ಮಂಗಳೂರಲ್ಲಿ ನಂದಿನಿ ಹಾಲಿನ ಟ್ರಕ್ ಅಪಘಾತ, ಕ್ಯಾಬಿನ್‌ನಲ್ಲಿ ಕಾಲು ಸಿಲುಕಿ ಒದ್ದಾಡಿದ ಚಾಲಕ, ಸ್ಪೀಕರ್ ಖಾದರ್ ನಡೆಗೆ ಪ್ರಶಂಸೆ- ವಿಡಿಯೋ ವೈರಲ್
ಮಂಗಳೂರಲ್ಲಿ ನಂದಿನಿ ಹಾಲಿನ ಟ್ರಕ್ ಅಪಘಾತಕ್ಕೀಡಾಗಿ, ಅದರ ಕ್ಯಾಬಿನ್‌ನಲ್ಲಿ ಕಾಲು ಸಿಲುಕಿ ಒದ್ದಾಡಿದ ಚಾಲಕನಿಗೆ ನೆರವು ನೀಡುವಲ್ಲಿ, ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಸ್ಪಂದಿಸಿದ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇದರ ವಿಡಿಯೋ ವೈರಲ್ ಆಗಿದೆ.

ಮಂಗಳೂರು: ನಗರದ ಅಡ್ಯಾರ್ ಬಳಿ ಅಪಘಾತಕ್ಕೀಡಾಕಿದ್ದ ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಾಹನದೊಳಗೆ ಸಿಲುಕ್ಕಿದ್ದ ಡ್ರೈವರ್ ಕಾಲನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಸೇಫ್ ಮಾಡಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಕ್ಯಾಬಿನ್‌ನಲ್ಲಿ ಕಾಲು ಸಿಲುಕಿ ಒದ್ದಾಡಿದ ಚಾಲಕ, ಸ್ಪೀಕರ್ ಖಾದರ್ ನಡೆಗೆ ಪ್ರಶಂಸೆ
ಇಂದು (ಫೆ 12) ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಡ್ಯಾರ್ ಕಣ್ಣೂರಿನಲ್ಲಿ ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಾಟದ ವಾಹನವು ಡಿವೈಡರ್ ಹಾರಿ ಇತ್ತ ಕಡೆ ಸಂಚರಿಸುತ್ತಿದ್ದು ಲಾರಿಗೆ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿಯ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಡ್ರೈವರ್ ಕಾಲು ಅದರಡಿ ಸಿಲುಕಿಕೊಂಡಿತ್ತು. ಈ ವೇಳೆ ಸ್ಪೀಕರ್ ಯು.ಟಿ.ಖಾದರ್ ಇದೇ ಮಾರ್ಗವಾಗಿ ಬಂಟ್ವಾಳದತ್ತ ವಾಹನದಲ್ಲಿ ಸಂಚರಿಸುತ್ತಿದ್ದವರು ತಕ್ಷಣ ಕಾರು ನಿಲ್ಲಿಸಿ ಅಪಘಾತ ನಡೆದಲ್ಲಿಗೆ ಧಾವಿಸಿದ್ದಾರೆ.
ರಸ್ತೆ ಅಪಘಾತ ಕಂಡು ಸ್ಥಳಕ್ಕೆ ಬಂದ ವಿಧಾನ ಸಭೆ ಸ್ಪೀಕರ್ ಯುಟಿ ಖಾದರ್, ಒಮ್ಮೆ ಎಲ್ಲವನ್ನೂ ಅವಲೋಕಿಸಿದರು. ಅಪಘಾತಕ್ಕೀಡಾದ ಕೆಎಂಎಫ್ ನಂದಿನಿ ಟ್ರಕ್ ಡ್ರೈವರ್ ಕಾಲು ನಜ್ಜುಗುಜ್ಜಾಗಿದ್ದ ಕ್ಯಾಬಿನ್ ಒಳಗೆ ಸಿಲುಕಿಕೊಂಡಿತ್ತು. ಇದೇ ವೇಳೆ ಅಪಘಾತ ಸ್ಥಳದಲ್ಲಿ ನೆರೆದಿದ್ದ ಜನರಿಗೆ ಧೈರ್ಯತುಂಬಿ ವಾಹನದೊಳಗಿದ್ದ ಚಾಲಕನಿಗೆ ನೆರವಾಗಲು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ನೆರವಾದರು. ವೋಯಿಪುಲೆಯೇ (ಎಳೆಯಿರಿ) ಎಂದು ಹೇಳುತ್ತ, ತಾವೂ ಜನರೊಂದಿಗೆ ಸೇರಿ ನಜ್ಜುಗುಜ್ಜಾಗಿದ್ದ ಕ್ಯಾಬಿನ್ ಮುಂಭಾಗವನ್ನು ಎಳೆದು ಚಾಲಕನಿಗೆ ಆತನ ಕಾಲು ಹೊರ ತೆಗೆಯಲು ಅನುಕೂಲ ಮಾಡಿಕೊಟ್ಟರು. ಈ ವೇಳೆ, ವಾಹನದೊಳಗೆ ಸಿಲುಕಿದ್ದ ಕಾಲು ಸೇಫಾಗಿ ಹೊರಗೆ ಬಂದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗೊಂಡಿದ್ದ ಡ್ರೈವರ್ ಅನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ನಾಟಕ ವಿಧಾನ ಸಭೆ ಸ್ಪೀಕರ್ ಯುಟಿ ಖಾದರ್ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಸಾಮಾಜಿಕ ತಾಣಗಳಲ್ಲಿ ಅವರ ಈ ಕಾರ್ಯದ ವಿಡಿಯೋ ವೈರಲ್ ಆಗಿದೆ.
