ಪಂಜುರ್ಲಿ ದೈವಸ್ಥಾನದ ಕಾರ್ಯಕ್ರಮಕ್ಕೆ ಮುಸ್ಲಿಮರ ಸಹಭಾಗಿತ್ವ; ಇದು ಸೌಹಾರ್ದ, ಸಾಮರಸ್ಯದ ಕರಾವಳಿ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಹಿಂದೂಗಳು ಪೂಜಿಸುವ ದೈವಗಳ ಕಾರ್ಯಕ್ರಮದಲ್ಲಿ ಮುಸ್ಲಿಮರ ಸಹಭಾಗಿತ್ವ ಒಗ್ಗಟ್ಟಿನ ಭ್ರಾತೃತ್ವದ ದ್ಯೋತಕವಾಗಿ ಗಮನ ಸೆಳೆದಿದೆ. (ವರದಿ- ಹರೀಶ ಮಾಂಬಾಡಿ, ಮಂಗಳೂರು)

ಮಂಗಳೂರು: ಕರಾವಳಿ ಎಂದರೆ ಕಮ್ಯೂನಲ್ ಎಂದು ಬ್ರಾಂಡ್ ಮಾಡುತ್ತಿರುವವರು, ಹಿಂದೂ ಹಾಗೂ ಮುಸ್ಲಿಮರು ಸೋದರರಂತೆ ಬಾಳ್ವೆ ನಡೆಸುವ ಅನೇಕ ನಿದರ್ಶನಗಳನ್ನು ಮರೆಮಾಚುತ್ತಾರೆ ಎಂಬ ಆರೋಪವಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಹಿಂದೂಗಳು ಪೂಜಿಸುವ ದೈವಗಳ ಕಾರ್ಯಕ್ರಮದಲ್ಲಿ ಮುಸ್ಲಿಮರ ಸಹಭಾಗಿತ್ವ ಒಗ್ಗಟ್ಟಿನ ಭ್ರಾತೃತ್ವದ ದ್ಯೋತಕವಾಗಿ ಗಮನ ಸೆಳೆದಿದೆ.
ಪುತ್ತೂರಿನ ಹೊರವಲಯದ ಕೊಡಿಪ್ಪಾಡಿ ಗ್ರಾಮದ ಕಲೆಂಬಿಯ ಗುಳಿಗ ಗುರಿ ಎಂಬಲ್ಲಿ ಜೀರ್ಣೋದ್ಧಾರಗೊಂಡಿರುವ ಪಂಜುರ್ಲಿ ದೈವಸ್ಥಾನ ಮತ್ತು ಗುಳಿಗೆ ಕಟ್ಟೆಯ ಪ್ರತಿಷ್ಠಾ ಕಾರ್ಯಕ್ರಮ ಮಂಗಳವಾರ ನಡೆದಿತ್ತು. ಪುತ್ತೂರು ಶಾಸಕ ಆಶೋಕ್ ರೈ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಪ್ರಾಚೀನ ಹಿನ್ನೆಲೆ ಇರುವ ಈ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯ 8 ತಿಂಗಳಲ್ಲಿ ಪೂರ್ಣಗೊಂಡು ಪ್ರತಿಷ್ಠಾ ಕಾರ್ಯಕ್ರಮ ನಡೆದಿದೆ. ಸ್ಥಳೀಯ ಮುಖಂಡರ ನೇತೃತ್ವದ ಸಮಿತಿಯ ಮೂಲಕ ಜೀರ್ಣೋದ್ದಾರ ನಡೆದಿದ್ದು, ಇಲ್ಲಿನ ಮುಸ್ಲಿಂ ಕುಟುಂಬಗಳು ಸಹಕಾರ ನೀಡಿರುವುದು ವಿಶೇಷ.
ಮುಸ್ಲಿಮರ ಪಾಲ್ಗೊಳ್ಳುವಿಕೆ ಹೇಗಿತ್ತು?
