ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ; ಪೊಲೀಸ್‌ಗೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೊಬ್ಬ ಆರೋಪಿಗೂ ಗುಂಡೇಟು
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ; ಪೊಲೀಸ್‌ಗೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೊಬ್ಬ ಆರೋಪಿಗೂ ಗುಂಡೇಟು

ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ; ಪೊಲೀಸ್‌ಗೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೊಬ್ಬ ಆರೋಪಿಗೂ ಗುಂಡೇಟು

ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಮತ್ತೊಬ್ಬ ಆರೋಪಿಯ ಮೇಲೂ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಉಳ್ಳಾಲದ ಅಜ್ಜಿನಡ್ಕ ಮಹಜರು ಕಾರ್ಯ ನಡೆಯುತ್ತಿದ್ದ ವೇಳೆ ಆರೋಪಿ ಮುರುಗಂಡಿ ಥೇವರ್ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿ ತಪ್ಪಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಆತನ ಕಾಲಿಗೆ ಗುಂಡು ಹೊಡಿದಿದ್ದಾರೆ. (ವರದಿ: ಹರೀಶ್ ಮಾಂಬಾಡಿ)

ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ; ಮತ್ತೊಬ್ಬ ಆರೋಪಿಗೂ ಗುಂಡೇಟು
ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ; ಮತ್ತೊಬ್ಬ ಆರೋಪಿಗೂ ಗುಂಡೇಟು

ಮಂಗಳೂರು: ನಗರದ ಹೊರವಲಯದ ಕೆ ಸಿ ರಸ್ತೆಯಲ್ಲಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗೆ ಹಲ್ಲೆಗೈದು ಪರಾರಿಗೆ ಯತ್ನಿಸಿದ ಮತ್ತೋರ್ವ ಆರೋಪಿಗೆ ಗುಂಡಿನ ದಾಳಿ ನಡೆಸಿದ್ದಾರೆ.

ಕೋಟೆಕಾರು ದರೋಡೆ ಪ್ರಕರಣದ ಪ್ರಮುಖ ಆರೋಪಿ ಮುರುಗಂಡಿ ಥೇವರ್‌ ಪೊಲೀಸ್ ಸಿಬ್ಬಂದಿ ಮಂಜುನಾಥ್ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದಾಗ ಮೊಣಕಾಲಿಗೆ ಗುಂಡೇಟು ಹೊಡೆದು ಬಂಧಿಸಲಾಗಿದೆ.

ಮಂಗಳೂರು ಹೊರವಲಯದ ಉಳ್ಳಾಲದ ಅಜ್ಜಿನಡ್ಕ ಎಂಬಲ್ಲಿ ಶನಿವಾರ ಮಹಜರು ಕಾರ್ಯ ನಡೆಯುತ್ತಿದ್ದ ವೇಳೆ ಆರೋಪಿ ಮುರುಗಂಡಿ ಥೇವರ್ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿ ತಪ್ಪಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಆತನ ಕಾಲಿಗೆ ಗುಂಡು ಹೊಡಿದಿದ್ದಾರೆ. ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜ.21 ರಂದು ಕಣ್ಣನ್ ಮಣಿ ಮೇಲೂ ಫೈರಿಂಗ್ ಆಗಿತ್ತು

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ‌ ಬಂಧಿತನಾಗಿದ್ದ ಆರೋಪಿಗಳಲ್ಲಿ ಓರ್ವ ಆರೋಪಿ ಮುಂಬೈನ ಚೆಂಬೂರಿನ ಕಣ್ಣನ್ ಮಣಿ (36) ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡೇಟು ಹೊಡೆದು ಪೊಲೀಸರು ಬಂಧಿಸಿದ್ದರು. ಈ ಘಟನೆ ಜನವರಿ 21 ರಂದು ನಡೆದಿತ್ತು. ಈ ಸಂದರ್ಭದಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದರು.

ಜನವರಿ 17 ರಂದು ಉಳ್ಳಾಲದ ಕೆ ಸಿ ರಸ್ತೆಯಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ರಿವಾಲ್ವರ್ ತೋರಿಸಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ , ನಗದು ದರೋಡೆ ಮಾಡಿದ್ದರು. ಈ ಪ್ರಕರಣದಲ್ಲಿ ತಮಿಳುನಾಡಿನ ತಿರುವನಲ್ಲಿಯ ಮುರುಗುಂಡಿ ಥೇವರ್, ಮುಂಬಯಿಯ ಯೋಸುವ ರಾಜೇಂದ್ರನ್ ಮತ್ತು ಕಣ್ಣನ್ ಮಣಿ ಮತ್ತು ಮುರುಗಂಡಿ ಥೇವರ್‌ನ ತಂದೆ ಷಣ್ಮುಗಮ್‌ನನ್ನು ಬಂಧಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ದರೋಡೆ ಪ್ರಕರಣದ (ಅಪರಾಧ ಸಂಖ್ಯೆ 07/2025, ಉಳ್ಳಾಲ ಪಿಎಸ್) ತನಿಖೆಯ ಸಮಯದಲ್ಲಿ, ತನಿಖಾಧಿಕಾರಿಗಳು ಮುರುಗಂಡಿ ತೇವರ್ ಮತ್ತು ಯೋಸುವ ರಾಜೇಂದ್ರನ್ ಅವರನ್ನು ಹೆಚ್ಚಿನ ತನಿಖೆಗಾಗಿ ಫೆಬ್ರವರಿ 3, 2025 ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಸ್ಟಡಿ ವಿಚಾರಣೆಯ ಸಮಯದಲ್ಲಿ, ಆರೋಪಿ ಮುರುಗಂಡಿ ತೇವರ್ ಅಪರಾಧದ ಯೋಜನೆ ಮತ್ತು ಅದನ್ನು ಕಾರ್ಯಗತಗೊಳಿಸುವಿಕೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ್ದಾನೆ. ಅವರು ಯೋಸುವ ರಾಜೇಂದ್ರನ್ ಮತ್ತು ಸ್ಥಳೀಯ ಸಹಚರ ಶಶಿ ತೇವರ್ ಅವರೊಂದಿಗೆ ನವೆಂಬರ್ 2024 ರಲ್ಲಿ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಂಕ್ ಬಳಿಯ ಅಜ್ಜಿನಡ್ಕದಲ್ಲಿ ಭೇಟಿಯಾದರು ಎಂದು ತಿಳಿದು ಬಂದಿತ್ತು. ಈ ಸಭೆಯಲ್ಲಿ, ಶಶಿ ತೇವರ್ ಬಂದೂಕನ್ನು ತಂದು ಬ್ಯಾಂಕ್‌ನ ಭದ್ರತಾ ಲೋಪದ ಬಗ್ಗೆ ಪ್ರಮುಖ ವಿವರಗಳನ್ನು ಹಂಚಿಕೊಂಡಿದ್ದನು. ಇದು ದರೋಡೆಕೋರರಿಗೆ ದರೋಡೆಯನ್ನು ಯೋಜಿಸಲು ಸಹಾಯ ಮಾಡಿತು.

