ಮಂಗಳೂರು ಹೊರವಲಯದಲ್ಲಿ ಗುಂಪು ಹಲ್ಲೆ ನಡೆಸಿ ಕೇರಳ ಮೂಲದ ವ್ಯಕ್ತಿಯ ಹತ್ಯೆ, 20 ಮಂದಿ ಬಂಧನ; ಇಲ್ಲಿದೆ ಪ್ರಕರಣ ವಿವರ
ಮಂಗಳೂರು ಹೊರ ವಲಯದಲ್ಲಿ ಕೇರಳ ಮೂಲದ ವ್ಯಕ್ತಿಯ ಮೇಲೆ 25 ಮಂದಿ ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 20 ಮಂದಿಯನ್ನು ಬಂಧಿಸಲಾಗಿದೆ. ಈ ಘಟನೆ ಸಂಬಂಧಿತ ಸಂಪೂರ್ಣ ವಿವರ ಇಲ್ಲಿದೆ. (ವರದಿ: ಹರೀಶ್ ಮಾಂಬಾಡಿ)

ಮಂಗಳೂರು: ಕಾರ್ಮಿಕನೋರ್ವನನ್ನು ಗುಂಪೊಂದು ಮನಸೋ ಇಚ್ಛೆ ಹಲ್ಲೆ ನಡೆಸಿ, ಕೊಲೆ ಮಾಡಿದ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 20 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಇದೊಂದು ಶಾಂತಿ ಕದಡುವ ಕೃತ್ಯವಾಗಿದೆ ಎಂದಿದ್ದಾರೆ.
ಮಂಗಳೂರು ಹೊರವಲಯದ ಕುಡುಪುವಿನಲ್ಲಿ ಅಪರಿಚಿತ ಶವ ಸಿಕ್ಕಿದ್ದು, ಅದರ ತನಿಖೆ ನಡೆಸಿದಾಗ ಈ ಕೃತ್ಯ ಹೊರಬಂದಿದೆ. ತನಿಖೆ ನಡೆಸಿದ ಪೊಲೀಸರು ವ್ಯಕ್ತಿಯನ್ನು 30 ಮಂದಿಯ ತಂಡ ಕ್ಷುಲಕ ಕಾರಣಕ್ಕಾಗಿ ವ್ಯಕ್ತಿಹಯೊಬ್ಬನನ್ನು ಹಲ್ಲೆಗೈದು ಹತ್ಯೆ ಮಾಡಿದೆ ಎಂಬುದನ್ನು ದೃಢಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಮಂದಿಯನ್ನು ಆರೋಪಿಗಳು ಎಂದು ಗುರುತಿಸಿದ್ದು, ಇವರಲ್ಲಿ 20 ಮಂದಿಯನ್ನು ಬಂಧಿಸಲಾಗಿದೆ.
ಕೇರಳ ಮೂಲದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಅಶ್ರಫ್ ಹತ್ಯೆಗೀಡಾದ ವ್ಯಕ್ತಿ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮಂಗಳೂರಿನಲ್ಲಿ ಚಿಂದಿ ಆಯ್ದುಕೊಂಡು ಬದುಕುತ್ತಿದ್ದ ಈತ ರಾತ್ರಿ ವೇಳೆ ಅಂಗಡಿಗಳ ಮುಂಭಾಗ ಮಲಗುತ್ತಿದ್ದ. ಈತ ಮಾನಸಿಕ ಅಸ್ವಸ್ಥ ಎಂಬ ಮಾಹಿತಿಯೂ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಂದಿಯ ಬಂಧನ ಆಗಬೇಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂಧಿತರ ವಿವರ ಇಲ್ಲಿದೆ
ಈ ಪ್ರಕರಣದಲ್ಲಿ ಭಾಗಿಯಾದ ಮಂಗಳವಾರ ಸಚಿನ್ ಟಿ (26), ದೇವದಾಸ್ (50), ಮಂಜುನಾಥ್ (32), ಸಾಯಿದೀಪ್ (29), ನಿತೇಶ್ ಕುಮಾರ್ ಯಾನೆ ಸಂತೋಷ್ (33), ದೀಕ್ಷಿತ್ ಕುಮಾರ್ , ಸಂದೀಪ್ (23), ವಿವಿಯನ್ ಆಳ್ವಾರೀಸ್ (41), ಶ್ರೀದತ್ತ (32), ರಾಹುಲ್ (23), ಪ್ರದೀಪ್ ಕುಮಾರ್ (35), ಮನೀಷ್ ಶೆಟ್ಟಿ (21), ಧನುಷ್ (31), ದೀಕ್ಷಿತ್ (27), ಕಿಶೋರ್ ಕುಮಾರ್ (37) ಎಂಬ ಹದಿನೈದು ಮಂದಿಯನ್ನು ಬಂಧಿಸಲಾಗಿತ್ತು. ಯತಿರಾಜ್, ಸಚಿನ್, ಅನಿಲ್, ಸುಶಾಂತ್ ಹಾಗೂ ಆದರ್ಶ್ ಎಂಬ ಐವರನ್ನು ಬುಧವಾರ ಬಂಧಿಸಲಾಗಿದೆ.
