Mangaluru News: ಬಂಟ್ವಾಳ ಸಮೀಪ ನೇತ್ರಾವತಿ ನದಿ ಬದಿ ಆಟವಾಡುತ್ತಿದ್ದ 10 ಮತ್ತು 14 ವರ್ಷದ ಬಾಲಕಿಯರು ನೀರುಪಾಲು
ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ಬಂಟ್ವಾಳ ಸಮೀಪ ನೇತ್ರಾವತಿ ನದಿ ಬದಿ ಆಟವಾಡುತ್ತಿದ್ದ 10 ಮತ್ತು 14 ವರ್ಷದ ಬಾಲಕಿಯರು ನೀರುಪಾಲು

Mangaluru News: ಬಂಟ್ವಾಳ ಸಮೀಪ ನೇತ್ರಾವತಿ ನದಿ ಬದಿ ಆಟವಾಡುತ್ತಿದ್ದ 10 ಮತ್ತು 14 ವರ್ಷದ ಬಾಲಕಿಯರು ನೀರುಪಾಲು

ಬಂಟ್ವಾಳ ಸಮೀಪ ನೇತ್ರಾವತಿ ನದಿ ಬದಿಯಲ್ಲಿ ಆಟವಾಡುತ್ತಿದ್ದ 10 ಮತ್ತು 14 ವರ್ಷದ ಇಬ್ಬರು ಬಾಲಕಿಯರು ನೀರುಪಾಲಾಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ಉಳ್ಳಾಲದಲ್ಲಿ ಸಮುದ್ರಪಾಲಾಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಜೀವರಕ್ಷಕನ ನಡೆ ಪ್ರಶಂಸೆಗೆ ಒಳಗಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಬಂಟ್ವಾಳ ಸಮೀಪ ನೇತ್ರಾವತಿ ನದಿ ಬದಿ ಆಟವಾಡುತ್ತಿದ್ದ 10 ಮತ್ತು 14 ವರ್ಷದ ಬಾಲಕಿಯರು ನೀರುಪಾಲಾಗಿದ್ದಾರೆ. (ಸಾಂಕೇತಿಕ ಚಿತ್ರ)
ಬಂಟ್ವಾಳ ಸಮೀಪ ನೇತ್ರಾವತಿ ನದಿ ಬದಿ ಆಟವಾಡುತ್ತಿದ್ದ 10 ಮತ್ತು 14 ವರ್ಷದ ಬಾಲಕಿಯರು ನೀರುಪಾಲಾಗಿದ್ದಾರೆ. (ಸಾಂಕೇತಿಕ ಚಿತ್ರ)

ಮಂಗಳೂರು: ನೇತ್ರಾವತಿ ನದಿಯ ಪಕ್ಕ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ನೀರುಪಾಲಾಗಿ ಸಾವನ್ನಪ್ಪಿದ ಘಟನೆ ಭಾನುವಾರ ಬಂಟ್ವಾಳ ಸಮೀಪ ನಡೆದಿದೆ. ಇನ್ನೊಂದು ಘಟನೆಯಲ್ಲಿ ಉಳ್ಳಾಲದಲ್ಲಿ ಕಡಲವಿಹಾರಕ್ಕೆ ಬಂದ ಮೈಸೂರಿನ ಪ್ರವಾಸಿಗರಲ್ಲಿ ಒಬ್ಬ ನೀರುಪಾಲಾಗಿದ್ದು ಆತನನ್ನು ಜೀವರಕ್ಷಕರು ರಕ್ಷಿಸಿದ್ದಾರೆ.

ನೇತ್ರಾವತಿ ನದಿ ಬದಿಯಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಮುಳುಗಿ ನೀರುಪಾಲಾದ ಘಟನೆ ಭಾನುವಾರ ಸಂಜೆ ದಕ್ಣಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ನಾವೂರ ಎಂಬಲ್ಲಿ ನಡೆದಿದೆ.

