ಮನೆಯಲ್ಲಿ ಪುಟ್ಟ ಮಗ, ಪತ್ನಿಯನ್ನು ಕೊಂದು, ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಯುವಕ; ಮಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ
ಕನ್ನಡ ಸುದ್ದಿ  /  ಕರ್ನಾಟಕ  /  ಮನೆಯಲ್ಲಿ ಪುಟ್ಟ ಮಗ, ಪತ್ನಿಯನ್ನು ಕೊಂದು, ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಯುವಕ; ಮಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ

ಮನೆಯಲ್ಲಿ ಪುಟ್ಟ ಮಗ, ಪತ್ನಿಯನ್ನು ಕೊಂದು, ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಯುವಕ; ಮಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ

ಮಂಗಳೂರು ಸಮೀಪದ ಪಕ್ಷಿಕೆರೆಯಲ್ಲಿ ಮನೆಯಲ್ಲಿ ಪುಟ್ಟ ಮಗ, ಪತ್ನಿಯನ್ನು ಕೊಂದು ಹಾಕಿದ ಯುವಕ ಬಳಿಕ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ಮನೆಯಲ್ಲಿದ್ದ ಯುವಕನ ಅಪ್ಪ- ಅಮ್ಮನಿಗೆ ಕೊಲೆಯ ವಿಚಾರ ಪೊಲೀಸರು ಬರುವ ತನಕ ಗೊತ್ತಿರಲಿಲ್ಲ ಎಂಬುದು ಕಳವಳಕಾರಿಯಾಗಿ ಗಮನಸೆಳೆದಿದೆ.

ಮಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ: ಮನೆಯಲ್ಲಿ ಪುಟ್ಟ ಮಗ (ಮಧ್ಯದಲ್ಲಿರುವ ಚಿತ್ರ), ಪತ್ನಿ(ಬಲ ಚಿತ್ರ) ಯನ್ನು ಕೊಂದು, ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಯುವಕ ಕಾರ್ತಿಕ್ ಭಟ್ (ಎಡಚಿತ್ರ).
ಮಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ: ಮನೆಯಲ್ಲಿ ಪುಟ್ಟ ಮಗ (ಮಧ್ಯದಲ್ಲಿರುವ ಚಿತ್ರ), ಪತ್ನಿ(ಬಲ ಚಿತ್ರ) ಯನ್ನು ಕೊಂದು, ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಯುವಕ ಕಾರ್ತಿಕ್ ಭಟ್ (ಎಡಚಿತ್ರ).

ಮಂಗಳೂರು: ಮನೆಯಲ್ಲಿ ಪತ್ನಿ ಮತ್ತು ಪುಟ್ಟ ಮಗನನ್ನು ಕೊಂದು ಬಳಿಕ ರೈಲಿನಡಿಗೆ ಬಿದ್ದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಮಂಗಳೂರು ಸಮೀಪದ ಪಕ್ಷಿಕೆರೆಯಲ್ಲಿ ನಡೆದಿದೆ. ಬೆಳ್ಳಾಯರು ರೈಲ್ವೇ ಹಳಿಯ ಸಮೀಪ ಶುಕ್ರವಾರ ಮಧ್ಯಾಹ್ನ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಪೊಲೀಸರು ಕೇಸ್ ದಾಖಲಿಸಿಕೊಂಡು ಯುವಕ ಪ್ಯಾಂಟ್‌ ಜೇಬಿನಲ್ಲಿದ್ದ ಸ್ಕೂಟರ್ ಕೀ ಗಮನಿಸಿ, ಸ್ಕೂಟರ್‌ ಪತ್ತೆ ಹಚ್ಚಿದ್ದರು. ಆ ಮೂಲಕ ಆತನ ವಿಳಾಸ ಪತ್ತೆ ಹಚ್ಚಿ ಮನೆಗೆ ಬಂದಾಗ ಮನೆಯಲ್ಲಿ ಪತ್ನಿ ಮತ್ತು ಪುಟ್ಟ ಮಗು ಹತ್ಯೆ ಆಗಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲೇ ಇದ್ದ ಯುವಕನ ಅಪ್ಪ ಮತ್ತು ಅಮ್ಮನಿಗೆ ಸೊಸೆ ಮತ್ತು ಮೊಮ್ಮಗ ಹತ್ಯೆ ಆಗಿರುವುದು ಗೊತ್ತೇ ಇರಲಿಲ್ಲ!

