ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ್ದ ಪ್ರಕರಣ; ನಕಲಿ ಇಡಿ ದಾಳಿ ಸಂಚುಕೋರ ಕೇರಳದ ಎಎಸ್‌ಐ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ್ದ ಪ್ರಕರಣ; ನಕಲಿ ಇಡಿ ದಾಳಿ ಸಂಚುಕೋರ ಕೇರಳದ ಎಎಸ್‌ಐ ಬಂಧನ

ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ್ದ ಪ್ರಕರಣ; ನಕಲಿ ಇಡಿ ದಾಳಿ ಸಂಚುಕೋರ ಕೇರಳದ ಎಎಸ್‌ಐ ಬಂಧನ

ನಕಲಿ ಇಡಿ ರೇಡ್ ಸಂಘಟಿಸುವ ಮೂಲಕ ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ್ದ ಪ್ರಕರಣದಲ್ಲಿ, ದಾಳಿಯ ಸಂಚುಕೋರನನ್ನು ಪೊಲೀಸರು ಬಂಧಿಸಿದ್ದಾರೆ. ಸಂಚುಕೋರ ಆರೋಪಿ ಕೇರಳದ ಎಎಸ್‌ಐ ಎಂಬುದು ವಿಶೇಷ. ಇದರ ವಿವರ ಇಲ್ಲಿದೆ.

ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ್ದ ಪ್ರಕರಣದಲ್ಲಿ ನಕಲಿ ಇಡಿ ದಾಳಿ ಸಂಚುಕೋರ ಕೇರಳದ ಎಎಸ್‌ಐ ಬಂಧನವಾಗಿದೆ.
ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ್ದ ಪ್ರಕರಣದಲ್ಲಿ ನಕಲಿ ಇಡಿ ದಾಳಿ ಸಂಚುಕೋರ ಕೇರಳದ ಎಎಸ್‌ಐ ಬಂಧನವಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸಹಿತ ರಾಜ್ಯವನ್ನೇ ಬೆಚ್ಚಿಬೀಳಿಸಿದ ಪ್ರಕರಣಗಳಲ್ಲೊಂದಾದ ಬಂಟ್ವಾಳ ತಾಲೂಕಿನ ಬೋಳಂತೂರು ನಾರ್ಶ ಎಂಬಲ್ಲಿನ ಬೀಡಿ ಉದ್ಯಮಿ ಸುಲೈಮಾನ್ ಅವರ ಮನೆಗೆ ಇಡಿ ಅಧಿಕಾರಿಗಳೆಂದು ಬಂದು ಮನೆಯವರನ್ನು ಬೆದರಿಸಿ, ವಂಚಿಸಿ, ಸುಮಾರು 30 ಲಕ್ಷ ರೂಗಳನ್ನು ಹೊತ್ತುಕೊಂಡು ಹೋಗಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಕೇರಳದ ಎ.ಎಸ್.ಐ. ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೀಗ ಮತ್ತೆ ಮೂವರನ್ನು ಬಂಧಿಸಲಾಗಿದೆ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ. ಇವರ ಪೈಕಿ ಕೇರಳದ ಎಎಸ್ ಐ ಸೇರಿದ್ದು, ಈತನೇ ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗಿದೆ. ಸದ್ಯ ಎಲ್ಲರನ್ನೂ ವಿಚಾರಣೆ ನಡೆಸುತ್ತಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳು ಇವರು

ಶಫೀರ್ ಬಾಬು (48), ಮೊಹಮ್ಮದ್ ಇಕ್ಬಾಲ್ (37), ಮೊಹಮ್ಮದ್ ಅನ್ಸಾರ್ (27), ಅನಿಲ್ ಫೆರ್ನಾಂಡಿಸ್ (49), ಸಚ್ಚಿನ್ ಟಿ.ಎಸ್. (29) ಮತ್ತು ಶಬಿನ್ ಎಸ್.(27). ಇವರಲ್ಲಿ ಅನಿಲ್, ಸಚಿನ್ ಮತ್ತು ಶಬಿನ್ ಅವರನ್ನು ಮೊದಲೇ ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇವರ ವಿಚಾರಣೆಯಿಂದ ಉಳಿದವರ ಬಂಧನವಾಯಿತು ಎಂದು ಎಸ್ಪಿ ತಿಳಿಸಿದ್ದಾರೆ. ಮನೆಯ ಫೊಟೋ, ಲೊಕೇಶನ್ ಮತ್ತಿತರ ಮಾಹಿತಿಯನ್ನು ಸ್ಥಳೀಯ ನಿವಾಸಿ ಸಿರಾಜುದ್ದೀನ್ ನೀಡಿದ್ದ ಎನ್ನಲಾಗಿದೆ.

