಲಕನಿಗೆ ಹೊಸ ಬದುಕು ನೀಡಿದರು.
ಡಾ. ಸುರೇಶ್ ಪೈ ನೇತೃತ್ವದ ವೆನ್ಲಾಕ್ ಆಸ್ಪತ್ರೆಯ ಕಾರ್ಡಿಯೋಥೋರಾಸಿಕ್ ಮತ್ತು ವ್ಯಾಸ್ಕುಲರ್ ಸರ್ಜರಿ ತಂಡ ರಾತ್ರಿ 1 : 30 ರಿಂದ 3: 30 ನಡುವೆ ಬಾಲಕನ ಸರ್ಜರಿ ನಡೆಸಿತು. ತಂಡದ ಮಾಡಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಸರ್ಜರಿ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಅಂದಾಜು 20 ಸೆಂಟಿ ಮೀಟರ್ ಉದ್ದದ ದೊಡ್ಡ ಮರದ ತುಂಡು ಮತ್ತು ಬ್ಲೇಡ್ ನಂತಹ ಡಿಸೈನ್ ಇರುವ ಸ್ಟೀಲ್ ಚೈನ್ ಬಾಲಕನ ಎದೆಯ ತನಕ ಹೊಕ್ಕಿತ್ತು. ಅದನ್ನು ಸರ್ಜರಿ ಮೂಲಕ ಹೊರತೆಗೆಯಲಾಗಿದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಉಚಿತ ಸರ್ಜರಿ; ಪ್ರಾಣಾಪಾಯದಿಂದ ಬಾಲಕ ಪಾರು
ಈ ಬಗ್ಗೆ ಮಾತನಾಡಿದ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್ ಅವರು ಮಡಿಕೇರಿಯಿಂದ ಬಾಲಕನ ಹೆತ್ತವರು ನಮ್ಮನ್ನು ಸಂಪರ್ಕಿ ಸಿದರು. ನಾವು ತಕ್ಷಣವೇ ಕಾಯಪ್ರವೃತ್ತರಾಗಿ ಶಸ್ತ್ರಚಿಕಿತ್ಸೆ ಮಾಡಿದೆವು, ಸಿಟಿವಿಎಸ್ ತಂಡದ ವಿಶೇಷ ಕೆಲಸದಿಂದ ಯಾವುದೇ ದುಬಾರಿ ವೆಚ್ಚ ಇಲ್ಲದೇ ಉಚಿತ ಸರ್ಜರಿ ಮೂಲಕ ಬಾಲಕನ ಜೀವ ಉಳಿಯಿತು. ಡಾ. ಸುರೇಶ್ ಪೈ ನೇತೃತ್ವದ ವೆನ್ಲಾಕ್ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ನಾಳೀಯ ಶಸ್ತ್ರಚಿಕಿತ್ಸೆಯ ಸಂಪೂರ್ಣ ತಂಡವು ಅವರ ಅಸಾಧಾರಣ ಕೌಶಲ್ಯ ಮತ್ತು ಸಮರ್ಪಣೆಗೆ ಪ್ರಶಂಸೆಗೆ ಅರ್ಹವಾಗಿದೆ ಎಂದು ಹೇಳಿದರು.
ಇಂದು, ಅವರು 12 ವರ್ಷದ ಬಾಲಕನ ಎದೆಯಿಂದ ತೆಂಗಿನ ಗರಿ ಯಶಸ್ವಿಯಾಗಿ ಹೊರತೆಗೆದರು. ಮಡಿಕೇರಿಯಿಂದ ಬಂದ ಬಾಲಕ, ಬಿದ್ದು ತೀವ್ರ ಗಾಯಗೊಂಡಿದ್ದನು, ಇದರಿಂದಾಗಿ ಅವನ ಕುತ್ತಿಗೆಗೆ ಮರದ ತುಂಡು ಪ್ರವೇಶಿಸಿ ಎದೆಯಲ್ಲಿ ಸಿಲುಕಿಕೊಂಡಿತು. ಇಂದು ಬೆಳಿಗ್ಗೆ ಸಿಟಿವಿಎಸ್ ತಂಡವು ಜೀವ ಉಳಿಸುವ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಬಾಲಕನ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ಧಾನೆ. ಯುವ ಜೀವವನ್ನು ಉಳಿಸುವಲ್ಲಿ ಅವರ ಗಮನಾರ್ಹ ಪ್ರಯತ್ನಗಳಿಗಾಗಿ ಇಡೀ ಸಿಟಿವಿಎಸ್ ತಂಡ, ಒಟಿ ಸಿಬ್ಬಂದಿ ಮತ್ತು ಅರಿವಳಿಕೆ ತಂಡವನ್ನು ನಾವು ಅಭಿನಂದಿಸುತ್ತೇವೆ ಎಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್ ಹೇಳಿದ್ದಾರೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)