ಘಟನೆಯ ವಿವರ
ಏಪ್ರಿಲ್ 27ರ ಸಂಜೆ 5.30 ಸುಮಾರಿಗೆ ಮಂಗಳೂರು ನಗರದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ಬರುತ್ತದೆ. ಸ್ಥಳೀಯ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಳಿಕ ಅಪರಾಧ ಸ್ಥಳ ಪರಿಶೀಲನಾ ತಜ್ಞರು ಹಾಗೂ ಮೊಬೈಲ್ ಪೊರೆನ್ಸಿಕ್ ತಂಡಗಳನ್ನು ಸ್ಥಳಕ್ಕೆ ಕರೆಸುತ್ತಾರೆ. ಸ್ಥಳ ಪರಿಶೀಲನೆ ವೇಳೆ ಮೃತದೇಹದ ಮೈಮೇಲೆ ಸ್ಪಷ್ಟವಾದ ಹಾಗೂ ಗಂಭೀರ ಗಾಯಗಳು ಕಂಡುಬಾರದ ಕಾರಣ ಅಪರಾಧ ಸ್ಥಳ ಪರಿಶೀಲನಾ ತಜ್ಞರು ಮತ್ತು ಪೊರೆನ್ಸಿಕ್ ತಂಡಗಳು ಶವ ಪರೀಕ್ಷೆ (ವೋಸ್ಟಾಮಾರ್ಟಂ) ನಡೆಸುವಂತೆ ಶಿಫಾರಸು ಮಾಡಿದ್ದರು. ಅದರಂತೆ, ಪ್ರಾಥಮಿಕವಾಗಿ ಅಪರಿಚಿತ ಮೃತದೇಹ ಕಂಡು ಬಂದ ಬಗ್ಗೆ ಸ್ವೀಕೃತ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು.
ತನಿಖೆಯಲ್ಲಿ ಲಭ್ಯವಾದ ಮಾಹಿತಿ ಹಾಗೂ ಸ್ಥಳೀಯ ವ್ಯಕ್ತಿಗಳ ಭಾಗಿ ಬಗ್ಗೆ ಹೆಚ್ಚುತ್ತಿರುವ ಅನುಮಾನಗಳ ಆಧಾರದಲ್ಲಿ ಎಪ್ರಿಲ್ 28 ರಂದು ಅಪರಿಚಿತ ಮೃತದೇಹದ ಶವ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ನೀಡಿದ ಪ್ರಾಥಮಿಕ ವರದಿ ಪ್ರಕಾರ, ಮೃತನ ಬೆನ್ನು ಭಾಗದಲ್ಲಿ ಬಹಳಷ್ಟು ಬಲವಾದ ಹೊಡೆತದ ಗಾಯಗಳ ಕಾರಣದಿಂದ ರಕ್ತಸ್ರಾವ ಉಂಟಾಗಿತ್ತು ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದು ಆ ವ್ಯಕ್ತಿ ಸಾವನ್ನಪ್ಪಲು ಕಾರಣವಾಗಿದೆ ಎಂಬದು ತಿಳಿದು ಬಂದಿತ್ತು.