ನಕಲಿ ಇಡಿ ದಾಳಿ ಸಂಚುಕೋರ ಕೇರಳದ ಎಎಸ್‌ಐ ಬಂಧನ

ತನಿಖಾ ತಂಡವು ಈಗಾಗಲೇ ಕೇರಳ ಕೊಲ್ಲಂ ನಿವಾಸಿಗಳಾದ ಅನಿಲ್ ಫರ್ನಾಂಡಿಸ್, ಸಚ್ಚಿನ್ ಟಿ ಎಸ್ ಹಾಗೂ ಶಬಿನ್ ಎಸ್ ಎಂಬವರುಗಳನ್ನು ಬಂಧಿಸಿದ್ದು, ಅವರುಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರ ವಿಚಾರಣೆಯ ಸಂದರ್ಭ, ಕೃತ್ಯಕ್ಕೆ ಮನೆಯ ಮಾಹಿತಿ ನೀಡಿದ್ದ ಸ್ಥಳಿಯ ನಿವಾಸಿ ಸಿರಾಜುದ್ದೀನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ತೀವ್ರ ವಿಚಾರಣೆಯ ಬಳಿಕ ಆತ ನೀಡಿದ ಮಾಹಿತಿಯ ಅಧಾರದಲ್ಲಿ ಬಂಟ್ವಾಳ ನಿವಾಸಿ ಮೊಹಮ್ಮದ್ ಇಕ್ಬಾಲ್ ಹಾಗೂ ಮಂಗಳೂರು ಪಡೀಲ್ ನಿವಾಸಿ ಮೊಹಮ್ಮದ್ ಅನ್ಸಾರ್ ಎಂಬವರನ್ನು ದಸ್ತಗಿರಿ ಮಾಡಲಾಯಿತು. ಈ ಇಬ್ಬರನ್ನೂ ಸೇರಿಸಿ ಹೆಚ್ಚಿನ ತನಿಖೆ ನಡೆಸಿದಾಗ ಪ್ರಕರಣದ ಮೂಲ ಸೂತ್ರಧಾರ ಕೇರಳದ ಎ.ಎಸ್.ಐ. ಎಂದು ಗೊತ್ತಾಯಿತು.

ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದ ಪೊಲೀಸರು, ದರೋಡೆ ಕೃತ್ಯದ ಮೂಲ ಸೂತ್ರದಾರನಾದ ಕೇರಳದ ಶಫೀರ್ ಬಾಬು ಎಂಬಾತನನ್ನು ಬಂಧಿಸಿದರು. ಈತನು ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ಕೊಡಂಗಲ್ಲೂರು ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕನಾಗಿದ್ದಾನೆ

ನಾಲ್ಕು ತಂಡಗಳಲ್ಲಿ ತನಿಖೆ: ಪ್ರಕರಣ ಕ್ಕೆ ಸಂಬಂಸಿದಂತೆ ಸುಲೈಮಾನ್ ಅವರ ಪುತ್ರ ಇಕ್ಬಾಲ್ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಮಾರ್ಗದರ್ಶನದಲ್ಲಿ, ಜಿಲ್ಲಾ ವ್ಯಾಪ್ತಿಯ ಠಾಣೆಗಳಿಂದ ಅಪರಾಧ ಕೃತ್ಯಗಳ ತನಿಖೆಯಲ್ಲಿ ಪರಿಣಿತರಾದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸಿತ್ತು.

ಘಟನೆ ಹಿನ್ನಲೆ

ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಜ. ೩ರಂದು ರಾತ್ರಿ ಅವರ ಮನೆಗೆ ತಮಿಳುನಾಡು ರಿಜಿಸ್ಟ್ರೇಶನ್ ಹೊಂದಿರುವ ಮಾರುತಿ ಎರ್ಟಿಗಾ ಕಾರಿನಲ್ಲಿ ಆಗಮಿಸಿದ ದೃಢಕಾಯದ 6 ಮಂದಿಯ ತಂಡವೊಂದು ದಾಳಿ ನಡೆಸಿದಂತೆ ನಟಿಸಿತ್ತು. ನಾವು ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡೂವರೆ ಗಂಟೆಗಳ ವರೆಗೆ ತನಿಖೆ ನಡೆಸಿದ ನಾಟಕ ಮಾಡಿ ಮನೆಯಲ್ಲಿದ್ದ ಸುಮಾರು 30 ಲಕ್ಷ ರೂ ಮೊತ್ತವನ್ನು ದೋಚಿ ಪರಾರಿಯಾಗಿತ್ತು. ದರೋಡೆಕೋರರು ವಶಪಡಿಸಿದ್ದ ಮನೆಯವರ ಮೊಬೈಲ್ ಫೋನ್ ಗಳು ಮನೆಯ ತಳಹಂತಸ್ತಿನ ರ್‍ಯಾಕ್ ನಲ್ಲಿ ಪತ್ತೆಯಾಗಿತ್ತು.

ಅದಕ್ಕೂ ಮುನ್ನ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಡಿವೈಎಸ್ಪಿ ವಿಜಯ ಪ್ರಸಾದ್ ಜೊತೆಗೆ ದರೋಡೆಗೊಳಗಾದ ಮನೆಯ ಮಾಲಕ ಸುಲೈಮಾನ್ ಹಾಜಿ ಹಾಗೂ ಪುತ್ರ ಇಕ್ಬಾಲ್ ಜೊತೆಗೆ ಗೌಪ್ಯ ಸಭೆ ನಡೆಸಿದ್ದರು. ವಿಟ್ಲ ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಇ. ನಾಗರಾಜ್, ಸಬ್ ಇನ್‌ಸ್ಪೆಕ್ಟರ್ ವಿದ್ಯಾ ಮೊದಲಾದವರು ಭಾಗವಹಿಸಿದ್ದರು

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner