ಕನ್ನಡ ಸುದ್ದಿ  /  Karnataka  /  Mangaluru Cooker Blast: Nia Officials Remand Shariq To Custody Till March 15

Mangalore Cooker Blast: ಕುಕ್ಕರ್‌ ಬಾಂಬ್‌ ಸ್ಪೋಟದ ಉಗ್ರ ಶಾರಿಕ್‌ನನ್ನು ಮಾರ್ಚ್‌ 15ರವರೆಗೆ ಎನ್‌ಐಎ ಕಸ್ಟಡಿಗೆ ನೀಡಿದ ವಿಶೇಷ ಕೋರ್ಟ್‌

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ ಮಂಗಳೂರು ಬಾಂಬ್‌ ಸ್ಪೋಟದ ಆರೋಪಿ ಶಾರೀಕ್‌ ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದು, ಈತನನ್ನು ಮಾರ್ಚ್‌ ಹದಿನೈದವರೆಗೆ ಎನ್‌ಐಎ ಕಸ್ಟಡಿಗೆ ನೀಡಲಾಗಿದೆ.

Mangalore Cooker Blast: ಕುಕ್ಕರ್‌ ಬಾಂಬ್‌ ಸ್ಪೋಟದ ಶಂಕಿತ ಉಗ್ರ ಶಾರಿಕ್‌ ಮಾರ್ಚ್‌ 15ರವರೆಗೆ  ಎನ್‌ಐಎ ಕಸ್ಟಡಿಗೆ ನೀಡಿದ ವಿಶೇಷ ಕೋರ್ಟ್‌
Mangalore Cooker Blast: ಕುಕ್ಕರ್‌ ಬಾಂಬ್‌ ಸ್ಪೋಟದ ಶಂಕಿತ ಉಗ್ರ ಶಾರಿಕ್‌ ಮಾರ್ಚ್‌ 15ರವರೆಗೆ ಎನ್‌ಐಎ ಕಸ್ಟಡಿಗೆ ನೀಡಿದ ವಿಶೇಷ ಕೋರ್ಟ್‌

ಬೆಂಗಳೂರು: ಮಂಗಳೂರಿನಲ್ಲಿ ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಆಟೋ ರಿಕ್ಷದಲ್ಲಿ ಕುಕ್ಕರ್‌ ಬಾಂಬ್‌ ಸ್ಪೋಟಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ ಶಂಕಿತ ಉಗ್ರ ಶಾರಿಕ್‌ ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾನೆ. ಆತನನ್ನು ಇಂದು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವಿಚಾರಣೆ ನಡೆಸಿದ ನ್ಯಾಯಾಲಯವು ಈತನನ್ನು ಮಾರ್ಚ್‌ 15ರವರೆಗೆ ಎನ್‌ಐಎ ಅಧಿಕಾರಿಗಳ ಕಸ್ಟಡಿಗೆ ನೀಡಿ ಆದೇಶಿಸಿದೆ. ಅಂದರೆ, ಇಂದು ಸೇರಿದಂತೆ ಮುಂದಿನ ಹತ್ತು ದಿನಗಳ ಕಾಲ ಈತನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಪ್ರಯತ್ನಿಸಲಿದ್ದಾರೆ. ತನಿಖೆಗೆ ಈತ ನೀಡುವ ಸಹಕಾರ ಮತ್ತು ಈತನ ಬಾಯಿ ಬಿಡಿಸುವ ಎನ್‌ಐಎ ಅಧಿಕಾರಿಗಳ ತಂತ್ರಗಳ ಆಧಾರದಲ್ಲಿ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯದ ಮುಂದೆ ಇಂದು ಈತನನ್ನು ಹಾಜರುಪಡಿಸಲಾಗಿದೆ. ಕೋರ್ಟ್‌ ಆದೇಶದ ಬಳಿಕ ಎನ್‌ಐಎ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