ನೀರಿಗಿಳಿದ ಮಕ್ಕಳು ಮುಳುಗಿ ಸಾವು

ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಹಾಗೂ ಇಲಿಯಾಸ್ ಅವರ ಪುತ್ರಿ ಮರಿಯಮ್ ನಾಶೀಯಾ (14 ) ಮೃತರಾದ ಬಾಲಕಿಯರು. ಮೂಲತಃ ನಾವೂರ ನಿವಾಸಿಯಾದ ಇಲಿಯಾಸ್ ಅವರು ಇತ್ತೀಚಿಗೆ ಉಳ್ಳಾಲದಲ್ಲಿ ಮನೆ ಕಟ್ಟಿದ್ದರು. ಇವತ್ತು ನಾವೂರ ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಸಂಜೆ ವೇಳೆ ಮನೆಯವರ ಜೊತೆಗೆ ನಾವೂರದ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿ ಬದಿ ತೆರಳಿದ್ದರು.

ಈ ವೇಳೆ ಮನೆಯವರ ಮುಂದೆ ಮಕ್ಕಳು ನೀರಿನ ಸಮೀಪ ಆಟ ಆಡುತ್ತಾ ಇದ್ದು, ಮನೆಯವರ ಮುಂದೆಯೇ ಈ ಎರಡು ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಳ್ಳಾಲದಲ್ಲಿ ಸಮುದ್ರ ಪಾಲಾಗುತ್ತಿದ್ದ ಯುವಕನ ರಕ್ಷಿಸಿದ ಜೀವರಕ್ಷಕ

ಸಮುದ್ರ ವಿಹಾರಕ್ಕೆಂದು ಬಂದಿದ್ದ ಪ್ರವಾಸಿ ಯುವಕರ ತಂಡವೊಂದರ ಸದಸ್ಯನೊಬ್ಬ ನೀರು ಪಾಲಾಗಿದ್ದು ಸೋಮೇಶ್ವರದ ಜೀವರಕ್ಷಕ ಅಶೋಕ್ ರವರು ಸಮುದ್ರಕ್ಕೆ ಧುಮುಕಿ ಆತನನ್ನು ದಡಕ್ಕೆ ಎಳೆದು ತಂದು ಪ್ರಥಮ‌ ಚಿಕಿತ್ಸೆ ನೀಡಿ‌ ರಕ್ಷಿಸಿದ್ದಾರೆ.

ಮೈಸೂರಿನಿಂದ ಆರು ಜನರ ತಂಡ ಪ್ರವಾಸಕ್ಕೆಂದು ಬಂದಿದ್ದು ಭಾನುವಾರ ಸಂಜೆ ಉಳ್ಳಾಲ ಮೊಗವೀರಪಟ್ಣ ಬಳಿಯ ಕಡಲತಡದಲ್ಲಿ ನೀರಾಟದಲ್ಲಿ ತೊಡಗಿದ್ದಾಗ ಇದ್ದಕ್ಕಿದ್ದಂತೆ ದೊಡ್ಡ ಅಲೆಯೊಂದು ತಂಡದ ಪ್ರವೀಣ್ (22)ನನ್ನು ಕೊಚ್ಚಿಕೊಂಡು ಹೋಗಿದೆ.

ಅದೃಷ್ಟವಶಾತ್ ನಿತ್ಯವೂ ಸೋಮೇಶ್ವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೀವರಕ್ಷಕ ಅಶೋಕ್ ರವರು ಇವತ್ತು ಸೋಮೇಶ್ವರದ ಬದಲಾಗಿ ಉಳ್ಳಾಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದ್ದಕ್ಕಿಂದ್ದಂತೇ ಬೊಬ್ಬೆ ಕೇಳಿದ್ದು ಅಶೋಕ್ ರವರು ಯೂನಿಫಾರ್ಮ್ ನಲ್ಲಿಯೇ ಕಡಲಿಗೆ ಧುಮುಕಿ ಆತನನ್ನು ಕಡಲ ಬದಿಗೆ ತಂದು ಪ್ರಥಮ ಚಿಕಿತ್ಸೆ ನೀಡಿದ್ದು ಪ್ರಾಣಾಪಯದಿಂದ ಪಾರು ಮಾಡಿದ್ದಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Whats_app_banner