ತನಿಖೆಯ ಪ್ರಕಾರ ಎಪ್ರಿಲ್ 27 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ, ಅಶ್ರಫ್ಗೆ ಕೆಲವರು ಕೈ ಮತ್ತು ಕಟ್ಟಿಗೆಯಿಂದ ಹೊಡೆದು, ಕಾಲಿನಿಂದ ಹಿಗ್ಗಾಮುಗ್ಗಾ ತುಳಿದು ಹಲ್ಲೆ ನಡೆಸಿದ್ದು, ಈ ಸಮಯ ಕೆಲವರು ತಡೆಯಲು ಯತ್ನಿಸಿದರೂ, ಆತನ ಮೇಲೆ ನಿರಂತರ ಹಲ್ಲೆ ನಡೆಸಲಾಗಿತ್ತು. ಆ ಕಾರಣದಿಂದ ಆತ ಸಾವನ್ನಪ್ಪಿದ್ದ. ಈ ಸಂಬಂಧವಾಗಿ ದೀಪಕ್ ಕುಮಾರ್ ಎಂಬವರು, 19 ಜನರು ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಸಮಾಜದಲ್ಲಿ ಶಾಂತಿ ಕದಡುವ ಕೃತ್ಯ – ದಿನೇಶ್ ಗುಂಡೂರಾವ್
ಅಶ್ರಫ್ ಹತ್ಯೆಯು ಸಮಾಜದ ಶಾಂತಿ ಕದಡುವ ದುಷ್ಟಶಕ್ತಿಗಳ ಕೃತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಹಿಂದೆ ಸಾಮರಸ್ಯ ಮತ್ತು ಭಾವೈಕ್ಯತೆಯ ನೆಲೆಯಾಗಿತ್ತು. ಆದರೆ ಕೆಲ ಸಮಾಜಘಾತುಕ ಶಕ್ತಿಗಳು ಹಲವು ವರ್ಷಗಳಿಂದ ಜಿಲ್ಲೆಯ ಕೋಮು ಸೌರ್ಹಾದಕ್ಕೆ ಕೊಳ್ಳಿ ಇಡುವ ಯತ್ನ ಮಾಡುತ್ತಿವೆ. ಮೊನ್ನೆಯ ಕುಡುಪು ಘಟನೆ ಇದರ ಒಂದು ಭಾಗವಾಗಿದೆ. ಯುವಕನ ಕೊಲೆ ಸಂಬಂಧ ಈಗಾಗಲೇ ಮಂಗಳೂರು ಪೊಲೀಸರು ಶೀಘ್ರ ಕ್ರಮ ತೆಗೆದುಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾದ 15 ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಕೆಲವು ದುಷ್ಕರ್ಮಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಅವರ ಹೆಡೆಮುರಿ ಕಟ್ಟುವುದು ಖಂಡಿತ ಎಂದಿದ್ದಾರೆ.
ಕೊಲೆ ಪ್ರಕರಣವನ್ನು ತ್ವರಿತವಾಗಿ ಬೇಧಿಸಿ ಆರೋಪಗಳನ್ನು ಬಂಧಿಸಿದ ಮಂಗಳೂರು ಪೊಲೀಸರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅದೇ ರೀತಿ ಜಿಲ್ಲೆಯ ಸೌರ್ಹಾದತೆ ಕಾಪಾಡುವುದು ಕೂಡ ಪೊಲೀಸರ ಜವಾಬ್ದಾರಿ. ಈ ಘಟನೆಯ ಬಳಿಕ ಕೆಲ ಸಮಾಜಘಾತಕ ಶಕ್ತಿಗಳು ದ್ವೇಷ ಹರಡುವ ಪ್ರಯತ್ನ ನಡೆಸುವ ಸಾಧ್ಯತೆಯಿದೆ. ಪೊಲೀಸರು ಅದಕ್ಕೆ ಅವಕಾಶ ಕೊಡಬಾರದು ಎಂದವರು ತಿಳಿಸಿದ್ದಾರೆ.
ಕೋಮು ಸಂಘರ್ಷ ಹುಟ್ಟು ಹಾಕುವ ಮೂಲಕ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆನ್ನುವುದು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಉದ್ದೇಶವಾಗಿದೆ. ದ.ಕನ್ನಡದ ಜನ ಈ ಹುನ್ನಾರಗಳನ್ನು ಅರಿಯಬೇಕು. ಪ್ರಜ್ಞಾವಂತರ ಜಿಲ್ಲೆ ಎಂದೇ ಹೆಸರಾದ ದ.ಕನ್ನಡಕ್ಕೆ ಕಳಂಕ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಾನೂನು ಕೈಗೆತ್ತಿಕೊಳ್ಳುವ, ಸಮಾಜದ ಸ್ವಾಸ್ಥ್ಯ ಕೆಡಿಸುವ, ಸಾಮರಸ್ಯಕ್ಕೆ ಕೊಳ್ಳಿ ಇಡುವ ಯಾವುದೇ ದುಷ್ಟ ಪ್ರಯತ್ನಕ್ಕೆ ನಮ್ಮ ಸರ್ಕಾರ ಅವಕಾಶ ಮಾಡಿಕೊಡುವುದಿಲ್ಲ. ಈ ವಿಚಾರದಲ್ಲಿ ನಮ್ಮದು ಶೂನ್ಯ ಸಹಿಷ್ಣುತೆ ಎಂಬ ಮಾತನ್ನು ಸಮಾಜ ಘಾತಕರಿಗೆ ಎಚ್ಚರಿಕೆಯ ರೂಪದಲ್ಲಿ ಹೇಳಲು ಬಯಸುತ್ತೇನೆ. ದಯೆಗಿಂತ ಮಿಗಿಲಾದ ಧರ್ಮವಿಲ್ಲ ಎಂಬ ಬಸವಣ್ಣನವರ ಆಶಯದಂತೆ ನಮ್ಮ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಆಶಯಕ್ಕೆ ಧಕ್ಕೆ ಬರಬಾರದು. ಸಮಾಜದ ಶಾಂತಿ ಕದಡಬಾರದು. ಇದು ನನ್ನ ಮನವಿ ಎಂದಿದ್ದಾರೆ.