ಗಂಭೀರ ಸುಟ್ಟ ಗಾಯ ಹೊಂದಿರುವ ಶಾರೀಕ್‌ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ, ಪ್ರಮುಖ ಸಾಕ್ಷಿಯಾಗಿರುವ ಶಾರೀಕ್‌ ಜೀವಂತವಾಗಿರುವುದು ಅತ್ಯಂತ ಅಗತ್ಯವಾಗಿದ್ದು, ಹೆಚ್ಚಿನ ಭದ್ರತೆಯೊಂದಿಗೆ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈತ ಗುಣಮುಖನಾಗಲು ಇಷ್ಟು ದಿನ ಬೇಕಾಗಿತ್ತು. ಇದೀಗ ಆತ ಚೇತರಿಸಿಕೊಂಡಿದ್ದು, ಎನ್‌ಐಎ ವಿಚಾರಣೆ ನಡೆಸಿ ಉಗ್ರಜಾಲಗಳ ಕುರಿತು ಮಾಹಿತಿ ಪಡೆಯಲಿದೆ.

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟವು ಕಂಕನಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ನಿನ್ನೆಯಷ್ಟೇ ಈ ಘಟನೆಯಿಂದ ತೀವ್ರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕನಿಗೆ ಬಿಜೆಪಿಯು ಹೊಸ ಆಟೋ ರಿಕ್ಷಾ ಮತ್ತು ಐದು ಲಕ್ಷ ರೂಪಾಯಿ ಪರಿಹಾರದ ಚೆಕ್‌ ನೀಡಿತ್ತು.

ಅಂದಹಾಗೆ ಈ ಕುಕ್ಕರ್‌ ಬಾಂಬ್‌ ಸ್ಪೋಟದ ಹೊಣೆಯನ್ನು ಉಗ್ರಸಂಘಟನೆಯೊಂದು ಹೊತ್ತುಕೊಂಡಿದೆ. ಕಳೆದ ವರ್ಷ ಕೊಯಮತ್ತೂರು ಮತ್ತು ಮಂಗಳೂರಿನಲ್ಲಿ ನಡೆದ ಸ್ಫೋಟಗಳ ಹೊಣೆಯನ್ನು ಖೊರಾಸಾನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ (ಐಎಸ್‌ಕೆಪಿ) ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದ್ದು, ಹಿಂದೂಗಳು ಮತ್ತು ದೇಶದ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಸಮರ ಸಾರುವಂತೆ ದಕ್ಷಿಣ ಭಾರತದಲ್ಲಿನ ತನ್ನ ಕಾರ್ಯಕರ್ತರಿಗೆ ಕೇಳಿಕೊಂಡಿದೆ.

ತಮಿಳುನಾಡಿನ ಕೊಯಮತ್ತೂರು ಮತ್ತು ಕರ್ನಾಟಕದ ಮಂಗಳೂರಿನಲ್ಲಿ ನಮ್ಮ ಸಹೋದರರು ದಾಳಿ ನಡೆಸಿ ಸೇಡು ತೀರಿಸಿಕೊಂಡರು ಎಂದು ನಿಯತಕಾಲಿಕದಲ್ಲಿ ಬರೆಯಲಾಗಿದೆ. ಆದರೆ ಇಲ್ಲಿ ಮಂಗಳೂರು ಬದಲಿಗೆ ಬೆಂಗಳೂರು ಎಂದು ಬರೆಯಲಾಗಿದೆ. ಉದ್ದೇಶಪೂರ್ವಕವಾಗಿ ಬೆಂಗಳೂರು ಎಂದು ಬರೆಯಲಾಗಿದೆಯೇ ಅಥವಾ ಟೈಪಿಂಗ್ ದೋಷವೇ ಎಂಬುದು ಸ್ಪಷ್ಟವಾಗಿಲ್ಲ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಶಾರಿಕ್ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ನಿಂದ ಪ್ರೇರಣೆ ಪಡೆದು ಇಂತಹ ದುಷ್ಕೃತ್ಯಗಳತ್ತ ವಾಲಿದ್ದನು. ಭಾರತದಲ್ಲಿಯೂ ಹಲವು ದುಷ್ಕೃತ್ಯಗಳಿಗೆ ಯೋಜನೆ ರೂಪಿಸಿದ್ದನು ಎನ್ನಲಾಗಿದೆ. ಇನ್ನು ಮುಂದೆ ಈತನನ್ನು ಎನ್‌ಐಎ ತನಿಖೆ ನಡೆಸಲಿದ್ದು, ಹೆಚ್ಚಿನ ಮಾಹಿತಿ ಹೊರಬೀಳಲಿದೆ.

IPL_Entry_Point