ಮಂಗಳೂರು: ವಿಟ್ಲದಲ್ಲಿ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ಇಡಿ ಅಧಿಕಾರಿಗಳಂತೆ ದಾಳಿ ನಡೆಸಿ 30 ಲಕ್ಷ ರೂಪಾಯಿ ದೋಚಿದ ವಂಚಕರು
Fake ED Raid: ಬಂಟ್ವಾಳ ತಾಲೂಕು ವಿಟ್ಲ ಸಮೀಪ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ನಿನ್ನೆ ರಾತ್ರಿ ಇಡಿ ಅಧಿಕಾರಿಗಳಂತೆ ದಾಳಿ ನಡೆಸಿದ ವಂಚಕರು, 30 ಲಕ್ಷ ರೂಪಾಯಿ ದೋಚಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಬಂಟ್ವಾಳ ತಾಲೂಕು ವಿಟ್ಲ ಸಮೀಪ ಸಿಂಗಾರಿ ಬೀಡಿ ಉದ್ಯಮಿಯ ಮನೆಗೆ ನಿನ್ನೆ (ಜನವರಿ 3) ತಡರಾತ್ರಿ ಇಡಿ ಅಧಿಕಾರಿಗಳಂತೆ ಆಗಮಿಸಿ ದಾಳಿ ನಡೆಸಿದ ತಂಡ, ಅವರ ಮನೆಯಿಂದ ಬರೋಬ್ಬರಿ 30 ಲಕ್ಷ ರೂಪಾಯಿ ದೋಚಿದ ಘಟನೆ ನಡೆದಿದೆ. ಆ ಆಘಾತದಿಂದ ಹೊರಬಂದ ಬಳಿಕ ದಾಳಿ ನಡೆಸಿದ್ದು ಇಡಿ ಅಧಿಕಾರಿಗಳ ತಂಡವಲ್ಲ, ಅದು ವಂಚಕರ ತಂಡ ಎಂಬುದು ಉದ್ಯಮಿಗೆ ಗೊತ್ತಾಗಿದೆ. ಕೂಡಲೆ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ವಿಟ್ಲದಲ್ಲಿ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ನಕಲಿ ಇಡಿ ದಾಳಿ; 30 ಲಕ್ಷ ರೂಪಾಯಿ ದೋಚಿದ ವಂಚಕರು
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿರುವ ಸಿಂಗಾರಿ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಅವರ ಮನೆ ಮೇಲೆ ನಕಲಿ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿರುವಂಥದ್ದು. ಪ್ರಾಥಮಿಕ ಮಾಹಿತಿ ಪ್ರಕಾರ, ನಿನ್ನೆ (ಜನವರಿ 3) ತಡರಾತ್ರಿ ತಮಿಳುನಾಡು ನೋಂದಣಿ ಸಂಖ್ಯೆ ಇರುವ ಕಾರುಗಳಲ್ಲಿ ಆಗಮಿಸಿದ ತಂಡ ಸುಲೈಮಾನ್ ಹಾಜಿ ಮನೆಗೆ ಇಡಿ ಅಧಿಕಾರಿಗಳಂತೆ ದಾಳಿ ನಡೆಸಿದೆ. ಎರಡು ಗಂಟೆ ತನಕ ವಿಚಾರಣೆ, ಶೋಧ ನಡೆಸಿದ ತಂಡ ಮನೆಯಲ್ಲಿದ್ದ 30 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿರುವುದಾಗಿ ತಿಳಿಸಿ ಅಲ್ಲಿಂದ ತೆಗೆದುಕೊಂಡು ಹೋಗಿದೆ. ನಾವು ಇಡಿ ಅಧಿಕಾರಿಗಳು ಎಂದು ಹಾಜಿಯವರನ್ನು ನಂಬಿಸಿ, ಬೆದರಿಸಿ ಈ ಕೃತ್ಯವೆಸಗಲಾಗಿದೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾಗಿ ಮೂಲಗಳು ಹೇಳಿವೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)