ಮುರುಗಂಡಿ ಪ್ರಕಾರ, ಶಶಿ ತೇವರ್ ಆಯುಧವನ್ನು ಸ್ಥಳದಲ್ಲಿ ಅಡಗಿಸಿಟ್ಟಿದ್ದರು. ಈ ಮಾಹಿತಿಯ ಆಧಾರದ ಮೇಲೆ, ಉಳ್ಳಾಲ ಪೊಲೀಸ್ ಇನ್ಸ್‌ಪೆಕ್ಟರ್, ಒಬ್ಬ ಸಬ್-ಇನ್‌ಸ್ಪೆಕ್ಟರ್ ಮತ್ತು ಇಬ್ಬರು ಕಾನ್ಸ್‌ಟೇಬಲ್‌ಗಳನ್ನು ಒಳಗೊಂಡ ಪೊಲೀಸ್ ತಂಡವು ಇಂದು ಮುರುಗಂಡಿ ಥೇವರ್ ಅವರೊಂದಿಗೆ ಸಾಕ್ಷ್ಯ ಸಂಗ್ರಹ ಮತ್ತು ಪಂಚನಾಮಕ್ಕಾಗಿ ಅಜ್ಜಿನಡ್ಕಕ್ಕೆ ತೆರಳಿತು. ಸ್ಥಳಕ್ಕೆ ತಲುಪುತ್ತಿದ್ದಾಗ, ಆರೋಪಿ ಮುರುಗಂಡಿ ತೇವರ್ ತನ್ನ ಕೈಕೋಳ ಹಿಡಿದಿದ್ದ ಕಾನ್ಸ್‌ಟೇಬಲ್ ಮಂಜುನಾಥ್ ಅವರ ಮೇಲೆ ಇದ್ದಕ್ಕಿದ್ದಂತೆ ಹಲ್ಲೆ ಮಾಡಿದನು. ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ಆತನ ಗುಪ್ತಾಂಗಗಳಿಗೆ ಹೊಡೆದು, ಕೈಕೋಳದಿಂದ ಕತ್ತು ಹಿಸುಕಲು ಪ್ರಯತ್ನಿಸಿದನು. ಈ ಸಂದರ್ಭ ಉಳ್ಳಾಲ ಇನ್ಸ್‌ಪೆಕ್ಟರ್ ಮೊದಲು ಗಾಳಿಯಲ್ಲಿ ಎಚ್ಚರಿಕೆ ಗುಂಡು ಹಾರಿಸಿದರು. ಎಚ್ಚರಿಕೆಯ ಹೊರತಾಗಿಯೂ ಮುರುಗಂಡಿ ಥೇವರ್ ಓಡಿಹೋಗುವುದನ್ನು ಮುಂದುವರಿಸಿದಾಗ, ಆತನ ಮೊಣಕಾಲಿನ ಕೆಳಗೆ ಎರಡನೇ ಸುತ್ತಿನ ಗುಂಡು ಹಾರಿಸಲಾಯಿತು.ಘಟನೆಯ ನಂತರ, ಕಾನ್ಸ್‌ಟೇಬಲ್ ಮಂಜುನಾಥ್ ಮತ್ತು ಆರೋಪಿ ಮುರುಗಂಡಿ ಥೇವರ್ ಇಬ್ಬರನ್ನೂ ವೈದ್ಯಕೀಯ ಚಿಕಿತ್ಸೆಗಾಗಿ ತಕ್ಷಣವೇ ಯೆನಪೋಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇಬ್ಬರೂ ಪ್ರಸ್ತುತ ಅಪಾಯದಿಂದ ಪಾರಾಗಿದ್ದಾರೆ . ಈ ಘಟನೆಯ ಕುರಿತು ಪ್ರತ್ಯೇಕ ಪ್ರಕರಣ ದಾಖಲಿಸಲಾಗುವುದು ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Whats_app_banner