ಪಕ್ಷಿಕೆರೆಯಲ್ಲಿ ಹೃದಯ ವಿದ್ರಾವಕ ಘಟನೆ

ಮಂಗಳೂರು ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ, ಪತ್ನಿ ಪ್ರಿಯಾಂಕಾ (28) ಹಾಗೂ ಪುಟ್ಟ ಮಗು ಹೃದಮ್ (4)ರನ್ನು ಕೊಂದು ಬಳಿಕ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಕ್ಷಿಕೆರೆ ಜಂಕ್ಷನ್‌ನಲ್ಲಿ ಹೊಟೇಲ್ ನಡೆಸುತ್ತಿರುವ ಜನಾರ್ದನ ಭಟ್ ಅವರ ಮಗ ಈ ಕಾರ್ತಿಕ್. ಕದ್ರಿಯ ಸೊಸೈಟಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಮಧ್ಯಾಹ್ನ ತನ್ನ ಸ್ಕೂಟರನ್ನು ಕಲ್ಲಾಪು ದೇವಸ್ಥಾನ ಬಳಿ ನಿಲ್ಲಿಸಿ ರೈಲು ಹಳಿಗೆ ಹೋಗಿದ್ದು, ಬಳಿಕ ಛಿದ್ರಗೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾರ್ತಿಕ್ ವಾಸಿಸುತ್ತಿರುವ ಪಕ್ಷಿಕೆರೆ ಪಂಚಾಯಿತಿ ಸಮೀಪದ ಜಲಜಾಕ್ಷಿರೆಸಿಡೆನ್ಸಿ ಬಹು ಮಹಡಿ ಕಟ್ಟಡದ ಪ್ಲಾಟ್ ತೆರಳಿದಾಗ ಮನೆಗೆ ಬಾಗಿಲು ಹಾಕಿದ ಸ್ಥಿತಿಯಲ್ಲಿತ್ತು. ಬಳಿಕ ಒಳಗಡೆ ಹೋಗಿ ಪರಿಶೀಲನೆ ನಡೆಸಿದಾಗ ಆತನ ಪತ್ನಿ ಮತ್ತು ಮಗುವಿನ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆಯಿದ್ದು, ಮೂಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮಂಗಳೂರು ಎಸಿಪಿ ಶ್ರೀಕಾಂತ್, ಮೂಲ್ಕಿ ಪೊಲೀಸ್ ಠಾಣಾಧಿಕಾರಿ ವಿದ್ಯಾಧರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಮಂಗಳೂರು ಕಮೀಷನ‌ ಅನೂಪ್ ಅಗರವಾಲ್‌ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ನೀಡಿದರು.

ಡೆತ್‌ನೋಟ್‌ ಪತ್ತೆ- ಅದರಲ್ಲೇನಿದೆ

ಕಾರ್ತಿಕ್ ಆತ್ಮಹತ್ಯೆ ಮಾಡುವ ಮೊದಲು ವಾಷ್ ರೂಂನ ಕಿಟಕಿ ಗ್ಲಾಸ್ ಒಡೆದು, ಆ ಗಾಜಿನ ಚೂರು ಹಿಡಿದು ಹೆಂಡತಿ ಹಾಗೂ ಮಗುವಿನ ಹತ್ಯೆ ಮಾಡಿದ್ದಾನೆ. ಇಬ್ಬರ ದೇಹದ ಬೇರೆ ಬೇರೆ ಭಾಗದಲ್ಲಿ ಗಾಯಗಳಾಗಿವೆ. ಬಳಿಕ ತಾನು ಆತ್ಮಹತ್ಯೆ ಮಾಡುವುದಕ್ಕಾಗಿ ಫ್ಯಾನ್‌ಗೆ ಬಟ್ಟೆ ಕಟ್ಟಿ ಪ್ರಯತ್ನ ಪಟ್ಟಿದ್ದ. ಆದರೆ ಅದು ಸಾಧ್ಯವಾಗದ ಕಾರಣ ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮೃತ ಯುವಕ ಬರೆದಿಟ್ಟಿರುವ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ತನ್ನ ಅಂತ್ಯ ಸಂಸ್ಕಾರ ಪತ್ನಿ ಮನೆಯವರು ಮಾಡಬೇಕು. ಆಸ್ತಿ ಯಾರಿಗೆ ಸೇರಬೇಕು ಎಂಬಿತ್ಯಾದಿ ಅಂಶ ಬರೆದಿದ್ದಾನೆ. ಅಪ್ಪ, ಅಮ್ಮ ತನ್ನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಬಾರದು ಎಂಬ ಉಲ್ಲೇಖವೂ ಇದೆ. ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಹತ್ಯೆ ಆಗಿರುವುದು ಅಪ್ಪ- ಅಮ್ಮನಿಗೆ ಗೊತ್ತಿರಲಿಲ್ಲ

ಡೆತ್ ನೋಟ್‌ನಲ್ಲಿ ಉಲ್ಲೇಖವಾದ ಪ್ರಕಾರ ಯುವಕನಿಗೆ ಅಪ್ಪ- ಅಮ್ಮನ ಜತೆಗೆ ಕಾರ್ತಿಕ್ ಸಂಬಂಧ ಉತ್ತಮವಾಗಿಲ್ಲ ಎಂಬುದು ಗಮನಸೆಳೆಯುತ್ತದೆ. ಒಂದೇ ಮನೆಯಲ್ಲಿದ್ದರೂ ಮೃತ ಕಾರ್ತಿಕ ಮತ್ತು ಕುಟುಂಬ ಪ್ರತ್ಯೇಕ ಕೊಠಡಿಯಲ್ಲಿ ವಾಸವಿತ್ತು. ಆ ಕೊಠಡಿಗೆ ಪ್ರತ್ಯೇಕ ಬೀಗ ಇತ್ತು. ಅಲ್ಲಿ ಆತನ ತಂದೆ ತಾಯಿ ಪ್ರವೇಶಿಸುತ್ತಿರಲಿಲ್ಲ. ಶುಕ್ರವಾರ ಅಪ್ಪ- ಅಮ್ಮ ತಮ್ಮ ಹೋಟೆಲ್‌ಗೆ ಹೋದ ನಂತರ ಕಾರ್ತಿಕ್, ಪತ್ನಿ ಹಾಗೂ ಮಗುವನ್ನು ಹತ್ಯೆ ಮಾಡಿ ಹೋಗಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ಈ ವಿಚಾರ ಕಾರ್ತಿಕ್ ಅವರ ಅಪ್ಪ ಅಮ್ಮನಿಗೆ ಗೊತ್ತಿರಲಿಲ್ಲ. ಶನಿವಾರ ಮಧ್ಯಾಹ್ನ ಪೊಲೀಸರು ಬಂದಾಗ ಕೊಲೆ ಮತ್ತು ಆತ್ಮಹತ್ಯೆ ವಿಚಾರ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Whats_app_banner