ಸುತ್ತಮುತ್ತ ಸುಮಾರು 20ರಷ್ಟು ಮುಸ್ಲಿಂ ಕುಟುಂಬಗಳಿರುವ ಗುಳಿಗ ಗುರಿ ಪ್ರದೇಶದಲ್ಲಿ ಗುಳಿಗ ಮತ್ತು ಪಂಜುರ್ಲಿ ಸಾನಿಧ್ಯವಿದೆ. ರಾಮಕೃಷ್ಣಭಟ್ ಕೊಡಿಪ್ಪಾಡಿ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ ರಚನೆಗೊಂಡು ಕೆಲಸ ಕಾರ್ಯಗಳು ಆರಂಭಗೊಂಡಾಗ ಮುಸ್ಲಿಂ ಕುಟುಂಬಗಳು ಸಹಕಾರ ನೀಡಲಾರಂಭಿಸಿದ್ದರು. ದೈವಸ್ಥಾನ ಜೀರ್ಣೋದ್ಧಾರದಿಂದ ಹಿಡಿದು ಪ್ರತಿಷ್ಠೆಯವರೆಗೂ ಸ್ಥಳೀಯ ಮುಸ್ಲಿಂ ಮುಖಂಡರು ಹಿಂದೂಗಳ ಜತೆಗೆ ಕೈಜೋಡಿಸಿದ್ದಾರೆ. ಕೆಲವು ದಿನಗಳಿಂದ ಪ್ರತಿಷ್ಠಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಿತರಿಸುವಾಗಲೂ ಸ್ವತಃ ಮುಸ್ಲಿಂ ಹಿರಿಯರು ಅದರಲ್ಲಿ ಪಾಲ್ಗೊಂಡರು. ಮಂಗಳವಾರ ನಡೆದ ಕಾರ್ಯಕ್ರಮ ದಲ್ಲೂ ಮುಸ್ಲಿಂ ಮುಖಂಡರು ಭಾಗವಹಿ ಸುವ ಮೂಲಕ ಧರ್ಮ ಸಾಮರಸ್ಯದ ಸಂದೇಶ ಸಾರಿದರು.
ಭೂಮಸೂದೆ ಕಾನೂನು ಬಂದಾಗ ಇದರ ಸುತ್ತಮುತ್ತಲಿನ ಜಾಗವೆಲ್ಲ ಮುಸ್ಲಿಂ ಕುಟುಂಬಗಳಿಗೆ ಸಿಕ್ಕಿತ್ತು. ಕ್ರಮೇಣ ಆರಾಧನೆ ನಿಂತು ಹೋದ ಕಾರಣ ಪಂಜುರ್ಲಿ-ಗುಳಿಗ ಸಾನಿಧ್ಯಗಳು ಶಿಥಿಲಾವಸ್ಥೆ ತಲುಪಿದ್ದವು. ಪವಿತ್ರ ಕೆರೆಯೂ ಹೂಳು ತುಂಬಿ ಅನಾಥ ಸ್ಥಿತಿ ತಲುಪಿತು. ಇತ್ತೀಚೆಗೆ ಊರಿನಲ್ಲಿ ಸಮಸ್ಯೆಗಳು ಕಂಡು ಬಂದ ಕಾರಣ ಪರಿಹಾರಾರ್ಥ ದೈವ ಸಾನಿಧ್ಯ. ಜೀರ್ಣೋದ್ದಾರಕ್ಕೆ ಗ್ರಾಮಸ್ಥರು ಮುಂದಾದರು. ಆಗ ಮುಸ್ಲಿಂ ಕುಟುಂಬಗಳೂ ಕೈಜೋಡಿಸಿದ್ದು ಪ್ರತಿಷ್ಠೆಯವರೆಗೂ ಜತೆಯಾಗಿ ಸಾಗಿ ಬಂದಿದ್ದಾರೆ.
ಗುಳಿಗಗುರಿ ಕೆರೆ
ಇಲ್ಲೊಂದು ಪ್ರಾಚೀನ ಕೆರೆ ಇದೆ. ಇದಕ್ಕೆ ಗುಳಿಗಗುರಿ ಎಂಬ ಹೆಸರಿದೆ. ಇದೇ ಈ ಪ್ರದೇಶದ ಹೆಸರೂ ಆಗಿದೆ. ಇದರ ಪಕ್ಕದಲ್ಲೇ ಪಂಜುರ್ಲಿ ಮತ್ತು ಗುಳಿಗ ಸಾನಿಧ್ಯಗಳಿವೆ. ಪಂಜುರ್ಲಿ, ಗುಳಿಗ ಸಾನಿಧ್ಯಗಳೀಗ ಜೀರ್ಣೋದ್ಧಾರಗೊಂಡಿವೆ. ಎಂಟು ತಿಂಗಳಲ್ಲಿ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡು ಪ್ರತಿಷ್ಠಾ ಕಾರ್ಯಕ್ರಮ ನಡೆದಿದೆ.
(ವರದಿ- ಹರೀಶ ಮಾಂಬಾಡಿ, ಮಂಗಳೂರು)